varthabharthi


ಕರ್ನಾಟಕ

ಹಲವೆಡೆ ರಸ್ತೆ ಸಂಪರ್ಕ ಕಡಿತ: ಆತಂಕದಲ್ಲಿ ತಗ್ಗು ಪ್ರದೇಶದ ಗ್ರಾಮಗಳ ಜನತೆ

ರಾಜ್ಯದಲ್ಲಿ ಹೆಚ್ಚಿದ ಮಳೆಯ ಆರ್ಭಟ: ಪ್ರವಾಹ ಭೀತಿ

ವಾರ್ತಾ ಭಾರತಿ : 23 Jul, 2021

ಬೆಂಗಳೂರು, ಜು. 23: ಗಡಿ ಜಿಲ್ಲೆ ಬೆಳಗಾವಿ, ಕಾರವಾರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾಲ್ಕೈದು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉತ್ತರ ಕರ್ನಾಟಕ ಭಾಗದ ಕೃಷ್ಣಾ, ಮಲಪ್ರಭ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಳಗಾವಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ತಗ್ಗು ಪ್ರದೇಶದಲ್ಲಿನ ಗ್ರಾಮಗಳ ಜನರ ಸಂಪರ್ಕ ಕಡಿತವಾಗಿದ್ದು, ಜನ-ಜಾನುವಾರುಗಳ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನೆರವಿನಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಭರದಿಂದ ಸಾಗಿದೆ. ಆದರೆ, ಎಡಬಿಡದೆ ಸುರಿಯುತ್ತಿರುವ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ.

`ನಾಯಕತ್ವ ಬದಲಾವಣೆ' ಒತ್ತಡಕ್ಕೆ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ನಡುವೆಯೇ ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ತುರ್ತು ವಿಡಿಯೋ ಸಂವಾದ ನಡೆಸಿದ್ದು ಪ್ರವಾಹ ಪೀಡಿತ ಗ್ರಾಮಗಳ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮತ್ತು ಸೂಕ್ತ ಮುನ್ನಚ್ಚರಿಕೆ ವಹಿಸಲು ನಿರ್ದೇಶನ ನೀಡಿದ್ದಾರೆ. ಅಗತ್ಯವಿರುವ ಜಿಲ್ಲೆಗಳಿಗೆ ಎನ್‍ಡಿಆರ್‍ಎಫ್ ಮತ್ತು ಎಸ್‍ಟಿಆರ್‍ಎಫ್ ತಂಡಗಳನ್ನು ರವಾನಿಸಲು ಸೂಚನೆ ನೀಡಿದ್ದಾರೆ.

ಇದರ ಜೊತೆ ಸೇನಾ ಹೆಲಿಕಾಪ್ಟರ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಲು ನಿರ್ದೇಶನ ನೀಡಿದ್ದು, ಪ್ರವಾಹ ಪೀಡಿತ ಜಿಲ್ಲೆಗಳ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆಯ ಮೇಲೆ ತೆರಳದ ಸದಾ ಸಂಪರ್ಕದಲ್ಲಿದ್ದು ದಿನದ 24 ಗಂಟೆಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜೊತೆಗೆ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.

ಅತಿವೃಷ್ಟಿ ಪರಿಸ್ಥಿತಿ: `ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಧಾರವಾಡ, ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಪರಿಸ್ಥಿತಿ ಎದುರಿಸಲು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ' ಎಂದು ಕಂದಾಯ ಸಚಿವ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್. ಅಶೋಕ್ ತಿಳಿಸಿದರು.

ಶುಕ್ರವಾರ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, `ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ 24 ಗಂಟೆಗಳಲ್ಲಿ 300 ಎಂಎಂ ಮಳೆಯಾಗಿದ್ದು, ಅಂಕೋಲಾ ತಾಲೂಕಿನ ಡೋಗ್ರಿ ಗ್ರಾಮದಲ್ಲಿ ದಾಖಲೆಯ 541 ಎಂಎಂ ಸೇರಿದಂತೆ ಶಿರಸಿ ತಾಲೂಕಿನ ಹಲವೆಡೆ 400 ಎಂಎಂ ಮಳೆಯಾಗಿದೆ. ಈವರೆಗೆ ಮಳೆಯಿಂದ ಮೂವರು 3 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿವೆ. ಚಿಕ್ಕಮಗಳೂರಿನಲ್ಲಿ ಮನೆ ಕುಸಿತದಿಂದ ಓರ್ವ, ಉತ್ತರ ಕನ್ನಡದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ ಎಂದು ಹೇಳಿದರು.

ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ 561.42 ಟಿಎಂಸಿ ನೀರು ಶೇಖರಣೆಗೊಂಡಿದ್ದು, ಶೇ.65ರಷ್ಟು ಭರ್ತಿಯಾಗಿವೆ. ಸಾಮಾನ್ಯವಾಗಿ ಈ ವೇಳೆ ಕೇವಲ ಶೇ.46ರಷ್ಟು ಮಾತ್ರ ಭರ್ತಿಯಾಗಿರುತ್ತಿದ್ದವು. ಅಚ್ಚರಿಯ ಸಂಗತಿಯೆಂದರೆ ಕೇವಲ 24 ಗಂಟೆಯಲ್ಲಿ 42 ಟಿಎಂಸಿ ನೀರು ಹರಿದು ಬಂದಿದೆ. ಅಲ್ಲದೆ, ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಅತ್ಯಧಿಕ ಮಳೆ ಬೀಳುತ್ತಿರುವುದುರಿಂದ ಹೆಚ್ಚಿನ ನದಿಗಳು ತುಂಬಿ ಹರಿಯುತ್ತಿವೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ ಎಂದು ಅವರು ವಿವರ ನೀಡಿದರು.

ಪ್ರಸಕ್ತ ಪರಿಸ್ಥಿತಿಯನ್ನ ಅವಲೋಕಿಸಿದರೆ ಇನ್ನು ಕೆಲವೇ ದಿನಗಳಲ್ಲಿ ಇಳಿಜಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ. ಒಂದು ವೇಳೆ ಪ್ರವಾಹ ಉಂಟಾದರೆ ರಾಯಚೂರು, ಕೊಡಗು, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ನಾಲ್ಕು ಎನ್‍ಡಿಆರ್‍ಎಫ್ ತಂಡಗಳನ್ನ ನಿಯೋಜಿಸಲಾಗಿದೆ ಮತ್ತು ಹೆಚ್ಚುವರಿಯಾಗಿ ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಎರಡು ತಂಡಗಳನ್ನ ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿನ ತಂಡವು ಈಗಾಗಲೇ ಶಿವಮೊಗ್ಗದತ್ತ ಹೊರಟಿದೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

ಸಂಪರ್ಕ ಕಡಿತ: ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಲವು ಗ್ರಾಮಗಳು ನಡುಗಡ್ಡೆಗಳಾಗಿವೆ. ಭೂ ಕುಸಿತ ಉಂಟಾಗಿದ್ದರಿಂದ ಹಾಸನ ಮತ್ತು ಬೇಲೂರಿಗೆ ಸಂಪರ್ಕ ಕಲ್ಪಿಸುವ ಎನ್‍ಎಚ್-75ರಲ್ಲಿ ಸಂಚಾರ ನಿಬರ್ಂಧಿಸಲಾಗಿದ್ದು, ಪರ್ಯಾಯವಾಗಿ ಚಾರ್ಮುಡಿಘಾಟ್ ಮುಖಾಂತರ ವಾಹನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

`ವಿಪತ್ತಿಗೆ ತುತ್ತಾದ ಜನರ ರಕ್ಷಣೆಗೆ ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ರಾಜ್ಯದ 18 ತಾಲೂಕುಗಳಲ್ಲಿ 131 ಗ್ರಾಮಗಳು ತೊಂದರೆಗೆ ಸಿಲುಕಿವೆ ಮತ್ತು 830 ಮನೆಗಳು ಹಾನಿಗೊಳಗಾಗಿದ್ದು, 8,733 ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ 80 ಕಾಳಜಿ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

`ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತು ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ನಡೆಸಿದ ವೀಡಿಯೋ ಸಂವಾದ ನಡೆಸಿದ್ದು, ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇನ್ನೂ ಮೂರು ದಿನಗಳ ಕಾಲ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)