varthabharthi


ಕರ್ನಾಟಕ

ನಾಳೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ: ಮೊದಲ ಹಂತದಲ್ಲಿ 24 ಶಾಸಕರು ಸಂಪುಟ ಸೇರ್ಪಡೆ?

ವಾರ್ತಾ ಭಾರತಿ : 3 Aug, 2021

ಬೆಂಗಳೂರು, ಆ.3: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ನೂತನ ಸಚಿವ ಸಂಪುಟ ರಚನೆಗೆ ಮುಹೂರ್ತ ನಿಗದಿಯಾಗಿದ್ದು, ಬುಧವಾರ ಮಧ್ಯಾಹ್ನ 2:15 ಕ್ಕೆ ರಾಜಭವನದಲ್ಲಿ ನೂತನ  ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಕಳೆದ ಎರಡು ದಿನಗಳಿಂದ ಹೊಸದಿಲ್ಲಿಯಲ್ಲಿ ಸಚಿವ ಸಂಪುಟ ರಚನೆ ಕುರಿತು ವರಿಷ್ಠರೊಂದಿಗೆ ಸರಣಿ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ, ಅಂತಿಮವಾಗಿ ಸಚಿವ ಸಂಪುಟ ರಚನೆಗೆ ವರಿಷ್ಠರಿಂದ ಹಸಿರು ನಿಶಾನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ನೂತನ ಸಚಿವರ ಪಟ್ಟಿಯೊಂದಿಗೆ ಬುಧವಾರ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

ಮೊದಲ ಹಂತದಲ್ಲಿ 24 ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಾದೇಶಿಕ ಸಮತೋಲನ, ಜಾತಿವಾರು ಪ್ರಾತಿನಿಧ್ಯ ಹಾಗೂ ಹೊಸಬರಿಗೆ ಬಿಜೆಪಿ ಹೈಕಮಾಂಡ್ ಆದ್ಯತೆ ನೀಡಿದ್ದು, ಕಳೆದ ಬಾರಿ ಯಡಿಯೂರಪ್ಪ ಸಂಪುಟದಲ್ಲಿದ್ದ ಸುಮಾರು 8ಕ್ಕೂ ಹೆಚ್ಚು ಕ್ರೀಯಾಶೀಲರಲ್ಲದ ಸಚಿವರನ್ನು ಕೈ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಸೋಮವಾರ ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆ ಸಭೆ ನಡೆಸಿದ ಬಳಿಕವೇ ನೂತನ ಸಚಿವರ ಪಟ್ಟಿಗೆ ಅನುಮೋದನೆ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಮುಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಸಹಕಾರಿಯಾಗುವಂತೆ ನೂತನ ಸಚಿವ ಸಂಪುಟ ರಚನೆಯಾಗಬೇಕು ಎಂಬುದು ಹೈಕಮಾಂಡ್ ಬಯಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದರು. ಒಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸ್ಸು ಮಾಡಿರುವ ಹೆಸರುಗಳು, ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ವಲಸೆ ಬಂದು ಸಚಿವರಾಗಿರುವವರನ್ನು ಮುಂದುವರೆಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಹೈಕಮಾಂಡ್ ಇದೆ. ಜೊತೆಗೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜದ ವಿವಿಧ ಮಠಾಧೀಶರು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ವಲಸೆ ಬಂದಿರುವವರ ಪೈಕಿ ಆರ್.ಶಂಕರ್, ಶ್ರೀಮಂತ್‍ಪಾಟೀಲ್‍ಗೆ ಅವಕಾಶ ತಪ್ಪುವ ಸಾಧ್ಯತೆ ಹೆಚ್ಚಿದ್ದು, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಈ ಬಾರಿ ಸಂಪುಟ ಸೇರುವುದು ಖಚಿತ ಎನ್ನಲಾಗಿದೆ. ಆದರೆ, ಬಿ.ಸಿ.ಪಾಟೀಲ್ ವಿರುದ್ಧವು ಹಿಂದಿನ ಸರಕಾರದಲ್ಲಿ ಅವರು ಉಸ್ತುವಾರಿಯಾಗಿದ್ದ ಕೊಪ್ಪಳ ಜಿಲ್ಲಾ ಬಿಜೆಪಿ ಘಟಕ ಅಸಮಾಧಾನ ಹೊಂದಿರುವುದು ಅವರಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ.

ಡಿಸಿಎಂ ಹುದ್ದೆಗಳ ಬಗ್ಗೆ ಚರ್ಚೆ: ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಬಿಜೆಪಿ ಹೈಕಮಾಂಡ್ ಅಚ್ಚರಿ  ಎಂಬಂತೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿತ್ತು. ಇದೀಗ, ಬಸವರಾಜ ಬೊಮ್ಮಾಯಿ ಸರಕಾರದಲ್ಲಿಯೂ ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಡಿಸಿಎಂ ಹುದ್ದೆಗಳ ಅಗತ್ಯತೆ ಬಗ್ಗೆ ಹೈಕಮಾಂಡ್ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದೆ ಎನ್ನಲಾಗಿದೆ.

ಆರ್.ಅಶೋಕ್ ಪರವಾಗಿ ಸ್ವತಃ ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದರೆ, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪರವಾಗಿ ವರಿಷ್ಠರು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ, ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, ಉಮೇಶ್ ಕತ್ತಿ ಜೊತೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರು ಡಿಸಿಎಂ ಹುದ್ದೆಗೆ ಕೇಳಿ ಬರುತ್ತಿದೆ.

ಹಿರಿಯರಿಗೆ ಕೋಕ್: ಕೋಟಾ ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ, ವಿ.ಸೋಮಣ್ಣ, ಆರ್.ಶಂಕರ್, ಪ್ರಭು ಚವ್ಹಾಣ್, ಶ್ರೀಮಂತ್ ಪಾಟೀಲ್, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆಯನ್ನು ನೂತನ ಸಂಪುಟಕ್ಕೆ ಸೇರಿಸಿಕೊಳ್ಳದಿರಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗುತ್ತಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)