varthabharthi


ರಾಷ್ಟ್ರೀಯ

ಮೋದಿ, ಶಾ, ಸ್ಟಾಲಿನ್ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪ : ಕ್ರೈಸ್ತ ಪಾದ್ರಿ ಬಂಧನ

ವಾರ್ತಾ ಭಾರತಿ : 25 Jul, 2021

ಕನ್ಯಾಕುಮಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಕನ್ಯಾಕುಮಾರಿಯ ಕ್ಯಾಥೋಲಿಕ್‌ ಪಾದ್ರಿಯೋರ್ವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಚರ್ಚ್‌ ಗಳಲ್ಲಿ ಪ್ರಾರ್ಥನೆ ನಿಷೇಧಿಸಿರುವ ಕುರಿತು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಫಾದರ್‌ ಜಾರ್ಜ್‌ ಪೊನ್ನಯ್ಯ, ಪ್ರಧಾನಿ ಮತ್ತು ಗೃಹಸಚಿವರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಪಾದ್ರಿಯವರು ಮಾತನಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದ್ದು, ಈ ವೀಡಿಯೊವನ್ನು ಆಧರಿಸಿ ಹಿಂದೂ ಮಕ್ಕಲ್‌ ಕಚ್ಚಿ ಮತ್ತು ಭಾರತೀಯ ಜನತಾ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ಕೆಲ ನಾಯಕರು ಪಾದ್ರಿ ವಿರುದ್ಧ ದೂರು ದಾಖಲಿಸಿದ್ದಾರೆ. 

ಪ್ರಕರಣದ ಆಧಾರದ ಮೇಲೆ ಅರುಮನೈ ಪೊಲೀಸರು ಅವರ ವಿರುದ್ಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು, ಸಾಂಕ್ರಾಮಿಕದ ನಡುವೆ ಸಭೆ ನಡೆಸಿದ್ದು ಮುಂತಾದ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಪಾದ್ರಿ ತಲೆಮರೆಸಿಕೊಂಡಿದ್ದರು. ಬಳಿಕ ಐದು ಪ್ರತ್ಯೇಕ ತಂಡಗಳನ್ನು ರಚಿಸಿದ ಪೊಲೀಸರು ಸೆಲ್‌ ಫೋನ್‌ ಸಿಗ್ನಲ್‌ ಮೂಲಕ ಕಲ್ಲಿಕುಡಿ ಎಂಬ ಪ್ರದೇಶದಿಂದ ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಥಳಕ್ಕೆ ತಲುಪಿದ ಪೊಲೀಸರು ಅವರನ್ನು ಬಂಧನಕ್ಕೊಳಪಡಿಸಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಅವರನ್ನು  ಅವರನ್ನು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಅವರ ಹೇಳಿಕೆಗಳಿಗೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)