ರಾಷ್ಟ್ರೀಯ
ಬಕ್ರೀದ್ ಗಾಗಿ ಕೋವಿಡ್-19 ನಿರ್ಬಂಧ ಸಡಿಲಿಸಿದ ಕೇರಳ ರಾಜ್ಯಕ್ಕೆ ಸುಪ್ರೀಂಕೋರ್ಟ್ ತರಾಟೆ

ಹೊಸದಿಲ್ಲಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗರಿಷ್ಠ ಮಟ್ಟದಲ್ಲಿದ್ದರೂ ಬಕ್ರೀದ್ ಹಬ್ಬದ ಮುನ್ನ ರಾಜ್ಯದಲ್ಲಿ ಕೋವಿಡ್ -19 ನಿರ್ಬಂಧಗಳಲ್ಲಿ ಮೂರು ದಿನಗಳ ಕಾಲ ಸಡಿಲಿಕೆಗೆ ಅವಕಾಶ ನೀಡಿದ್ದಕ್ಕಾಗಿ ಕೇರಳ ಸರಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ ಎಂದು India today ವರದಿ ಮಾಡಿದೆ.
ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಬೇಕು ಎಂಬ ವ್ಯಾಪಾರಿಗಳ ಬೇಡಿಕೆಗೆ ಮಣೆ ಹಾಕಿದ ಕೇರಳ ಸರಕಾರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವುದು ಆಘಾತಕಾರಿ ಸ್ಥಿತಿಯಾಗಿದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ.
ಕೋವಿಡ್ ನಿರ್ಬಂಧಗಳನ್ನು ಸಡಿಲಿಸುವ ಕೇರಳ ಸರಕಾರದ ಅಧಿಸೂಚನೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂಕೋರ್ಟ್ ರಾಜ್ಯವು ಬಕ್ರೀದ್ ಗೆ ನೀಡಿದ ಸಡಿಲಿಕೆಗಳು ಕೋವಿಡ್ -19 ಮತ್ತಷ್ಟು ಹರಡಲು ಕಾರಣವಾದರೆ ಕ್ರಮ ಕೈಗೊಳ್ಳುವುದಾಗಿ ಕೇರಳ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿ ಆರ್ .ಎಫ್. ನಾರಿಮನ್ ನೇತೃತ್ವದ ನ್ಯಾಯಪೀಠವು ಯಾವುದೇ ರೀತಿಯ, ಧಾರ್ಮಿಕ ಅಥವಾ ಇತರ ಒತ್ತಡದ ಗುಂಪುಗಳು ಯಾವುದೇ ರೀತಿಯಲ್ಲಿ ಜೀವಿಸುವ ಹಕ್ಕನ್ನು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕನ್ವರ್ ಯಾತ್ರೆ ಪ್ರಕರಣದಲ್ಲಿ ನೀಡಿರುವ ಆದೇಶಗಳನ್ನು ಪಾಲಿಸುವಂತೆ ನ್ಯಾಯಾಲಯವು ಕೇರಳ ರಾಜ್ಯ ಕ್ಕೆ ನಿರ್ದೇಶನ ನೀಡಿತು
ಬಕ್ರೀದ್ ಕಾರಣದಿಂದ ರಾಜ್ಯದಲ್ಲಿ ಮೂರು ದಿನ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸುವುದರ ವಿರುದ್ಧದ ಅರ್ಜಿಯ ಕುರಿತಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇರಳ ಸರಕಾರಕ್ಕೆ ತಿಳಿಸಿತ್ತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ










