varthabharthi


ಅಂತಾರಾಷ್ಟ್ರೀಯ

ಬಂಡುಗೋರರ ನೆಲೆಯ ಮೇಲೆ ಸಿರಿಯಾ ದಾಳಿ: 4 ಮಕ್ಕಳ ಮೃತ್ಯು

ವಾರ್ತಾ ಭಾರತಿ : 8 Aug, 2021

ದಮಾಸ್ಕಸ್, ಆ.8: ಬಂಡುಗೋರರ ನೆಲೆಯನ್ನು ಗುರಿಯಾಗಿಸಿ ಸಿರಿಯಾ ಸೇನೆ ನಡೆಸಿದ ಫಿರಂಗಿ ದಾಳಿಯಲ್ಲಿ ಒಂದೇ ಕುಟುಂಬದ 4 ಮಕ್ಕಳು ಮೃತರಾಗಿದ್ದು ಇತರ 5 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.

  ವಾಯವ್ಯ ಸಿರಿಯಾದ ವೈಟ್ ಹೆಲ್ಮೆಟ್ ನಗರದ ಬಳಿಯ ಖ್ವಸ್ತೌನ್ ಗ್ರಾಮದ ಮೇಲೆ ನಡೆದ ಫಿರಂಗಿ ದಾಳಿಯಲ್ಲಿ 4 ಮಕ್ಕಳು ಮೃತಪಟ್ಟು 5 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ, ಮಾನವ ಹಕ್ಕುಗಳಿಗಾಗಿನ ಸಿರಿಯನ್ ವೀಕ್ಷಕ ಸಂಸ್ಥೆ ವರದಿ ಮಾಡಿದೆ. ರಶ್ಯ ಮತ್ತು ಟರ್ಕಿ ಮಧ್ಯಸ್ಥಿಕೆಯಲ್ಲಿ ನಡೆದ ಯುದ್ಧವಿರಾಮ ಒಪ್ಪಂದದ ವ್ಯಾಪ್ತಿಗೆ ಒಳಪಡುವ ವಾಯವ್ಯ ಸಿರಿಯಾದ ಇದ್ಲಿಬ್ ಪ್ರದೇಶದಲ್ಲಿ ಸಿರಿಯಾ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಫಿರಂಗಿ ದಾಳಿ ನಡೆದಿದೆ. ರಶ್ಯವು ಸಿರಿಯಾ ಸರಕಾರಕ್ಕೆ ನೆರವು ನೀಡುತ್ತಿದ್ದರೆ ಟರ್ಕಿ ಸಿರಿಯಾದ ಬಂಡುಗೋರ ಪಡೆಗಳ ನೆರವಿಗೆ ನಿಂತಿದೆ.
   ‌
ಇದ್ಲಿಬ್ ವಲಯದಲ್ಲಿ ಸುಮಾರು 3 ಮಿಲಿಯನ್ ಜನರಿದ್ದು ಇವರಲ್ಲಿ ಹೆಚ್ಚಿನವರು ಕಳೆದೊಂದು ದಶಕದಿಂದ ನಡೆಯುತ್ತಿರುವ ಅಂತರ್ಯುದ್ಧದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆಯಿಂದ ವಲಸೆ ಬಂದವರು. ಈ ಪ್ರದೇಶದಲ್ಲಿ ಈ ಹಿಂದೆ ಅಲ್ಖೈದಾದ ಸಹಸಂಘಟನೆಯಾಗಿದ್ದ ಬಂಡುಗೋರರು ಪ್ರಬಲವಾಗಿದ್ದಾರೆ. 10 ವರ್ಷದ ಸಂಘರ್ಷದ ಬಳಿಕ ಸರಕಾರದ ಕೈತಪ್ಪಿಹೋಗಿರುವ ವಾಯವ್ಯದ ಪ್ರದೇಶಗಳನ್ನು ಮರಳಿ ವಶಕ್ಕೆ ಪಡೆಯುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಸಿರಿಯಾದ ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿರುವ ಬಷರ್ ಅಲ್ ಅಸದ್ ಘೋಷಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)