varthabharthi


ವಿಶೇಷ-ವರದಿಗಳು

ಜನವರಿಯಿಂದ ಜೂನ್‌ವರೆಗೆ 350 ಪ್ರಕರಣಗಳು ಪತ್ತೆ ► ಜಿಲ್ಲೆಗೆ ಹೋಲಿಸಿದರೆ ಮನಪಾ ವ್ಯಾಪ್ತಿಯಲ್ಲೇ ಅಧಿಕ

ಮಂಗಳೂರು: ಜನರಲ್ಲಿ ಭೀತಿ ಹುಟ್ಟಿಸಿದ ಮಲೇರಿಯಾ

ವಾರ್ತಾ ಭಾರತಿ : 19 Jul, 2021
ಬಂದೇ ನವಾಝ್ ಮ್ಯಾಗೇರಿ

ಮಲೇರಿಯಾ ಲಕ್ಷಣಗಳು

ದೇಹದಲ್ಲಿ ಜ್ವರ ಹೆಚ್ಚಾದಂತೆ ಹಲವು ರೋಗ ಲಕ್ಷಣಗಳು ಕಾಣಿಸುತ್ತವೆ. ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈ-ಕೈ ನೋವು, ವಿಪರೀತ ಆಯಾಸ, ಅತೀವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ರಕ್ತಹೀನತೆ, ಮಲದಲ್ಲಿ ರಕ್ತ ಮತ್ತು ಸೆಳೆತ.

ಮಂಗಳೂರು: ಮಲೇರಿಯಾ ಜ್ವರ ಅತ್ಯಂತ ಮಾರಕ ಕಾಯಿಲೆಯಾಗಿದ್ದು, ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿರುವುದು ಮಲೇರಿಯಾ ಹೆಚ್ಚಳಕ್ಕೆ ಇಂಬು ನೀಡಿದಂತಾಗಿದ್ದು, ಮಂಗಳೂರಿನ ನಾಗರಿಕರಲ್ಲಿ ಮತ್ತೆ ಭೀತಿ ಉಂಟು ಮಾಡಿದೆ.

 ಸಾಧಾರಣವಾಗಿ ಬೇಸಿಗೆಕಾಲದಲಿ ಕಡಿಮೆ ಇರುವ ಮಲೇರಿಯಾ, ಮಳೆಗಾಲ ಆರಂಭವಾಗುತ್ತಿದ್ದಂತೆ ಹರಡುವಿಕೆಯಲ್ಲಿ ಹೆಚ್ಚಳ ಕಂಡುಬರುತ್ತದೆ. ದೊಡ್ಡ ಮಳೆಯಾದರೆ ನಿಂತ ನೀರು ಹರಿದು ಹೋಗಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ, ಜಿಟಿಜಿಟಿ ಮಳೆಯಿದ್ದಾಗ ಮಳೆನೀರು ಒಂದೇ ಸ್ಥಳದಲ್ಲಿ ನಿಂತುಕೊಂಡಾಗ ಸೊಳ್ಳೆಗಳ ಉತ್ಪತ್ತಿಯಲ್ಲಿ ಹೆಚ್ಚಳವಾಗುತ್ತದೆ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ನವೀನ್‌ಕುಮಾರ್ ಕುಲಾಲ್.

ಪ್ರಸಕ್ತ ವರ್ಷದ ಜನವರಿಯಿಂದ ಜೂನ್ ತಿಂಗಳವರೆಗೆ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಗೆ ಹೋಲಿಸಿದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ ಪ್ರಕರಣಗಳ ಸಂಖ್ಯೆ ಅಧಿಕವಿದೆ. ಮಂಗಳೂರು ನಗರದಲ್ಲೇ ಶೇ.95ರಷ್ಟು ಪ್ರಕರಣಗಳು ದಾಖಲಾಗುತ್ತಿವೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಮಂಗಳೂರು ನಗರದಲ್ಲಿ ಸೊಳ್ಳೆಗಳ ವಿಪರೀತ ಕಡಿತದಿಂದಾಗಿ ಮಲೇರಿಯಾ ತಡೆಗಟ್ಟುವ ಲಕ್ಷಣ ಗೋಚರಿಸುತ್ತಿಲ್ಲ. ಆದಾಗ್ಯೂ, ಅಧಿಕಾರಿಗಳು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಲೇರಿಯ ಪ್ರಕರಣಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲು ಲಾಕ್‌ಡೌನ್ ಕೊಡುಗೆ ನೀಡಿದೆ.

ವಲಸಿಗರಿಂದ ಹೆಚ್ಚಳ:

ಮಂಗ ಳೂರಿಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದಿಂದ ಕಾರ್ಮಿಕರು ಬರುತ್ತಾರೆ. ಉತ್ತರ ಕರ್ನಾಟಕದ ಕೊಪ್ಪಳ, ರಾಯಚೂರು, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹಾವೇರಿ ಭಾಗದಿಂದ ದುಡಿಯಲು ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಮಲೇರಿಯಾ ನಿಯಂತ್ರಣ ಕಷ್ಟಸಾಧ್ಯವಾಗಿದೆ.

ಆ ಪೈಕಿ ಹೆಚ್ಚಾಗಿ ಕಟ್ಟಡ ಕಾಮಗಾರಿಗಳ ಕಾರ್ಮಿಕರಾಗಿರುತ್ತಾರೆ. ವಸತಿ ನಿರ್ಮಾಣದ ಹಂತದಲ್ಲಿ ಕಾಮಗಾರಿ ಕಟ್ಟಡಗಳ ಪಕ್ಕದಲ್ಲೇ ಜೋಪಡಿಗಳನ್ನು ನಿರ್ಮಿಸಿರುತ್ತಾರೆ. ಕಟ್ಟಡ ಮತ್ತಿತರ ವಲಯಗಳಲ್ಲಿ ಅಲ್ಲಲ್ಲಿ ನೀರು ಕಟ್ಟಿ ನಿಂತು ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾಕ್ಕೆ ಕಾರ್ಮಿಕರು ಬಲಿಯಾಗುತ್ತಾರೆ.

14 ದಿನ ಚಿಕಿತ್ಸೆ ಪಡೆದರೆ ಒಳ್ಳೆಯದು: ಮಲೇರಿಯಾಕ್ಕೆ ತುತ್ತಾದವರು ಸುಮಾರು 14 ದಿನಗಳವರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ತೀರಾ ಗಂಭೀರ ಸ್ಥಿತಿಯಲ್ಲಿರುವವರು ಆಸ್ಪತ್ರೆಗೆ ದಾಖಲಾಗಬಹುದು. ಮಲೇರಿಯಾಕ್ಕೆ ತುತ್ತಾಗಿ ಒಂದೆರಡು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ತಕ್ಷಣ ಮತ್ತೆ ಕೆಲಸದಲ್ಲಿ ನಿರತರಾಗಬಹುದು. ಆದರೆ ಪೂರ್ಣ ಚಿಕಿತ್ಸೆಯ ನಂತರವೇ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

ಜ್ವರ ಹೇಗೆ ಬರುತ್ತೆ?: ಮಲೇರಿಯಾ ಜ್ವರ ಸೊಳ್ಳೆಯಿಂದ ಮನುಷ್ಯನಿಗೆ ಹರಡುವ ರೋಗವಾಗಿದ್ದು, ಸೋಂಕು ಹೊಂದಿದ ಅನಾಫಿಲಿಸ್ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಈ ಜ್ವರ ಬರುತ್ತದೆ. ಅನಾಫಿಲಿಸ್ ಹೆಣ್ಣು ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್‌ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹತ್ತಿಸುತ್ತದೆ.

ಒಂದು ಸಲ ಈ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ನಂತರ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್‌ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುವುದು ಮತ್ತು ಕೆಂಪು ರಕ್ತದ ಕಣಗಳನ್ನು ನಾಶ ಪಡಿಸುವುದು. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ-ಕೈನೋವು ಇಂತಹವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದಾಗಿದೆ.

ತಡೆಗಟ್ಟುವ ಕ್ರಮ

ಮಲೇರಿಯಾ ಜ್ವರ ಹರಡಬಾರದು ಎಂದರೆ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಮನೆಯಲ್ಲಿ ಮಸ್ಕಿಟೊ ಸ್ಪ್ರೇ ಮತ್ತು ಸೊಳ್ಳೆಪರದೆ ಇದ್ದರೆ ಒಳ್ಳೆಯದು. ಮನೆಯ ಅಕ್ಕಪಕ್ಕ ಮತ್ತು ಮನೆಯ ಮುಂದಿನ ಚರಂಡಿಗಳಲ್ಲಿ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ನಿಂತಿರುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿರುತ್ತದೆ.

ಕೀಟನಾಶಕ-ಲೇಪಿತ ಪರದೆಗಳು ಲೇಪಿತವಲ್ಲದ ಪರದೆಗಳಿಗಿಂತಲೂ ಎರಡರಷ್ಟು ಪರಿಣಾಮಕಾರಿ ಯಾಗಿದ್ದು, ಅದು ಶೇ.70ರಷ್ಟು ಹೆಚ್ಚು ರಕ್ಷಣೆಯನ್ನು ನೀಡಬಲ್ಲದು.

ಮಂಗಳೂರು ನಗರದಲ್ಲಿ ಮಲೇರಿಯಾ ಹರಡಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ.

ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಮನೆಮನೆಗೆ ಭೇಟಿ ನೀಡಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಕುರಿತು ಜೂನ್ ತಿಂಗಳಲ್ಲಿ ಜಾಗೃತಿಯ ಮಾಸಾಚರಣೆ ಆಚರಿಸಲಾ

ಗಿದ್ದು, ಈ ಪ್ರದೇಶದಲ್ಲಿ ರಾಸಾಯನಿಕ ಮಿಶ್ರಿತ ಸೊಳ್ಳೆ ಪರದೆಗಳನ್ನು ವಿತರಿಸಲಾಗುತ್ತಿದೆ. ಮಲೇರಿಯಾದ ಪ್ರತೀ ಪ್ರಕರಣವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.

ಕಿಶೋರ್‌ಕುಮಾರ್,

-ಜಿಲ್ಲಾ ಆರೋಗ್ಯಾಧಿಕಾರಿ

ಪ್ರತಿವರ್ಷವೂ ಮಲೇರಿಯಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಸಾಗುತ್ತಿತ್ತು. ಆದರೆ ಇತ್ತೀಚೆಗೆ ಪ್ರಕರಣದ ಅಂಕಿ-ಅಂಶದಲ್ಲಿ ಇಳಿಕೆ ಕಂಡು ಬಂದಿದೆ. ವಲಸೆ ಕಾರ್ಮಿಕರು ಯಾವುದೇ ರಕ್ಷಣೆ ಇಲ್ಲದೆ ಕೆಲಸಗಳಲ್ಲಿ ತೊಡಗಿಕೊಂಡಲ್ಲಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.

ನವೀನ್‌ಕುಮಾರ್ ಕುಲಾಲ್,

ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)