varthabharthi


ಅನುಗಾಲ

ಯಡಿಯೂರಪ್ಪ ಯುಗಾಂತ್ಯ

ವಾರ್ತಾ ಭಾರತಿ : 29 Jul, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕೋವಿಡ್-19ರ ಎರಡು ಅಲೆಗಳನ್ನು ಎದುರಿಸಿದ ಯಡಿಯೂರಪ್ಪನವರಿಗೆ ಈಗ ಅಪ್ಪಳಿಸಿದ್ದು ರಾಜಕೀಯದ ಈ ಮೂರನೇ ಅಲೆ. ಅದು ಅವರನ್ನು ಸರಳಮಂಚಕ್ಕೆ ತಳ್ಳಿದ್ದು ವಾಸ್ತವ. ಏಕಾಂಗಿಯಾಗಿ ಎದುರಿಸಲು ಅವರು ಪ್ರಯತ್ನಿಸಿದಷ್ಟೂ ಅವರು ಒಬ್ಬಂಟಿಯಾದರು. ಸಮಾಲೋಚನೆಗೂ ಅವರ ಸಮತೂಕದ ನಾಯಕರು ಪಕ್ಷದಲ್ಲಿಲ್ಲದೇ ಇರುವುದು ಇದಕ್ಕೆ ಕಾರಣವಿರಬಹುದು. ಅವರ ಹೈಕಮಾಂಡ್ ಮಾಂಸದ ವ್ಯಾಪಾರಿಗಳಂತೆ ನಿರ್ದಯಿಯಾಗಿರುತ್ತದೆಂದು ಅವರು ಗ್ರಹಿಸಿರಲಾರರು. ಕೊನೆಗೂ ಅಧೋಮುಖರಾಗಲೇಬೇಕಾಯಿತು.


ಈ ಲೇಖನವು ಸಿದ್ಧವಾಗುವಷ್ಟರಲ್ಲಿ ಕರ್ನಾಟಕದ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಬಸವರಾಜ ಬೊಮ್ಮಾಯಿಯವರು ಕರ್ನಾಟಕದ ನೂತನ ಮುಖ್ಯಮಂತ್ರಿಯೆಂದು ಪ್ರಕಟವಾಗಿದೆ. ಅಲ್ಲಿಗೆ ಯಡಿಯೂರಪ್ಪನವರ ತಲೆಯ ಮೇಲಣ ಕಿರೀಟ ಲಿಂಗಾಯತರಿಗೇ ವರ್ಗಾವಣೆಗೊಂಡು ಕರ್ನಾಟಕದ ಐನೂರಕ್ಕೂ ಮಿಕ್ಕಿದ ಮಠಾಧೀಶರು ತಮ್ಮ ದುಡಿಮೆ ಸಾರ್ಥಕವಾಯಿತೆಂಬ ಸಂತೋಷ, ಸಮಾಧಾನದಿಂದ ನಿರಾಳವಾಗಬಹುದು. ತೀರ್ಮಾನ ಹೇಗಾದರೂ ಸರಿಯೆ, ಹಂದಿ ನಮಗೇ ಸಿಗಬೇಕು ಎಂಬ ವಾದದ ಹಾಗೆ ಈಗಾಗಲೇ ವೀರಶೈವ ಲಿಂಗಾಯತ ಸಮಾಜವು ಭಾಜಪಕ್ಕೆ ತಮ್ಮಲ್ಲೊಬ್ಬನನ್ನು ಮುಖ್ಯಮಂತ್ರಿಯಾಗಿ ಆರಿಸಿದ್ದಕ್ಕಾಗಿ ತಮ್ಮ ವಿಶಾಲ ದೃಷ್ಟಿಕೋನವನ್ನು ಒಕ್ಕೊರಲಿನಿಂದ ಚಾಚಿ ಚಾಚಿ ಕೃತಜ್ಞತೆಯನ್ನು ಹೇಳುತ್ತಿದೆ.

ಲಿಂಗಾಯತ ಜಾತಿಯು ಹಿಂದೂ ಮತವನ್ನು ನುಂಗಿಹಾಕಿದ್ದಕ್ಕೆ ಈ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಯ್ಕೆ ಮತ್ತು ಜಾತ್ಯಾಧಾರಿತ ಉಪಮುಖ್ಯಮಂತ್ರಿಗಳ ಆಯ್ಕೆ ಒಂದು ಜ್ವಲಂತ ನಿದರ್ಶನವಾದದ್ದು ಮಾತ್ರವಲ್ಲ, ಭಾಜಪಕ್ಕೂ ಜಾತೀಯತೆಯ ನೇಣುಹಗ್ಗ ಸದಾ ಕಾಯುತ್ತಿರುತ್ತದೆಯೆಂದೂ ಹಿಂದುತ್ವವು ಕಾಲಿಗೆ ಸಿಕ್ಕದ ನೆಲವೆಂದೂ ಸಾಬೀತಾಗಿದೆ. ಈ ಹೊಸ ಮುಖ್ಯಮಂತ್ರಿಗಳ ತಂದೆ ಮತ್ತು ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರು ಅಥವಾ ಜೆ.ಎಚ್.ಪಟೇಲ್ ಅವರು ಎಂದೂ ಲಿಂಗಾಯತರ ನಾಯಕರಾಗದೆಯೂ ಜನನಾಯಕರಾಗಿದ್ದರು; ಆದರೆ ಲಿಂಗಾಯತರು ಮುಖ್ಯವಾಗಿ ಮಠಾಧೀಶರು, ತಮ್ಮ ನಾಯಕನೆಂಬ ಪಟ್ಟಕಟ್ಟಿ ಉಳಿಸಿಕೊಳ್ಳಬೇಕೆಂದು ಪಣತೊಟ್ಟ ಯಡಿಯೂರಪ್ಪನವರನ್ನು ಮಾತ್ರ ಹಾಗೆ ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಸದ್ಯಕ್ಕೆ ಮತ್ತೆ ‘ನಾವೆಲ್ಲ ಹಿಂದು, ನಾವೆಲ್ಲ ಒಂದು’ ಎಂಬ ಘೋಷಣೆ ಕೂಗುವುದಕ್ಕೆ ರಾಜಕೀಯ ಸ್ವಯಂಸೇವಕ ಸಂಘಗಳಿಗೆ ಅಡ್ಡಿಯಿಲ್ಲವಾದರೂ ಈ ಸಂದರ್ಭದ ಕೇಂದ್ರ ವ್ಯಕ್ತಿಯಾಗಿ ಪದತ್ಯಾಗದ ದುರಂತ ನಾಯಕ ಯಡಿಯೂರಪ್ಪನವರೇ ಉಳಿಯುತ್ತಾರೆ.

ರಾಜ್ಯಪಾಲರೋ ಅಥವಾ ಇನ್ಯಾವುದೋ ಅಂತಹ ರಾಜಕೀಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ಅಥವಾ ವೃದ್ಧಾಶ್ರಮದ ಮೂಲಕ ಯಾವುದಾದರೂ ಮಿಂದು ಪಟ್ಟೆಯುಡುವ ನಾಮಮಾತ್ರ ಹುದ್ದೆಗಳಲ್ಲಿ ರಾರಾಜಿಸಬೇಕೇ ಅಥವಾ ಉತ್ಸವಮೂರ್ತಿಯಾಗಿ ಉಳಿಯಬೇಕೇ ಹೊರತು ಹೆಚ್ಚುಕಡಿಮೆ ಬಿ.ಎಸ್. ಯಡಿಯೂರಪ್ಪನವರ ಸಕ್ರಿಯ ರಾಜಕೀಯದ ಯುಗಾಂತ್ಯವಾದಂತೆಯೇ. ಇದು ನಿರೀಕ್ಷಿತವೇ. ಏರಿದವನು ತಾನಿಳಿಯಲೇಬೇಕೆಂಬುದು ಲೋಕನ್ಯಾಯ. ಯಾವಾಗ ಕಾಂಗ್ರೆಸಿನಂತೆ ಬಿಜೆಪಿಯೂ ಹೈಕಮಾಂಡ್ ಸಂಸ್ಕೃತಿಯನ್ನು ಸೇವಿಸಲಾರಂಭಿಸಿತೋ ಆಗಲೇ ಯಡಿಯೂರಪ್ಪ ಅಂತಲ್ಲ ತಮ್ಮ ತಮ್ಮ ಪ್ರದೇಶದಲ್ಲಿ ನಿರ್ವಿವಾದವಾಗಿ ನಾಯಕರೆನಿಸಿಕೊಂಡ ಅಂತಹ ಅನೇಕ ಪ್ರಭಾವಿ ಮುಖಂಡರು ‘ಹಾಸ್ಯುಂಡು ಬೀಸಿ ಒಗೆದಂಗ’ ನಿವೃತ್ತಿಹೊಂದುವುದು ಖಚಿತವಾಗಿತ್ತು. ಯತ್ನಾಳ್, ಯೋಗೇಶ್ವರ್ ಇವರೆಲ್ಲ ನಿಮಿತ್ತ ಮಾತ್ರ. ಮಾರ್ಗದರ್ಶಕ ಮಂಡಳಿಯೆಂಬುದು ಈಗ ಹೆಸರಿಗೂ ಅಸ್ತಿತ್ವದಲ್ಲಿಲ್ಲ. ಅದರಲ್ಲಿದ್ದ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದವರು ಸರಳಮಂಚದ ಭೀಷ್ಮರಂತೆ ಮಂಕಾಗಿ ತಮ್ಮ ಕೊನೆಯಾಗುವ ಉತ್ತರಾಯಣವನ್ನು ಕಾಯುವಂತಿದ್ದಾರೆ. ಅವರ ಬಳಿ ಧರ್ಮಸೂಕ್ಷ್ಮಗಳನ್ನು ಕೇಳುವ ಧರ್ಮಜರೂ ಇದ್ದಂತಿಲ್ಲ.

ಯಡಿಯೂರಪ್ಪನವರು ಎ.ಕೆ.ಸುಬ್ಬಯ್ಯನವರಂತೆ ಹುಟ್ಟು ಹೋರಾಟಗಾರ. ಇವರೀರ್ವರ ನಡುವಣ ವ್ಯತ್ಯಾಸವೆಂದರೆ ಸುಬ್ಬಯ್ಯನವರು ಇನ್ನೊಬ್ಬ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿಯವರಂತೆ ತಮ್ಮ ಆಗ್ರಹಕ್ಕೆ ಪಾತ್ರರಾದ ವ್ಯಕ್ತಿಗಳನ್ನು ಸ್ವಂತಪಕ್ಷವೆಂಬುದನ್ನೂ ಲೆಕ್ಕಿಸದೆ ಟೀಕಿಸುತ್ತಿದ್ದರು. ಹೀಗಾಗಿ ಅವರು ಬೆದರುಗೊಂಬೆಯಾಗಿ ಸತತ ವಿರೋಧಪಕ್ಷದಲ್ಲೇ ಉಳಿಯುವಂತಾದರು. ಆದರೆ ಯಡಿಯೂರಪ್ಪನವರು ಈ ಅತಿಗಳಿಗೆ ಹೋಗುತ್ತಿರಲಿಲ್ಲ. ಕರ್ನಾಟಕದಲ್ಲಿ ಜನಸಂಘವಿದ್ದಾಗ ಯಡಿಯೂರಪ್ಪನವರ ಹೆಸರು ಅಷ್ಟಾಗಿ ಕೇಳುತ್ತಿರಲಿಲ್ಲ. ಆದರೆ ತುರ್ತುಸ್ಥಿತಿಯಲ್ಲಿ ಇಂತಹ ಸಣ್ಣಪುಟ್ಟ ನಾಯಕರು ಉತ್ಸಾಹದಿಂದ ಹೋರಾಟದ ವಾಹಿನಿಯನ್ನು ಸೇರಿದರು. ಇವರ ಜೊತೆಗೆ ಇತರ ಅನೇಕರೂ ಸೇರಿದರು ಮಾತ್ರವಲ್ಲ, ಜನತಾಪಕ್ಷವು ಒಡೆದು ಭಾಜಪವು ಪ್ರತ್ಯೇಕವಾಗಿ ಉದಿಸಿದಾಗ ತಮ್ಮ ವೈರಾಗ್ಯವನ್ನೆಲ್ಲ ಬಿಟ್ಟು ಸಕ್ರಿಯ ಪುಢಾರಿಗಳಾದರು. ಹಾಗೆ ನೋಡಿದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕರು ರಾಜಕೀಯ ಸ್ವಯಂಸೇವಕರಾದರು. ಮಂಡ್ಯದ ಯಡಿಯೂರಪ್ಪಶಿಕಾರಿಪುರಕ್ಕೆ ಸ್ವಯಂಸೇವೆಗೆ ಹೋದರೂ ಅವರು ಬಹಳ ಬೇಗ ಅಜ್ಞಾತವಾಸವನ್ನು ಮುಗಿಸಿ ಮನೆಯಿಂದ ಬೀದಿಗೆ ಬಂದರು; ರಾಜಕೀಯ ರಣಾಂಗಣಕ್ಕಿಳಿದರು. ಪುರಸಭೆಯಿಂದ ಮೊದಲ್ಗೊಂಡು ರಾಜ್ಯದ ಎಲ್ಲ ರಾಜಕೀಯ ಸ್ಥಾನಗಳಲ್ಲಿ ದೇಶಭಕ್ತಿಗಿಂತಲೂ ಹೆಚ್ಚಾಗಿ ಪಕ್ಷಭಕ್ತಿಯನ್ನು ಮೊೆದು ನಿಷ್ಠಾವಂತರಾಗಿ ಮೇಲೇರಿದವರು ಬಿಎಸ್‌ವೈ. ಜೊತೆಗೆ ಎಲ್ಲಿ ಅವಕಾಶ ರಾಜಕೀಯ ಸಾಧ್ಯವೋ ಅದನ್ನು ಒಂದಿಷ್ಟೂ ಸಂಶಯ ಬಾರದ ರೀತಿಯಲ್ಲಿ ಬಳಸಿಕೊಂಡು ತಮ್ಮತನವನ್ನು ತುಂಬಿಕೊಂಡು ಬಂದರು. ಎ.ಕೆ. ಸುಬ್ಬಯ್ಯನವರ ನಿಷ್ಠುರತೆ ಮತ್ತು ಆಗಿನ ಪ್ರಭಾವಶಾಲಿ ಭಾಜಪ ನಾಯಕ ಬಿ.ಬಿ. ಶಿವಪ್ಪನವರ ಸೌಮ್ಯಸೌಜನ್ಯ ಇವೆರಡೂ ಯಡಿಯೂರಪ್ಪನವರಿಗೆ ಸುವರ್ಣಾವಕಾಶವನ್ನು ಒದಗಿಸಿದವು.

ಕಳೆದ ಸುಮಾರು ಮೂರು ದಶಕಗಳಿಂದ ಯಡಿಯೂರಪ್ಪ ಕರ್ನಾಟಕದ ಭಾಜಪದ ಅವಿಭಾಜ್ಯ ಅಂಗ ಮಾತ್ರವಲ್ಲ ಪಕ್ಷದ ನೇತಾರರೇ ಆದರು. ತುರ್ತು ಪರಿಸ್ಥಿತಿ ಜನಸಂಘಕ್ಕೆ ಮತ್ತು ಒಟ್ಟಾರೆ ಸಂಘ ಪರಿವಾರಕ್ಕೆ ಹೊಸಜೀವ ಕೊಟ್ಟರೆ, ಅಯೋಧ್ಯೆಯ ಚಳವಳಿ ಭಾಜಪದ ಮತೀಯ ಸಿದ್ಧಾಂತಕ್ಕೆ ವೇಗೋತ್ಕರ್ಷವಾಯಿತು; ಕಾಂಗ್ರೆಸ್ ಮುಂದಾಳತ್ವದ ಯುಪಿಎಯ ಅವಧಿಯ ಭ್ರಷ್ಟಾಚಾರವು ಜನರಿಗೆ ಪರ್ಯಾಯವಾಗಿ ಭಾಜಪದ ಮುಂದಾಳತ್ವದ ಎನ್‌ಡಿಎಯ ಕೈಹಿಡಿಯುವುದನ್ನು ಅನಿವಾರ್ಯವಾಗಿಸಿತು. ಉತ್ತರಭಾರತದಲ್ಲಿ ಭಾಜಪ ಎಷ್ಟೇ ಪ್ರಾಬಲ್ಯವನ್ನು ಸಾಧಿಸಿದರೂ ಕಾಂಗ್ರೆಸ್ ಮತ್ತು ಭಾಜಪೇತರ ಪ್ರಾದೇಶಿಕ ಪಕ್ಷಗಳು ದಕ್ಷಿಣಭಾರತದಲ್ಲಿ ತಮ್ಮ ಪ್ರಭುತ್ವವನ್ನು ಉಳಿಸಿಕೊಂಡವು. ಈ ಅವಧಿಯಲ್ಲಿ ಯಡಿಯೂರಪ್ಪನವರು ದಕ್ಷಿಣಭಾರತದಲ್ಲಿ ಕರ್ನಾಟಕದ ಭಾಜಪದ ಸಾರಥ್ಯವನ್ನು ನಡೆಸಿ ಆಡಳಿತದ ಚುಕ್ಕಾಣಿಯನ್ನು ಹಿಡಿದರು. ಅವರ ರಾಜಕೀಯದ ಏಳುಬೀಳುಗಳನ್ನು ಅವರ ರಾಜೀನಾಮೆಯ ಸುದ್ದಿಯೊಂದಿಗೆ ಮಾಧ್ಯಮಗಳು ಪ್ರಕಟಿಸಿರುವುದನ್ನು ಕಂಡರೆ ಅವರ ವೈಶಿಷ್ಟ್ಯವನ್ನು ಅರ್ಥಮಾಡಿಕೊಳ್ಳಬಹುದು. ಸಾಮಾನ್ಯವಾಗಿ ದೊಡ್ಡ ಪಟ್ಟಕ್ಕೆ ಒಬ್ಬ ವ್ಯಕ್ತಿ ಏರುವಾಗ ಅವರ ಬದುಕಿನ ಮೈಲಿಗಲ್ಲುಗಳನ್ನು ಶೋಧಿಸಿ ಪ್ರಕಟಿಸಲಾಗುವುದು. ಅವರೇ ಮತ್ತೆ ಮತ್ತೆ ಆಯ್ಕೆಯಾದರೂ ಮಾಧ್ಯಮದಲ್ಲಿ ಅವರ ಬದುಕು ವಿಶೇಷವೆಂದು ಬಣ್ಣನೆಗೆ ಸಿಕ್ಕುವುದಿಲ್ಲ. ಆನಂತರ ಅವರ ಜೀವನ ಪ್ರಕಟವಾಗುವುದು ಅವರ ಮರಣಾನಂತರವೇ. ಗೆದ್ದೆತ್ತಿನ ಬಾಲ ಹಿಡಿಯುವವರಿಗೆ ಯಾವನೇ ಆಗಲೀ ಸೋತಾಗ ಅಥವಾ ಆತನ ರಾಜಕೀಯ ಜೀವನ ಅಂತ್ಯವಾದಾಗ ಅದೊಂದು ಆಕರ್ಷಣೆಯ ಸಂಗತಿಯೇ ಆಗುವುದಿಲ್ಲ. ಈ ಬಗೆಯ ಪ್ರಕಾಶಕ್ಕೆ ಹೊರತಾದವರು ಯಡಿಯೂರಪ್ಪ.

ಇನ್ನೂ ಪ್ರಖರ-ಪ್ರಬಲರಾಗಿದ್ದಾಗಲೇ ಪಕ್ಷದ ನಿಗೂಢ ಒತ್ತಡಕ್ಕೆ ಸಿಕ್ಕಿ ತನ್ನ ರಾಜಕೀಯ ಜೀವನವನ್ನು ಕೊನೆಗೊಳಿಸಿದವರು ಇವರು. ಮತ್ತು ಕುರುಕ್ಷೇತ್ರ ಯುದ್ಧದ ಹದಿನೆಂಟನೆಯ ದಿನದ ಕೌರವನಂತೆ ಸೋತರೂ ದುರಂತ, ಒಮ್ಮಿಮ್ಮೆ ಧೀರೋದಾತ್ತ, ಕೆಲವೊಮ್ಮೆ ಧೀರೋದ್ದತ ವ್ಯಕ್ತಿತ್ವದಂತೆ ಶೋಭಿಸಿದವರು ಯಡಿಯೂರಪ್ಪ. ಯಡಿಯೂರಪ್ಪನವರು ಹಗರಣದ ಬೀಡಾಗಿದ್ದರು. ಪಾಪ, ತನ್ನದೇ ಆದ ತಪ್ಪಿಗೆ ಜೈಲಿಗೂ ಹೋಗಿ ಬಂದರು. ಅದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ. ಏಕೆಂದರೆ ಭಾಜಪದ ಬಹುಪಾಲು ನಾಯಕರು ಒಂದಿಲ್ಲೊಂದು ಹಗರಣದ ಸುಳಿಗೆ ಸಿಕ್ಕಿದವರೇ. ಆದರೂ ಬಹಳಷ್ಟು ಭಾಜಪ ನಾಯಕರು ಇಂದು ಆ ಸ್ಥಾನಗಳಲ್ಲಿ ವಿಜೃಂಭಿಸುತ್ತಿದ್ದರೆ ಅದಕ್ಕೆ ರಾಷ್ಟ್ರಭಕ್ತಿಗಿಂತಲೂ ದ್ವೇಷಭಕ್ತಿಯೇ ಕಾರಣವೆಂಬುದು ಸ್ಪಷ್ಟವಾಗಿದೆ. ಇವುಗಳ ನಡುವೆ ಯಡಿಯೂರಪ್ಪನವರು ತಮ್ಮಷ್ಟಕ್ಕೆ ಬೆಳೆದಿದ್ದರೆ ಉದಾರಹಿಂದುವಾಗಬಹುದಿತ್ತು ಅನ್ನಿಸುತ್ತದೆ. ರೈತರ ಹೆಸರಿನಲ್ಲಿ ಮತ ಕೇಳಿದ ರಾಷ್ಟ್ರ ಮತ್ತು ರಾಜ್ಯ ನಾಯಕರಲ್ಲಿ ಒಂದಿಷ್ಟಾದರೂ ಋಣತೀರಿಸಿದ್ದು ಯಡಿಯೂರಪ್ಪನವರು ಮಾತ್ರ. ತೆನೆಹೊತ್ತ ಮಹಿಳೆಯ ಮಕ್ಕಳು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಅಭಿವೃದ್ಧಿ ಮತ್ತು ಇನ್ನಷ್ಟು ಸ್ಥಾನಗಳನ್ನು ಭರ್ತಿಮಾಡಿಕೊಂಡರೇ ವಿನಾ ರೈತರಿಗೆ ನೀಡಬೇಕಾದ್ದನ್ನು ನೀಡಲಿಲ್ಲವೆಂಬುದು ಸ್ಪಷ್ಟ.

ಇನ್ನುಳಿದವರ ಕುರಿತು ಹೇಳಬೇಕಾದ್ದೇನಿಲ್ಲ. ಭಾಗ್ಯಗಳೇನೋ ಪ್ರಕಟವಾದವು; ಆದರೆ ಅವು ತಲುಪಲೂ ಇಲ್ಲ; ಅದನ್ನು ಗಮನಿಸುವ ನಾಯಕರಾಗಲೀ, ಕಾರ್ಯಕರ್ತರಾಗಲೀ ಇರಲಿಲ್ಲ. ಹೀಗಾಗಿ ಭಾಗ್ಯದಲಕ್ಷ್ಮೀ ಮನೆಗೆ ಬರಲೇ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಯಡಿಯೂರಪ್ಪನವರು ತನ್ನ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾದರು. ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳು ಒಂದಾಗಿ ಅಧಿಕಾರಕ್ಕೆ ಬಂದವು. ಅವು ಬಂದ ಸ್ಥಿತಿ ಹೇಗಿತ್ತೆಂದರೆ ಪಂಚತಂತ್ರದ ಕತೆಯೊಂದರಲ್ಲಿ ನೀರನ್ನು ಕುಡಿಯಲೆಂದು ಬಾವಿಯ ಬಳಿ ಬಂದು ಅಲ್ಲೇ ಹಿಡಿದು ನೇತಾಡುತ್ತಿದ್ದ ಹಾವನ್ನು ಬಳ್ಳಿಯೆಂದು ಭ್ರಮಿಸಿ ಹಿಡಿದು ಎಳೆದು ಅದರೊಂದಿಗೆ ಬಾವಿಗೆ ಬಿದ್ದ ಚಪಲಕನೆಂಬ ಕಪಿಯಂತಿತ್ತು. ಯಾರು ಕಪಿ, ಯಾರು ಹಾವು ಎಂಬುದು ಇಲ್ಲಿ ಪ್ರಸ್ತುತವಲ್ಲ. ಆದರೆ ಎತ್ತು ಏರಿಗೂ ಕೋಣ ನೀರಿಗೂ ಎಳೆದೂ ಎಳೆದೂ ದಾರಿ ಸವೆಯದೆ ಬಂಡಿ ಬಿದ್ದುಹೋಯಿತು. ಬಿದ್ದರೂ ಭಾಜಪಕ್ಕೆ ಸಿಂಹಾಸನವನ್ನೇರುವ ಭಾಗ್ಯವಿರಲಿಲ್ಲ. ಇದನ್ನು ಉಣಬಡಿಸಿದವರು ಯಡಿಯೂರಪ್ಪ. ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸಾಲುಸಾಲು ಶಾಸಕರಿಂದ ಪಕ್ಷಕ್ಕೂ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಿಸಿದ್ದು ಮಾತ್ರವಲ್ಲ, ಹೊಸದಾಗಿ ಚುನಾವಣೆಯನ್ನು ಎದುರಿಸಲು ವ್ಯವಸ್ಥೆ ಮಾಡಿ ಅವರನ್ನು ಗೆಲ್ಲಿಸಿ ಬಹುಮತದ ಸರಕಾರವನ್ನು ಸ್ಥಾಪಿಸಿದ್ದು ಯಡಿಯೂರಪ್ಪನವರ ತಂತ್ರ; ಸಾಹಸ. ಇದು ಬದುಕಿನ ಶಾಶ್ವತ ಮೌಲ್ಯಗಳಲ್ಲಿ ಸೇರದಿದ್ದರೂ ರಾಜಕೀಯದಲ್ಲಿ ಏನೂ ನಡೆಯಬಹುದು ಎಂಬುದನ್ನು ಕರ್ನಾಟಕದ ರಾಜಕಾರಣದ ಚರಿತ್ರೆಗೆ ದಾಖಲಿಸಿತು.

ಪರಿಣಾಮವಾಗಿ ಯಡಿಯೂರಪ್ಪನವರ ಮಂತ್ರಿಮಂಡಳವು ಕೊಚ್ಚೆನೀರನ್ನೂ ನಾಚಿಸುವ ಕಲಬೆರಕೆಯನ್ನು ಹೊಂದಿತು; ಅತೃಪ್ತಿಯ ಹೊಗೆಯನ್ನು ಹೊಟ್ಟೆಯೊಳಗಿಟ್ಟೇ ಭಾಜಪದ ಬಹಳಷ್ಟು ಮಂದಿ ಮುನ್ನಡೆದರು. ಹಾಗೂ ಹೀಗೂ ಎರಡು ವರ್ಷಗಳ ಈ ಹೊಸ ದಾಂಪತ್ಯದಲ್ಲಿ ಸುಮಾರು ಒಂದೂವರೆ ವರ್ಷ ಕಾಲ ಕೋವಿಡ್-19ರೊಂದಿಗೆ ಜೀಕಾಡುವುದರಲ್ಲಿ ಯಡಿಯೂರಪ್ಪನವರು ಸುಸ್ತಾದರೂ ಅವರದನ್ನು ತೋರಿಸಿಕೊಳ್ಳಲಿಲ್ಲ. ಮಹಾಭಾರತದ ಭೀಷ್ಮಾಚಾರ್ಯರಂತೆ ಸೇನಾಧಿಪತ್ಯವನ್ನು ನಡೆಸಿದರು. ಎಲ್ಲದಕ್ಕೂ ಕೊನೆಯೆಂಬುದಿದೆ. ಸಂಸಾರಿಯಾದವನು ಕೆಸರಿನ ಕಮಲದಂತೆ ಬದುಕಲು ಕಷ್ಟವಿದೆ. ಯಡಿಯೂರಪ್ಪಕುರಿತ ಬಹಳಷ್ಟು ಅಸಮಾಧಾನವು ಅವರ ಆಡಳಿತದ ಕುರಿತಾಗಿಲ್ಲ; ಬದಲಾಗಿ ಅವರ ಕುಟುಂಬದವರು ನಡೆಸಿದರೆನ್ನಲಾದ ಅಕ್ರಮಗಳ ಕುರಿತೇ ಇದೆ. ಇವು ಎಷ್ಟು ಸತ್ಯವೋ ಎಂಬುದು ಇನ್ನೂ ಬಿಚ್ಚಿಕೊಂಡಿಲ್ಲ. ಅವರದೇ ಪಕ್ಷದವರು ಹೇಳಿದ್ದರಿಂದ ನಿಜವಿರಲೇಬೇಕು. ಪ್ರಾಯಃ ಹೈಕಮಾಂಡಿನ ಮುನಿಸಿಗೆ ಇದೇ ಕಾರಣವಿರಬಹುದು. ಕುಟುಂಬ ರಾಜಕಾರಣವು ಇಂದು ಭಾರತದಲ್ಲಂತೂ ಸರ್ವವ್ಯಾಪಿಯಾಗಿದೆ. ಈ ದೇಶದ ರಾಜಕಾರಣದ ವೈಚಿತ್ರ್ಯವೆಂದರೆ ಲೂಟಿ ಹೊಡೆಯುವುದು ಅಪರಾಧವಾಗಿ ಕಾಣಿಸುವುದಿಲ್ಲ; ಆನಂತರ ಅದನ್ನು ಹಂಚಿಕೊಳ್ಳುವಾಗ ಅಪರಾಧಗಳು ಬಯಲಿಗೆ ಬರುತ್ತವೆ. ಯಡಿಯೂರಪ್ಪನವರ ಸಂದರ್ಭದಲ್ಲೂ ಇದೇ ಆಗಿದೆ. ಅವರು ಈ ಕುರಿತು ಸ್ವಲ್ಪಗಮನ ಹರಿಸಿದ್ದರೆ, ಜಾಗರೂಕರಾಗಿದ್ದರೆ ಈಗ ಕಿಂಗ್‌ಲಿಯರನಂತೆ ಮರುಕಪಡುವ ಅಕಾಶವಿರಲಿಲ್ಲ. ಕೋವಿಡ್-19ರ ಎರಡು ಅಲೆಗಳನ್ನು ಎದುರಿಸಿದ ಯಡಿಯೂರಪ್ಪನವರಿಗೆ ಈಗ ಅಪ್ಪಳಿಸಿದ್ದು ರಾಜಕೀಯದ ಈ ಮೂರನೇ ಅಲೆ. ಅದು ಅವರನ್ನು ಸರಳಮಂಚಕ್ಕೆ ತಳ್ಳಿದ್ದು ವಾಸ್ತವ. ಏಕಾಂಗಿಯಾಗಿ ಎದುರಿಸಲು ಅವರು ಪ್ರಯತ್ನಿಸಿದಷ್ಟೂ ಅವರು ಒಬ್ಬಂಟಿಯಾದರು. ಸಮಾಲೋಚನೆಗೂ ಅವರ ಸಮತೂಕದ ನಾಯಕರು ಪಕ್ಷದಲ್ಲಿಲ್ಲದೇ ಇರುವುದು ಇದಕ್ಕೆ ಕಾರಣವಿರಬಹುದು. ಅವರ ಹೈಕಮಾಂಡ್ ಮಾಂಸದ ವ್ಯಾಪಾರಿಗಳಂತೆ ನಿರ್ದಯಿಯಾಗಿರುತ್ತದೆಂದು ಅವರು ಗ್ರಹಿಸಿರಲಾರರು. ಕೊನೆಗೂ ಅಧೋಮುಖರಾಗಲೇಬೇಕಾಯಿತು.

ಯಡಿಯೂರಪ್ಪನವರು ಭಾಜಪದ ಕರ್ನಾಟಕದ ಅಧ್ಯಾಯದಲ್ಲಿ ಒಂದು ವರ್ಣರಂಜಿತ ಪುಟ. ಅವರಿನ್ನು ರಾಜಕೀಯಕ್ಕೆ ಮರಳಲಾರದ, ಮರಳಬಾರದ ಸ್ಥಿತಿಯನ್ನು ಅವರದೇ ಪಕ್ಷ ತಂದೊಡ್ಡಿದೆ. ಪ್ರಾಯಃ ಯಡಿಯೂರಪ್ಪನವರು ನೆನಪಿನಲ್ಲಿಡಬೇಕಾದ್ದೆಂದರೆ, ಮೆಲುಕು ಹಾಕಬೇಕಾದ್ದೆಂದರೆ, ಎಲ್ಲ ಪಕ್ಷಗಳಂತೆ ಅವರ ಪಕ್ಷದಲ್ಲೂ ಹೈಕಮಾಂಡ್ ಇದೆ, ಸರ್ವಾಧಿಕಾರವಿದೆ, ವಂಶಪಾರಂಪರ್ಯದ ರಾಜಕಾರಣವಿದೆ, ಭ್ರಷ್ಟಾಚಾರವಿದೆ, ಸ್ವಜನ ಪಕ್ಷಪಾತವಿದೆ, ಧರ್ಮದ ನೆಲೆಯಲ್ಲಿ ಪ್ರಚಾರ ಮಾಡಿದರೂ ಕೊನೆಗುಳಿಯುವುದು ಜಾತಿ ಲೆಕ್ಕಾಚಾರವಷ್ಟೇ ಮತ್ತು ಇವನ್ನು ಮೀರಿ ರಾಜಕೀಯ ಸಾಧ್ಯವಿಲ್ಲ ಎಂಬುದನ್ನು ಮತ್ತು ತಾನೂ ಈ ಭೂತದ ಕೈಯಲ್ಲಿ ಬವಣೆ ಪಡಬೇಕಾದ ಡಾ.ಫಾಸ್ಟಸ್ ಆಗಬೇಕಾಗುತ್ತದೆಯೆಂಬುದನ್ನು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)