varthabharthi


ರಾಷ್ಟ್ರೀಯ

ಸರಕಾರದಿಂದಲೇ ಬೇಹುಗಾರಿಕೆ: ಪೆಗಾಸಸ್ 'ಹ್ಯಾಕಿಂಗ್' ಕುರಿತು ವಿಪಕ್ಷ ನಾಯಕರ ಆಕ್ರೋಶ

ವಾರ್ತಾ ಭಾರತಿ : 19 Jul, 2021

ಹೊಸದಿಲ್ಲಿ: ಇಸ್ರೇಲ್ ಮೂಲದ ಪೆಗಾಸಸ್ ಸ್ಪೈ ವೇರ್ ಬಳಸಿ ಅಪರಿಚಿತ ಏಜನ್ಸಿಯೊಂದು  ಹಲವಾರು ಪತ್ರಕರ್ತರು, ರಾಜಕಾರಣಿಗಳ ಮೊಬೈಲ್ ಫೋನ್‍ಗಳನ್ನು ಹ್ಯಾಕ್ ಮಾಡಿದೆ  ಎಂದು ದಿ ವೈರ್ ಹಾಗೂ 16 ಇತರ ಅಂತರಾಷ್ಟ್ರೀಯ ಮಾಧ್ಯಮಗಳು ಜತೆಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡ ಬೆನ್ನಲ್ಲೇ ಸರಕಾರದ ವಿರುದ್ಧ ವಿಪಕ್ಷ ನಾಯಕರುಗಳು ಕಿಡಿಕಾರಿದ್ದಾರೆ.

"ಈ ವಿಚಾರ ಚರ್ಚೆಯಾಗಲೇಬೇಕಿದೆ. ಇದು ಸರಕಾರದಿಂದ ಬೇಹುಗಾರಿಕೆ. ಇದು ಬಹಳ ಗಂಭೀರ ವಿಚಾರ ಹಾಗೂ ನಾಗರಿಕರ ಗೌಪ್ಯತೆಯನ್ನು ಹತ್ತಿಕ್ಕುತ್ತದೆ. ನಾವು ಇದನ್ನು  ಪರಿಶೀಲಿಸಬೇಕು ಎಂದೆಲ್ಲಾ ಹೇಳಿಕೊಂಡು ಸರಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಯಾವ ಏಜನ್ಸಿಗಳು ಪೆಗಾಸಸ್ ಅನ್ನು ಖರೀದಿಸಿದ್ದವು?' ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮ ಪ್ರಶ್ನಿಸಿದ್ದಾರೆ.

"ಈ ಕುರಿತು ತನಿಖೆ ನಡೆಯಬೇಕಿದೆ, ಸರಕಾರದಿಂದ ತನಿಖೆಯಲ್ಲ. ಇದರ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ. ನಾವು ಇದಕ್ಕಾಗಿ ಹೋರಾಡುತ್ತೇವೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಈ ಕುರಿತು ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದಾರೆ. ಭಾರತ ಸರಕಾರ ಪೆಗಾಸಸ್ ಅನ್ನು ಬಳಸಿಲ್ಲ ಎಂದು ಹೇಳುವಲ್ಲಿ ಸರಕಾರ ಪ್ರಾಮಾಣಿಕವಾಗಿದೆಯೆಂದಾದರೆ ವಿದೇಶಿ ಸರಕಾರ ಭಾರತೀಯ ನಾಗರಿಕರ ಮೇಲೆ ಗೂಢಚರ್ಯೆ ನಡೆಸಿದೆ ಎಂದಾಗುತ್ತದೆ" ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ವಿಚಾರ ಟ್ವೀಟ್ ಮಾಡಿ "ನಮಗೆ ಗೊತ್ತು ಅವರೇನು ಓದುತ್ತಿದ್ದಾರೆಂದು-ನಿಮ್ಮ ಫೋನ್‍ನಲ್ಲಿರುವುದೆಲ್ಲವೂ#ಪೆಗಾಸಸ್" ಎಂದು ಬರೆದಿದ್ದಾರೆ.

ಸರಕಾರ ತಾನು ಎನ್‍ಎಸ್‍ಒ ಗ್ರೂಪ್ ನ ಸ್ಪೈವೇರ್ ಬಳಸಿದೆಯೇ ಎಂದು ಬಹಿರಂಗಪಡಿಸಬೇಕು, ಇದು ಅಧಿಕೃತವಲ್ಲ, ಬದಲು ಹ್ಯಾಕಿಂಗ್ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)