varthabharthi


ಸಂಪಾದಕೀಯ

ದೇಶದ ಆಂತರಿಕ ಭದ್ರತೆಗೆ ಕನ್ನ!

ವಾರ್ತಾ ಭಾರತಿ : 21 Jul, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಸಣ್ಣ ರಾಜಕೀಯ ಉದ್ದೇಶಗಳಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಡುವ ಸರಕಾರದ ಸಂಪ್ರದಾಯ ಮುಂದುವರಿದಂತಿದೆ. ಈಗ ಅದು ‘ಪೆಗಾಸಸ್’ ಹೆಸರಿನಲ್ಲಿ ಸದ್ದು ಮಾಡುತ್ತಿದೆ. ರಫೇಲ್ ಹಗರಣ, ಸೇನೆಯಲ್ಲಿ ಹಸ್ತಕ್ಷೇಪ, ರಾಜಕೀಯಕ್ಕೆ ಸೇನೆಯ ದುರ್ಬಳಕೆ, ಪುಲ್ವಾಮ ಸೈನಿಕರ ಬಲಿದಾನಗಳ ದುರುಪಯೋಗ ಇವೆಲ್ಲದರ ಸಾಲಿಗೆ ಇದೀಗ ಪೆಗಾಸಸ್ ಎನ್ನುವ ಇನ್ನೊಂದು ಹೆಸರೂ ಸೇರ್ಪಡೆಯಾಗುತ್ತಿದೆ. ತನ್ನದೇ ದೇಶದೊಳಗಿರುವ ರಾಜಕೀಯ ನಾಯಕರ, ಮಾನವ ಹಕ್ಕು ಹೋರಾಟಗಾರರ, ಪತ್ರಕರ್ತರ, ಶ್ರೀಸಾಮಾನ್ಯರ ಗೂಢಚಾರಿಕೆ ನಡೆಸಲು ಸರಕಾರ, ಇಸ್ರೇಲ್‌ನ ಸಂಸ್ಥೆಯೊಂದಕ್ಕೆ ಅವಕಾಶ ನೀಡಿದೆ ಮತ್ತು ಇದನ್ನು ಬಳಸಿಕೊಂಡು ಈ ದೇಶದೊಳಗಿನ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಲು ಸರಕಾರವೇ ಪ್ರಯತ್ನಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಆರೋಪಗಳು ನಿಜವೇ ಆಗಿದ್ದರೆ, ಈ ದೇಶದ ಆಂತರಿಕ ಭದ್ರತೆ ತೀವ್ರ ಅಪಾಯದಲ್ಲಿದೆ. ವಿಪರ್ಯಾಸವೆಂದರೆ, ಪ್ರಧಾನಿಯ ‘ಭಕ್ತ’ರು, ಇದನ್ನೂ ಮೋದಿಯ ಸಾಧನೆಗಳ ಪಟ್ಟಿಯಲ್ಲಿ ಸೇರಿಸಿ ಸಂಭ್ರಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ, ಸರಕಾರ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದೆ ಮತ್ತು ಅಧಿವೇಶನವನ್ನು ಹಳಿತಪ್ಪಿಸಲು ನಡೆಸಲಾದ ಅಂತರ್‌ರಾಷ್ಟ್ರೀಯ ಸಂಚು ಎಂದು ಹೇಳಿಕೆ ನೀಡಿದೆ. ಈಗಾಗಲೇ ಹಲವು ದೇಶಗಳು ಈ ಗೂಢಚಾರಿಕೆಯ ಕುರಿತಂತೆ ತನಿಖೆಗೆ ಮುಂದಾಗಿವೆಯಾದರೆ, ಇತ್ತ ಭಾರತ ಮಾತ್ರ, ತನಿಖೆಗೆ ಮುನ್ನವೇ ತನಗೆ ತಾನು ಕ್ಲೀನ್ ಚಿಟ್ ಕೊಟ್ಟುಕೊಂಡಿದೆ. ಹೇಗೆ ರಫೇಲ್‌ನಲ್ಲಿ ನಡೆದ ಹಗರಣವನ್ನು ತನಿಖೆಯೇ ನಡೆಸದೆ ಮುಚ್ಚಿ ಹಾಕಿತೋ ಹಾಗೆಯೇ ಪೆಗಾಸಸ್ ಕೂಡ ಮುಚ್ಚಿ ಹೋಗುವ ಸೂಚನೆಗಳು ಕಾಣುತ್ತಿವೆ.

ಇಸ್ರೇಲ್‌ನ ಗೂಢಚರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಮೂವರು ಸೇರಿ ರಚಿಸಿದ ಎನ್‌ಎಸ್‌ಒ ಸಂಸ್ಥೆಯು ಯಾವ ಸರಕಾರಕ್ಕೂ ಅಧಿಕೃತ ಗೂಢಚಾರಿಕೆಗೆ ನೆರವು ನೀಡುತ್ತದೆ. ಅವರ ಪೆಗಾಸಸ್ ತಂತ್ರಜ್ಞಾನ ಈ ಗೂಢಚಾರಿಕೆಗೆ ಬಳಕೆಯಾಗುತ್ತದೆ. ಭಯೋತ್ಪಾದಕರನ್ನು ಪತ್ತೆ ಹಚ್ಚಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಸಂಸ್ಥೆ ಹೇಳಿದ್ದರೂ, ಭಯೋತ್ಪಾದಕರಿಗಿಂತ ಇದು ಇನ್ನಿತರ ರಾಜಕೀಯ ಗೂಢಚಾರಿಕೆಗಳಿಗೆ ಬಳಕೆಯಾದದ್ದೇ ಹೆಚ್ಚು. ಸರ್ವಾಧಿಕಾರಿ ಆಡಳಿತವಿರುವ ದೇಶಗಳು, ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಇದನ್ನು ಬಳಸಿಕೊಂಡ ಬಗ್ಗೆ ವರದಿಗಳಿವೆ. ಭಾರತವೂ ಸೇರಿದಂತೆ ಮೆಕ್ಸಿಕೊ, ಸೌದಿ, ಬಹರೈನ್, ಟರ್ಕಿ, ಕಿನ್ಯಾ, ಮೊರೊಕ್ಕೊ, ರುವಾಂಡದಂತಹ ದೇಶಗಳು ಪೆಗಾಸಸನ್ನು ಖರೀದಿಸಿವೆ ಎಂದು ತನಿಖೆ ಹೇಳುತ್ತದೆ. ಈ ತಂತ್ರಜ್ಞಾನವನ್ನು ಮೊಬೈಲ್‌ಗಳಲ್ಲಿ ಅಳವಡಿಸಿದರೆ, ಅದು ಎಲ್ಲ ರೀತಿಯ ಸಂದೇಶಗಳು ಮತ್ತು ಖಾಸಗಿ ಡೇಟಾಗಳನ್ನು ಸಂಗ್ರಹಿಸುತ್ತದೆ. ಒಬ್ಬರ ಮೂಲಕ ಇನ್ನೊಬ್ಬರ ಮೊಬೈಲ್‌ಗಳಿಗೆ ಪ್ರವೇಶಿಸಲು ಇದರಿಂದ ಸಾಧ್ಯ. ಸರಕಾರದ ಒಪ್ಪಿಗೆಯ ಮೂಲಕವೇ ಈ ತಂತ್ರಜ್ಞಾನವನ್ನು ಮಾರಲಾಗುತ್ತದೆ. 2017ರಿಂದಲೇ ಭಾರತೀಯ ಸಂವಿಧಾನ ತಜ್ಞರು, ಪತ್ರಕರ್ತರು, ರಾಜಕಾರಣಿಗಳು, ಮಾನವಹಕ್ಕು ಹೋರಾಟಗಾರರು ಅಷ್ಟೇ ಏಕೆ ಪೊಲೀಸ್ ಅಧಿಕಾರಿಗಳನ್ನೂ ಪೆಗಾಸಸ್ ಬಳಸಿಕೊಂಡು ಅವರನ್ನು ಗೂಢಚಾರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಷ್ಟಕ್ಕೂ ಆರೋಪವನ್ನು ಯಾವುದೋ ರಾಜಕಾರಣಿಗಳೋ ಅಥವಾ ಇನ್ನಾವುದೋ ಗುಂಪುಗಳು ಮಾಡಿರುವುದು ಅಲ್ಲ. ಜಗತ್ತಿನ 16 ಮಾಧ್ಯಮ ಸಂಸ್ಥೆಗಳ 80 ಪತ್ರಕರ್ತರು ಜೊತೆಗೂಡಿ ಸಿದ್ಧಪಡಿಸಿ ಬಿಡುಗಡೆ ಮಾಡಿದ ತನಿಖಾ ವರದಿಗಳು ಇವು. ಕೇವಲ ಭಾರತವನ್ನು ಗುರಿಯಾಗಿಸಿ ಈ ತನಿಖೆಯನ್ನು ಮಾಡಿಲ್ಲ. ಇನ್ನೂ ಹತ್ತು ಹಲವು ದೇಶಗಳು ಇಂತಹ ಗೂಢಚಾರಿಕೆಯಲ್ಲಿ ಭಾಗಿಯಾಗಿವೆ ಎನ್ನುವ ಆರೋಪವನ್ನು ತನಿಖೆ ಹೇಳುತ್ತದೆ.

ಅಷ್ಟೇ ಅಲ್ಲ, ಈ ಗೂಢಚಾರಿಕೆಯ ಮಾಹಿತಿಯ ಮೂಲಕ, ತನಗೆ ಅಪಾಯಕಾರಿಯಾದ ಹಲವರನ್ನು ಸರಕಾರಗಳು ಕೊಂದಿವೆ. ಸರಕಾರಗಳನ್ನು ಉರುಳಿಸಿವೆ. ಬ್ಲಾಕ್‌ಮೇಲ್‌ಗಳನ್ನು ಮಾಡಿ ಅವರನ್ನು ತನ್ನ ಮೂಗಿನ ನೇರಕ್ಕೆ ಕುಣಿಸಿವೆ ಎನ್ನುವಂತಹ ಗಂಭೀರ ಆರೋಪಗಳನ್ನು ವರದಿ ಮಾಡಿವೆ. ಈ ವರದಿಯ ಪ್ರಾಥಮಿಕ ಹಂತದಲ್ಲಿ, ಜಗತ್ತಿನ 20 ದೇಶಗಳಲ್ಲಿ ವಾಸವಾಗಿರುವ ಸುಮಾರು 50,000 ಜನರ ಫೋನ್ ನಂಬರ್‌ಗಳು ಗೂಢಚರ್ಯೆ ಪಟ್ಟಿಯಲ್ಲಿತ್ತು. ಅದರಲ್ಲಿ 1,000 ನಂಬರ್‌ಗಳು ಭಾರತಕ್ಕೆ ಸೇರಿವೆ. ಈಗ ಅವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಸೌದಿಯಲ್ಲಿ ಜಮಾಲ್ ಖಶೋಗಿ ಎಂಬ ಪತ್ರಕರ್ತನ ಹತ್ಯೆಗೂ ಈ ಪೆಗಾಸಸ್ ಗೂಢಚರ್ಯೆಯಲ್ಲಿ ಸಿಕ್ಕಿದ ಮಾಹಿತಿ ಕಾರಣ ಎನ್ನಲಾಗುತ್ತಿದೆ. ಸರಕಾರ ಮತ್ತು ಡ್ರಗ್ ಮಾಫಿಯಾಗಳ ನಡುವೆ ಇದ್ದ ಸಂಬಂಧವನ್ನು ತನಿಖೆ ಮಾಡಿದ್ದ ಮೆಕ್ಸಿಕೊದ ಸಿಸಿಲಿಯೋ ಪಿನೆಡಾ ಎಂಬ ಪತ್ರಕರ್ತ 2017ರಲ್ಲಿ ಕೊಲೆಯಾಗುವುದರ ಹಿಂದೆಯೂ ಪೆಗಾಸಸ್ ನೀಡಿದ ಮಾಹಿತಿಗಳಿದ್ದವು ಎಂದು ವರದಿ ಹೇಳುತ್ತದೆ. ರಫೇಲ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಸುಶಾಂತ್ ಸಿಂಗ್ ಎಂಬ ಪತ್ರಕರ್ತನ ಫೋನ್‌ನಲ್ಲೂ ಪೆಗಾಸಸ್ ತಂತ್ರಜ್ಞಾನ ಪತ್ತೆಯಾಗಿದೆ. ಚುನಾವಣಾ ಆಯೋಗದ ಹಿರಿಯ ಸದಸ್ಯರಾಗಿದ್ದ ಅಶೋಕ್ ಲಾವಾಸ, ಇದೀಗ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಅಶ್ವಿನಿ ವೈಷ್ಣವ್ ಅವರ ಮೊಬೈಲ್‌ನ್ನೂ ಗೂಢಚಾರಿಕೆ ಮಾಡಲಾಗಿರುವ ಅಂಶ ಬಹಿರಂಗವಾಗಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ಹೆಸರೂ ಪೆಗಾಸಸ್‌ನಲ್ಲಿ ಸೇರಿಕೊಂಡಿದೆ. ಭಯೋತ್ಪಾದಕರ ಮೂಲ ನೆಲೆಗಳನ್ನು ತನಿಖೆ ನಡೆಸುವುದಕ್ಕೆ ಬಳಸಬಹುದಾದ ತಂತ್ರಜ್ಞಾನ ಇದಾಗಿದ್ದರೂ ಬಹುತೇಕ ಸರಕಾರಗಳು ಈ ತಂತ್ರಜ್ಞಾನವನ್ನು ಬಳಸಿದ್ದು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯುವುದಕ್ಕಾಗಿ. ಕರ್ನಾಟಕದ ಸರಕಾರವನ್ನೇ ಉರುಳಿಸುವುದಕ್ಕಾಗಿ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು ಎಂದ ಮೇಲೆ, ಈ ದೇಶದ ಭದ್ರತೆ, ಸಂವಿಧಾನ, ಪ್ರಜಾಸತ್ತೆ ಇವೆಲ್ಲವೂ ಅಪಾಯದಲ್ಲಿದೆ ಎಂದಾಯಿತಲ್ಲವೇ?

ಸರಕಾರದ ಅನುಮತಿಯ ಮೇರೆಗೇ ಈ ತಂತ್ರಜ್ಞಾನವನ್ನು ಮಾರಲಾಗುತ್ತದೆ ಎಂದು ಇಸ್ರೇಲ್ ಸಂಸ್ಥೆ ಹೇಳಿಕೊಂಡಿದೆ. ಒಂದು ವೇಳೆ ಭಾರತದಲ್ಲೂ ಪೆಗಾಸಸ್ ಗೂಢಚಾರಿಕೆ ನಡೆದಿದೆಯಾದರೆ ಮೋದಿ ನೇತೃತ್ವದ ಸರಕಾರ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಈ ದೇಶದ ಆಂತರಿಕ ಭದ್ರತೆಗೆ ಅಪಾಯ ತರಬಲ್ಲ ಈ ಆರೋಪದಿಂದ ಸರಕಾರ ಕಳಚಿಕೊಳ್ಳಬೇಕಾದರೆ, ಗಂಭೀರ ತನಿಖೆ ನಡೆಯಬೇಕಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದ ಪತ್ರಕರ್ತರು ಜೊತೆಗೂಡಿ ಮಾಡಿರುವ ತನಿಖಾ ವರದಿ ಇದಾಗಿರುವುದರಿಂದ ಬರೇ ನಿರಾಕರಣೆಯಿಂದ ಸರಕಾರಕ್ಕೆ ಕ್ಲೀನ್ ಚಿಟ್ ಸಿಗುವುದಿಲ್ಲ. ಒಂದೋ ಈ ಪತ್ರಕರ್ತರು ಮಾಡಿರುವ ವರದಿಗಳು ಸುಳ್ಳಾಗಿರಬೇಕು ಅಥವಾ, ಸರಕಾರವನ್ನು ಯಾಮಾರಿಸಿ ಇಸ್ರೇಲ್ ಗೂಢಚರ ಸಂಸ್ಥೆಯನ್ನು ಇನ್ನಾರೋ ಬಳಸಿರಬೇಕು. ಈ ನಿಟ್ಟಿನಲ್ಲಿ ಜಂಟಿ ಸಂಸದೀಯ ಸಮಿತಿಯಿಂದ ತುರ್ತಾಗಿ ತನಿಖೆ ನಡೆಯಬೇಕಾಗಿದೆ. ತಮ್ಮ ಸ್ವಾರ್ಥ ರಾಜಕೀಯಗಳಿಗಾಗಿ ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟವರು ಎಷ್ಟೇ ಉನ್ನತ ಪದವಿಯಲ್ಲಿರಲಿ, ಅವರಿಗೆ ಶಿಕ್ಷೆಯಾಗಲೇಬೇಕಾಗಿದೆ. ಹಾಗೆಯೇ ಪೆಗಾಸಸ್‌ನ ಮೂಲಕ ಇತರ ದೇಶಗಳು ಭಾರತದ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳ ಕುರಿತಂತೆಯೂ ತನಿಖೆ ಮುಂದುವರಿಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)