varthabharthi


ಕರ್ನಾಟಕ

ಅವಧಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಒತ್ತಾಯ

ನಾಯಕತ್ವ ಬದಲಾವಣೆ ವಿಚಾರ: ಸಿಎಂ ಬಿಎಸ್ ವೈ ಬೆಂಬಲಕ್ಕೆ ನಿಂತ ಮಠಾಧೀಶರು

ವಾರ್ತಾ ಭಾರತಿ : 21 Jul, 2021

ಬೆಂಗಳೂರು, ಜು. 21: `ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅವರು ಪೂರ್ಣಾವಧಿ ಮುಖ್ಯಮಂತ್ರಿ ಆಗಿರಬೇಕು ಎಂಬುದು ರಾಜ್ಯದ ಮಠಾಧೀಶರ ಆಶಯವಾಗಿದೆ' ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠಾಧೀಶರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬೆಂಬಲ ಪ್ರಕಟಿಸಿದ್ದಾರೆ.

ಬುಧವಾರ ಇಲ್ಲಿನ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿದ ಮಠಾಧೀಶರು, ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಗಂಗಾ ಶ್ರೀಗಳು, `ಬಿಜೆಪಿ ವರಿಷ್ಠರು ಮಧ್ಯದಲ್ಲೇ ಯಡಿಯೂರಪ್ಪ ಅವರನ್ನು ಕೈ ಬಿಡುವುದು ಸರಿಯಲ್ಲ. ಪ್ರವಾಹ, ಕೊರೋನ ಮಧ್ಯೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅವಧಿ ಪೂರ್ಣಗೊಳಿಸಲು ಬಿಡಬೇಕು' ಎಂದು ಆಗ್ರಹಿಸಿದರು.

`ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಜತೆ ಚರ್ಚಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದಾರೆ' ಎಂದ ಅವರು, `ಬಿಜೆಪಿಯಲ್ಲಿ 75 ವರ್ಷ ಮೀರಿದ ಯಾವುದೇ ವ್ಯಕ್ತಿಗೆ ಅಧಿಕಾರ ನೀಡಿಲ್ಲ. ಇಡೀ ದೇಶದಲ್ಲಿ ನನಗೆ ಮಾತ್ರ ಪಕ್ಷ ಅವಕಾಶ ಮಾಡಿಕೊಟ್ಟಿದೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಇಚ್ಚೆ ಏನೆಂದರೆ ಅವಧಿ ಪೂರೈಸುವವರೆಗೆ ಯಡಿಯೂರಪ್ಪ ಮುಂದುವರೆಸಬೇಕೆಂಬುದಷ್ಟೇ ನಮ್ಮ ಆಶಯ' ಎಂದು ಸ್ಪಷ್ಟಣೆ ನೀಡಿದರು.

ಬದಲಾವಣೆ ಮಾಡಬೇಡಿ: ಈ ಮಧ್ಯೆ ಸಾಣೆಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಅವರು ಇನ್ನೂ ಎರಡು ವರ್ಷ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಪಕ್ಷಕ್ಕೆ ಹಾನಿಯಾಗಲಿದೆ ಎಂಬುದನ್ನು ಬಿಜೆಪಿ ವರಿಷ್ಟರು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.

`ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದರೆ ವೀರಶೈವ ನಾಯಕರೇ ಮುಖ್ಯಮಂತ್ರಿ ಆಗಬೇಕು. ಲಿಂಗಾಯತ ಸಮುದಾಯದವರನ್ನು ಸಿಎಂ ಮಾಡದಿದ್ದರೆ ಬಿಜೆಪಿ ನಾಯಕರು ಭಾರೀ ಬೆಲೆ ತೆರಬೇಕಾಗುತ್ತದೆ. ನಾವು ಯಾವುದೇ ವ್ಯಕ್ತಿ ಪರವಾಗಿ ಇಲ್ಲ. ವೀರಶೈವ ಸಮುದಾಯದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಮುದಾಯದ ನಾಯಕರಿಗೆ ಅವಕಾಶ ನೀಡಬೇಕು'

-ಡಾ.ಶಾಂತವೀರಸ್ವಾಮೀಜಿ ಕೊಳದ ಮಠ ಬೆಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)