varthabharthi


ರಾಷ್ಟ್ರೀಯ

ಕೇರಳ: ಎರಡೂ ಡೋಸ್ ಲಸಿಕೆ ಪಡೆದಿದ್ದ ಒಂದೇ ಕಾಲೇಜಿನ 39 ವೈದ್ಯ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು

ವಾರ್ತಾ ಭಾರತಿ : 20 Jul, 2021

ತ್ರಿಶ್ಶೂರ್, ಜು.20: ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ 39 ವೈದ್ಯ ವಿದ್ಯಾರ್ಥಿಗಳು ಕೋವಿಡ್-19 ಸೋಂಕಿನ ವಿರುದ್ಧ ಎರಡು ಡೋಸ್ ಲಸಿಕೆಗಳನ್ನು ಹಾಕಿಸಿಕೊಂಡಿದ್ದರೂ, ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.

ಕೊರೋನ ವೈರಸ್ ಸೋಂಕು ದಾಳಿ ಹಿನ್ನೆಲೆಯಲ್ಲಿ ಹೇರಿರುವ ಲಾಕ್‌ಡೌನ್‌ನಿಂದಾಗಿ ಮುಚ್ಚಿದ್ದ ಕಾಲೇಜನ್ನು ಜೂನ್ 1ರಂದು ತೆರೆಯಲಾಗಿತ್ತು. ಜೂನ್ 5ರಂದು ಮೊದಲ ಬ್ಯಾಚ್ ವಿದ್ಯಾರ್ಥಿಗಳು ಆಗಮಿಸಿದ್ದರು. ಜೂನ್ 6ರಂದು 175 ವಿದ್ಯಾರ್ಥಿಗಳ ಎರಡನೇ ಬ್ಯಾಚ್ ಆಗಮಿಸಿತ್ತು. ಇವರ ಪೈಕಿ ಒಬ್ಬನಿಗೆ ಮೊದಲ ದಿನವೇ ಕೋವಿಡ್ ಸೋಂಕು ದೃಢಪಟ್ಟಿತ್ತು. ಪ್ರಕರಣಗಳು ಹೆಚ್ಚಲಾರಂಭವಾದ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಜುಲೈ 17ರಂದು ಕೋವಿಡ್-19 ತಪಾಸಣೆ ನಡೆಸಲಾಯಿತು. ಪಾಸಿಟಿವ್ ಬಂದ 20 ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಲಾಗಿತ್ತು. ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ಬ್ಯಾಚ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಇದ್ದು, ಈ ಪೈಕಿ 19 ಮಂದಿಗೆ ಪಾಸಿಟಿವ್ ಬಂದಿದೆ.

ಜೂನ್ 6ರಿಂದೀಚೆಗೆ ಕಾಲೇಜಿನ 39 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದ್ದು, ಎಲ್ಲರೂ ಎರಡು ಡೋಸ್ ಲಸಿಕೆ ಪಡೆದಿದ್ದರು. ಇದೀಗ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವಾಗಿ ವ್ಯವಸ್ಥೆಗೊಳಿಸಿರುವ ಕೊಠಡಿಗಳಲ್ಲಿ ಅವರು ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ. ಇದರ ಜತೆಗೆ ಇದೇ ಕಾಲೇಜಿನ ದಂತವಿಜ್ಞಾನ ವಿಭಾಗದಲ್ಲಿ 17 ಮಂದಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯ ಅಧಿಕೃತರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)