varthabharthi


ಅನುಗಾಲ

ದೇಶದ (ಅ)ಮೃತ ಮಹೋತ್ಸವ

ವಾರ್ತಾ ಭಾರತಿ : 12 Aug, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪ್ರತೀ ಬಾರಿಯೂ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜವು ಏರುವಾಗ, ಅರಳುವಾಗ ಮನಸ್ಸುಗಳು ಅರಳಬೇಕು. ಹಾಗಿದೆಯೇ ದೇಶದ ಸ್ಥಿತಿ? ಮಂಜುಗಣ್ಣುಗಳು ನೋವಿನಿಂದ ಕಳೆದ ಏಳೂವರೆ ದಶಕಗಳ ಕಡೆಗೆ ಹೊರಳುತ್ತವೆ; ಮರಳುತ್ತವೆ. ಪ್ರಾಯಃ ಈಗಿರುವ ಏಕಮುಖಿ ಸಾಂಸ್ಕೃತಿಕ ಪ್ರವಾಹದ, ಮತಾಂಧತೆಯ ಸ್ಥಿತಿ ಮುಂದುವರಿದರೆ ಮುಂದಿನ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಕೆಂಪುಕೋಟೆಯೂ ಪರಕೀಯ ದಾಳಿಯ ಕುರುಹಾಗಿ ಕಂಡು ನಮ್ಮ ದೇಶಭಕ್ತರ ಕೈಯಲ್ಲಿ ನಿರ್ನಾಮವಾಗಬಹುದು.

ದೇಶವು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸುವ ಹೊತ್ತಿಗೆ ಭಾರತಮಾತೆಗೆ ವಯಸ್ಸು, ಕಾಯಿಲೆ, ಚಿಂತೆ ಅವರಿಸಿದಂತಾಗಿ ಬೆನ್ನು ಬಾಗಿದಂತಿದೆ. ಮನುಷ್ಯರ ಆಯುಸ್ಸಿನ ಲೆಕ್ಕವಾದರೆ ಮೃತ್ಯುವಿನ ಸಮೀಪದ ಘಟ್ಟವೇ ಅಮೃತ ಮಹೋತ್ಸವ. ಎಂತಹ ಅಶುಭ ವ್ಯಂಗ್ಯ ಎನ್ನಿಸಬಹುದು. ಸತ್ಯ ಯಾವಾಗಲೂ ಚುಚ್ಚುಮದ್ದೇ. ಈಗ ಏನಿದ್ದರೂ ಪ್ರಕ್ಷುಬ್ಧ ಭಾರತಕ್ಕೆ ಹೊಸ ನಿರೂಪಣೆ ನೀಡುವುದಷ್ಟೇ ಸಾಧ್ಯ. ಏನಾದರಾಗಲಿ, ಮತ್ತೆ ದೇಶವು ಮೈಕೊಡವಿಕೊಂಡು ಏಳುತ್ತದೆಂಬ ಆಸೆಯಷ್ಟೇ ನಮ್ಮ ಮುಖದಲ್ಲಿ ನಗುವಿನ ಮುಗುಳನ್ನು ತರಬಹುದು. ಈಗ ಕೋವಿಡ್-19ರ ಪರಿಣಾಮವಾಗಿ ಮುಖಕ್ಕೆ ಕವಚ ಹಾಕಿಕೊಳ್ಳುವುದರಿಂದ ಅದು ಕಾಣದು.

 ಮ್ಯಾಕ್ಸ್ ಮುಲ್ಲರ್ ಎಂಬ ಜರ್ಮನ್ ವಿದ್ವಾಂಸನು ‘‘ಎಲ್ಲ ಪ್ರಾಕೃತಿಕ ಸಂಪತ್ತು, ಶಕ್ತಿ ಮತ್ತು ಸೌಂದರ್ಯವನ್ನು ಅನುಗ್ರಹಿಸಿಕೊಂಡ ಮತ್ತು ಕೆಲವೆಡೆ ಭೂಮಿಯ ಮೇಲಣ ಸ್ವರ್ಗವನ್ನು ಅನುಭವಿಸಬಹುದಾದ ಒಂದು ದೇಶವನ್ನು ಕಾಣಬೇಕೆಂದರೆ ಭಾರತದ ಕಡೆಗೆ ಕೈತೋರಿಸಬೇಕಾಗುತ್ತದೆ. ಯಾವ ಆಕಾಶದಡಿಯಲ್ಲಿ ಮನುಷ್ಯನ ಮನಸ್ಸು ಪರಿಪೂರ್ಣತೆಯಿಂದ ತುಂಬಿದೆ ಮತ್ತು ಬದುಕಿನ ಮಹತ್ವದ ಸಮಸ್ಯೆಗಳ ಬಗ್ಗೆ ಆಳವಾಗಿ ಚಿಂತಿಸಿದೆ ಮತ್ತು ಪ್ಲೆಟೋ ಮತ್ತು ಕ್ಯಾಂಟ್‌ನಂತಹವರ ಗಮನವನ್ನೂ ಸೆಳೆಯುವಂತಹ ರೀತಿಯಲ್ಲಿ’’ ಎಂದು ಹೇಳಿದರೆ ಖ್ಯಾತ ಅರ್ನಾಲ್ಡ್ ಟಾಯ್ನಬೀ ‘‘ಮನುಷ್ಯಕುಲವು ತನ್ನನ್ನು ತಾನೇ ನಾಶಗೊಳಿಸದಿರಬೇಕಾದರೆ ಪಾಶ್ಚಾತ್ಯರಿಂದ ಅರಂಭವಾಗುವ ಯಾವುದೇ ಅಧ್ಯಾಯವೂ ಭಾರತೀಯವಾದ ಚಿಂತನೆಯೊಂದಿಗೇ ಮುಗಿಯಬೇಕಾಗುತ್ತದೆ’’ ಎನ್ನುತ್ತಾನೆ.

ಇವು ವಿಶ್ವದ ಎಲ್ಲೆಡೆಯಿಂದ ಕೇಳಿಬರುತ್ತಿದ್ದ ಮತ್ತು ನಮಗೆ ತುಂಬಾ ಸಂತೋಷ ಮತ್ತು ಉಲ್ಲಾಸವನ್ನು ನೀಡುತ್ತಿದ್ದ ಮತ್ತು ನೀಡಬಲ್ಲ ಮಾತುಗಳು. ಇವುಗಳ ಸತ್ಯಾಸತ್ಯತೆಯನ್ನು ಮತ್ತು ಈ ಮೆಚ್ಚುಮಾತುಗಳಿಗೆ ನಮ್ಮ ಅರ್ಹತೆಯನ್ನು, ಯೋಗ್ಯತೆಯನ್ನು, ನಿಕಷಕ್ಕೊಡ್ಡಬಲ್ಲ ಸ್ಥಿತಿಯನ್ನು ನಾವೀಗ ತಲುಪಿದ್ದೇವೆಯೇ?

 ಇಂದು ದೇಶದ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ದೇಶದ, ಸಮಾಜದ ಹಿತಕ್ಕೆ ಪೂರಕವಾಗುವ ಸುದ್ದಿಗಳಲ್ಲ. ಒಂದೋ ಭಟ್ಟಂಗಿಗಳಂತೆ ಹೊಗಳಿಕೆ; ಇಲ್ಲವೇ ದ್ವೇಷದ ತೆಗಳಿಕೆ. ತಂತ್ರಜ್ಞಾನದ ಪ್ರಮುಖ ಕೊಡುಗೆಯೆನ್ನಬಹುದಾದ ದೃಶ್ಯ ಮಾಧ್ಯಮಗಳು ಸದಾ ಕೊಳ್ಳ್ಳಿದೆವ್ವಗಳಂತೆ ದೊಂದಿ ಹಿಡಿದು ಸುತ್ತುತ್ತಿವೆ. ಅಲ್ಲಿ ಗಂಭೀರವಾದ ಚರ್ಚೆಗಳಾಗಲಿ, ಚಿಂತನೆಗಳಾಗಲಿ ನಡೆಯುತ್ತಿಲ್ಲ. ಬದಲಾಗಿ ಹೊಡಿ-ಬಡಿ ಸಂಸ್ಕೃತಿಯ ಎತ್ತರದ ಕ್ರೂರ ದನಿಯೆತ್ತುವವರನ್ನೇ ನಾಯಕಪಾತ್ರಗಳಲ್ಲಿ ಕಾಣುತ್ತೇವೆ. ಕರ್ನಾಟಕದ ಸಚಿವರೊಬ್ಬರು ಕಣ್ಣಿಗೆ ಕಣ್ಣು ಅಲ್ಲ- ಒಂದು ಕಣ್ಣಿಗೆ ಎರಡು ಕಣ್ಣು ಎಂಬ ರೀತಿಯಲ್ಲಿ ತೊಡೆತಟ್ಟಿದರು. ಎಷ್ಟು ಪ್ರಚೋದನಾಕಾರಿಯಾಗಿ ಮಾತನಾಡಿದರೆ ಅಷ್ಟು ಪ್ರಭಾವಶಾಲಿಗಳೆಂದು ಗುರುತಿಸಿಕೊಳ್ಳುವ ಹಂತಕ್ಕೆ ದೇಶದ ರಾಜಕೀಯವು ತಲುಪಿದೆ. ಗಡಿಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆಂಬುದು ದೇಶದ ಪ್ರಧಾನಿಯಾಗಲಿ ವಿದೇಶಾಂಗ, ರಕ್ಷಣಾ ಸಚಿವರ ಮಾತಾಗಿ ಉಳಿದಿಲ್ಲ; ಅದೀಗ ರಾಜ್ಯದ ಮುಖ್ಯಮಂತ್ರಿಗಳ ಘೋಷಣೆಯಾಗಿದೆ. ಸಂಸದರು, ಶಾಸಕರು ಎಷ್ಟು ಬಲಿಷ್ಠರಾಗಿದ್ದಾರೆಂದರೆ ಅವರ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳನ್ನು ಅವರು ಒಂದು ಸರಕಾರಿ ಆದೇಶದ ಮೂಲಕ ನಿವಾಳಿಸಬಲ್ಲರು. ಸರ್ವೋಚ್ಚ ನ್ಯಾಯಾಲಯವೇ ಇಂತಹ ಪ್ರಕರಣಗಳನ್ನು ಉಚ್ಚ ನ್ಯಾಯಾಲಯಗಳ ಆದೇಶದ ಹೊರತಾಗಿ ಹಿಂಪಡೆಯಲಾಗದೆಂದು ಎಚ್ಚರಿಸಬೇಕಾಯಿತು. ಪೊಲೀಸು ಮತ್ತು ಸಿಬಿಐಯ ಕುರಿತೂ ಸರ್ವೋಚ್ಚ ನ್ಯಾಯಾಲಯವು ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಸರಕಾರದ ಪ್ರತೀ ನಡೆಯೂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದರೂ ಅದರ ಪರಿಣಾಮ ಯಾವ ಹಸನನ್ನೂ ತಂದಂತಿಲ್ಲ. ಯಾವುದೇ ಪ್ರತಿಭಟನೆಯನ್ನೂ ಪೊಲೀಸರ ಮೂಲಕ ಹೊಸಕಿಹಾಕಬಹುದೆಂದು ಸರಕಾರ ತಿಳಿದಂತಿದೆ. ವಿದ್ಯಾವಂತರ, ಚಿಂತಕರ, ನಿವೃತ್ತ ಉನ್ನತಾಧಿಕಾರಿಗಳ, ನ್ಯಾಯಮೂರ್ತಿಗಳ ಯಾವ ಅಸಮಾಧಾನವೂ ಸರಕಾರವನ್ನು ಎಚ್ಚರಿಸುತ್ತಿಲ್ಲ. ಸೈನ್ಯವೂ ನಿಧಾನವಾಗಿ ಮತ-ಧರ್ಮ-ರಾಜಕೀಯಗೊಳ್ಳುತ್ತಿದೆ. ವಿದೇಶೀಯರು ನೀಡುವ ಪ್ರಶಸ್ತಿ ಪತ್ರಗಳನ್ನು ಅತ್ಯಂತ ಹೆಮ್ಮೆಯಿಂದ ಧರಿಸುವ ನಾವು ಅವರ ಟೀಕೆಯನ್ನು ಪ್ರಬಲವಾಗಿ ಪ್ರತಿಭಟಿಸುತ್ತೇವೆ ಮತ್ತು/ಅಥವಾ ನಿರ್ಲಕ್ಷಿಸುತ್ತೇವೆ. ನಮ್ಮ ಮತಾಂಧತೆಯ ಪರಿಣಾಮವಾಗಿ ಅಥವಾ ಇಂತಹ ಮತಾಂಧರು ಭಾರತಭೂಖಂಡದ ನೆರೆಹೊರೆಯಲ್ಲೂ ಇದ್ದಾರೆಂಬುದನ್ನು ಸಾಬೀತುಪಡಿಸುವಂತೆ ಪಾಕಿಸ್ತಾನದಲ್ಲಿ ಹಿಂದೂದೇವಾಲಯಕ್ಕೆ ಹಾನಿಯಾಗಿದೆ; ಬಾಂಗ್ಲಾದೇಶದಲ್ಲಿ ನಾಲ್ಕು ದೇವಾಲಯಗಳು ನಾಶಗೊಂಡಿವೆ. (ಈ ಪೈಕಿ ಪಾಕಿಸ್ತಾನವು ಈ ಹಾನಿಗೆ ಕಾರಣರಾದವರ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಿದೆಯೆಂದು ಮತ್ತು ಹಾನಿಗೊಂಡ ದೇವಾಲಯವನ್ನು ದುರಸ್ತಿಮಾಡಿ ಹಿಂದೂಗಳಿಗೆ ಮರಳಿಸಿದೆಯೆಂದು ವರದಿಯಾಗಿದೆ.) ವಿದೇಶಗಳಲ್ಲಿ ಪ್ರಜೆಗಳ ಉಸಿರನ್ನು ಹತ್ತಿಕ್ಕುವ ಯತ್ನಗಳನ್ನು ಖಂಡಿಸುವ ನಮ್ಮ ಸರಕಾರವು ಇಲ್ಲಿ ಅದನ್ನು ಅಷ್ಟೇ ಕ್ರೂರವಾಗಿ ಹತ್ತಿಕ್ಕುತ್ತಿದೆ. ಹೆಸರು ಬದಲಾಯಿಸುವ ಉತ್ಸಾಹದಲ್ಲಿ ಭಾರತವು ತನ್ನನ್ನು ತಾಲಿಬಾನಿಗಳೂ ನಾಚುವಂತೆ ಬದಲಾಯಿಸಿಕೊಳ್ಳುತ್ತಿದೆ. ಸರ್ವಾಧಿಕಾರವನ್ನು ಕಾಗದದಲ್ಲಿ ವಿರೋಧಿಸುವ ನಮ್ಮ ಆಡಳಿತವು ಅದನ್ನು ಇಲ್ಲಿ ನಿತ್ಯ ವ್ಯಾಯಾಮವಾಗಿ ಅಭ್ಯಸಿಸುತ್ತಿದೆ ಮತ್ತು ಅನುಷ್ಠಾನಗೊಳಿಸುತ್ತಿದೆ; ಮತ್ತು ಪ್ರಜೆಗಳು ಅಷ್ಟೇ ವಿನಮ್ರರಾಗಿ ತಲೆಬಾಗುತ್ತಾರೆ. ಈ ನಡುವೆ ಅಸಹಾಯಕರ ನೋವಿನ ದನಿ ಯಾರಿಗೂ ಕೇಳದು. ಈಗ ಪ್ರಜಾತಂತ್ರವನ್ನು ಅಳಿವಿನತ್ತ ನೂಕುತ್ತ ನಾವು ಸದ್ಯವೇ ಹೊಸದಿಲ್ಲಿಯಲ್ಲಿ ನಮ್ಮ ಹೊಸ ಸಂಸದ್ ಭವನ, ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಹಿಂಸಿಸುತ್ತ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಮಾಡಬಹುದು. ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಿದೆವೆಂದುಕೊಂಡು ಅಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಯನ್ನು ನಿರ್ಲಕ್ಷಿಸಬಹುದು. ಬೆಲೆಯೇರಿಕೆಯನ್ನು ನಮ್ಮ ಸಾಧನೆಯೆಂದು ಬಿಂಬಿಸಿಕೊಂಡು ದೊಡ್ಡದೊಡ್ಡ ಜಾಹೀರಾತುಗಳನ್ನು ಅಳವಡಿಸಬಹುದು.

ಈಗಿರುವುದು ನೈಜ ಪ್ರಜಾಪ್ರಭುತ್ವವೆಂದು ಯಾರಾದರೂ ಹೇಳಿದರೆ ‘ಹುಂ...’ ಎಂದು ನಿಟ್ಟುಸಿರಿನ ಒಪ್ಪಿಗೆಯನ್ನು ನೀಡಬಹುದು. ಏಕೆಂದರೆ ಪ್ರಜೆಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅನವಶ್ಯಕವಾಗಿ ದಬ್ಬಾಳಿಕೆ ನಡೆಸುವ ಪೊಲೀಸರು ಇಂತಹ ಪ್ರಸಂಗಗಳಲ್ಲಿ ಮಾತ್ರ ಕೈಕಟ್ಟಿಕೊಂಡು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿರುತ್ತಾರೆ. ಬಹುಪಾಲು ಕ್ರಿಮಿನಲ್ ರಾಜಕಾರಣಿಗಳೇ- ಮತ್ತು ಅವರನ್ನು ಪುನರುಚ್ಚರಿಸುವ ಗಿಳಿಗಳೇ- ಈ ದೇಶದ ಸ್ವಾತಂತ್ರ್ಯದ ಆದರ್ಶ ನಿರೂಪಕರಾಗಿರುವುದರಿಂದ ನಾವು ಎಂತಹ ವೈಫಲ್ಯಗಳನ್ನು, ಸಂದಿಗ್ಧಗಳನ್ನು, ಸಂಘರ್ಷಗಳನ್ನು, ಕ್ಷೋಭೆಗಳನ್ನು ಅನುಭವಿಸಿದರೂ ಅವನ್ನು ಬಹುಮತದ ಸುಳ್ಳಿನಿಂದ, ಜಾಣ ಮರೆವಿನಿಂದ ಅಥವಾ ಕೃತಕ ಕುರುಡಿನಿಂದ, ದೂರಮಾಡಿಕೊಂಡು ನಾವೇ ನಮ್ಮ ಬೆನ್ನನ್ನು ತಟ್ಟಿಕೊಂಡು ಸಂಭ್ರಮಿಸುತ್ತೇವೆ. ಸಂಭ್ರಮಿಸೋಣ; ಅಡ್ಡಿಯಿಲ್ಲ. ಆದರೆ ನಮ್ಮ ನಡುವೆ ಉಪವಾಸಿಗಳನ್ನು, ಅಳುವ ಅಸಹಾಯಕರನ್ನು ನಾವೇ ಸೃಷ್ಟಿಮಾಡಿ ಅವರ ನಡುವೆ ಸಂಭ್ರಮಿಸುವುದು ಮನುಷ್ಯವಿರೋಧಿ, ಜೀವ ವಿರೋಧಿಯಾಗಿರುವ ಅಕ್ಷಮ್ಯ ಗುಣ.

ಪ್ರತೀ ಬಾರಿಯೂ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜವು ಏರುವಾಗ, ಅರಳುವಾಗ ಮನಸ್ಸುಗಳು ಅರಳಬೇಕು. ಹಾಗಿದೆಯೇ ದೇಶದ ಸ್ಥಿತಿ? ಮಂಜುಗಣ್ಣುಗಳು ನೋವಿನಿಂದ ಕಳೆದ ಏಳೂವರೆ ದಶಕಗಳ ಕಡೆಗೆ ಹೊರಳುತ್ತವೆ; ಮರಳುತ್ತವೆ. ಪ್ರಾಯಃ ಈಗಿರುವ ಏಕಮುಖಿ ಸಾಂಸ್ಕೃತಿಕ ಪ್ರವಾಹದ, ಮತಾಂಧತೆಯ ಸ್ಥಿತಿ ಮುಂದುವರಿದರೆ ಮುಂದಿನ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಕೆಂಪುಕೋಟೆಯೂ ಪರಕೀಯ ದಾಳಿಯ ಕುರುಹಾಗಿ ಕಂಡು ನಮ್ಮ ದೇಶಭಕ್ತರ ಕೈಯಲ್ಲಿ ನಿರ್ನಾಮವಾಗಬಹುದು. ತಾಜ್‌ಮಹಲನ್ನು ಆದಷ್ಟು ಬೇಗ ನೋಡಿಬರುವುದು ಒಳ್ಳೆಯದೆಂದು ಹಿರಿಯರೊಬ್ಬರು ಸಲಹೆ ನೀಡಿದರು. ತಮಾಷೆ ಮತ್ತು ವಿಷಾದ ಬೆರೆತ ಧ್ವನಿಯಲ್ಲಿ ಯಾರೋ ಒಬ್ಬರು ‘‘ಸದ್ಯವೇ ಗಾಂಧಿಯ ಫೋಟೊ ನಮ್ಮ ಕರೆನ್ಸಿ ನೋಟುಗಳಿಂದ ಮಾಯವಾದರೆ ಅಚ್ಚರಿಯಿಲ್ಲ’’ ಎಂದರು; ಇರಬಹುದು. ಏಕೆಂದರೆ ಅವರ ಒಲವು ನಿಲುವುಗಳನ್ನು ಒಪ್ಪದವರೂ ಅವರಂತಹ ಸಾಧಕ ಬೇರೆ ಇಲ್ಲವೆಂಬ ಪ್ರಾಂಜಲ ಶ್ರದ್ಧಾಗೌರವದಿಂದ ಅವರನ್ನು ರಾಷ್ಟ್ರಪಿತನೆಂದು ಸಮ್ಮಾನಿಸುತ್ತ ಗಾಂಧಿಯಂಥವರನ್ನು ನಾವು ಮತ್ತೆ ನೋಡಲಾರೆವು ಎನ್ನುತ್ತಿದ್ದರೆ, ಈಗ ಪರಿವರ್ತಿತ ರಾಷ್ಟ್ರಭಕ್ತರ ಸಮಾಜ ಈ ನಂಬಿಕೆಯನ್ನು ನಿಧಾನಕ್ಕಾದರೂ ಮರೆಯಾಗಿಸುತ್ತಿದೆ; ಅವರನ್ನು ಹತ್ಯೆಗೈದವನೇ ನಾಯಕನಟನಾಗುವ ಸ್ಥಿತಿ ಬಂದರೂ ಬರಬಹುದು; ಬಾರದಿರಲಿ ಎಂದು ಹಾರೈಸೋಣ.

ಸ್ವಾತಂತ್ರ್ಯ ಸಿಗುವ ನಿಕಟಪೂರ್ವದಲ್ಲಿ ಅಂದರೆ 1946ರ ಡಿಸೆಂಬರ್ 9ರಂದು ಸಂವಿಧಾನ ಸಭೆ ಆರಂಭವಾದಾಗ ಅದರ ತತ್ಕಾಲೀನ ಅಧ್ಯಕ್ಷರಾಗಿದ್ದ ಸಚ್ಚಿದಾನಂದ ಸಿನ್ಹಾ ಅವರು ಜೋಸೆಫ್‌ಸ್ಟೋರಿಯ ಈ ಮಾತುಗಳನ್ನು ಉಲ್ಲೇಖಿಸಿದರೆಂಬುದನ್ನು ನಮ್ಮ ಕಾಲದ ಮತ್ತು ಈ ದೇಶ ಕಂಡ ಶ್ರೇಷ್ಠ ನ್ಯಾಯವಾದಿಗಳಲ್ಲಿ ಒಬ್ಬರಾದ ನಾನೀಪಾಲ್ಕಿವಾಲಾ ಸ್ಮರಿಸುತ್ತಾರೆ:

‘‘ಈ ಆಕೃತಿಯನ್ನು ಅತ್ಯಂತ ಕೌಶಲ್ಯ ಮತ್ತು ಅರಿವಿರುವ ಶಿಲ್ಪಿಗಳು ಕಡೆದಿದ್ದಾರೆ; ಇದರ ಬುನಾದಿಯು ಸುದೃಢವಾಗಿದೆ; ಇದರ ಪರಿಕರಗಳು ಸುಂದರವೂ ಪ್ರಯೋಜನಕಾರಿಯೂ ಆಗಿವೆ; ಇದರ ವ್ಯವಸ್ಥೆಯು ಪ್ರಜ್ಞಾವಂತಿಕೆ ಮತ್ತು ಶಿಸ್ತನ್ನು ತುಂಬಿಕೊಂಡಿದೆ; ಇದರ ಪ್ರತಿಪಾದನೆಗಳು ಹೊರಗಿನ ಯಾವ ಶಕ್ತಿಯನ್ನೂ ಎದುರಿಸಬಲ್ಲುದು. ಮನುಷ್ಯ ನಿರ್ಮಿತಿಯು ಅಂತಹ ಪ್ರಶಸ್ತಿಯನ್ನು ಅಪೇಕ್ಷೆಪಟ್ಟಲ್ಲಿ ಇದು ಅವಿನಾಶಿಯೂ ಆಗಬಲ್ಲುದು. ಇಷ್ಟಾದರೂ ಇದು ತಪ್ಪುಗಳಿಂದ, ಭ್ರಷ್ಟಾಚಾರದಿಂದ ಮತ್ತು ಅದರ ಪಾಲಕರಾದ ಪ್ರಜೆಗಳ ನಿರ್ಲಕ್ಷದಿಂದ ಒಂದು ಘಳಿಗೆಯಲ್ಲಿ ನಾಶವಾಗಬಹುದು. ನಿಮ್ಮ ಪರಿಗಣನೆಗೆ ನಾನು ಹೇಳುವುದಾದರೆ- ಪ್ರಜಾಪ್ರಭುತ್ವಗಳು ಸೃಷ್ಟಿಯಾಗಿರುವುದೇ ಪ್ರಜೆಗಳ ಯೋಗ್ಯತೆ, ಸಾರ್ವಜನಿಕ ಕಾಳಜಿ ಮತ್ತು ಮತ್ತು ಬುದ್ಧಿವಂತಿಕೆಯಿಂದ. ಅವು ಕುಸಿಯುವುದು ಯಾವಾಗೆಂದರೆ ಬುದ್ಧಿವಂತರನ್ನು ಅವರ ಪ್ರಾಮಾಣಿಕತೆಯ ಕಾರಣಕ್ಕಾಗಿ ಸಾರ್ವಜನಿಕ ಪರಿಷತ್ತುಗಳಿಂದ ದೂರವಿಡುವುದರಿಂದ ಮತ್ತು ದುರಾಚಾರಿಗಳನ್ನು ಅವರು ಪ್ರಜೆಗಳನ್ನು ಹೊಗಳಿ ಮೋಸಮಾಡುವ ಗುಣಕ್ಕಾಗಿಯೇ ಪುರಸ್ಕರಿಸುವುದರಿಂದ’’.

1970ರ ದಶಕದಲ್ಲಿ ಈ ಮಾತುಗಳನ್ನು ನೆನಪಿಸಿ ನಾನೀಪಾಲ್ಕಿವಾಲಾ ಇದನ್ನು ಭವಿಷ್ಯವಾಣಿಯೆನ್ನುತ್ತಾರೆ. ಹೌದು; 1975ರ ತುರ್ತುಪರಿಸ್ಥಿತಿಯು ಜನರಿಗೆ ಪ್ರಜಾಪ್ರಭುತ್ವದಲ್ಲಿದ್ದ ನಂಬಿಕೆಯನ್ನು ಹುಸಿಯಾಗಿಸಿತು. ಆದರೂ ಭಾರತವು ಫೀನಿಕ್ಸ್ ಹಕ್ಕಿಯಂತೆ ಪುನರ್ಭವಿಸಿತಾದರೂ ಜೋಸೆಫ್‌ಸ್ಟೋರಿ ಹೇಳಿದ ಅಪಾಯಕಾರಿ ಚಿಹ್ನೆಗಳು-ರಾಜಕಾರಣಿಗಳ ಭ್ರಷ್ಟಾಚಾರ, ಪ್ರಜೆಗಳ ನಿರಾಸಕ್ತಿ, ಮತ್ತು ಪ್ರಜ್ಞಾವಂತರ ಅಸಡ್ಡೆ-ಯಿಂದ ಅಭಿವೃದ್ಧಿಯ ಹೆಸರಿನಲ್ಲಿ ಅನಾಗರಿಕತೆಯ ಅವನತಿಯತ್ತಲೇ ನಡೆಯಿತು.

1970ರ ದಶಕಕ್ಕೂ ವರ್ತಮಾನಕ್ಕೂ ಇರುವ ಮುಖ್ಯ ವ್ಯತ್ಯಾಸವೆಂದರೆ ಆಗ ವಿದ್ಯಾವಂತರ ಸಂಖ್ಯೆ ಕಡಿಮೆಯಿತ್ತು; ಈಗ ಅದು ಹೆಚ್ಚಾಗಿದೆ. ಬಡವರ ಸಂಖ್ಯೆಯು ಕಡಿಮೆಯಾಗಿದೆಯೆಂಬ ಭ್ರಮೆಯಲ್ಲಿ ನಾವಿದ್ದೇವೆ; ಆದರೆ ನಮ್ಮ ಜನಸಂಖ್ಯೆಯು 140 ಕೋಟಿಗೆ ಹತ್ತಿರವಾಗಿದೆಯೆಂಬುದನ್ನು ಮತ್ತು ಬಡವ-ಶ್ರೀಮಂತರ ನಡುವಣ ಅಂತರವು ಹೆಚ್ಚಾಗಿದೆಯೆಂಬುದನ್ನು ಮರೆಯುತ್ತೇವೆ. ಮನಸ್ಥಿತಿಗೆ ಯಾವ ಶಿಕ್ಷಣವೂ ಹತ್ತುವುದಿಲ್ಲವೆಂಬುದಕ್ಕೆ ಭಾರತವೂ ಇತರ ಅನೇಕ ರಾಷ್ಟ್ರಗಳೊಂದಿಗೆ ಉದಾಹರಣೆಯಾಗಿ ನಿಲ್ಲುತ್ತಿದೆ. ಸರಕಾರದ ದುರಾಡಳಿತದ ಸಂಕಟದಿಂದ ಪಾರಾಗಬೇಕಾದರೆ ನ್ಯಾಯಾಲಯದ ಮೊರೆಹೊಗುವುದು ಅನಿವಾರ್ಯವಾಗುತ್ತಿದೆ. ಆದರೆ ಇದು ಎಷ್ಟು ಜನರಿಗೆ ಸಾಧ್ಯ?

ವಿಶ್ವದಲ್ಲಿ ಎಂದೂ ಭಾರತದ ಸ್ಥಾನವಿದ್ದದ್ದು ಶ್ರೀಮಂತ ರಾಷ್ಟ್ರವೆಂದಲ್ಲ. ಬದಲಾಗಿ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವವಾಗಿ; ಇಲ್ಲಿನ ಜನರು ತೋರುತ್ತಿದ್ದ ಅಪಾರ ಸ್ನೇಹ-ಸಹನೆಯ ಸಮಾಜವಾಗಿ; ಬಹುಮುಖಿ ಸಂಸ್ಕೃತಿಯ ಸಮಾಜವಾಗಿ. ಇಲ್ಲಿ ಅಮರ್ ಅಕ್ಬರ್ ಅಂತೋನಿ ಸಿನೆಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಒಟ್ಟಾಗಿ ಬದುಕುತ್ತಿದ್ದರು. 1947ರ ಭಾರತ ವಿಭಜನೆಯ ಸಂದರ್ಭದಲ್ಲಿ ಅನಿವಾರ್ಯವಾಗಿ ಆಗಿರುವ ಹಿಂಸೆಯ ಹೊರತಾಗಿ ಈ ಮಣ್ಣಿನಲ್ಲಿ ಮತಭೇದಗಳು ಮನೆಯೊಳಗೆ, ಹೆಚ್ಚೆಂದರೆ ಅವರವರ ಪೂಜಾಕ್ಷೇತ್ರಗಳಲ್ಲಿರುತ್ತಿದ್ದವು. ಬೀದಿಗಿಳಿದರೆ ಸಾಕು ಎಲ್ಲರೂ ಒಂದೇ ಎಂಬ ಅಹಮಿಕೆಯ ಸೌಂದರ್ಯವಿತ್ತು. ತುರ್ತುಸ್ಥಿತಿಯ ಹೊರತಾಗಿಯೂ 1984ರವರೆಗೆ ಭಾರೀ ಹಿಂಸೆಯ ಖಾಂಡವವನದಹನವಾಗಿರಲಿಲ್ಲ. ಆದರೆ ಆನಂತರ ಒಂದೊಂದೇ ಭಿನ್ನತೆಗಳು ನಮ್ಮ ಭ್ರಷ್ಟರಾಜಕಾರಣ ಕಾರಣವಾಗಿ ಟಿಸಿಲೊಡೆದವು. ದಿಲ್ಲಿಯ 1984ರ ಸಿಖ್ ಹತ್ಯಾಕಾಂಡವು ಮತ್ತೆ ಪುನರಾವರ್ತನೆಯಾದದ್ದು ಧರ್ಮದ ಹೆಸರಲ್ಲೇ- 2002ರ ಗುಜರಾತಿನಲ್ಲಿ. ಹಾಗೆ ನೋಡಿದರೆ ಅಯೋಧ್ಯೆಯ ಮಂದಿರ ಚಳವಳಿಯು ಪ್ರಕ್ಷುಬ್ಧತೆಯನ್ನು ಸೃಷ್ಟಿಸಿದರೂ ಹೇಳಬಹುದಾದಷ್ಟು ಮನುಷ್ಯಜೀವಗಳನ್ನು ಬಲಿತೆಗೆದುಕೊಂಡಿರಲಿಲ್ಲ. ಆದರೆ ಈ ಆಂದೋಲನವು ಧಾರ್ಮಿಕ ಉತ್ಸಾಹಕ್ಕಿಂತಲೂ ಮತೀಯ ವಿಷವನ್ನು ಹೆಚ್ಚಿಸಿ ಇತರ ಎಲ್ಲ ದುರಂತಗಳನ್ನೂ ಮೀರಿಸಿತೆಂಬುದೇ ಆಘಾತಕಾರಿ ವಿಚಾರ. ಪ್ರಾಯಃ ನಮ್ಮ ರಾಜಕಾರಣಕ್ಕೆ ಬೇಕಾದ್ದು ಇದೇ. ಪರಿಣಾಮವಾಗಿ ದೇಶವು ಇಂದು ಯಾವಾಗ ಬೇಕಾದರೂ ಸಿಡಿಯಬಲ್ಲ, ಉಕ್ಕಬಲ್ಲ ಒಂದು ಅಪಾಯಕಾರಿ ಜ್ವಾಲಾಮುಖಿಯಂತೆ ಒಳಗೊಳಗೇ ಸುಡುತ್ತಿದೆ. ಮನೆಯೊಳಗೆ ಹಾವು ಬಂದು ಕಾಣಸಿಗದಂತೆ ಎಲ್ಲಕಡೆ, ಸಂಶಯದಿಂದ, ಭಯದಿಂದ, ಆತಂಕದಿಂದ ನಡೆದಾಡುವ ಪರಿಸ್ಥಿತಿಯಿದೆ. ಯಾವ ದೇಶದ ಆಡಳಿತವು ತನ್ನ ಸುಭದ್ರತೆಗಾಗಿ ಮತ್ತು ಪ್ರಜಾನಿಯಂತ್ರಣಕ್ಕಾಗಿ ಪ್ರಜೆಗಳ ಪ್ರೀತಿ-ಗೌರವದ ಬದಲು ಪೊಲೀಸರನ್ನೂ ಮಿಲಿಟರಿಯನ್ನೂ ಬಳಸಿಕೊಳ್ಳುತ್ತದೆಯೋ ಹಾಗೂ ಜಾತಿ-ಮತ-ಧರ್ಮಗಳಂತಹ ಶಾಂತವಾಗಿರಬೇಕಾದ ವ್ಯವಸ್ಥೆಗಳನ್ನು ಪ್ರಚೋದನಾಕಾರಿ ಅಸ್ತ್ರಗಳಾಗಿ ಬಳಸಿಕೊಳ್ಳುತ್ತದೆಯೋ ಅದು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡುತ್ತದೆಯೆಂದೇ ಅರ್ಥ.

ನಮ್ಮ ಜನರಿಗೆ ಏನಾಗಿದೆ? ಎಲ್ಲರೂ ಒಂದು ಸಮ್ಮೋಹನಕ್ಕೊಳಗಾದವರಂತೆ ಅಥವಾ ಕುರಿಹಿಂಡಿನಂತೆ ಬದುಕುತ್ತಿದ್ದಾರೆ. ಸಮಾಜದ ವಿಘಟನೆಯನ್ನು ನೋಡುತ್ತ ಸುಮ್ಮನಿರುವುದು ಮನುಷ್ಯನ ನಿರ್ಬಲತೆಯನ್ನು ಮಾತ್ರವಲ್ಲ ಅಳಿವಿನ ಅಪಾಯವನ್ನು ತೋರುತ್ತದೆ. ನಾವಳಿಯಬಹುದು; ದೇಶಕ್ಕೆ ಅಥವಾ ಕನಿಷ್ಠ ಅದರ ಭೂಭಾಗಕ್ಕೆ ಅಳಿವಿಲ್ಲ. ಆ ಪ್ರಜ್ಞೆಯಾದರೂ ನಮಗೆ ಬೇಕಲ್ಲ?

ಅಂತಹ ಪ್ರಜ್ಞೆಯು ಉದಿಸುವುದೇ ನೈಜ ಸ್ವಾತಂತ್ರ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)