varthabharthi


ಕರಾವಳಿ

ರಾಮಕೃಷ್ಣ 4 ದಿನ ಪೊಲೀಸ್ ಕಸ್ಟಡಿಗೆ, ಇನ್ನೋರ್ವ ಆರೋಪಿಗೆ ಶೋಧ

ವಿಶಾಲ ಗಾಣಿಗ ಕೊಲೆ ಪ್ರಕರಣ: ಪತಿ ಸಹಿತ ಇಬ್ಬರು ಆರೋಪಿಗಳ ಬಂಧನ

ವಾರ್ತಾ ಭಾರತಿ : 20 Jul, 2021

ಉಡುಪಿ, ಜು.20: ಕುಮ್ರಗೋಡು ಗ್ರಾಮದಲ್ಲಿರುವ ಮಿಲನ ರೆಸಿಡೆನ್ಸಿಯ ಫ್ಲಾಟ್‌ನಲ್ಲಿ ನಡೆದ ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಕೆಯ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ರಾಮಕೃಷ್ಣ ಗಾಣಿಗನನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಜು.23ರಂದು ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇಬ್ಬರು ಸುಪಾರಿ ಕಿಲ್ಲರ್‌ಗಳು ಈ ಕೃತ್ಯ ಎಸಗಿದ್ದು, ಅದರಲ್ಲಿ ಓರ್ವನನ್ನು ಪೊಲೀಸ್ ತಂಡ ಉತ್ತರ ಪ್ರದೇಶದಲ್ಲಿ ಬಂಧಿಸಿ ಉಡುಪಿಗೆ ಕರೆದುಕೊಂಡು ಬರುತ್ತಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ತನ್ನ ಪತ್ನಿಯನ್ನು ಕೊಲೆ ಮಾಡುವಂತೆ ರಾಮಕೃಷ್ಣ ಗಾಣಿಗ ಉತ್ತರ ಪ್ರದೇಶದ ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ ಸುಪಾರಿ ನೀಡಿದ್ದನು. ಜು.2ರಂದು ತನ್ನ ಮಗನೊಂದಿಗೆ ಊರಿಗೆ ಬಂದಿದ್ದ ವಿಶಾಲ ಗಾಣಿಗ ಕುಮ್ರಗೋಡುವಿನ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಜು.7 ರಂದು ರಾಮಕೃಷ್ಣರವರ ಆಸ್ತಿ ಪಾಲು ಪಟ್ಟಿ ಆಗಿದ್ದು, ಜು.12ರಂದು ವಿಶಾಲ ಗಾಣಿಗ ತನ್ನ ತಂದೆ ತಾಯಿ ಮತ್ತು ಮಗನೊಂದಿಗೆ ರಿಕ್ಷಾದಲ್ಲಿ ಫ್ಲಾಟ್‌ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಹೋಗಿದ್ದರು.

ಅಲ್ಲಿಂದ ವಿಶಾಲ ಗಾಣಿಗ ರಿಕ್ಷಾದಲ್ಲಿ ಕುಮ್ರಗೋಡು ಫ್ಲಾಟ್‌ಗೆ ಬಂದಿದ್ದರು. ಆಗ ಇಬ್ಬರು ಸುಪಾರಿ ಕಿಲ್ಲರ್‌ಗಳು ಫ್ಲಾಟ್‌ಗೆ ನುಗ್ಗಿ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಪ್ರಕರಣದ ದಿಕ್ಕು ತಪ್ಪಿಸುವ ಹಿನ್ನೆಲೆಯಲ್ಲಿ ಕೊಲೆಗಡುಕರು ಆಕೆಯ ಮೈಮೇಲಿದ್ದ ಚಿನ್ನಾಭರಣಗಳ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಬಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂತರ ದುಬೈಯಿಂದ ಊರಿಗೆ ಬಂದಿದ್ದ ರಾಮಕೃಷ್ಣನನ್ನು ಪೊಲೀಸರು ಎರಡು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಸಂಶಯದ ಮೇರೆಗೆ ಕೆಲವೊಂದು ಮಾಹಿತಿಗಾಗಿ ಎರಡು ದಿನಗಳ ಹಿಂದೆ ಆತನನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು. ಆಗ ಆತನೇ ಸುಪಾರಿ ನೀಡಿ ಕೊಲೆಗೈದಿರುವುದು ತಿಳಿದುಬಂತು. ಅದರಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೊಲೆಗೆ ಇವರಿಬ್ಬರ ಮಧ್ಯೆ ಇದ್ದ ವೈಮನಸ್ಸೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಇದರ ಹಿಂದೆಯೇ ಬೇರೆ ಕಾರಣ ಇರಬಹುದು ಎಂದು ಪೊಲೀಸರ ಶಂಕೆ ಆಗಿದೆ. ಅದರಂತೆ ಆತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)