varthabharthi


ರಾಷ್ಟ್ರೀಯ

ಒಟ್ಟಾಗಿ ಕೆಲಸ ಮಾಡಲು ಸಿದ್ದರಾಮಯ್ಯ-ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ಸಲಹೆ

ವಾರ್ತಾ ಭಾರತಿ : 21 Jul, 2021

ಬೆಂಗಳೂರು: ದಿಲ್ಲಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಅವರು  ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ  ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಒಟ್ಟಾಗಿ ಕೆಲಸ ಮಾಡುವಂತೆ ಕೇಳಿಕೊಂಡರು ಎಂದು ವರದಿಯಾಗಿದೆ.

ಬಲಭಾಗದಲ್ಲಿ ಸಿದ್ದರಾಮಯ್ಯ  ಹಾಗೂ ಎಡಭಾಗದಲ್ಲಿ  ರಾಜ್ಯ ಕಾಂಗ್ರೆಸ್ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಅವರನ್ನು ಕೂರಿಸಿಕೊಂಡು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ  ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇಬ್ಬರು ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಘೋಷಿಸಿದರು ಹಾಗೂ  ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದಿಲ್ಲ ಎಂದರು.

ಕರ್ನಾಟಕದಲ್ಲಿ 150ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದ್ದು, ವಿಧಾನಸಭಾ ಚುನಾವಣೆಯ ಬಳಿಕ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಮುಂದಿನ ಕೆಲವು ವಾರಗಳಲ್ಲಿ ರಾಜ್ಯ ಕಾಂಗ್ರೆಸ್ ನಲ್ಲಿ ಪುನರ್ ರಚನೆ ಆಗುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ತಿಳಿಸಿದೆ.

ಇಬ್ಬರು ಹಿರಿಯ ನಾಯಕರು 2023 ರ ವಿಧಾನಸಭಾ ಚುನಾವಣೆಗೆ ಪಕ್ಷದ ಸಿಎಂ ಅಭ್ಯರ್ಥಿ ಯಾರು ಎಂಬುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಕಾಂಗ್ರೆಸ್ ಹೈಕಮಾಂಡ್  ಇಬ್ಬರನ್ನು ದಿಲ್ಲಿಗೆ ಕರೆಸಿಕೊಂಡಿತ್ತು.

ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಯಲ್ಲಿ  ಹೋರಾಡುವಂತೆ ರಾಹುಲ್  ಅವರು ಶಿವಕುಮಾರ್ ಹಾಗೂ  ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದು, ತಮ್ಮನ್ನು ತಾವು  ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.

"ರಾಹುಲ್ ಗಾಂಧಿ ನಮಗೆ ಕೆಲವು ಸಲಹೆಗಳನ್ನು ನೀಡಿದರು. ಅದನ್ನು ನಾವು ಪ್ರಾಮಾಣಿಕವಾಗಿ ಅನುಸರಿಸುತ್ತೇವೆ. ನಿಸ್ಸಂಶಯವಾಗಿ ಸಣ್ಣ ಭಿನ್ನಾಭಿಪ್ರಾಯಗಳಿವೆ. ಕಾಂಗ್ರೆಸ್ ಬಲವಾದ ಆಂತರಿಕ ಪ್ರಜಾಪ್ರಭುತ್ವವನ್ನು ಹೊಂದಿದೆ. ಭಿನ್ನಾಭಿಪ್ರಾಯವನ್ನು ಹೊಂದಿರುವುದು ಪ್ರಜಾಪ್ರಭುತ್ವದ ಸ್ಥಾಪನೆಯ ಭಾಗವಾಗಿದೆ. ಆದರೆ ನಾವು ಒಗ್ಗಟ್ಟಿನಿಂದ ಇರುತ್ತೇವೆ”ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಘಟಿತ ನಾಯಕತ್ವದಲ್ಲಿ ಕಾಂಗ್ರೆಸ್ ಮುಂದಿನ ಚುನಾವಣೆಗೆ ಹೋಗಲಿದೆ ಎಂದು ಶಿವಕುಮಾರ್ ಹೇಳಿದರು. “ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಇದು ಒಂದು ಸಿದ್ಧಾಂತವನ್ನು ಹೊಂದಿದೆ. ಇಲ್ಲಿ ಸಾಮೂಹಿಕ ನಾಯಕತ್ವ ಮುಖ್ಯ. ವೈಯಕ್ತಿಕ ನಾಯಕತ್ವಕ್ಕೆ ಯಾವುದೇ ಅವಕಾಶವಿಲ್ಲ. ನಮ್ಮಲ್ಲಿ ಒಂದು ಡಝನ್ ನಾಯಕರು ಇದ್ದಾರೆ ಹಾಗೂ  ಪಕ್ಷವು ಅವರ ಅಡಿಯಲ್ಲಿ ಚುನಾವಣೆಗೆ ಹೋಗುತ್ತದೆ ”ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)