ಕರ್ನಾಟಕ
ಕೊಳ್ಳೇಗಾಲ: ಶಂಭುಲಿಂಗನ ಬೆಟ್ಟದ ಕುಮಾರ ನಿಜಗುಣ ಸ್ವಾಮೀಜಿ ನಿಧನ

ಚಾಮರಾಜನಗರ, ಜು.20: ಕೊಳ್ಳೇಗಾಲ ತಾಲೂಕಿನ ಚಿಲುಕವಾಡಿಯ ಶಂಭುಲಿಂಗನ ಬೆಟ್ಟದ ಕುಮಾರ ನಿಜಗುಣ ಸ್ವಾಮೀಜಿ (88) ಮಂಗಳವಾರ ಮುಂಜಾನೆ ನಿಧನರಾದರು.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋ ಸಹಜ ಕಾರಣದಿಂದ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು.
ಸ್ವಾಮೀಜಿಯ ಅಂತ್ಯಕ್ರಿಯೆ ಸಂಜೆ ಚಿಲುಕವಾಡಿ ಗ್ರಾಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನೇರವೇರಲಿದೆ.
1933ರ ಜೂನ್ 15ರಂದು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಗೃಹಸ್ಥರಾಗಿದ್ದರು. 1981ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.
ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಅವರು, ಛಂದಸ್ಸಿನ ವಿಷಯದಲ್ಲಿ ಆಳ ಅಧ್ಯಯನ ಮಾಡಿದ್ದರು. ಹಲವು ಛಂದೋ ಆವಿಷ್ಕಾರಗಳನ್ನು ಮಾಡಿದ್ದರು. ಕನ್ನಡ ಮೇರು ಸಾಹಿತಿಗಳೊಂದಿಗೆ ಒಡನಾಟವನ್ನೂ ಹೊಂದಿದ್ದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










