varthabharthi


ವಿಶೇಷ-ವರದಿಗಳು

ರಾಕೇಶ್ ಅಸ್ತಾನ ನೇಮಕಾತಿ: ಸಂಸ್ಥೆಗಳನ್ನು ನಾಶಪಡಿಸುತ್ತಿರುವ ಮೋದಿ, ಶಾ ಕ್ರಮಕ್ಕೆ ನಿದರ್ಶನ

ವಾರ್ತಾ ಭಾರತಿ : 1 Aug, 2021
ಜೂಲಿಯೊ ರಿಬೈರೊ, (ಗುಜರಾತ್ ಮತ್ತು ಪಂಜಾಬ್ ಮಾಜಿ ಡಿಜಿಪಿ, ರೋಮೆನಿಯಾಕ್ಕೆ ಭಾರತದ ಮಾಜಿ ರಾಯಭಾರಿ)

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಇಬ್ಬರೂ ಒಂದೇ ಸ್ವಭಾವವನ್ನು ಹೊಂದಿದ್ದು,‌ ಒಂದರ್ಥದಲ್ಲಿ ಹೇಳಿ ಮಾಡಿಸಿದ ಜೋಡಿಯಾಗಿದ್ದಾರೆ. ಇಂದು ಇವರಿಬ್ಬರ ಆಣತಿಯಿಲ್ಲದೆ ಸರಕಾರದಲ್ಲಿ ಅಥವಾ ಬಿಜೆಪಿಯಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. ನಿವೃತ್ತಿಗೆ ಕೆಲವೇ ದಿನಗಳಿರುವ ವಿವಾದಾತ್ಮಕ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾರನ್ನು ಈಗ ದಿಲ್ಲಿಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿರುವುದು ಈ ಜೋಡಿ ನಮ್ಮ ಸಂಸ್ಥೆಗಳನ್ನು ಹೇಗೆ ನಾಶ ಮಾಡಲು ಹವಣಿಸುತ್ತಿದೆ ಎನ್ನುವುದನ್ನು ತೋರಿಸುತ್ತಿದೆ.

ಈ ಬೆಳವಣಿಗೆಯು ಈ ಜೋಡಿಯೊಂದಿಗೆ ಗುರುತಿಸಿಕೊಂಡಿರುವ ಜಾಣ್ಮೆಯ ಮುದ್ರೆಯನ್ನು ಹೊಂದಿರಲಿಕ್ಕಿಲ್ಲ, ಆದರೆ ಸಾಕಷ್ಟು ಗೊಂದಲವನ್ನಂತೂ ಸೃಷ್ಟಿಸಿದೆ. ಇದು ಕೇವಲ ರಾಜ್ಯ ಪೊಲೀಸ್ ಕೇಡರ್ಗಳನ್ನು ಪ್ರತ್ಯೇಕಿಸಿರುವ, ಅಂಗೀಕರಿಸಲ್ಪಟ್ಟಿರುವ ಮತ್ತು ಕೆಲವು ಅತ್ಯಂತ ಅಸಾಮಾನ್ಯ ಪರಿಸ್ಥಿತಿಗಳನ್ನು ಹೊರತುಪಡಿಸಿ ಗೌರವಿಸಲ್ಪಟ್ಟಿರುವ ಪೊಲೀಸ್ ಸಂಸ್ಥೆಯಲ್ಲಿನ ಹಳೆಯ ನಿಯಮಗಳನ್ನು ಅಸ್ಥಿರಗೊಳಿಸುವ ಈ ಜೋಡಿಯ ಉದ್ದೇಶವನ್ನು ದೃಢಪಡಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

 ಮೋದಿ ಮತ್ತು ಶಾ ನೇತೃತ್ವದ ಸರಕಾರವು ಆಡಳಿತದ ಹಳೆಯ ಸ್ಥಾಪಿತ ಸಂಸ್ಥೆಗಳನ್ನು ನಾಶ ಮಾಡಿ ತಮ್ಮಿಚ್ಛೆಯಂತೆ ರೂಪುಗೊಂಡ ಹೊಸ ಸಂಸ್ಥೆಗಳನ್ನು ತರಲು ಪಣ ತೊಟ್ಟಿರುವಂತಿದೆ. ಜನರಿಗೆ ಸೇವೆಯನ್ನು ಒದಗಿಸಲು ಯತ್ನಿಸದ, ಆದರೆ ಜನರನ್ನು ಆಳುವವರ ಮುಂದೆ ತಲೆ ಬಾಗುವ ಜಡಭರತರಂತೆ ನಡೆಸಿಕೊಳ್ಳುವ ಪೊಲೀಸ್ ಪಡೆ ದೇಶದ ಹಿತಾಸಕ್ತಿಗೆ ಸೂಕ್ತವಲ್ಲ.

ಮೋದಿ ಮತ್ತು ಶಾ ಏನನ್ನು ನಿರ್ಧರಿಸಿರುವರೋ ಅದು ದೇಶದ ಘನತೆಗೆ ಅವರ ಕೊಡುಗೆಯಾಗಬೇಕು ಎನ್ನುವುದು ಸ್ಪಷ್ಟವಾಗಿದೆ. ತಮ್ಮ ವಿಭಿನ್ನ ಚಿಂತನೆ, ದಿಢೀರ್ ನಿರ್ಣಯಗಳು ಮತ್ತು ನೈತಿಕತೆಯನ್ನು ದಮನಿಸುವ ನೇಮಕಾತಿ ಅಧಿಕಾರದ ಬಳಕೆ (ಅಥವಾ ದುರುಪಯೋಗ)ಗಾಗಿ ಪೊಲೀಸ್ ಇತಿಹಾಸಕಾರರು ಇವರಿಬ್ಬರನ್ನು ಖಂಡಿತವಾಗಿಯೂ ನೆನಪಿಸಿಕೊಳ್ಳಲಿದ್ದಾರೆ.

ತತ್ವವನ್ನು ಮೂಲೆಗುಂಪು ಮಾಡಲಾಗಿದೆ

ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾರನ್ನು ನಿವೃತ್ತಿಗೆ ಕೆಲವೇ ದಿನಗಳಿರುವಾಗ ಜು.27ರಂದು ದಿಲ್ಲಿಯ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಲಾಗಿದೆ. ನಿವೃತ್ತಿಗೆ ಕನಿಷ್ಠ ಆರು ತಿಂಗಳು ಬಾಕಿಯಿರುವ ಅಧಿಕಾರಿಗಳು ಮಾತ್ರ ರಾಜ್ಯ ಪೊಲೀಸ್ ಪಡೆಗಳ ಮುಖ್ಯಸ್ಥರಾಗಲು ಅರ್ಹರಾಗಿರುತ್ತಾರೆ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಪ್ರಕಾಶ ಸಿಂಗ್ ತೀರ್ಪಿನಲ್ಲಿ ಸ್ಪಷ್ಟವಾಗಿ ನಿರ್ದೇಶ ನೀಡಿತ್ತು. ತತ್ತ್ವವು ಸ್ಪಷ್ಟವಾಗಿತ್ತು,ಆದರೂ ಅದನ್ನು ಬಳಸಿದ ಕರವಸ್ತ್ರದಂತೆ ಮೂಲೆಗೆಸೆಯಲಾಗಿದೆ.

ದಿಲ್ಲಿ ಆಡಳಿತಕ್ಕೆ ಸೇವೆ ಸಲ್ಲಿಸುವ ಅರುಣಾಚಲ ಪ್ರದೇಶ-ಗೋವಾ-ಮಿರೆರಮ್ ಮತ್ತು ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್ನಲ್ಲಿಯ ಹಲವಾರು ಆಶಾವಾದಿಗಳ ಪೈಕಿ ಅತೃಪ್ತ ಅಥವಾ ದಿಟ್ಟರಾಗಿರುವ ಯಾರಾದರೂ ಕೊಡವಿಕೊಂಡು ಮೇಲೆದ್ದು ನ್ಯಾಯಾಲಯದಲ್ಲಿ ಈ ನೇಮಕವನ್ನು ಪ್ರಶ್ನಿಸುತ್ತಾರೆ ಎಂದು ನನ್ನ ಹಳೆಯ ಸ್ನೇಹಿತ ಪ್ರಕಾಶ್ ಸಿಂಗ್ ಆಶಿಸಿದ್ದಾರೆ. ಹಾಗೆ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಿದರೂ ನಿಶ್ಚಿತವಾಗಿಯೂ ತೀರ್ಪು ಒಂದೋ ಎರಡೋ ವರ್ಷಗಳಲ್ಲಿ ಅಸ್ತಾನಾ ನಿವೃತ್ತರಾದ ಬಳಿಕವೇ ಹೊರಬೀಳುತ್ತದೆ ಮತ್ತು ಆ ವೇಳೆಗೆ ಉದ್ದೇಶಿತ ಹಾನಿಯು ಪೂರ್ಣಗೊಂಡಿರುತ್ತದೆ.

ಈ ಬರಹವನ್ನು ಬರೆಯಲು ನನಗೆ ಯಾವುದೇ ಸಮರ್ಥನೆಯಿಲ್ಲ ಎಂದು ಕೆಲವು ಅರಿವುಳ್ಳ ಓದುಗರು ಬೆಟ್ಟುಮಾಡಬಹುದು. ನನ್ನಿಂದ ಕೇವಿಯಟ್ ಅನ್ನೂ ಕೇಳಲಾಗಿದೆ. ನಾನು ಮಹಾರಾಷ್ಟ್ರ ಕೇಡರ್ಗೆ ಸೇರಿದ ಅಧಿಕಾರಿಯಾಗಿದ್ದರೂ ಮೇ 1985ರಲ್ಲಿ ನನ್ನನ್ನೂ ದಿಲ್ಲಿ ಪೊಲೀಸ್ ಆಯುಕ್ತನಾಗಿ ನೇಮಕಗೊಳಿಸಲಾಗಿತ್ತು. ಹುದ್ದೆಗೆ ತಾನು ಲಭ್ಯವಿದ್ದೇನೆ ಮತ್ತು ಸಿದ್ಧನಿದ್ದೇನೆ ಎಂದು ಎಜಿಎಂಯುಟಿ ಕೇಡರ್ನ ಅಧಿಕಾರಿಯೋರ್ವರು ಆಗಿನ ಪ್ರಧಾನಿ ರಾಜೀವ ಗಾಂಧಿಯವರ ಬಳಿ ತನ್ನ ಬಯಕೆ ತೋಡಿಕೊಳ್ಳುವ ಮೂಲಕ ನನ್ನನ್ನು ರಕ್ಷಿಸಿದ್ದರು. ನನ್ನ ನಿಯೋಜನೆಯನ್ನು ಬದಲಿಸಿ ನಾನು ಬಯಸಿದ್ದಕ್ಕಿಂತ ಹೆಚ್ಚಿನ ಹುದ್ದೆಗೆ ನನ್ನನ್ನು ನಿಯೋಜಿಸಲಾಗಿತ್ತು. ಅತ್ಯುನ್ನತ ಅರೆ ಮಿಲಿಟರಿ ಪಡೆಯಾದ ಸಿಆರ್ಪಿಎಫ್ನ ಮುಖ್ಯಸ್ಥನಾಗಿ ನನ್ನನ್ನು ನೇಮಕಗೊಳಿಸಲಾಗಿತ್ತು.

ಗುಜರಾತ ಡಿಜಿಪಿಯಾಗಿ ಮತ್ತು ಬಳಿಕ ಪಂಜಾಬ ಡಿಜಿಪಿಯಾಗಿ ನನ್ನ ನಂತರದ ನೇಮಕಗಳು ಅಸಾಮಾನ್ಯ ಸನ್ನಿವೇಶಗಳಲ್ಲಿ ನಡೆದಿದ್ದವು. ಆಗಿನ ಪ್ರಚಲಿತ ಪರಿಸ್ಥಿತಿಗಳಿಂದಾಗಿ ಆ ರಾಜ್ಯಗಳಲ್ಲಿಯ ನನ್ನ ಐಪಿಎಸ್ ಸಹೋದ್ಯೋಗಿಗಳು ನನ್ನ ಬಗ್ಗೆ ಯಾವುದೇ ಅಸಹನೆಯನ್ನು ಪ್ರದರ್ಶಿಸಿರಲಿಲ್ಲ. ಹೀಗೆ ನನ್ನ ಕೇವಿಯಟ್ ಅನ್ನು ದಾಖಲಿಸಿದ ಬಳಿಕ ಅಸ್ತಾನಾರ ಅಸಾಧಾರಣ ನೇಮಕದ ಬಗ್ಗೆ ಪ್ರತಿಕ್ರಿಯಿಸಲು ಮುಂದಾಗುತ್ತಿದ್ದೇನೆ.

ಡಿಜಿಪಿಯಾಗಿ ಗುಜರಾತಿನಲ್ಲಿ 1985 ಜುಲೈನಿಂದ ಅಕ್ಟೋಬರ್ವರೆಗಿನ ನಾಲ್ಕು ತಿಂಗಳ ನನ್ನ ವಾಸ್ತವ್ಯದ ಅವಧಿಯಲ್ಲಿ ನಾನು ಅಸ್ತಾನಾರನ್ನು ಭೇಟಿಯಾಗಿರಲಿಲ್ಲ. 1984ರಲ್ಲಿ ಐಎಎಸ್ಗೆ ಭರ್ತಿಯಾಗಿದ್ದ ಅವರು ಆಗ ಹೈದರಾಬಾದ್ ನ ನ್ಯಾಷನಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಸಿಬಿಐನಲ್ಲಿ ತನ್ನ ಮೇಲಾಧಿಕಾರಿ ಅಲೋಕ ವರ್ಮಾ ಜೊತೆಗೆ ಅವರು ಬಹಿರಂಗವಾಗಿ ಕಚ್ಚಾಟ ನಡೆಸಿದಾಗಲಷ್ಟೇ ಅವರ ಹೆಸರು ಉಲ್ಲೇಖಿತಗೊಂಡಿದ್ದನ್ನು ನಾನು ಕೇಳಿದ್ದೆ.

ವರ್ಮಾ ಓರ್ವ ಗೌರವಾನ್ವಿತ ವ್ಯಕ್ತಿ ಎಂದು ಅವರ ಬ್ಯಾಚ್ಮೇಟ್ ಓರ್ವರು ನನಗೆ ತಿಳಿಸಿದ್ದರು. ಹೀಗಾಗಿ ಅಸ್ತಾನಾರ ಪೂರ್ವಾಪರವನ್ನು ಕೆದಕುವುದು ನನಗೆ ಅಗತ್ಯವಾಗಿತ್ತು. ಅವರು ಗುಜರಾತ್ ಕೇಡರ್ಗೆ ಸೇರಿದ್ದರಿಂದ ಮತ್ತು ಆ ಕೇಡರ್ ನನಗೆ ಚಿರಪರಿಚಿತವಾಗಿದ್ದರಿಂದ ಅದು ನನಗೆ ಸುಲಭದ ಕೆಲಸವಾಗಿತ್ತು.

ಅಸ್ತಾನಾ ಕೂಡ ನಿಷ್ಠೆಗೆ ಹೆಸರಾದ ವ್ಯಕ್ತಿ ಎನ್ನುವುದನ್ನು ನನ್ನ ವಿಚಾರಣೆಗಳು ತೋರಿಸಿದ್ದವು. ಅಪರಾಧಗಳ ತನಿಖೆಯಲ್ಲಿ ಅವರು ವಿಶೇಷ ನೈಪುಣ್ಯ ಹೊಂದಿದ್ದರು. ಹೀಗಾಗಿ ಅವರಿಗೆ ಗೋಧ್ರಾ ರೈಲು ದುರಂತ ಪ್ರಕರಣದ ತನಿಖೆಯನ್ನು ಒಪ್ಪಿಸಲಾಗಿತ್ತು. ವಿವಾದಗಳನ್ನು ಆವಿಷ್ಕರಿಸುವುದನ್ನು ಮೈಗೂಡಿಸಿಕೊಂಡಿರುವ ಮಾಧ್ಯಮಗಳು ಮುಖ್ಯಮಂತ್ರಿ ಈ ಹಿಂದೆ ನೀಡಿದ್ದ,ಆದರೆ ತನಗೆ ಗೊತ್ತಿರದಿದ್ದ ಹೇಳಿಕೆಯ ವಿರುದ್ಧವಾಗಿ ಹೇಳಿಕೆಯೊಂದನ್ನು ಅಸ್ತಾನಾ ತನಗರಿವಿಲ್ಲದೆ ನೀಡುವಂತೆ ಪ್ರಚೋದಿಸಿದ್ದವು.
ಬಹಳಷ್ಟು ಯುವ,ಭರವಸೆದಾಯಕ ಅಧಿಕಾರಿಗಳು ತಮ್ಮ ಜಟಿಲ ಪಯಣದ ಮಾರ್ಗದಲ್ಲಿ ಈ ಪಾಠವನ್ನು ಕಲಿತುಕೊಂಡಿದ್ದಾರೆ. ಇದು ದುರದೃಷ್ಟಕರ,ಆದರೂ ನಿಜ. ಕೆಲವೇ ಜನರು,ನಿರ್ಭೀತ ಮತ್ತು ತತ್ತ್ವಬದ್ಧರಾದವರು ಮಾತ್ರ ಪೊಲೀಸ್ ವ್ಯವಸ್ಥೆಯ ಮೇಲಿನ ರಾಜಕೀಯ ನಿಯಂತ್ರಣದ ವಿರುದ್ಧ ಜಯ ಸಾಧಿಸಬಲ್ಲರು.

ಗುಜರಾತಿನಲ್ಲಿಯ ನನ್ನ ಮಾಜಿ ಕಿರಿಯ ಸಹೋದ್ಯೋಗಿಗಳು ಹೇಳಿರುವುದರಲ್ಲಿ ತಥ್ಯವಿದ್ದರೆ (ಮತ್ತು ಅವರ ಸ್ವತಂತ್ರ ಮತ್ತು ವ್ಯಕ್ತಿಗತ ತೀರ್ಪಗಳ ಕುರಿತು ನನಗೆ ಅನುಮಾನಗಳಿಲ್ಲ) ಅಸ್ತಾನಾ ರಾಜಕೀಯ ಅಗತ್ಯಗಳಿಗೆ ಹೊಂದಿಕೊಳ್ಳುವ ತನ್ನ ಸಾಮರ್ಥ್ಯದಿಂದಾಗಿ ನಂತರ ಮೋದಿ ಮತ್ತು ಶಾ ಅವರ ವಿಶ್ವಾಸಕ್ಕೆ ಪಾತ್ರರಾದರು.

ಎಜಿಎಂಯುಟಿ ಸಹೋದ್ಯೋಗಿಗಳು ಅಸ್ತಾನಾರ ಹೇರಿಕೆಯಿಂದ ನಿರಾಶರಾಗಿರಬಹುದು, ಆದರೆ ತನ್ನ ರಾಜಕೀಯ ಧಣಿಗಳ ನಿರೀಕ್ಷೆಗಳನ್ನು ಈಡೇರಿಸಲು ತನಗೆ ಅಗತ್ಯವಾಗಿರುವ ತೀಕ್ಷ್ಣ ಪೊಲೀಸಿಂಗ್ಗೆ ದಿಲ್ಲಿಯ ಠಾಣಾಧಿಕಾರಿಗಳ ನೆರವು ಅಸ್ತಾನಾಗೆ ಬೇಕಾಗುತ್ತದೆ ಮತ್ತು ಈ ಅಧಿಕಾರಿಗಳು ತಮ್ಮೊಳಗೆ ನಿರ್ಮಿಸಿಕೊಂಡಿರುವ ಭದ್ರಕೋಟೆಯನ್ನು ದಾಟುವುದು ಅವರ ಪಾಲಿಗೆ ದೊಡ್ಡ ಸವಾಲಾಗಲಿದೆ.

ಸ್ಥಳೀಯ ಐಪಿಎಸ್ ಅಧಿಕಾರಿಗಳಲ್ಲಿ ಸುಪ್ತವಾಗಿರುವ ಅವಿಶ್ವಾಸ,ಕೆಲವರ ಸ್ವಾರ್ಥಪರ ಹಿತಾಸಕ್ತಿಗಳು ಮತ್ತು ಮೋದಿ-ಶಾ ಜೋಡಿಯ ನಿರೀಕ್ಷೆಗಳನ್ನು ಬೆನ್ನಿಗಿಟ್ಟುಕೊಂಡು ಮುಂದುವರಿಯಲು ಅಸ್ತಾನಾಗೆ ಮಂತ್ರದಂಡವೊಂದರ ಅಗತ್ಯವಿದೆ.

ಕೃಪೆ: Scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)