varthabharthi


ಸಂಪಾದಕೀಯ

ಸಬ್ ಚೆಂಗಾಸಿ-ಎಲ್ಲಾ ಚೆನ್ನಾಗಿದೆ!

ವಾರ್ತಾ ಭಾರತಿ : 23 Jul, 2021

ಕೊರೋನ ಎರಡನೇ ಅಲೆಯ ಸಾವು ನೋವುಗಳ ನಡುವೆಯೂ ಸಂತೋಷದ ವಿಷಯವೊಂದನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ‘ಕೋವಿಡ್ ಎರಡನೆಯ ಅಲೆಯ ಸಂದರ್ಭ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಮ್ಲಜನಕ ಕೊರತೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ’ ಎನ್ನುವುದನ್ನು ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಅಂದರೆ, ಎರಡನೆಯ ಅಲೆಯ ಸಂದರ್ಭದಲ್ಲಿ ಯಾವ ರಾಜ್ಯದಲ್ಲೂ ಆಮ್ಲಜನಕದ ಕೊರತೆಯಾಗಿಲ್ಲ. ಆದುದರಿಂದ ಸಾವು ಸಂಭವಿಸುವ ಸಾಧ್ಯತೆಗಳೇ ಇಲ್ಲ. ಸರಕಾರದ ಬಳಿ ಕೊರೋನದಿಂದ ಸಾವುಗಳು ಸಂಭವಿಸಿರುವ ಬಗ್ಗೆ ವರದಿಗಳಿವೆ ಎನ್ನುವುದರ ಬಗ್ಗೆಯೂ ಅನುಮಾನಗಳಿವೆ. ಮೊದಲನೇ ಅಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಸಂಭವಿಸಿದ್ದ ವಲಸೆ ಕಾರ್ಮಿಕರ ಸಾವು ನೋವುಗಳ ಬಗ್ಗೆಯೂ ಸರಕಾರ ಇದೇ ಹೇಳಿಕೆಯನ್ನು ನೀಡಿತ್ತು. ಅಂತಹ ಯಾವುದೇ ವರದಿಗಳು ನಮಗೆ ಬಂದಿಲ್ಲ ಮತ್ತು ಆ ಕುರಿತಂತೆ ಯಾವುದೇ ಮಾಹಿತಿಗಳು ನಮ್ಮಲ್ಲಿಲ್ಲ ಎನ್ನುವ ಮೂಲಕ, ವಲಸೆ ಕಾರ್ಮಿಕರ ಸಾವುಗಳ ಹೊಣೆಗಾರಿಕೆಯಿಂದ ನುಣುಚಿಕೊಂಡಿತ್ತು. ಇದೀಗ ಎರಡನೇ ಅಲೆಯ ಕುರಿತಂತೆಯೂ ಅದೇ ಉತ್ತರವನ್ನು ನೀಡಿ, ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಮುಂದಾಗಿದೆ.

ಹಾಗಾದರೆ ವಿವಿಧ ರಾಜ್ಯಗಳಲ್ಲಿ ಕೊರೋನ ಸಂತ್ರಸ್ತರು ಸತ್ತಿರುವುದು ಹೇಗೆ ಎನ್ನುವ ಪ್ರಶ್ನೆ ತನಿಖೆಗೆ ಅರ್ಹವಾಗಿದೆ. ರಾಜ್ಯದ ಚಾಮರಾಜನಗರದಲ್ಲಿ 30ಕ್ಕೂ ಅಧಿಕ ಮಂದಿ ಆಮ್ಲಜನಕ ಕೊರತೆಯಿಂದ ಮೃತಪಟ್ಟರು. ಈಗಾಗಲೇ ಇದನ್ನು ರಾಜ್ಯದ ನಾಯಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಕೇಂದ್ರ ಸರಕಾರ, ಆಮ್ಲಜನಕ ಕೊರತೆಯಿಂದ ಜನ ಸತ್ತಿಲ್ಲ ಎಂದು ಹೇಳಬೇಕಾದರೆ, ಕರ್ನಾಟಕ ದೇಶದ ಭಾಗವಲ್ಲ ಎಂದು ಭಾವಿಸಿರಬೇಕು. ಆದುದರಿಂದ ಬಿಜೆಪಿಯ ರಾಜ್ಯ ನಾಯಕರು, ಕರ್ನಾಟಕದಲ್ಲಿರುವ ಚಾಮರಾಜನಗರ ಎನ್ನುವ ಪಟ್ಟಣ ಈ ದೇಶದ ಅವಿಭಾಜ್ಯ ಅಂಗ ಎನ್ನುವುದನ್ನು ತಿಳಿಸಿಕೊಡಬೇಕಾಗಿದೆ. ದೇಶದ ಹಲವೆಡೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಿಂದ ಕೊರೋನ ರೋಗಿಗಳು ಮೃತಪಟ್ಟಿದ್ದಾರೆ. ಎಪ್ರಿಲ್ 23ರಂದು ದಿಲ್ಲಿಯ ಗೋಲ್ಡನ್ ಆಸ್ಪತ್ರೆಯಲ್ಲಿ 20 ಜನ ಕೊರೋನ ರೋಗಿಗಳು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದಾರೆ. ಮೇ 1ರಂದು ಹೊಸದಿಲ್ಲಿಯ ಇನ್ನೊಂದು ಆಸ್ಪತ್ರೆಯಲ್ಲಿ ಎಂಟು ಮಂದಿ ರೋಗಿಗಳು ಆಮ್ಲಜನಕ ಕೊರತೆಯಿಂದ ಮೃತಪಟ್ಟಿದ್ದರು. ಸುಮಾರು ಒಂದು ಗಂಟೆಗಳ ಕಾಲ ಆಸ್ಪತ್ರೆ ಆಮ್ಲಜನಕ ಇಲ್ಲದೆ ಕಾರ್ಯ ನಿರ್ವಹಿಸಿರುವುದನ್ನು ಆಸ್ಪತ್ರೆಯ ಮುಖ್ಯಸ್ಥರೇ ಸ್ಪಷ್ಟಪಡಿಸಿದ್ದಾರೆ.

ತನ್ನ ಪಾದಬುಡದಲ್ಲೇ ನಡೆದ ಈ ದುರಂತದ ಬಗ್ಗೆ ಸರಕಾರಕ್ಕೆ ಮಾಹಿತಿಯಿಲ್ಲ ಎಂದ ಮೇಲೆ, ಕರ್ನಾಟಕದ ಚಾಮರಾಜನಗರದಲ್ಲಿ ನಡೆದ ದುರಂತದ ಕುರಿತಂತೆ ಮಾಹಿತಿಯನ್ನು ಕೇಂದ್ರ ಸರಕಾರದಿಂದ ನಿರೀಕ್ಷಿಸುವುದು ಹೇಗೆ? ಕರ್ನಾಟಕದಲ್ಲಿ ಆಮ್ಲಜನಕ ಕೊರತೆಯಿಂದ ಸುಮಾರು 30 ರೋಗಿಗಳು ದಾರುಣವಾಗಿ ಮೃತಪಟ್ಟರು. ಎಪ್ರಿಲ್ 22ರಂದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಐವರು ಕೊರೋನ ರೋಗಿಗಳು ಒಂದೇ ದಿನ ಮೃತಪಟ್ಟಿದ್ದಾರೆ. ಎಪ್ರಿಲ್ 26ರಂದು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 9 ಕೊರೋನ ಸೋಂಕಿತರು ಮೃತಪಟ್ಟಿದ್ದರು. ಗೋವಾದಲ್ಲಿ ಮೇ ತಿಂಗಳಲ್ಲಿ ಸುಮಾರು ನಾಲ್ಕು ದಿನಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸುಮಾರು 74 ಮಂದಿ ಮೃತಪಟ್ಟ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಆಮ್ಲಜನಕ ಕೊರತೆಯಿಂದಾಗಿ ದೇಶಾದ್ಯಂತ ನಿರಂತರ ಸಾವುಗಳು ಸಂಭವಿಸುತ್ತಿದ್ದರೂ, ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿರಲಿಲ್ಲ. ಆಮ್ಲಜನಕ ಹಂಚುವುದರಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸಿದಾಗ ರಾಜ್ಯ ಅನಿವಾರ್ಯವಾಗಿ ಕೋರ್ಟಿನ ಮೊರೆಹೋಗಬೇಕಾಯಿತು. ಹೈಕೋರ್ಟ್ ಅತ್ಯಂತ ತೀಕ್ಷ್ಣವಾಗಿ ‘ತಕ್ಷಣ ರಾಜ್ಯದ ಆಮ್ಲಜನಕ ಪಾಲನ್ನು 1,200 ಟನ್‌ಗೆ ಹೆಚ್ಚಿಸಿ’ ಎಂದು ಆದೇಶ ನೀಡಿತು.

ಆಗಲಾದರೂ ಕೇಂದ್ರ ಸರಕಾರ ರಾಜ್ಯದ ಅಗತ್ಯವನ್ನು ಪೂರೈಸಬೇಕಾಗಿತ್ತು. ವಿಪರ್ಯಾಸವೆಂದರೆ, ಹೈಕೋರ್ಟ್‌ನ ತೀರ್ಪಿನ ವಿರುದ್ಧ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಮೊರೆ ಹೋಯಿತು. ತನ್ನದೇ ಪಕ್ಷ ಆಳುತ್ತಿರುವ ರಾಜ್ಯವೊಂದಕ್ಕೆ ಆಮ್ಲಜನಕವನ್ನು ಒದಗಿಸುವ ಕರ್ತವ್ಯದಿಂದ ನುಣುಚಿಕೊಳ್ಳಲು ಕೇಂದ್ರ ಸರಕಾರವೊಂದು ಸುಪ್ರೀಂಕೋರ್ಟ್‌ನ ಮೊರೆ ಹೋಗಿರುವ ಪ್ರಕರಣ ಇದೇ ಮೊದಲು ಇರಬೇಕು. ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ ಕೇಂದ್ರ ಸರಕಾರಕ್ಕೆ ಭಾರೀ ಮುಖಭಂಗವಾಯಿತು. ಅನಿವಾರ್ಯವಾಗಿ ಅದು ಆಮ್ಲಜನಕವನ್ನು ಪೂರೈಸಬೇಕಾಗಿ ಬಂತು. ರಾಜ್ಯದ ಪರಿಸ್ಥಿತಿ ಸುಧಾರಿಸಿದ್ದೇ ಈ ತೀರ್ಪಿನ ಬಳಿಕ. ಒಂದು ವೇಳೆ ಸುಪ್ರೀಂಕೋರ್ಟ್ ಕೇಂದ್ರದ ಪರವಾಗಿ ತೀರ್ಪು ನೀಡಿದ್ದೇ ಆಗಿದ್ದರೆ, ಇಂದು ಲೆಕ್ಕವಿಲ್ಲದಷ್ಟು ಹೆಣಗಳು ಬೀಳುತ್ತಿದ್ದವು ಮತ್ತು ಅದರ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ತಲೆಗೆ ಕಟ್ಟಿ, ಅವರನ್ನು ಕೆಳಗಿಳಿಸುತ್ತಿದ್ದರು. ರಾಜ್ಯದಲ್ಲಿ ಕೊರೋನ ಅವ್ಯವಸ್ಥೆಗೆ ಮುಖ್ಯ ಕಾರಣವೇ ಕೇಂದ್ರ ಸರಕಾರದ ನೀತಿ. ಉತ್ತರ ಪ್ರದೇಶದಂತಹ ರಾಜ್ಯಗಳ ಬೇಡಿಕೆಗಳಿಗೆ ಸ್ಪಂದಿಸಿದಷ್ಟು ತೀವ್ರವಾಗಿ ರಾಜ್ಯದ ಬೇಡಿಕೆಗಳಿಗೆ ಕೇಂದ್ರ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ಕೊರೋನ ಉಲ್ಬಣಿಸಬೇಕು ಮತ್ತು ಆ ಹೆಸರಿನಲ್ಲೇ ಯಡಿಯೂರಪ್ಪರನ್ನು ಕೆಳಗಿಳಿಸಬೇಕು ಎನ್ನುವ ಇಂಗಿತ ರಾಜ್ಯದ ಹಲವು ಬಿಜೆಪಿ ಸಂಸದರಿಗಿದ್ದಂತಿತ್ತು. ಕೊನೆಗೂ ಕೋರ್ಟ್‌ನ ಮಧ್ಯಸ್ಥಿಕೆಯಿಂದಾಗಿ ರಾಜ್ಯ ಬದುಕಿಕೊಂಡಿತು.

ದೇಶಾದ್ಯಂತ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿದಿನ ವರದಿಗಳು ಬರುತ್ತಿದ್ದರೂ, ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಇಲ್ಲ ಎನ್ನುತ್ತಿದೆ. ಹಾಗಾದರೆ ಈ ಬಗ್ಗೆ ಮಾಹಿತಿಗಳನ್ನು ಕೇಂದ್ರ ಸರಕಾರ ಯಾಕೆ ತರಿಸಿಕೊಳ್ಳಲಿಲ್ಲ? ಅದನ್ನು ತರಿಸಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಲ್ಲವೇ? ಕೊರೋನ ಎದುರಿಸುವಲ್ಲಿ ಸರಕಾರ ತೋರಿಸಿದ ಬೇಜವಾಬ್ದಾರಿಯನ್ನು ಇದು ಹೇಳುವುದಿಲ್ಲವೇ? ಎನ್ನುವ ಪ್ರಶ್ನೆಗಳು ಈಗ ಉತ್ತರವಿಲ್ಲದೆ ಉಳಿದುಕೊಂಡಿವೆ. ‘ಎಲ್ಲ ಚೆನ್ನಾಗಿದೆ, ಸಬ್ ಚೆಂಗಾಸಿ’ ಎಂದು ಸರಕಾರ ಜನರ ಮುಂದೆ ಮತ್ತೊಮ್ಮೆ ಘೋಷಿಸಿಕೊಂಡಿದೆ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದ ಬಗ್ಗೆ ಮಾಹಿತಿಯಿಲ್ಲ, ಗಂಗಾನದಿಯಲ್ಲಿ ಕೊರೋನ ಪೀಡಿತರ ಹೆಣಗಳು ತೇಲಿರುವ ಬಗ್ಗೆ ಮಾಹಿತಿಯಿಲ್ಲ, ವಲಸೆ ಕಾರ್ಮಿಕರ ಸಾವಿನ ಬಗ್ಗೆ ಮಾಹಿತಿಯಿಲ್ಲ, ಕೊರೋನದಿಂದ ಸಾವು ಸಂಭವಿಸಿರುವ ಬಗ್ಗೆ ಮಾಹಿತಿಯಿಲ್ಲ, ಕಳಪೆ ವೆಂಟಿಲೇಟರ್ ಬಗ್ಗೆ ಮಾಹಿತಿಯಿಲ್ಲ.....ಒಟ್ಟಿನಲ್ಲಿ ಮಾಹಿತಿಯನ್ನು ಪಡೆದುಕೊಂಡರೆ ತಾನೇ ದೇಶದಲ್ಲಿ ಸಮಸ್ಯೆಗಳಿವೆ ಎನ್ನುವುದು ಗೊತ್ತಾಗುವುದು. ಸಮಸ್ಯೆಗಳಿವೆ ಎಂದು ಗೊತ್ತಾದರೆ ಅವುಗಳಿಗೆ ಪರಿಹಾರ ಹುಡುಕಬೇಕಾಗುತ್ತದೆ. ಆದುದರಿಂದ ಮಾಹಿತಿಯನ್ನು ಪಡೆಯುವ ಅಗತ್ಯವೇ ಇಲ್ಲ. ಅದಕ್ಕಾಗಿಯೇ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಸರಕಾರ ಜೋರಾಗಿ ಹೇಳುತ್ತಿದೆ ‘ದೇಶದಲ್ಲಿ ಎಲ್ಲ ಚೆನ್ನಾಗಿದೆ, ಸಬ್ ಚೆಂಗಾಸಿ’. ಕನಿಷ್ಟ ಜನರಾದರೂ ತಮ್ಮ ಬಾಯಿಗೆ ಕಟ್ಟಿಕೊಂಡ ಪಟ್ಟಿಯನ್ನು ಬಿಚ್ಚಿ ಮಾತನಾಡಬೇಕು. ಆಗ ಸರಕಾರ ಕೂಡ ತನ್ನ ಕಣ್ಣಿಗೆ ಕಟ್ಟಿಕೊಂಡ ಪಟ್ಟಿ ಬಿಚ್ಚಿ, ವಾಸ್ತವವನ್ನು ನೋಡೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)