varthabharthi


ನಿಮ್ಮ ಅಂಕಣ

ಐಸಿಎಆರ್ ಕೃಷಿ ಪದವೀಧರರೇ ಕೃಷಿ ಇಲಾಖೆಗೆ ಅರ್ಹರು

ವಾರ್ತಾ ಭಾರತಿ : 20 Jul, 2021
ಡಾ. ರಮೇಶ ವಿ. ಸಹ ಸಂಶೋಧಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

ದೇಶದಲ್ಲಿ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಮಾನ್ಯತೆಯ ವಿಶ್ವವಿದ್ಯಾನಿಲಯಗಳಿಂದ ಕೃಷಿ ಪದವಿಯನ್ನು ಪಡೆದ ಅಭ್ಯರ್ಥಿಗಳು ಮಾತ್ರ ಬಹುತೇಕ ಕೃಷಿ ಇಲಾಖೆಯ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಕರ್ನಾಟಕದಲ್ಲಿಯೂ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳ ಕಾಯ್ದೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಎಆರ್ ಮಾನ್ಯತೆಯ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಿಂದ ಕೃಷಿ ಬಿ.ಎಸ್ಸಿ. ಪದವಿ ಪಡೆದ ಪದವೀಧರರು ಮಾತ್ರ ಕೃಷಿ ಇಲಾಖೆಯ ವಿವಿಧ ದರ್ಜೆಯ ಹುದ್ದೆಗಳಿಗೆ ಅರ್ಹರು ಎಂಬ ನೇಮಕಾತಿ ನಿಯಮವಿದೆ. ಅಂತೆಯೇ, ಐಸಿಎಆರ್ ಮಾನ್ಯತೆಯ ತೋಟಗಾರಿಕೆ, ರೇಷ್ಮೆ ಮತ್ತು ಅರಣ್ಯ ಕೃಷಿ ಪದವೀಧರರು ಅವರವರ ಇಲಾಖೆಯ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಬಿ.ಎಸ್ಸಿ. ಕೃಷಿ ಪದವಿಯ ಜೊತೆಗೆ, ಕೃಷಿ ಇಂಜಿನಿಯರಿಂಗ್, ಜೈವಿಕ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಪದವೀಧರರು ಹೊರಹೊಮ್ಮುತ್ತಿದ್ದಾರೆ. ಈ ಕೃಷಿ ಪದವೀಧರರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಸೂಕ್ತ ಉದ್ಯೋಗದ ಅರ್ಹತೆಯ ನಿಯಮಗಳನ್ನು ಇದುವರೆಗೂ ಕಲ್ಪಿಸಲಾಗಿಲ್ಲ. 2020ರವರೆಗೂ ಕೃಷಿ ಇಲಾಖೆಯಲ್ಲಿಯು ಯಾವುದೇ ಹುದ್ದೆಗೆ ಇವರನ್ನು ಪರಿಗಣಿಸಲಾಗಿರಲಿಲ್ಲ, ಕಾರಣ ಬಿ.ಎಸ್ಸಿ. ಕೃಷಿ ವಿದ್ಯಾರ್ಥಿಗಳು ಕೃಷಿ ಬಗ್ಗೆ ಪ್ರಮುಖ ವಿಷಯಗಳನ್ನು ಅಭ್ಯಾಸ ನಡೆಸಿದಷ್ಟು ಇವರು ಮಾಡುವುದಿಲ್ಲ. ಇಂತಹ ಉದ್ಯೋಗ ವಂಚಿತ ವಿದ್ಯಾರ್ಥಿಗಳು ತಾವು ಸಹ ಪದವಿಯಲ್ಲಿ ಸಾಕಷ್ಟು ಕೃಷಿ ವಿಷಯಗಳನ್ನು ಅಭ್ಯಾಸ ಮಾಡುತ್ತಿದ್ದು ತಮಗೂ ಕೃಷಿ ಇಲಾಖೆಯ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕೆಂದು ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು. ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ಕೃಷಿ ಇಲಾಖೆಯು 2020ರಲ್ಲಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಯಲ್ಲಿ ಶೇ. 15ರಷ್ಟು ಹುದ್ದೆಗಳಿಗೆ ಮೀಸಲಾತಿ ನೀಡಲು ನಿರ್ಧಾರ ಕೈಗೊಂಡಿತು. ಅಲ್ಲದೆ, 2021ರಲ್ಲಿ ಶೇ. 15ರಷ್ಟು ಮೀಸಲಾತಿ ನೀಡಿ ರಾಜ್ಯಪತ್ರವನ್ನು ಸಹ ಹೊರಡಿಸಿರುವುದು ಸ್ವಾಗತಾರ್ಹ.

ಆದರೆ, ಹೊಸ ಕೃಷಿ ನೇಮಕಾತಿ ನಿಯಮಗಳ ಅರ್ಹತೆಯ ಕಾಲಂನಲ್ಲಿ ಕೇವಲ ಐಸಿಎಆರ್ ಮಾನ್ಯತೆಯ ಪದವೀಧರರಿಗೆ ಮಾತ್ರ ಮೀಸಲು ಎಂಬ ನೇಮಕಾತಿಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬದಲಾಗಿ, ಐಸಿಎಆರ್ ಅಥವಾ ಕೃಷಿ ಶಿಕ್ಷಣಕ್ಕೆ ಸಂಬಂಧವೇ ಇಲ್ಲದ ರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಕಾರ್ಯನಿರ್ವಹಿಸುವ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾನಿಲಯ ಅಥವಾ ಇನ್ನಿತರ ವಿಶ್ವವಿದ್ಯಾನಿಲಯದಿಂದ ಅರ್ಜಿಸಿದ ಕೃಷಿ ಇಂಜಿನಿಯರಿಂಗ್/ಜೈವಿಕ ತಂತ್ರಜ್ಞಾನ/ಆಹಾರ ವಿಜ್ಞಾನ ಪದವೀಧರ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು ಎಂಬ ಅಚಾತುರ್ಯದ ನಿಯಮಗಳನ್ನು ಸೇರಿಸಲಾಗಿದೆ.

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಮಾನ್ಯತೆಗಾಗಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಮತ್ತು ಎಐಸಿಟಿಇ ಹೇಗೆ ಕಾರ್ಯನಿರ್ವಹಿಸುತ್ತಿವೆಯೋ ಅದೇ ರೀತಿಯಲ್ಲಿ ಕೃಷಿ ಸಂಬಂಧಿತ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯ ಬಗ್ಗೆ ಕಾರ್ಯನಿರ್ವಹಿಸುವ ಏಕೈಕ ಸ್ವಾಯತ್ತ ಸಂಸ್ಥೆ ಐಸಿಎಆರ್. ಆದ್ದರಿಂದ ಕೃಷಿ ತಾಂತ್ರಿಕ ಶಿಕ್ಷಣವಾದರೂ ಸರಿ, ಕೃಷಿ ವಿಶ್ವವಿದ್ಯಾನಿಲಯಗಳಿಗೆ ಮಾನ್ಯತೆ ನೀಡುವ ಅಧಿಕಾರವನ್ನು ಹೊಂದಿರುವುದು ಕೇವಲ ಐಸಿಎಆರ್ ಮಾತ್ರ. ಐಸಿಎಆರ್ 1995 ಮತ್ತು 2009ರಲ್ಲಿ ದೇಶದ ಕೃಷಿ ಶಿಕ್ಷಣ ಹೇಗೆ ನಡೆಯಬೇಕು ಎಂಬುದಕ್ಕೆ ಹಲವು ಮಾನದಂಡಗಳನ್ನೊಳಗೊಂಡ ಕೃಷಿ ಬಿಲ್‌ಗಳನ್ನು ಜಾರಿಗೊಳಿಸಿದೆ. ಈ ನಿಯಮಗಳನ್ನಾಧರಿಸಿ ಎಲ್ಲಾ ರಾಜ್ಯಗಳು ರಾಜ್ಯ ಕೃಷಿ ಕಾಯ್ದೆಗಳನ್ನು ತಂದಿದ್ದು, ಇಂತಹ ಕಾಯ್ದೆಯ ಅಡಿಯಲ್ಲೇ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರಕಾರಗಳೇ ಇಂತಹ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸ್ವಂತ ಭೂಮಿಯನ್ನು ಮಂಜೂರು ಮಾಡಿ, ಗುಣಮಟ್ಟದ ಶಿಕ್ಷಣವನ್ನು ನೀಡಲು ಶ್ರಮಿಸುತ್ತಿವೆ. ಆದ ಕಾರಣ ಐಸಿಎಆರ್ ವಿಶ್ವವಿದ್ಯಾನಿಲಯಗಳ ಗುಣಮಟ್ಟಗಳನ್ನು ಪರಿಶೀಲಿಸಿದ ನಂತರ ಮಾನ್ಯತೆಯನ್ನು ಸಹ ನೀಡುತ್ತಿದೆ. ಹಾಗಾಗಿ ದೇಶದ ಬಹುತೇಕ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳು ಐಸಿಎಆರ್ ಮಾನ್ಯತೆಯನ್ನು ಪಡೆದಿರುತ್ತವೆ.

ಖಾಸಗಿ ಕೃಷಿ ವಿಶ್ವವಿದ್ಯಾನಿಲಯಗಳು ಸಹ ಐಸಿಎಆರ್‌ನ ಮಾನದಂಡಗಳನ್ನು ಪಾಲಿಸಿದ್ದಲ್ಲಿ ಮಾನ್ಯತೆಯನ್ನು ಪಡೆಯುಲು ಅರ್ಹವಾಗಿವೆ. ಕೇವಲ ಬೆರಳೆಣಿಕೆಯಷ್ಟು ಖಾಸಗಿ ಕೃಷಿ ವಿಶ್ವವಿದ್ಯಾನಿಲಯಗಳು ಮಾನ್ಯತೆಯನ್ನು ಪಡೆದಿದ್ದು, ಸಂಸ್ಥೆಯ ಗುಣಮಟ್ಟ ಕುಸಿದಾಗ ಮಾನ್ಯತೆಯನ್ನು ರದ್ದು ಮಾಡುವ ಅಧಿಕಾರ ಐಸಿಎಆರ್‌ಗೆ ಇರುತ್ತದೆ.

ಸಣ್ಣ ಪುಟ್ಟ ಖಾಸಗಿ ಕೃಷಿ ಕಾಲೇಜುಗಳು ಐಸಿಎಆರ್ ಮಾನ್ಯತೆಯ ಕೃಷಿ ಪದವಿಯನ್ನು ನೀಡಲು ಇಚ್ಛಿಸಿದಲ್ಲಿ, ರಾಜ್ಯ ಸರಕಾರಗಳ ಕೃಷಿ ಕಾಯ್ದೆಯ ಅನುಸಾರ ರೂಪಿತವಾಗಿರುವ ಮತ್ತು ಐಸಿಎಆರ್ ಮಾನ್ಯತೆ ಹೊಂದಿರುವ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಿಂದ ಅಫಿಲಿಯೇಷನ್ ಪಡೆಯಬೇಕು. ಉದಾಹರಣೆಗೆ, ಐಸಿಎಆರ್ ನಿಯಮಗಳ ಅನುಸಾರ ಕರ್ನಾಟಕದ ಕೃಷಿ ವಿಶ್ವವಿದ್ಯಾನಿಲಯದಿಂದ ಅಫಿಲಿಯೇಷನ್ ಪಡೆಯಬೇಕಾದಲ್ಲಿ ಒಂದು ಖಾಸಗಿ ಕಾಲೇಜು 60 ಜನ ವಿದ್ಯಾರ್ಥಿಗಳಿಗೆ ಕೃಷಿ ಪದವಿ ನೀಡಬೇಕಾದರೆ ಕನಿಷ್ಠ 75 ಎಕರೆ ಭೂಮಿ, 45 ಬೋಧಕ, 71 ಬೋಧಕೇತರ ಸಿಬ್ಬಂದಿ, 21 ವಿಭಾಗಗಳು, ಪ್ರಯೋಗಾಲಯಗಳು ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಹೊಂದಿರಬೇಕು. ಇಂತಹ ಮಾನದಂಡಗಳನ್ನು ಅನುಸರಿಸಲು ಒಂದೇ ಕಟ್ಟಡದಲ್ಲಿ ಶಿಕ್ಷಣ ನೀಡುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೇಗೆ ತಾನೆ ಸಾಧ್ಯ? ಕೃಷಿ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಿದ ಪರಿಣಾಮ ಉತ್ತರ ಭಾರತದಲ್ಲಿ ಎಐಸಿಟಿಇ/ಯುಜಿಸಿ ಮಾನ್ಯತೆಯನ್ನು ಪಡೆದ ಹಲವು ಖಾಸಗಿ ಇಂಜಿನಿಯರಿಂಗ್ ಸಂಸ್ಥೆಗಳು ಕೃಷಿ ಪದವಿಗಳನ್ನು ನೀಡುತ್ತಿರುವುದು ಶಿಕ್ಷಾರ್ಹ ಅಪರಾಧ. ಇದನ್ನು ಖಂಡಿಸಿ ದೇಶದ ಹಲವು ರಾಜ್ಯಗಳ ಸರಕಾರಿ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದಾರೆ. ಉದಾಹರಣೆಗೆ, 2018ರಲ್ಲಿ ಕರ್ನಾಟಕದ ಸರಕಾರಿ ಕೃಷಿ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಹೋರಾಟವನ್ನು ಮಾಡಿದ್ದರು. ಹೋರಾಟಕ್ಕೆ ಸ್ಪಂದಿಸಿದ ಅಂದಿನ ಸರಕಾರ ಸದನದಲ್ಲಿ ‘ರೈಟೆಕ್’ ಎಂಬ ಖಾಸಗಿ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಕೃಷಿ ಶಿಕ್ಷಣವನ್ನು ಕೈಬಿಡಬೇಕೆಂದು ಸರ್ವಾನುಮತದಿಂದ ವಿಧೇಯಕವನ್ನು ಮಂಡಿಸಿತ್ತು ಮತ್ತು ರಾಜ್ಯದಲ್ಲಿ ಖಾಸಗಿ ಕಾಲೇಜುಗಳಿಗೆ ಅಫಿಲಿಯೇಷನ್ ನೀಡುವ ಪ್ರಕ್ರಿಯೆಯನ್ನು ಸಹ ನಿಲ್ಲಿಸಿತು. 1997ರ ಸ್ವಾಮಿನಾಥನ್ ವರದಿಯಲ್ಲಿ ಖಾಸಗಿ ಕೃಷಿ ಶಿಕ್ಷಣದ ಪರಿಣಾಮದಿಂದಾಗಿ ಕೃಷಿ ಶಿಕ್ಷಣದ ಗುಣಮಟ್ಟ ಕುಸಿದಿದ್ದು, ಖಾಸಗಿ ಕೃಷಿ ಕಾಲೇಜುಗಳು ಅಫಿಲಿಯೇಷನ್ ಮೂಲಕ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳ ಅಡಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು ಮತ್ತು ಗುಣಮಟ್ಟದ ಕೊರತೆ ಕಂಡುಬಂದಾಗ ಅಫಿಲಿಯೇಷನ್‌ನ್ನು ರದ್ದುಪಡಿಸಬೇಕು ಎಂಬ ಮಾಹಿತಿ ಇದೆ. ಐಸಿಎಆರ್ ಸಹ ದೇಶದಲ್ಲಿ ಭ್ರಷ್ಟ ಖಾಸಗಿ ಕೃಷಿ ಶಿಕ್ಷಣವನ್ನು ಮಟ್ಟ ಹಾಕಲು ತನಗೆ ಹೆಚ್ಚಿನ ಅಧಿಕಾರವನ್ನು ಒದಗಿಸಲು ಕೇಂದ್ರ ಸರಕಾರವನ್ನು ಕೋರಿದೆ.

2017ರಲ್ಲಿ ನೆರೆಯ ಆಂಧ್ರಪ್ರದೇಶದಲ್ಲಿ ಎಐಸಿಟಿಇ/ಯುಜಿಸಿಯಿಂದ ಮಾನ್ಯತೆ ಹೊಂದಿದ್ದ ಖಾಸಗಿ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿಂದ ಕೃಷಿ ಪದವಿ ಪಡೆದ ಅಭ್ಯರ್ಥಿಗಳು ಸಹ ಸರಕಾರಿ ಕೃಷಿ ಅಧಿಕಾರಿಯ ಹುದ್ದೆಗೆ ಅರ್ಹರು ಎಂಬ ಆದೇಶ ಹೊರಡಿಸಲಾಯಿತು. ಪರಿಣಾಮ, ಉತ್ತರ ಭಾರತದಲ್ಲಿ ಐಸಿಎಆರ್ ನಿಯಮಗಳನ್ನು ಪಾಲಿಸದ ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ಅಂಕಗಳೊಂದಿಗೆ ಕೃಷಿ ಪದವಿಗಳನ್ನು ಪಡೆದಿರುವ ಅಭ್ಯರ್ಥಿಗಳು ಸರಕಾರಿ ಕೃಷಿ ಅಧಿಕಾರಿಯ ಬಹುತೇಕ ಹುದ್ದೆಗಳನ್ನು ಗಳಿಸಿದರು. ಆಗ ಅಲ್ಲಿನ ಸರಕಾರಿ ಕೃಷಿ ವಿದ್ಯಾರ್ಥಿಗಳು ಅನ್ಯಾಯವನ್ನು ಖಂಡಿಸಿ, ಕೇವಲ ಐಸಿಎಆರ್ ಪದವಿಗಳನ್ನು ಮಾತ್ರ ಪರಿಗಣಿಸಲು ರಾಜ್ಯಮಟ್ಟದ ಹೋರಾಟ ನಡೆಸಿದ್ದರು, ಫಲವಾಗಿ ಸರಕಾರ ತನ್ನ ವಿವಾದಾತ್ಮಕ ಆದೇಶವನ್ನು ಹಿಂಪಡೆಯಿತು. ಈ ಎಲ್ಲಾ ನಿದರ್ಶನಗಳಲ್ಲಿಯು ಗುಣಮಟ್ಟವಿಲ್ಲದ ಭ್ರಷ್ಟ ಖಾಸಗಿ ಮತ್ತು ಸಂಬಂಧರಹಿತ ಎಐಸಿಟಿಇ/ಯುಜಿಸಿಯ ಮಾನ್ಯತೆಯಲ್ಲಿ ಕೃಷಿ ಪದವಿಗಳನ್ನು ಪಡೆದ ಅಭ್ಯರ್ಥಿಗಳು ಕೃಷಿ ಇಲಾಖೆಯ ಹುದ್ದೆಗಳಿಗೆ ಅರ್ಹರಲ್ಲ ಎಂಬುದು ಸಾಬೀತಾಗುತ್ತದೆ. ಆದ್ದರಿಂದ ಕರ್ನಾಟಕ ಸರಕಾರ ಕೂಡಲೇ ರಾಜ್ಯಪತ್ರದಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ಕೇವಲ ಐಸಿಎಆರ್ ಮಾನ್ಯತೆಯ ಕೃಷಿ ವಿಶ್ವವಿದ್ಯಾನಿಲಯಗಳ ಕೃಷಿ ಇಂಜಿನಿಯರಿಂಗ್/ಜೈವಿಕ ತಂತ್ರಜ್ಞಾನ/ಆಹಾರ ವಿಜ್ಞಾನ ಪದವೀಧರರು ಮಾತ್ರ ಕೃಷಿ ಇಲಾಖೆಯ ಶೇ. 15ರ ಮೀಸಲಾತಿಗೆ ಅರ್ಹರು ಎಂಬ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು. ಆ ಮೂಲಕ ಸರಕಾರಿ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಕಾನೂನು ಬದ್ಧವಾಗಿ ವಿದ್ಯಾಭ್ಯಾಸ ನಡೆಸುವ ಬಡ, ರೈತಾಪಿ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ನೀಡಬೇಕು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)