varthabharthi


ರಾಷ್ಟ್ರೀಯ

ʼಪೆಗಾಸಸ್ʼ ನಲ್ಲಿ ಕೇಂದ್ರ ಸರಕಾರದ ಪಾತ್ರವೇನು?: ಆರ್ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ ಸಾಕೇತ್ ಗೋಖಲೆ

ವಾರ್ತಾ ಭಾರತಿ : 20 Jul, 2021

ಹೊಸದಿಲ್ಲಿ: ಇಸ್ರೇಲ್ ಮೂಲದ ಪೆಗಾಸಸ್ ಸ್ಪೈ ವೇರ್ ಬಳಸಿ ಭಾರತದ ಅಪರಿಚಿತ ಏಜನ್ಸಿಯೊಂದು  ಹಲವಾರು ಪತ್ರಕರ್ತರು ಮತ್ತು  ರಾಜಕಾರಣಿಗಳ ಮೊಬೈಲ್ ಫೋನ್‍ಗಳನ್ನು ಹ್ಯಾಕ್ ಮಾಡಿದೆ  ಎಂದು ದಿ ವೈರ್ ಹಾಗೂ 16 ಇತರ ಅಂತರಾಷ್ಟ್ರೀಯ ಮಾಧ್ಯಮಗಳು ಜತೆಯಾಗಿ ಕಾರ್ಯಾಚರಣೆ ನಡೆಸಿತ್ತು. ಇದು ಬಹಿರಂಗಗೊಂಡ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರು ಕೇಂದ್ರ ವಿದ್ಯುನ್ಮಾನ ಮತ್ತು ಐಟಿ ಸಚಿವಾಲಯದ ಸಮಗ್ರ ವಿತ್ತ ವಿಭಾಗದ ಉಪನಿರ್ದೇಶಕ ಎಂ ಪಿ ಸಿಂಗ್ ಅವರಿಗೆ ಆರ್‍ಟಿಐ ಅರ್ಜಿ ಸಲ್ಲಿಸಿ, ಎನ್‍ಎಸ್‍ಒ ಗ್ರೂಪ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿರುವ ಪೆಗಾಸಸ್  ಸಾಫ್ಟ್ ವೇರ್ ಗೆ ಲೈಸನ್ಸ್ ಅನ್ನು ಸಚಿವಾಲಯ ಅಥವಾ ಸರಕಾರ ಖರೀದಿಸಿದೆಯೇ ಎಂಬ ಕುರಿತು ಮಾಹಿತಿಯನ್ನು  48 ಗಂಟೆಗಳೊಳಗಾಗಿ ನೀಡಬೇಕೆಂದು ಕೋರಿದ್ದಾರೆ.

ಸಚಿವಾಲಯ ಅಥವಾ ಸರಕಾರ ಖರೀದಿಸಿದ್ದೇ ಆದಲ್ಲಿ ಖರೀದಿಸಿದ ದಿನಾಂಕ ಹಾಗೂ ಇದಕ್ಕಾಗಿ ಸಚಿವಾಲಯದ ಬಜೆಟ್‍ನಲ್ಲಿ ಎಷ್ಟು ಹಣ ಮೀಸಲಿರಿಸಲಾಗಿತ್ತು ಎಂಬ ಮಾಹಿತಿಯನ್ನೂ ಅವರು ಕೇಳಿದ್ದಾರೆ.

ಭಾರತೀಯ ಟೆಲಿಗ್ರಾಫ್ ಕಾಯಿದೆ 1885 ಇದರ ಸೆಕ್ಷನ್ 5(2) ಹಾಗೂ ಐಟಿ (ತಿದ್ದುಪಡಿ) ಕಾಯಿದೆಯ ಸೆಕ್ಷನ್ 69 ಇದರ ನಿಬಂಧನೆಗಳನ್ವಯ ಕೇಂದ್ರ ಗೃಹ ಸಚಿವಾಲಯ ಈ ಪೆಗಾಸಸ್ ಲೈಸನ್ಸ್ ಬಳಸಲು ಅನುಮತಿ ನೀಡಿದೆಯೇ ಎಂದೂ ಅವರು ತಮ್ಮ ಆರ್‍ಟಿಐ ಅರ್ಜಿಯಲ್ಲಿ ಕೇಳಿದ್ದಾರೆ.

ಪೆಗಾಸಸ್ ಲೈಸನ್ಸ್ ಅನ್ನು ಬೇಹುಗಾರಿಕೆಗೆಂದೇ ಬಳಸಬೇಕೆಂದೇನಿಲ್ಲ ಎಂದು ಐಟಿ ಸಚಿವರು ಸಂಸತ್ತಿನಲ್ಲಿ  ಜುಲೈ 19ರಂದು ಹೇಳಿದ್ದಾರೆ. ಸಚಿವರ ಹೇಳಿಕೆಯು ಲೈಸನ್ಸ್ ಅನ್ನು ಸರಕಾರ ಪಡೆದುಕೊಂಡಿದೆಯೆಂಬುದಕ್ಕೆ ದೃಢೀಕರಣವೇ ಎಂದೂ ಅವರು ಕೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)