varthabharthi


ಬೆಂಗಳೂರು

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ: ಡಾ. ಎಂ.ಎನ್.ನಂದೀಶ್ ಹಂಚೆ

ವಾರ್ತಾ ಭಾರತಿ : 10 Aug, 2021

ಬೆಂಗಳೂರು, ಆ.10: ಕನ್ನಡ ಪುಸ್ತಕೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಆಧುನಿಕ ಮಾಧ್ಯಮಗಳ ಸವಾಲುಗಳನ್ನು ಒಳಗೊಂಡ ಹೊಸ ಪುಸ್ತಕ ನೀತಿ ರಚನೆಗೆ ನೂತನ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಕನ್ನಡ ಪುಸ್ತಕ ನೀತಿ ಕರಡು ರಚನೆಗಾಗಿ ರೂಪಿಸಲಾದ ಸಮಿತಿ ಸದಸ್ಯರ ಪ್ರಾಥಮಿಕ ಹಂತದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಪುಸ್ತಕೋದ್ಯಮ ಇಂದು ಸಂಕ್ರಮಣದ ಕಾಲಘಟ್ಟದಲ್ಲಿದೆ. ಈ-ಬುಕ್, ಆಡಿಯೋ ಬುಕ್, ಅಂತರ್ಜಾಲ ಪುಸ್ತಕ ಪ್ರಕಟಣೆ ಮುಂತಾದವು ಕನ್ನಡ ಪುಸ್ತಕೋದ್ಯಮವನ್ನು ಕಾಗದರಹಿತವನ್ನಾಗಿ ಮಾಡಿದೆ ಎಂದರು.

ಅದು ಪುಸ್ತಕೋದ್ಯಮದ ಅನಿವಾರ್ಯ ರೂಪವಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪುಸ್ತಕೋದ್ಯಮ ಅದನ್ನೂ ಒಳಗೊಂಡಂತೆ ಬೆಳೆಯಬೇಕಾಗಿರುವ ಅನಿವಾರ್ಯತೆ ಇದೆ. ಹಾಗಾಗಿ ಈ ಹಿಂದೆ ಡಾ.ಸಿದ್ಧಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ, ಕನ್ನಡ ಪುಸ್ತಕ ನೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂದು ನಂದೀಶ್ ಹಂಚೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಆಧುನಿಕ ಮಾಧ್ಯಮಗಳ ಸವಾಲುಗಳ ಸಹಿತ ಕನ್ನಡ ಪುಸ್ತಕೋದ್ಯಮದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಇದರ ಮುಖ್ಯ ಸಲಹೆಗಾರರಾಗಿ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಕೆಲಸ ಮಾಡಲಿದ್ದಾರೆ. ಇವರ ಜೊತೆ ಸಾಹಿತಿ ವಸುಧೇಂದ್ರ ಸಮಿತಿಯಲ್ಲಿರುತ್ತಾರೆ ಎಂದು ಅವರು ಹೇಳಿದರು.
ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಕಾರ್ಯದರ್ಶಿ ನ.ರವಿಕುಮಾರ್, ಕರ್ನಾಟಕ ಬರಹಗಾರರು ಮತ್ತು ಲೇಖಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜರ್ಕಳ ಗಿರೀಶ್ ಭಟ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‍ಕುಮಾರ್ ಎಸ್.ಹೊಸಮನಿ, ಮೈಸೂರು ವಿಶ್ವವಿದ್ಯಾಲಯದ ನಿರ್ದೇಶಕಿ ವಿಜಯಕುಮಾರಿ ಕರೀಕಲ್ಲು, ಹಂಪಿ ವಿಶ್ವವಿದ್ಯಾಲಯದ ನಿರ್ದೇಶಕ    ಡಾ.ಎಚ್.ಡಿ.ಪ್ರಶಾಂತ್, ವೈ.ಜಿ.ಮುರಳೀಧರನ್, ಕಾನೂನು ಇಲಾಖೆ ಕಾರ್ಯರ್ಶಿಗಳ ಪರವಾಗಿ  ಎಸ್. ಅರುಣ್, ಇ-ಆಡಳಿತ (ಕೇಂದ್ರ) ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರವಾಗಿ ಪುಷ್ಪಾ ಎಂ, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೆ.ರಾಜಕುಮಾರ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಮತ್ತು ಸಹಾಯಕ ನಿರ್ದೇಶಕಿ ಸೌಭಾಗ್ಯ ಭಾಗವಹಿಸಿದ್ದರು.

ಸಭೆಯಲ್ಲಿ ಪುಸ್ತಕ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಮಾಡಿ ಕನ್ನಡ ಪುಸ್ತಕ ನೀತಿ ರಚನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಡಾ.ಎಂ.ಎನ್. ನಂದೀಶ್ ಹಂಚೆ ತಿಳಿಸಿದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)