varthabharthi


ಕರಾವಳಿ

ಮಂಗಳೂರು; ಸೈನಿಕನೆಂದು ಹೇಳಿಕೊಂಡು ಲಕ್ಷಾಂತರ ರೂ. ವಂಚನೆ: ದೂರು

ವಾರ್ತಾ ಭಾರತಿ : 23 Jul, 2021

ಮಂಗಳೂರು, ಜು.23: ಸೈನಿಕನೆಂದು ಪರಿಚಯಿಸಿಕೊಂಡು ವಂಚಿಸುತ್ತಿರುವ ಪ್ರಕರಣಗಳು ಮತ್ತೆ ಮುಂದುವರಿದಿವೆ. ನಕಲಿ ಸೈನಿಕನೋರ್ವ ಫ್ಲ್ಯಾಟ್‌ ಬಾಡಿಗೆಗೆ ಪಡೆಯುವುದಾಗಿ ಹೇಳಿ ಕುಳಾಯಿಯ ವ್ಯಕ್ತಿಯೋರ್ವರ ಖಾತೆಯಿಂದ 2,23,500 ರೂ. ವರ್ಗಾಯಿಸಿ ವಂಚಿಸಿರುವ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಳಾಯಿಯ ಫ್ಲ್ಯಾಟ್‌ ಮಾಲಕರೋರ್ವರು ಫ್ಲ್ಯಾಟ್‌ ಬಾಡಿಗೆಗೆ ನೀಡುವ ಬಗ್ಗೆ ವೆಬ್‌ಸೈಟ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ನೋಡಿದ ವ್ಯಕ್ತಿಯೋರ್ವರು ಜು.20ರಂದು ಕರೆ ಮಾಡಿ ತನ್ನನ್ನು ಅಂಕಿತ್ ವಿಜಯ್ ಎಂದು ಪರಿಚಯಿಸಿ ತಾನು ಸೈನಿಕನಾಗಿದ್ದು, ಅಹಮದಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಂಗಳೂರಿಗೆ ವರ್ಗಾವಣೆಯಾಗಿರುವುದರಿಂದ ಕುಳಾಯಿಯಲ್ಲಿ ಫ್ಲ್ಯಾಟ್‌ ಬಾಡಿಗೆಗೆ ಬೇಕು ಎಂದು ತಿಳಿಸಿದ್ದಾನೆ.

ಸೈನಿಕರ ಸಮವಸ್ತ್ರದಲ್ಲಿರುವ ಭಾವಚಿತ್ರ ಹಾಗೂ ಆಧಾರ್‌ ಕಾರ್ಡ್‌ನ್ನು ವಾಟ್ಸ್‌ಆ್ಯಪ್ ಮೂಲಕ ಫ್ಲ್ಯಾಟ್‌ ಮಾಲಕರಿಗೆ ಕಳುಹಿಸಿ ಕೊಟ್ಟು ಫ್ಲ್ಯಾಟ್‌ ನ ಭಾವಚಿತ್ರ ಕಳುಹಿಸಿಕೊಡುವಂತೆ ಹೇಳಿದ್ದಾನೆ. ಅದರಂತೆ, ಫ್ಲ್ಯಾಟ್‌ ಮಾಲಕರು ಫ್ಲ್ಯಾಟ್‌ ಭಾವಚಿತ್ರವನ್ನು ಕಳುಹಿಸಿಕೊಟ್ಟರು. ನಂತರ ರಾತ್ರಿ ಕರೆ ಮಾಡಿದ ಆ ವ್ಯಕ್ತಿಯು ತನ್ನ ಮನೆಯವರಿಗೆ ಫ್ಲ್ಯಾಟ್‌ ಇಷ್ಟವಾಗಿದ್ದು ಬಾಡಿಗೆಗೆ ಪಡೆಯುವು ದಾಗಿ ತಿಳಿಸಿದ್ದಾನೆ.

10,000 ರೂ. ಬಾಡಿಗೆ ಹಾಗೂ 25,000 ರೂ. ಡೆಪಾಸಿಟ್ ನೀಡುವುದಾಗಿ ಒಪ್ಪಿದ. ಅಲ್ಲದೆ, ತನ್ನ ಅಕೌಂಟೆಂಟ್ ರಣದೀಪ್ ಸಿಂಗ್ ಹಾಗೂ ಮೇಲಧಿಕಾರಿ ಪ್ರಶಾಂತ್ ಗುಪ್ತಾ ದೆಹಲಿಯಲ್ಲಿದ್ದು, ಅವರು ಹಣ ಪಾವತಿಸಲಿದ್ದಾರೆ ಎಂದು ಹೇಳಿದ್ದು, ಆ ಬಳಿಕ ಫ್ಲ್ಯಾಟ್‌ ಮಾಲಕರ ಖಾತೆಗೆ ಆರೋಪಿಗಳು 50 ರೂ. ವರ್ಗಾಯಿಸಿದರು. ನಂತರ ಫ್ಲ್ಯಾಟ್‌ ಮಾಲಕರ ಖಾತೆಯಿಂದಲೇ ಹಂತ ಹಂತವಾಗಿ 2,23,500 ರೂ.ನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)