varthabharthi


ವಿಶೇಷ-ವರದಿಗಳು

ಈಗ ಯುನೆಸ್ಕೋ ಪಾರಂಪರಿಕ ತಾಣವಾಗಿರುವ ಧೋಲವೀರಾವನ್ನು ಪ್ರೋತ್ಸಾಹಿಸಲು ಗುಜರಾತ್ ಸಿಎಂ ಆಗಿ ಮೋದಿ ಏನು ಮಾಡಿದ್ದರು?

ವಾರ್ತಾ ಭಾರತಿ : 30 Jul, 2021
ರಾಜೀವ್‌ ಶಾ (Thewire.in)

Photo: Twitter/@narendramodi

ಗುಜರಾತಿನ ಧೋಲವೀರಾ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವುದು ತನಗೆ ಖುಷಿ ನೀಡಿರುವುದು ಮಾತ್ರವಲ್ಲ, ತನ್ನ ವಿದ್ಯಾರ್ಥಿ ಜೀವನದಲ್ಲಿ ಈ ತಾಣಕ್ಕೆ ಮೊದಲ ಬಾರಿ ಭೇಟಿ ನೀಡಿದ್ದಾಗ ಅದನ್ನು ಕಂಡು ತಾನು ಮಂತ್ರಮುಗ್ಧನಾಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಟ್ವೀಟ್ ನಿರೀಕ್ಷೆಯಂತೆಯೇ ಅವರ ಟೀಕಾಕಾರರಲ್ಲಿ ಅನುಮಾನವನ್ನು ಮೂಡಿಸಿದೆ. ಅಚ್ಚರಿಯೆಂದರೆ ಮೋದಿಯವರ ಎರಡೂ ಟ್ವೀಟ್ ಗಳು ಧೋಲವೀರಾ ಗುಜರಾತಿನಲ್ಲಿಯ ಹರಪ್ಪಾ ಕಾಲದ ತಾಣ ಎನ್ನುವುದನ್ನು ಒಮ್ಮೆಯೂ ಉಲ್ಲೇಖಿಸಿಲ್ಲ.

ಮೋದಿಯವರ ಟ್ವೀಟ್ ನ ಬೆನ್ನಿಗೇ ಗುಜರಾತಿನ ಹಿರಿಯ ಪತ್ರಕರ್ತರೋರ್ವರು ನನಗೆ ಫೋನಾಯಿಸಿ, ಮೋದಿ ಅಪ್ಪಟ ಸುಳ್ಳು ಹೇಳುತ್ತಿದ್ದಾರೆ. ಧೋಲವೀರಾವನ್ನು ಮೊದಲ ಬಾರಿ ಉತ್ಖನನ ಮಾಡಿದ್ದೇ 1990ರ ದಶಕದಲ್ಲಿ ಮತ್ತು 1951ರಲ್ಲಿ ಜನಿಸಿದ್ದ ಮೋದಿ ಆಗ ಖಂಡಿತವಾಗಿಯೂ ವಿದ್ಯಾರ್ಥಿಯಾಗಿರಲಿಲ್ಲ ಎಂದು ಹೇಳಿದ್ದರು. ನಿಮಗೆ ಸಂಶಯವಿದ್ದರೆ ನಿಮ್ಮ ಸ್ನೇಹಿತ, ಮಾಜಿ ಬಿಜೆಪಿ ಸಚಿವ ಸುರೇಶ ಮೆಹ್ತಾರನ್ನು ಕೇಳಿ ಎಂದೂ ಅವರು ನನಗೆ ಸೂಚಿಸಿದ್ದರು. ಆದರೆ ಅವರು ಹೇಳಿದ್ದು ನನಗೆ ಮನದಟ್ಟಾಗಿರಲಿಲ್ಲ. ಮೋದಿ ವಿದ್ಯಾರ್ಥಿಯಾಗಿದ್ದಾಗ ಧೋಲವೀರಾಕ್ಕೆ ಭೇಟಿ ನೀಡಿರಬೇಕು ಎಂದು ನಾನು ಭಾವಿಸಿದ್ದೆ. ಹೀಗಾಗಿ ನಾನು ಮೆಹ್ತಾರಿಗೆ ಕರೆ ಮಾಡುವ ಗೋಜಿಗೆ ಹೋಗಿರಲಿಲ್ಲ.

ಇದೇ ವೇಳೆ ಈಗಷ್ಟೇ ತನ್ನದೇ ಆದ ‘ವೈಬ್ಸ್ ಆಫ್ ಇಂಡಿಯಾ ’ಸುದ್ದಿ ಜಾಲತಾಣವನ್ನು ಆರಂಭಿಸಿರುವ ಅಹ್ಮದಾಬಾದ್ ಮಿರರ್ ನ ಮಾಜಿ ಸಂಪಾದಕ ದೀಪಲ್ ತ್ರಿವೇದಿ ಅವರ ಟ್ವೀಟ್ ನನ್ನ ಕಣ್ಣಿಗೆ ಬಿದ್ದಿತ್ತು. ಧೋಲವೀರಾದಲ್ಲಿ ಮೊದಲ ಬಾರಿಗೆ ಉತ್ಖನನ ನಡೆದಿದ್ದು 1990ರ ದಶಕದಲ್ಲಿ ಎನ್ನುವುದನ್ನು ದೃಢಪಡಿಸುವ ಪುಸ್ತಕಗಳು ಮತ್ತು ವೃತ್ತಪತ್ರಿಕೆಗಳ ತುಣುಕುಗಳನ್ನು ಅವರು ತನ್ನ ಟ್ವೀಟ್ನೊಂದಿಗೆ ಲಗತ್ತಿಸಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್ಐ) ಟಿ.ಜೋಶಿ ಅವರು 1967ರಲ್ಲಿ (ಮೋದಿ ಆಗ 17 ವರ್ಷ ವಯಸ್ಸಿನವರಾಗಿದ್ದರು) ಧೋಲವೀರಾಕ್ಕೆ ಭೇಟಿ ನೀಡಿದ್ದರಾದರೂ ಮೊದಲ ಉತ್ಖನನ ಮಾತ್ರ 90ರ ದಶಕದಲ್ಲಿಯೇ ನಡೆದಿತ್ತು ಎಂದು ತ್ರಿವೇದಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.

‘ಎಎಸ್ಐ 1990ರಲ್ಲಿ ಧೋಲವೀರಾದಲ್ಲಿ ಮೊದಲ ಉತ್ಖನನ ನಡೆಸಿತ್ತು. ಆಗ ಮೋದಿ 40 ವರ್ಷ ವಯಸ್ಸಿನವರಾಗಿದ್ದರು. ಆ ವಯಸ್ಸಿನಲ್ಲಿ ವಿದ್ಯಾಭ್ಯಾಸ? ಧೋಲವೀರಾ ಆಗ ಒಂದು ಗ್ರಾಮವಾಗಿತ್ತಷ್ಟೇ. ಧೋಲವೀರಾ ಮೋದಿಯವರ ಊರು ವಾಡನಗರದಿಂದ 332 ಕಿ.ಮೀ.ದೂರದಲ್ಲಿದೆ. ಅವರು ಬಡ ಚಾಯ್ವಾಲಾ ಆಗಿದ್ದರು ನೆನಪಿರಲಿ, ಹೀಗಿರುವಾಗ....’ಎಂದೂ ತ್ರಿವೇದಿ ಟ್ವೀಟ್ನಲ್ಲಿ ಸೇರಿಸಿದ್ದರು.

ಮೋದಿಯವರನ್ನು ನಂಬಬೇಕೇ ಬಿಡಬೇಕೇ ಎನ್ನುವುದು ನಿಜಕ್ಕೂ ನನಗೆ ಅರ್ಥವಾಗಿರಲಿಲ್ಲ. ವಿಶ್ವಾದ್ಯಂತ ವಿವಾದಕ್ಕೆ ಸಿಲುಕಿದ್ದ ತನ್ನ ಪದವಿ ಸೇರಿದಂತೆ ಹಲವಾರು ಹೇಳಿಕೆಗಳನ್ನು ಮೋದಿ ನೀಡಿದ್ದರು. ಅದು ಹೇಗೇ ಇರಲಿ,ಅವರು ಮಾಡಿದ್ದ ಎರಡನೇ ಟ್ವೀಟ್ ನನಗೆ ಹೆಚ್ಚು ರಂಜನೀಯವಾಗಿ ಕಂಡು ಬಂದಿದೆ. ‘ಗುಜರಾತಿನ ಮುಖ್ಯಮಂತ್ರಿಯಾಗಿ ಧೋಲವೀರಾದಲ್ಲಿ ಪಾರಂಪರಿಕ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಕೆಲಸ ಮಾಡಲು ನನಗೆ ಅವಕಾಶ ಲಭಿಸಿತ್ತು. ನಮ್ಮ ತಂಡವೂ ಅಲ್ಲಿ ಪ್ರವಾಸೋದ್ಯಮ ಸ್ನೇಹಿ ಮೂಲಸೌಕರ್ಯವನ್ನು ಸೃಷ್ಟಿಸಲು ಶ್ರಮಿಸಿತ್ತು ’ಎಂದು ಮೋದಿ ಹೇಳಿಕೊಂಡಿದ್ದಾರೆ.

ಮೋದಿಯವರ ಟ್ವೀಟ್ ನಲ್ಲಿಯ ಫೋಟೊಗಳು ತೋರಿಸುವಂತೆ ಅವರು ಆ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಮೋದಿ ಮುಖ್ಯಮಂತ್ರಿಯಾಗಿದ್ದಾಗ ಎಂದು ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಗುಜರಾತ್ ಸರಕಾರದ ಕುರಿತು ವರದಿ ಮಾಡುತ್ತಿದ್ದ ನಾನು ಖಚಿತವಾಗಿ ಹೇಳಬಲ್ಲೆ. ಪ್ರವಾಸಿಗಳು ಧೋಲವೀರಾಕ್ಕೆ ಬರುವಂತಾಗಲು ಅಲ್ಲಿ ಕೆಲವು ಸೌಲಭ್ಯಗಳನ್ನು ಮೋದಿ ಮಂಜೂರು ಮಾಡಿರಬಹುದು,‌ ಆದರೆ ಧೋಲವೀರಾವನ್ನು ಪ್ರೋತ್ಸಾಹಿಸಲು ಅವರೆಂದೂ ಮುಂದಾಗಿರಲಿಲ್ಲ ಅಥವಾ ಅದಕ್ಕೆ ಸಿಗಬೇಕಾಗಿದ್ದ ಮಹತ್ವವನ್ನು ನೀಡಿರಲಿಲ್ಲ.

ನಾನು ಹೀಗೆ ಹೇಳಲು ಕಾರಣವಿದೆ. ಒಮ್ಮೆ ಮಾತ್ರ, 2006ರಲ್ಲಿ ನಾನು ಧೋಲವೀರಾಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಮುನ್ನ ಆ ತಾಣದ ಬಗ್ಗೆ ನನಗೆ ಮಾಹಿತಿಗಳನ್ನು ನೀಡಿದ್ದ ಈಗ ನಿವೃತ್ತರಾಗಿರುವ ಹಿರಿಯ ಎಎಸ್ಐ ಅಧಿಕಾರಿ ವರುಣ್ ಮೈರಾ ಅವರು ಅದನ್ನು ಬಹುವಾಗಿ ಪ್ರಶಂಸಿಸಿದ್ದರು. ಅದನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಬಹುದು ಎಂದಿದ್ದರು.
ಧೋಲವೀರಾಕ್ಕೆ ಭೇಟಿ ನೀಡಿದ ಬಳಿಕ ಮೈತ್ರಾ ಹೇಳಿದ್ದು ಅಪ್ಪಟ ನಿಜ ಎಂದು ನನಗೆ ಅನಿಸಿತ್ತು. ಸ್ಥಳಿಯ ಅಧಿಕಾರಿಯೋರ್ವರು ಅದನ್ನು ನೋಡಲು ನನಗೆ ನೆರವಾಗಿದ್ದರು.

ಈ ಹರಪ್ಪಾ ತಾಣದ ಸಮೀಪದಲ್ಲಿ ಹಲವಾರು ಸಣ್ಣ ಕುಟೀರಗಳಂತಹ ರಚನೆಗಳಿದ್ದವು. ಅಲ್ಲಿ ರಾತ್ರಿ ಉಳಿದುಕೊಳ್ಳಬಹುದಿತ್ತು. ಧೋಲವೀರಾ ನಿಜಕ್ಕೂ ಪ್ರವಾಸೋದ್ಯಮ ತಾಣವಾಗುತ್ತಿದೆ ಎಂದು ನಾನು ಪ್ರಭಾವಿತನಾಗಿದ್ದೆ. ಆದರೆ ಈ ಕುಟೀರಗಳು ವಾಸಯೋಗ್ಯವಾಗಿಲ್ಲ,ನೀರು ಮತ್ತು ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ ಎಂದು ಅಧಿಕಾರಿ ತಿಳಿಸಿದಾಗ ನನಗೆ ನಿರಾಶೆಯಾಗಿತ್ತು. ಅಧಿಕಾರಿ ತಾಣದ ಸುತ್ತ ನನ್ನನ್ನು ಕರೆದೊಯ್ದು ಪ್ರತಿಯೊಂದನ್ನೂ ವಿವರಿಸಿದಾಗ ಮೋದಿಯವರು ಹೇಳಿದಂತೆ ನಾನು ನಿಜಕ್ಕೂ ಮಂತ್ರಮುಗ್ಧನಾಗಿದ್ದೆ.

ಸಮೀಪದಲ್ಲಿದ್ದ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ಗೆಸ್ಟ್ ಹೌಸ್‌ ನ ಕಥೆಯೂ ಭಿನ್ನವಾಗಿರಲಿಲ್ಲ. ಇಲ್ಲಿ ದಿನಕ್ಕೆ ನಾಲ್ಕು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಿರುತ್ತದೆ. ಇಲ್ಲಿಗೆ ಯಾರೂ ಪ್ರವಾಸಿಗಳು ಬರುವುದಿಲ್ಲ. ಕೆಲವರು ಧೋಲವೀರಾಕ್ಕೆ ಬರುತ್ತಾರಾದರೂ ಇಲ್ಲಿ ಅಥವಾ ಆಸುಪಾಸಿನಲ್ಲಿ ರಾತ್ರಿ ತಂಗುವುದಿಲ್ಲ ಎಂದು ಅಲ್ಲಿಯ ಮ್ಯಾನೇಜರ್ ಗೋಳು ತೋಡಿಕೊಂಡಿದ್ದ.

ಈ ಭೇಟಿಗೆ ಒಂದು ವರ್ಷ ಮುನ್ನ ನಾನು ಮೋದಿಯವರು ಅದಾಗಲೇ ಅತೀವ ಆಸಕ್ತಿಯಿಂದ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಗೊಳಿಸುತ್ತಿದ್ದ ಕಛ್ ಪ್ರದೇಶದ ಲಿಟ್ಲ್ ರನ್ನಲ್ಲಿಯ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದನ್ನು ‘ರಣ್ ಉತ್ಸವ ’ಎಂದು ಕರೆದಿದ್ದ ಮೋದಿ ಅಲ್ಲಿ ಪ್ರವಾಸಿಗಳಿಗೆ ಉಳಿಯಲು ಟೆಂಟ್ ಸಿಟಿಯನ್ನು ನಿರ್ಮಿಸಿದ್ದರು. ನಾನು ಅಲ್ಲಿ ಒಂದು ರಾತ್ರಿ ಉಳಿದುಕೊಂಡಿದ್ದೆ. ಮೋದಿ ಧೋಲವೀರಾದ ಬಳಿ ಟೆಂಟ್ ಸಿಟಿಯೊಂದನ್ನು ಏಕೆ ನಿರ್ಮಿಸಲಿಲ್ಲ ಎಂದು ನನಗೆ ಅಚ್ಚರಿಯಾಗುತ್ತಿದೆ.

ಲಿಟ್ಲ್ ರನ್ ಗೆ ಬರುವ ಕೆಲವೇ ಪ್ರವಾಸಿಗಳು ಧೋಲವೀರಾ ಟೂರಿಸಂ ಸರ್ಕ್ಯೂಟ್ನಿಂದ ಹೊರಗಿರುವುದರಿಂದ ಮತ್ತು ದೂರವಿರುವುದರಿಂದ ಅಲ್ಲಿಗೆ ಭೇಟಿಯನ್ನೇ ನೀಡುವುದಿಲ್ಲ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಗುಜರಾತ ಸರಕಾರದ ಜಾಹೀರಾತುಗಳೂ ಎಂದೂ ಧೋಲವೀರಾವನ್ನು ಉಲ್ಲೇಖಿಸಿಲ್ಲ. ಗುಜರಾತ್ ಸರಕಾರವು 2010ರಲ್ಲಿ ಬಿಡುಗಡೆಗೊಳಿಸಿದ್ದ ‘ಬ್ಲೂಪ್ರಿಂಟ್ ಫಾರ್ ಇನ್ಫ್ರಾಸ್ಟ್ರಕ್ಚರ್ ಇನ್ ಗುಜರಾತ್ 2020 ’ಎಂಬ ಪುಸ್ತಕದ ಮೂಲಕ ಧೋಲವೀರಾದ ಪ್ರಚಾರಕ್ಕಾಗಿ ಪ್ರಯತ್ನಿಸಿತ್ತು ನಿಜ. ವ್ಯಂಗ್ಯವೆಂದರೆ ಅದನ್ನು ‘ಲಾಸ್ವೆಗಾಸ್’ನಂತೆ ಅಭಿವೃದ್ಧಿಗೊಳಿಸುವುದಾಗಿ ಪುಸ್ತಕದಲ್ಲಿ ಹೇಳಲಾಗಿತ್ತು. ಇದಕ್ಕಾಗಿ 480 ಕೋ.ರೂ.ಗಳ ಯೋಜನೆ ರೂಪಿಸಲಾಗಿದೆ ಎಂದೂ ಅದರಲ್ಲಿ ತಿಳಿಸಲಾಗಿತ್ತು. ಆದರೆ 2020 ಕಳೆದುಹೋದರೂ ಈ ‘ಲಾಸ್ವೆಗಾಸ್’ ಪುಸ್ತಕದಲ್ಲಿಯೇ ಉಳಿದುಕೊಂಡಿದೆ.

ಕೃಪೆ: The Wire
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)