ಪ್ರತಿಷ್ಠಿತ 'ಎಕ್ಸ್ಪರ್ಟೈಸ್ʼ ಕಂಪೆನಿಯ ಸಿಇಒ ಮುಹಮ್ಮದ್ ಆಸಿಫ್ ರಿಗೆ ಸೌದಿಯ ಭಾರತೀಯ ರಾಯಭಾರಿಯಿಂದ ಸನ್ಮಾನ
ಜುಬೈಲ್: ಸೌದಿ ಅರೇಬಿಯಾದ ಜುಬೈಲ್ ನಲ್ಲಿರುವ ಪ್ರತಿಷ್ಠಿತ ʼಎಕ್ಸ್ಪರ್ಟೈಸ್ʼ ಕಂಪೆನಿಯ ಸಾಮುದಾಯಿಕ ಸೇವೆಗಳಿಗಾಗಿ ಮತ್ತು ಅತ್ಯುತ್ತಮ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಗಿರುವ ಮುಹಮ್ಮದ್ ಆಸಿಫ್ ರನ್ನು ಇತ್ತೀಚಿಗೆ ಸನ್ಮಾನಿಸಲಾಯಿತು.
ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ. ಔಸಾಫ್ ಸಯೀದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಸಾಮುದಾಯಿಕ ಸೇವೆಗಳಿಗಾಗಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಮುದಾಯಕ್ಕಾಗಿ ಸಲ್ಲಿಸುತ್ತಿರುವ ಸೇವೆ, ಮಹತ್ವಾಕಾಂಕ್ಷೆ ಹಾಗೂ ಶ್ರೇಷ್ಠತೆಯ ದೃಷ್ಟಿಕೋನ ಹೊಂದಿರುವ ಮುಹಮ್ಮದ್ ಆಸಿಫ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಹಲವು ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸುಮಾರು 30 ವರ್ಷಗಳ ಹಿಂದೆ ಈ ಕಂಪೆನಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಕರ್ನಿರೆ ಮೂಲದ ಕೆ.ಎಸ್. ಸೈಯದ್ ಹಾಜಿಯವರ ಪುತ್ರರು ಸೌದಿ ಅರೇಬಿಯಾದಲ್ಲಿ ಸ್ಥಾಪಿಸಿದ್ದರು. ಸದ್ಯ ಈ ಕಂಪೆನಿಯು ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ವಿವಿಧ ದೇಶದ, ವಿವಿಧ ಭಾಷೆ, ಸಂಸ್ಕೃತಿಯ ಸಾವಿರಾರು ಮಂದಿ ಇಲ್ಲಿ ಉದ್ಯೋಗಿಯಾಗಿದ್ದಾರೆ.