varthabharthi


ಕರ್ನಾಟಕ

2030ರ ವೇಳೆಗೆ ಪಾರ್ಕಿಸನ್ ರೋಗ ಶೇ.300 ಹೆಚ್ಚಳ: ಸಚಿವ ಡಾ.ಸುಧಾಕರ್ ಆತಂಕ

ವಾರ್ತಾ ಭಾರತಿ : 24 Jul, 2021

ಡಾ.ಸುಧಾಕರ್

ಬೆಂಗಳೂರು, ಜು.24: ಪಾರ್ಕಿಸನ್ ರೋಗಕ್ಕೆ ಒಳಗಾಗುವವರ ಪ್ರಮಾಣ 2030ರ ವೇಳೆಗೆ ಶೇ.200ರಿಂದ 300ರಷ್ಟು ಹೆಚ್ಚಾಗಲಿದ್ದು, ಇದರ ಪರಿಹಾರ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಶನಿವಾರ ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಪಾರ್ಕಿಸನ್ಸ್ ರಿಸರ್ಚ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಒಂದು ಲಕ್ಷ ಜನರಲ್ಲಿ 350-400 ಜನರು ಪಾರ್ಕಿಸನ್ ರೋಗಕ್ಕೆ ಒಳಗಾಗುತ್ತಿದ್ದಾರೆ. ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಮಂದಿ ಈ ರೋಗದಿಂದ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂರೋ ಡಿಜನರೇಟಿವ್ ಕಾಯಿಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ನಿಮ್ಹಾನ್ಸ್ ಗುರುತಿಸಿಕೊಂಡಿದೆ. ಪಾರ್ಕಿಸನ್ಸ್ ರೋಗಕ್ಕೆ ಸಂಬಂಧಪಟ್ಟಂತೆ ನಿಮ್ಹಾನ್ಸ್ ಪಿಎಆರ್‍ಐನ ಇತರೆ ಕೇಂದ್ರಗಳೊಂದಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲಿದೆ.

ಅಕಾಡೆಮಿಕ್ ತರಬೇತಿ ಹಾಗೂ ಸಂಶೋಧನಾ ವಲಯದಲ್ಲಿ ಕೆಸಿಎಲ್-ಪಿಎಆರ್‍ಐ ಜೊತೆ ಕಾರ್ಯನಿರ್ವಹಿಸುವ ಅವಕಾಶಗಳನ್ನು ರಾಜ್ಯ ಸರಕಾರ ಪರಿಶೀಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪಾರ್ಕಿನ್ ಸನ್ ಹಾಗೂ ಇತರೆ ನ್ಯೂರೋ ಡಿಜನರೇಟಿವ್ ರೋಗಕ್ಕೆ ಸಂಬಂಧಿಸಿದಂತೆ ಪ್ರೊ.ರೇ ತಂಡ ಕೈಗೊಂಡ ಸಂಶೋಧನಾ ಚಟುವಟಿಕೆಗಳಿಗೆ ಅಭಿನಂದಿಸುತ್ತೇನೆ. ಎರಡೂ ಸಂಸ್ಥೆಗಳ ಈ ಸಹಯೋಗದ ಕೆಲಸ ಅಕಾಡೆಮಿಕ್ ವೇದಿಕೆ ಸೃಷ್ಟಿಸಲು ಹಾಗೂ ಕೌಶಲ್ಯಯುತ ಸಂಶೋಧಕರನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ತರಬೇತಿ ಕಾಯಾರ್ಗಾರ ಆಯೋಜಿಸಲು ಸರಕಾರ ಸಿದ್ಧವಿದೆ ಎಂದು ಅವರು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)