varthabharthi


ಕರ್ನಾಟಕ

ಕಾರಜೋಳ, ಈಶ್ವರಪ್ಪ, ಶ್ರೀರಾಮುಲು ಸಹಿತ 29 ಮಂದಿ ನೂತನ ಸಚಿವರ ಪ್ರಮಾಣ ವಚನ

ವಾರ್ತಾ ಭಾರತಿ : 4 Aug, 2021

ಬೆಂಗಳೂರು, ಆ. 4: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ನೂತನ ಸಚಿವರಾಗಿ ಹಿರಿಯ ಶಾಸಕರಾದ ಗೋವಿಂದ ಎಂ.ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ಉಮೇಶ್ ಕತ್ತಿ ಸೇರಿದಂತೆ ಒಟ್ಟು 29 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬುಧವಾರ ವಿಧಾನಸೌಧದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರು: ಗೋವಿಂದ ಎಂ.ಕಾರಜೋಳ-ಮುಧೋಳ ಕ್ಷೇತ್ರ, ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ, ಆರ್. ಅಶೋಕ್-ಪದ್ಮನಾಭ ನಗರ, ಬಿ.ಶ್ರೀರಾಮುಲು-ಮೊಳಕಾಲ್ಮೂರು, ಉಮೇಶ್ ಕತ್ತಿ-ಹುಕ್ಕೇರಿ, ಎಸ್.ಅಂಗಾರ-ಸುಳ್ಯ, ಜೆ.ಸಿ. ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ-ಮಲ್ಲೇಶ್ವರ, ಸಿ.ಸಿ.ಪಾಟೀಲ್-ನರಗುಂದ, ಆನಂದ್ ಸಿಂಗ್-ವಿಜಯನಗರ, ಕೋಟ ಶ್ರೀನಿವಾಸ ಪೂಜಾರಿ-ಪರಿಷತ್ ಸದಸ್ಯ, ಪ್ರಭು ಚೌಹಾಣ್-ಔರಾದ್, ಮುರುಗೇಶ್ ಆರ್.ನಿರಾಣಿ-ಬೀಳಗಿ, ವಿ.ಸೋಮಣ್ಣ-ಗೋವಿಂದರಾಜನಗರ, ಶಿವರಾಂ ಹೆಬ್ಬಾರ್-ಯಲ್ಲಾಪುರ, ಎಸ್.ಟಿ.ಸೋಮಶೇಖರ್-ಯಶವಂತಪುರ, ಬಿ.ಸಿ.ಪಾಟೀಲ್-ಹಿರೇಕೆರೂರು, ಬಿ.ಎಸ್.ಬಸವರಾಜು-ಕೆ.ಆರ್.ಪುರ, ಡಾ.ಕೆ.ಸುಧಾಕರ್-ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್, ಎಂಟಿಬಿ ನಾಗರಾಜ್-ವಿಧಾನ ಪರಿಷತ್, ಶಶಿಕಲಾ ಜೊಲ್ಲೆ-ನಿಪ್ಪಾಣಿ, ಕೆ.ಸಿ.ನಾರಾಯಣಗೌಡ-ಕೆ.ಆರ್.ಪೇಟೆ, ವಿ.ಸುನೀಲ್ ಕುಮಾರ್-ಕಾರ್ಕಳ, ಅರಗ ಜ್ಞಾನೇಂದ್ರ-ತೀರ್ಥಹಳ್ಳಿ, ಮುನಿರತ್ನ-ರಾಜರಾಜೇಶ್ವರಿ ನಗರ, ಹಾಲಪ್ಪ ಆಚಾರ್-ಯಲ್ಬುರ್ಗ, ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ, ಬಿ.ಸಿ.ನಾಗೇಶ್-ತಿಪಟೂರು.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ಘಾರ, ಜಯಘೋಷಗಳು ಮುಗಿಲು ಮುಟ್ಟಿದ್ದವು. ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮೂವರು(ಪರಿಶಿಷ್ಟ ಜಾತಿ-ಎಸ್ಸಿ), ಒಬ್ಬರು (ಪರಿಶಿಷ್ಟ ಪಂಗಡ-ಎಸ್ಟಿ), ಏಳು ಮಂದಿ ಹಿಂದುಳಿದ ವರ್ಗ, ಎಂಟು ಲಿಂಗಾಯತ, ಏಳು ಮಂದಿ ಒಕ್ಕಲಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದು, ಇಬ್ಬರು ಬ್ರಾಹ್ಮಣ ಹಾಗೂ ಓರ್ವ ಮಹಿಳೆ ಸೇರಿದಂತೆ ಒಟ್ಟು 29 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದ ಒಟ್ಟು ಹತ್ತು ಮಂದಿ ವಲಸಿಗರಿಗೆ ಸಚಿವ ಸ್ಥಾನ ನೀಡಿದ್ದು, ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿದ್ದ ಆರ್.ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಅವರಿಗೆ ಸ್ಥಾನ ಕೈತಪ್ಪಿದೆ. ಅದೇ ರೀತಿಯಲ್ಲಿ ಜಗದೀಶ್ ಶೆಟ್ಟರ್, ಎಸ್.ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟದಿಂದ ಈ ಬಾರಿ ಕೈಬಿಡಲಾಗಿದೆ.

ಜುಲೈ 28ರಂದು ಅಸ್ತಿತ್ವಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರ ಏಕಸದಸ್ಯ ಸಚಿವ ಸಂಪುಟ ಇಂದು 29 ಮಂದಿ ನೂತನ ಸಚಿವರ ಪ್ರಮಾಣ ವಚನದೊಂದಿಗೆ ಪೂರ್ಣ ಪ್ರಮಾಣದ ರೂಪ ಪಡೆಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಹಲವು ಗಣ್ಯರು ಹಾಗೂ ಅವರ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದು, ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಗಮನಾರ್ಹ ಸಂಗತಿಗಳು: ಪ್ರಮಾಣ ವಚನ ಸ್ವೀಕರಿಸಲು ಆಗಮಿಸಿದ ಬಹುತೇಕ ಶಾಸಕರು ತಮ್ಮ ಕೊರಳಿಗೆ ಕೇಸರಿ ವಸ್ತ್ರವನ್ನು ತೊಟ್ಟಿದ್ದರು. ಬಂಜಾರ ಸಮುದಾಯದ ಆಕರ್ಷಕ ಉಡುಗೆ ತೊಟ್ಟ ಪ್ರಭು ಚೌಹಾಣ್ ಅವರು ತಮ್ಮ ಉಡುಗೆ-ತೊಡುಗೆಯಿಂದ ಎಲ್ಲರ ಗಮನ ಸೆಳೆದರು. ತಡವಾಗಿ ಆಗಮಿಸಿದ ಶಶಿಕಲಾ ಜೊಲ್ಲೆ ಅವರು ಏಕೈಕ ಮಹಿಳಾ ಸದಸ್ಯೆಯಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಎಲ್ಲ ಸಚಿವರೂ ಕನ್ನಡ ಭಾಷೆಯಲ್ಲಿಯೇ ಹಾಗೂ ದೇವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾದರೆ, ಮುರುಗೇಶ್ ಆರ್.ನಿರಾಣಿ ಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ದೇವರ ಜೊತೆಗೆ ರೈತರ ಹೆಸರು ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಶಿವರಾಂ ಹೆಬ್ಬಾರ್ ಹಾಗೂ ಶಶಿಕಲಾ ಜೊಲ್ಲೆ ದೇವರ ಜೊತೆಗೆ ಕ್ಷೇತ್ರದ ಜನರ ಹೆಸರಲ್ಲೂ ಪ್ರಮಾಣ ಮಾಡಿದರು. ಆನಂದ್ ಸಿಂಗ್ ಅವರು ವಿಜಯನಗರದ ಪಂಪ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಹಾಗೂ ಬಿ.ಸಿ.ಪಾಟೀಲ್ ಅವರು ಜಗಜ್ಯೋತಿ ಬಸವೇಶ್ವರ ಹಾಗೂ ರೈತರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಭು ಚೌಹಾಣ್ ಅವರು ಗೋಮಾತೆ ಹಾಗೂ ಸಂತ ಸೇವಾಲಾಲ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)