varthabharthi


ಚಿತ್ರ ವಿಮರ್ಶೆ

ಕನ್ನಡ ಸಿನೆಮಾ

‘ಇಕ್ಕಟ್’ನಲ್ಲಿ ಮನರಂಜನೆಯಿದೆ

ವಾರ್ತಾ ಭಾರತಿ : 25 Jul, 2021
ಶಶಿಕರ ಪಾತೂರು

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಘೋಷಿಸಿದ ಅನಿರೀಕ್ಷಿತವಾದ ಲಾಕ್‌ಡೌನ್ ಕಾರಣದಿಂದ ಹಲವಾರು ಸಮಸ್ಯೆಗಳು ದಿಢೀರನೆ ಉದ್ಭವಿಸಿದ್ದು ಎಲ್ಲರಿಗೂ ಗೊತ್ತು. ಅವುಗಳಲ್ಲಿ ವಿಚ್ಛೇದನಕ್ಕೆ ಮುಂದಾದ ಗಂಡ-ಹೆಂಡತಿಯರ ಸಂಖ್ಯೆಯೂ ಹೆಚ್ಚಾಗಿತ್ತು. ಮೊದಲೇ ಸಣ್ಣಪುಟ್ಟ ಸಮಸ್ಯೆ ಬಂದಾಗಲೇ ವಿಚ್ಛೇದನ ಮಾಡಿಕೊಳ್ಳಬೇಕು ಎಂದುಕೊಂಡ ಯುವ ದಂಪತಿ, ಲಾಕ್‌ಡೌನ್ ಕಾರಣ ಇಬ್ಬರೇ ಮನೆಯೊಳಗೆ ಇರಬೇಕಾಗುತ್ತದೆ. ಆಗ ಅವರ ಜೀವನ ಹೇಗೆ ನಡೆಯಬಹುದು? ಇದರ ನಡುವೆ ಮನೆಯೊಳಗೆ ದೆವ್ವದ ಸಮಸ್ಯೆ ಕೂಡ ಕಾಣಿಸಿದಾಗ ಅವರಿಬ್ಬರ ಬದುಕು ಹೇಗಾಗುತ್ತದೆ ಎನ್ನುವುದನ್ನು ಸ್ವಾರಸ್ಯಕರವಾಗಿ ತೋರಿಸಿರುವ ಚಿತ್ರವೇ ‘ಇಕ್ಕಟ್’.

ವಾಸು ಮತ್ತು ಜಾಹ್ನವಿ ಜಗಳವಾಡುವ ನವದಂಪತಿ. ವಾಸುವಿಗೆ ಕುಳ್ಳನೆಂದು ಬೈದರಾಗದು. ಜಾಹ್ನವಿಗೆ ಆಕೆಯನ್ನು ಕಪ್ಪುಎಂದರಾಗದು. ಇದರ ನಡುವೆ ಅವರ ಮನೆಗೊಂದು ಜೇಡವೂ ನುಸುಳಿಕೊಳ್ಳುತ್ತದೆ. ಜೇಡವನ್ನು ಓಡಿಸುವ ಭರದಲ್ಲಿ ಅವರಿಬ್ಬರ ನಡುವೆ ಜಗಳ ಹೆಚ್ಚುತ್ತದೆ. ಮನೆ ಬಿಟ್ಟು ಹೋಗಬೇಕೆಂದುಕೊಂಡವರನ್ನು ಲಾಕ್‌ಡೌನ್ ಲಾಕ್ ಮಾಡುತ್ತದೆ. ಹಗಲು ರಾತ್ರಿ ಮನೆಯಲ್ಲಿರುವ ದಂಪತಿಗೆ ರಾತ್ರಿ ಹೊತ್ತು ಕೆಲವೊಂದು ಶಬ್ದ ಮತ್ತು ಅನೈಸರ್ಗಿಕ ಘಟನೆಗಳು ನಡೆದಂತೆ ಭಾಸವಾಗುತ್ತವೆ. ಅಮೆಝಾನ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ವೀಕ್ಷಿಸಿದರೆ ‘ನಿಜಕ್ಕೂ ಅವರ ಮನೆಯೊಳಗೆ ದೆವ್ವ ಸೇರಿರುತ್ತದೆಯೇ? ಅದರಿಂದ ಹೇಗೆ ಪರಿಹಾರ ಕಾಣುತ್ತಾರೆ?’ ಎನ್ನುವುದಕ್ಕೆ ಉತ್ತರ ದೊರಕುವುದಷ್ಟೇ ಅಲ್ಲ; ಮನರಂಜನೆಯೂ ಸಿಗುತ್ತದೆ.

ಚಿತ್ರದಲ್ಲಿ ವಾಸುವಾಗಿ ಯುವನಟ ನಾಗಭೂಷಣ್ ನಟಿಸಿದ್ದಾರೆ. ‘ಒಂದಲ್ಲ ಎರಡಲ್ಲ’ ಚಿತ್ರದ ಮೂಲಕ ಭರವಸೆಯ ನಟನಾಗಿ ಕಾಣಿಸಿಕೊಂಡ ನಾಗಭೂಷಣ್, ಇಲ್ಲಿಯೂ ಆ ಭರವಸೆಯನ್ನು ಅದೇರೀತಿ ಉಳಿಸಿಕೊಳ್ಳುತ್ತಾರೆ. ಜಾಹ್ನವಿ ಪಾತ್ರದಲ್ಲಿ ನಟಿಸಿರುವ ಭೂಮಿ ಶೆಟ್ಟಿಯವರಿಗೆ ನಾಯಕಿಯಾಗಿ ಇದು ಪ್ರಥಮ ಚಿತ್ರ. ಆದರೆ ತಮ್ಮ ಧಾರಾವಾಹಿಯ ನಟನೆಯನ್ನು ಮರೆಸುವ ರೀತಿಯಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ. ಕಣ್ಣಲ್ಲೇ ಅಮಾಯಕತೆ, ಸುಳ್ಳು, ಧೈರ್ಯ, ತುಂಟತನವನ್ನು ಹೊರಚೆಲ್ಲುವ ರೀತಿ ಅವರಿಗೆ ಸಿದ್ಧಿಸಿದೆ.

ಒಟ್ಟಿನಲ್ಲಿ ಪ್ರಮುಖ ಪಾತ್ರಗಳಿಂದ ನೈಜ ನಟನೆ ಹೊರತೆಗೆಸುವಲ್ಲಿ ನವನಿರ್ದೇಶಕರಾದ ಇಶಾಮ್ ಮತ್ತು ಹಸೀನ್ ಖಾನ್ ಗೆದ್ದಿದ್ದಾರೆ ಎಂದೇ ಹೇಳಬಹುದು. ಕಾಮಿಡಿ ಡ್ರಾಮಾ ವಿಭಾಗದಲ್ಲಿ ಬಿಡುಗಡೆಯಾಗಿರುವ ಈ ಸಿನೆಮಾದಲ್ಲಿ ಕತೆಗೆ ಹೊಂದಿಕೊಂಡಂತೆ ಪಾತ್ರ ಮತ್ತು ಸಂದರ್ಭಗಳು ಹಾಸ್ಯಕ್ಕೆ ಎಡೆಮಾಡಿವೆ. ಅವುಗಳಲ್ಲಿ ಡೂಡ್ ಮಗ ಎನ್ನುವ ಪಾತ್ರ ಪ್ರಮುಖವಾದದ್ದು. ಆರ್‌ಜೆ ವಿಕ್ಕಿ ನಿಭಾಯಿಸಿರುವ ಈ ಪಾತ್ರ, ಕರ್ಣ ಅಂಕಲ್ ಪಾತ್ರದಲ್ಲಿ ಬರುವ ನಟ ಸುಂದರ್ ಅವರು ಚಿತ್ರಕ್ಕೆ ಜೀವಂತಿಕೆ ತುಂಬಿದ್ದಾರೆ. ವೀಡಿಯೊ ಕರೆಯಲ್ಲಿ ಕಾಣಿಸುವ ಜ್ಯೋತಿಷಿ ಪಾತ್ರಧಾರಿ ಸೇರಿದಂತೆ ಪಕ್ಕದ್ಮನೆ ಮೂರ್ತಿ ಅಂಕಲ್ ಆಗಿ ಬರುವ ನೀನಾಸಂ ಆನಂ್ ಪಾತ್ರಗಳನ್ನೂ ಮರೆಯಲಾಗದು.

ಇಕ್ಕಟ್ಟು ಎನ್ನುವ ಪದವನ್ನು ವೇಗವಾಗಿ ಉಚ್ಚರಿಸುವ ಮಾದರಿಯಲ್ಲೇ ಇಕ್ಕಟ್ ಎಂದು ಬರೆದಿರುವುದು ಕುಂದಾಪುರ ಕನ್ನಡದ ಶೈಲಿ. ಅದಕ್ಕೆ ತಕ್ಕಂತೆ ಭೂಮಿ ಶೆಟ್ಟಿಯ ಕುಂದಾಪುರ ಭಾಷೆಯನ್ನು ೂಡ ಒಂದೆರಡು ಕಡೆ ಬಳಸಲಾಗಿದೆ.

ನಾಯಕಿಗೆ ಇರುವ ಟಿಕ್‌ಟಾಕ್ ಹುಚ್ಚು, ಅದು ತಂದುಕೊಡುವ ಸಂದಿಗ್ಧತೆ ಸೇರಿದಂತೆ ಪ್ರತಿಯೊಂದು ಘಟನೆಗಳು ಸಮಯೋಚಿತ ಅವಲೋಕನವಾಗಿ ಕಾಣಿಸುತ್ತವೆ. ಹಾಗೆಂದು ಯಾವುದೇ ಸಂದೇಶವನ್ನು ಪ್ರೇಕ್ಷಕರ ಮೇಲೆ ಹೇರದೆ ನವಿರಾಗಿ, ನಲಿವಾಗಿ ಸಾಗುವ ಕತೆಯ ಕೊನೆ ಕೂಡ ಅದೇ ರೀತಿಯಲ್ಲಾಗುತ್ತದೆ ಎನ್ನುವುದು ವಿಶೇಷ. ಎರಡು, ಮೂರು ಕೋಣೆಯೊಳಗೆ ನಾಲ್ಕೈದು ಪಾತ್ರಗಳೊಳಗೆ ಇಪ್ಪತ್ತು ದಿನಗಳಲ್ಲಿ ನಡೆಯುವ ಘಟನೆಗಳನ್ನು ಎರಡು ಘಂಟೆಗಳಲ್ಲಿ ಸ್ವಾರಸ್ಯಕರವಾಗಿ ತೋರಿಸುವಲ್ಲಿ ಚಿತ್ರತಂಡ ಗೆದ್ದಿದೆ. ಹಾಡು, ಹೊಡೆದಾಟಗಳಿರದಿದ್ದರೂ ಹಿಡಿದಿಟ್ಟುಕೊಳ್ಳುವ ಸಂಗೀತ, ಸಂಭಾಷಣೆ ಮತ್ತು ಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್.

ಒಟ್ಟಿನಲ್ಲಿ ಲಾಕ್‌ಡೌನ್ ಕುರಿತಾದ ಚಿತ್ರವನ್ನು ಲಾಕ್‌ಡೌನ್ ಅನುಭವಗಳು ಹಳಸುವ ಮೊದಲೇ ಸೀಮಿತ ಸೌಲಭ್ಯಗಳೊಂದಿಗೆ ಚಿತ್ರೀಕರಿಸಿ ಲಭ್ಯವಾಗಿಸಿರುವ ಇಕ್ಕಟ್ ನಲ್ಲಿ ಮನರಂಜನೆ ಇದೆ.


ತಾರಾಗಣ: ನಾಗಭೂಷಣ್, ಭೂಮಿ ಶೆಟ್ಟಿ

ನಿರ್ದೇಶನ: ಇಶಾಮ್, ಹಸೀನ್ ಖಾನ್

ನಿರ್ಮಾಣ: ತಾರಾ, ಆಯೆಷಾ ಖಾನ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)