varthabharthi


ತಿಳಿ ವಿಜ್ಞಾನ

ಭವಿಷ್ಯದ ಆಶಾಕಿರಣ ಬಾಹ್ಯಾಕಾಶದ ಕೃಷಿ

ವಾರ್ತಾ ಭಾರತಿ : 22 Aug, 2021
ಆರ್. ಬಿ. ಗುರುಬಸವರಾಜ

ಭೂಮಿಯಿಂದ ಬಾಹ್ಯಾಕಾಶದ ಕಡೆಗಿನ ಮಾನವ ಪಯಣ ಬಲು ರೋಚಕವಾದುದು ಮತ್ತು ವಿಶಿಷ್ಟವಾದುದು. ಒಂದೂರಿನಿಂದ ಇನ್ನೊಂದೂರಿಗೆ ಪಯಣಿಸಲು ಸೌಕರ್ಯಗಳಿಲ್ಲದ ದಿನಗಳನ್ನು ಕಳೆದ ಮಾನವ ಬಾಹ್ಯಾಕಾಶಕ್ಕೆ ಹಾರಿದ್ದು ರೋಚಕವಲ್ಲವೇ?. ಕೇವಲ ಒಂದು ಟ್ರಿಪ್‌ನಂತಿದ್ದ ಮಾನವನ ಬಾಹ್ಯಾಕಾಶ ಪಯಣ ಇಂದು ಅಲ್ಲಿಯೇ ನೆಲೆಸುವ ಹಂತಕ್ಕೆ ಬೆಳೆಯುತ್ತಿರುವುದು ವಿಶಿಷ್ಟವಲ್ಲವೇ? ಅಂತರಿಕ್ಷದಲ್ಲಿ ನಿಲ್ದಾಣ ಮಾಡಿಕೊಂಡ ಮಾನವ ಕೆಲವು ದಿನ, ವಾರ, ತಿಂಗಳುಗಳ ಕಾಲ ಅಲ್ಲಿಯೇ ನೆಲೆಸುವ ಹಂತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿದೆ. ಪ್ರತಿ ಬಾರಿ ಮಾನವ ಬಾಹ್ಯಾಕಾಶಕ್ಕೆ ಪಯಣಿಸಿದಾಗಲೆಲ್ಲಾ ಉಸಿರಾಟಕ್ಕೆ ಆಮ್ಲಜನಕ ಹಾಗೂ ಊಟಕ್ಕೆ ಅಗತ್ಯ ಸಾಮಗ್ರಿಗಳನ್ನು ಹೊತ್ತೊಯ್ಯಲೇ ಬೇಕಿದೆ. ಏಕೆಂದರೆ ಸದ್ಯಕ್ಕೆ ಅಂತರಿಕ್ಷದಲ್ಲಿ ಮಾನವ ಉಸಿರಾಡಲು ಅನುಕೂಲವಾದ ಆಮ್ಲಜನಕವಾಗಲಿ, ತಿನ್ನಲು ಉಪಯುಕ್ತವಾದ ಆಹಾರ ಸಾಮಗ್ರಿಗಳಾಗಲಿ ಲಭ್ಯವಿಲ್ಲ. ಅವುಗಳನ್ನು ಭೂಮಿಯಿಂದಲೇ ಕೊಂಡೊಯ್ಯಬೇಕು ಮತ್ತು ವಾಪಸು ಭೂಮಿಗೆ ಬರುವವರೆಗೂ ತುಂಬಾ ಜತನದಿಂದ ಕಾಪಾಡಿಕೊಳ್ಳಬೇಕು. ಪ್ರತಿ ಗಗನಯಾನಿಗೆ ದಿನವೊಂದಕ್ಕೆ ಸರಿಸುಮಾರು 1ಕೆ.ಜಿ. ಆಮ್ಲಜನಕ, 1ಕೆ.ಜಿ. ನಿರ್ಜಲೀಕೃತ ಆಹಾರ ಮತ್ತು 3 ಲೀಟರ್ ನೀರಿನ ಅಗತ್ಯವಿದೆ. ಅಲ್ಲಿನ ಪ್ರಯಾಣಾವಧಿಗೆ ಸಾಕಾಗುವಷ್ಟು ಆಹಾರ, ನೀರು ಮತ್ತು ಆಮ್ಲಜನಕವನ್ನು ಭೂಮಿಯಿಂದ ತೆಗೆದುಕೊಂಡು ಹೋಗಲೇಬೇಕಿದೆ. ಇದೊಂದು ತುಂಬಾ ವೆಚ್ಚದಾಯಕ ಸಂಗತಿ. ಅಲ್ಲದೇ ದೀರ್ಘ ಬಾಹ್ಯಾಕಾಶ ಯೋಜನೆಗಳಿಗೆ ಇದು ತುಂಬಾ ಅಪ್ರಾಯೋಗಿಕ ಎನಿಸದಿರದು. ಈ ಸಮಸ್ಯೆಗೆ ಪರ್ಯಾಯಾಲೋಚನೆಯ ಭಾಗವಾಗಿ ಮೂಡಿಬಂದದ್ದೇ ಬಾಹ್ಯಾಕಾಶ ಕೃಷಿ ಯೋಚನೆ.

ಬಾಹ್ಯಾಕಾಶ ಕೃಷಿ ಯೋಚನೆ ಏನೋ ಚೆನ್ನಾಗಿದೆ. ಆದರೆ ಇದನ್ನು ಜಾರಿಗೆ ತರುವಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಮಗೆಲ್ಲಾ ತಿಳಿದಿರುವಂತೆ ಸಸ್ಯಗಳು ಬೆಳೆಯಲು ನೀರು, ಗಾಳಿ, ಬೆಳಕು, ಪೋಷಕಾಂಶಗಳು ಹಾಗೂ ಸೂಕ್ತ ತಾಪಮಾನ ಅಗತ್ಯ. ಆದರೆ ಬಾಹ್ಯಾಕಾಶದಲ್ಲಿ ಇವುಗಳನ್ನು ಪೂರೈಸುವುದು ಕಷ್ಟ. ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಯಲು ಅನೇಕ ಸವಾಲುಗಳಿವೆ. ಅದರಲ್ಲಿ ಬಹುಮುಖ್ಯ ಸವಾಲು ಎಂದರೆ ಗುರುತ್ವಾಕರ್ಷಣೆ ಇಲ್ಲದೆ ಸಸ್ಯಗಳನ್ನು ಬೆಳೆಸುವುದು. ಎರಡನೆಯದು ದ್ರವ ನೀರು ಮತ್ತು ಪೋಷಕಾಂಶಗಳ ಕೊರತೆ. ಭೂಮಿಯ ಮೇಲೆ ಇರುವಂತೆ ಕೆರೆ, ಬಾವಿ, ಹಳ್ಳ, ನದಿಗಳು ಅಲ್ಲಿಲ್ಲ. ಮೂರನೆಯದು ಬಾಹ್ಯಾಕಾಶದಲ್ಲಿ ಸಸ್ಯಗಳು ಬೆಳೆಯಲು ಅಗತ್ಯವಾದ ಪೋಷಕಾಂಶಗಳ ಲಭ್ಯತೆ ಇಲ್ಲ. ನಾಲ್ಕನೆಯದು ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಬೆಳಕಿನ ವ್ಯವಸ್ಥೆ ಇಲ್ಲ. ಐದನೆಯದು ಬಾಹ್ಯಾಕಾಶದಲ್ಲಿ ಸಸ್ಯಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲ. ಈ ಎಲ್ಲಾ ಸವಾಲುಗಳನ್ನು ಮೀರಿ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವುದು ಒಂದು ಸಾಹಸವೇ ಸರಿ.

ಇಂತಹ ಸಾಹಸಕ್ಕೆ ಅನೇಕ ದೇಶಗಳು ಕೈ ಹಾಕಿ ತಮ್ಮದೇ ಆದ ಪ್ರಯತ್ನ ಮಾಡಿವೆ ಮತ್ತು ಮಾಡುತ್ತಲೇ ಇವೆ. ಅವಶ್ಯಕತೆ ಎಲ್ಲಾ ಸಂಶೋಧನೆಗಳಿಗೆ ನಾಂದಿ ಎನ್ನುವಂತೆ ಅಸಾಧ್ಯವಲ್ಲದ್ದು ಯಾವುದೂ ಇಲ್ಲ. 2010ರ ನಂತರ ದೀರ್ಘಾವಧಿ ಬಾಹ್ಯಾಕಾಶ ಯೋಜನೆಗಳು ಹೆಚ್ಚಾದವು. ಇದರ ಭಾಗವಾಗಿ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯತ್ನಗಳು ಪ್ರಾರಂಭಗೊಂಡವು. 2010ರಲ್ಲಿಯೇ ಬಾಹ್ಯಾಕಾಶದಲ್ಲಿ 20 ಬಗೆಯ ಸಸ್ಯಗಳನ್ನು ಬೆಳೆಸುವ ಪ್ರಯೋಗಗಳು ನಡೆದವು. ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯೋಗಗಳು ಇಂದು ನಿನ್ನೆಯದಲ್ಲ. 1946ರ ಜುಲೈ 9ರಂದು ಯು.ಎಸ್. ಉಡಾಯಿಸಿದ ವಿ-2 ರಾಕೆಟ್‌ನಲ್ಲಿ ಅಭಿವೃದ್ಧಿ ಹೊಂದಿದ ಬೀಜದ ತಳಿಗಳನ್ನು ಅಂತರಿಕ್ಷಕ್ಕೆ ಕಳಿಸಲಾಗಿತ್ತು. ಅವುಗಳಲ್ಲಿ ಮೆಕ್ಕೆಜೋಳ ಮತ್ತು ಹತ್ತಿಯ ಬೀಜಗಳನ್ನು ಕಳಿಸಲಾಗಿತ್ತು. 2012ರಲ್ಲಿ ನಾಸಾ ಗಗನಯಾತ್ರಿ ಡೋನಾಲ್ಡ್ ಪೆಟಿಟ್ ಅವರ ನೇತೃತ್ವದಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ಸೂರ್ಯಕಾಂತಿ ಬೆಳೆಯಲಾಯಿತು. 2015ರಲ್ಲಿ ನಾಸಾದ ಐ.ಎ.ಎಸ್. ಎಕ್ಸ್‌ಪಡೆಡಿಶನ್-44ರ ಸಿಬ್ಬಂದಿ ವೆಜ್-1 ಸಸ್ಯ ಪ್ರಯೋಗದ ಭಾಗವಾಗಿ ಬೆಳೆದ ಕೆಂಪು ರೋಮೈನ್ ಲೆಟಿಸ್‌ನ ಮೊದಲ ರುಚಿಯನ್ನು ಸವಿದಿದ್ದರು. ಅಂದಿನಿಂದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಇತರ ಸಸ್ಯಗಳನ್ನು ಬೆಳೆಯುವ ಹೊಸ ವಿಧಾನಗಳನ್ನು ಸಂಶೋಧಿಸುತ್ತಿದ್ದಾರೆ.

ಆಹಾರದ ಮೌಲ್ಯ ಹಾಗೂ ಇಳುವರಿಯನ್ನು ಪರಿಗಣಿಸಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ತೀರ್ಮಾನಿಸಲಾಗುತ್ತದೆ. ಅದರಲ್ಲಿ ಆಲೂಗಡ್ಡೆ ಮತ್ತು ಕುಬ್ಜ ಗೋಧಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವರೆಡೂ ಹೆಚ್ಚು ಕ್ಯಾಲೋರಿ ಹೊಂದಿದ್ದು ಕಾರ್ಬೋಹೈಡ್ರೇಟ್‌ಯುಕ್ತ ಆಹಾರವಾಗಿವೆ. ಗಗನಯಾತ್ರಿಗಳಿಗೆ ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗೆ ಸಾಕಷ್ಟು ಶಕ್ತಿ ಒದಗಿಸುವಂತಹ ಆಹಾರದ ಬೆಳೆಗಳನ್ನು ಆಯ್ಕೆ ಮಾಡಲಾಗಿದೆ. ಬಾಹ್ಯಾಕಾಶದಲ್ಲಿ ಸಸ್ಯಗಳು ಕೇವಲ ಆಹಾರ ಮೂಲವಾಗಿ ಮಾತ್ರ ಉಪಯುಕ್ತವಲ್ಲ. ಗಗನಯಾತ್ರಿಗಳಿಗೆ ಅಗತ್ಯವಿರುವ ಆಮ್ಲಜನಕ ಮತ್ತು ನೀರನ್ನು ಪೂರೈಸುತ್ತವೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಕಳೆದ 25 ವರ್ಷಗಳಿಂದ ಮೈಕ್ರೋ ಇಕಾಲಾಜಿಕಲ್ ಲೈಫ್ ಸಪೋರ್ಟ್ ಸಿಸ್ಟಮ್ ಆಲ್ಟರ್ನೇಟಿವ್ ಪ್ರೋಗ್ರಾಂನೊಂದಿಗೆ ಬಾಹ್ಯಾಕಾಶದಲ್ಲಿ ಸಸ್ಯ ಬೆಳೆಸುವ ಗುರಿಯತ್ತ ಕೆಲಸ ಮಾಡುತ್ತಿದೆ. ಮಾನವ ತ್ಯಾಜ್ಯ ಉತ್ಪನ್ನಗಳಾದ ಮೂತ್ರ ಮತ್ತು ಹೊರಹಾಕಿದ ಇಂಗಾಲದ ಡೈ ಆಕ್ಸೈಡ್ ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪದಾರ್ಥಗಳನ್ನು ಪೂರೈಸುತ್ತವೆ. ಈ ಸಂಶೋಧನಾ ಕ್ಷೇತ್ರವು ಕೇವಲ ಬಾಹ್ಯಾಕಾಶ ಯೋಜನೆಗಳಿಗೆ ಮಾತ್ರ ಸೀಮಿತವಾಗದೆ ಭೂಮಿಯ ಮೇಲೆ ಹೆಚ್ಚು ಸಮರ್ಥನೀಯ ಆಹಾರ ಉತ್ಪಾದನೆಗೆ ಹೊಸ ವಿಧಾನಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ.

2017ರಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ಅಡ್ವಾನ್ಸ್ಡ್ ಪ್ಲಾಂಟ್ ಆವಾಸಸ್ಥಾನವನ್ನು ವಿನ್ಯಾಸಗೊಳಿಸಲಾಯಿತು. ಇದಕ್ಕೆ ವೆಜ್ಜಿ ವ್ಯವಸ್ಥೆ ಎಂದು ನಾಮಕರಣ ಮಾಡಲಾಯಿತು. ಈ ವೆಜ್ಜಿ ವ್ಯವಸ್ಥೆಯಲ್ಲಿ ಬೆಳವಣಿಗೆಗಾಗಿ ನೂರಾರು ಬೀಜಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲಾಯಿತು. 2018ರಲ್ಲಿ ವೆಜ್ಜಿ ಪ್ರಯೋಗದಲ್ಲಿ ಸಸ್ಯಗಳ ದಿಂಡು ಮತ್ತು ಬೇರಿನ ತುದಿಗಳನ್ನು ಪರೀಕ್ಷಿಸಲಾಯಿತು. ಈ ಸಸ್ಯಗಳು ಆಹಾರಕ್ಕೆ ಯೋಗ್ಯವಾಗಿಯೇ ಇಲ್ಲವೇ ಎಂಬುದನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಹೀಗೆ ಪರೀಕ್ಷಿಸಿದ ಬೆಳೆಗಳಲ್ಲಿ ಎಲೆಕೋಸು ಮತ್ತು ಲೆಟಿಸ್ ಸೇರಿವೆ. ಆನಂತರ ಡಿಸೆಂಬರ್ 2018ರಲ್ಲಿ ಜರ್ಮನ್ ಏರೋಸ್ಪೇಸ್ ಸೆಂಟರ್ ಯುಕ್ರೋಪಿಸ್ ಉಪಹಗ್ರಹವನ್ನು ಉಡಾಯಿಸಿತು. ಈ ಮಿಶನ್ ಹಸಿರುಮನೆ ಉಪಕರಣಗಳನ್ನು ಬಾಹ್ಯಾಕಾಶಕ್ಕೆ ಕೊಂಡೊ ಯ್ದಿತ್ತು. ಮೊದಲು ಚಂದ್ರನಲ್ಲಿ ಮತ್ತು ಆನಂತರ ಮಂಗಳನಲ್ಲಿ ಟೊಮ್ಯಾಟೋ ಬೆಳೆಯಲು ಯೋಜಿಸಲಾಯಿತು. ಹೀಗೆ 2013 ರಿಂದ 2017ರವರೆಗಿನ ಸರಣಿ ಪ್ರಯೋಗಗಳಿಂದ ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಯೋಜನೆಗಳು ಕಾರ್ಯಗತವಾಗ ತೊಡಗಿದವು. 2020ರ ನವೆಂಬರ್‌ನಲ್ಲಿ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ಕೇಂದ್ರದಲ್ಲಿ ಮೊದಲ ಮೂಲಂಗಿ ಬೆಳೆಯನ್ನು ಕೊಯ್ಲು ಮಾಡಿದ್ದರು. ಒಟ್ಟು 20 ಬಾಹ್ಯಾಕಾಶದ ಬೆಳೆಗಳನ್ನು ಸಂಗ್ರಹಿಸಿ ಭೂಮಿಗೆ ಸಾಗಿಸಿದರು.

ನಂತರ ಪ್ರಸ್ತುತ ಪ್ರಯೋಗವನ್ನು ಪುನರಾವರ್ತಿಸಲು ಎರಡನೇ ಹಂತದಲ್ಲಿ ಮತ್ತೊಂದಿಷ್ಟು ಬೆಳೆಗಳನ್ನು ಬೆಳೆಯಲು ಯೋಜಿಸಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಚೀನಾ ಈ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದೆ ಇದೆ. ಚೀನಾವು 2019ರಲ್ಲಿ ಚಾಂಗ್-ಇ-4 ಹೆಸರಿನ ಲ್ಯಾಂಡರ್‌ನಲ್ಲಿ ಮೊಹರು ಮಾಡಿದ 3 ಕೆ.ಜಿ. ಬಯೋಸ್ಪಿಯರ್‌ನ್ನು ಚಂದ್ರನ ಅಂಗಳಕ್ಕೆ ಕಳಿಸಿತು. ಅದರಲ್ಲಿ ಕೆಲವು ಬೀಜಗಳು ಮತ್ತು ಕೆಲವು ಕೀಟಗಳ ಮೊಟ್ಟೆಗಳನ್ನು ಒಗ್ಗೂಡಿಸಿ ಬಾಹ್ಯಾಕಾಶದಲ್ಲಿ ಬೆಳೆಸುವ ಪರೀಕ್ಷೆಗೆ ಕೈ ಹಾಕಿತು. ಈ ಪ್ರಯೋಗದಲ್ಲಿ ಆಲೂಗಡ್ಡೆ, ಟೊಮ್ಯಾಟೋ, ಅರಬಿಡೋಪ್ಸಿಸ್ ಥಾಲಿಯಾನ ಎನ್ನುವ ಹೂ ಬಿಡುವ ಸಸ್ಯ ಮತ್ತು ರೇಷ್ಮೆ ಹುಳದ ಮೊಟ್ಟೆಗಳು ಸೇರಿವೆ. ಕಡಿಮೆ ಗುರುತ್ವಾಕರ್ಷಣೆಯನ್ನು ಹೊರತುಪಡಿಸಿ ಧಾರಕದಲ್ಲಿ ಭೂಮಿಯಂತೆ ಪರಿಸರ ವ್ಯವಸ್ಥೆಯನ್ನು ಮಾಡಲಾಯಿತು. ಮೊಟ್ಟೆಗಳು ಒಡೆದು ಲಾರ್ವಾಗಳಾಗಿ ಕಾರ್ಬನ್ ಡೈ ಆಕ್ಸೈಡನ್ನು ಉತ್ಪಾದಿಸುತ್ತವೆ. ಬೀಜಗಳು ಮೊಳಕೆಯೊಡೆದು ದ್ಯುತಿ ಸಂಶ್ಲೇಷಣೆ ಕ್ರಿಯೆ ಮಾಡುತ್ತವೆ. ಇದರಿಂದ ಆಮ್ಲಜನಕ ಬಿಡುಗಡೆಯಾಗುತ್ತದೆ. ಸಸ್ಯಗಳು ಮತ್ತು ರೇಷ್ಮೆ ಹುಳುಗಳನ್ನು ಒಟ್ಟಾಗಿಸಿ ಕಂಟೇನರ್‌ನಲ್ಲಿ ಸಿನರ್ಜಿಯನ್ನು ಸ್ಥಾಪಿಸಬಹುದು ಎಂದು ಆಶಿಸಲಾಗಿದೆ. ಪ್ರತಿ ಬೆಳವಣಿಗೆಯನ್ನು ಕ್ಯಾಮರಾಚಿತ್ರಗಳ ಮೂಲಕ ದಾಖಲಿಸಲಾಗಿದೆ. ಚೀನಾದ 28 ವಿಶ್ವವಿದ್ಯಾನಿಲಯಗಳು ಈ ಜೈವಿಕ ಪ್ರಯೋಗವನ್ನು ವಿನ್ಯಾಸಗೊಳಿಸಿವೆ.

ಬಹಳ ಪ್ರಮುಖವಾದ ಸಂಗತಿಯನ್ನು ನಾವು ಇಲ್ಲಿ ಗಮನಿಸಲೇಬೇಕು. ಅದೇನೆಂದರೆ ಬಾಹ್ಯಾಕಾಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಹಾನಿಕಾರಕ ಮಾಲಿನ್ಯದಿಂದ ಮುಕ್ತವಾಗಿವೆ. ಭೂಮಿಯ ಬೆಳೆಗಳಂತೆ ಯಾವುದೇ ಹಾನಿಕಾರಕ ಅಂಶಗಳು ಪತ್ತೆಯಾಗಿಲ್ಲ. ಅಲ್ಲಿ ಬೆಳೆದ ಎಲ್ಲಾ ಆಹಾರ ಬೆಳೆಗಳು ತಿನ್ನಲು ಯೋಗ್ಯವಾಗಿವೆ ಮತ್ತು ಸುರಕ್ಷಿತವಾಗಿವೆ ಎಂದು ಹೇಳಲಾಗಿದೆ. ಇದರಿಂದ ಒಂದಂತೂ ಸ್ಪಷ್ಟ. ಭೂಮಿಯಂತೆ ಬಾಹ್ಯಾಕಾಶ ಇನ್ನೂ ಮಲಿನವಾಗಿಲ್ಲ ಎಂಬುದು ಸ್ಪಷ್ಟ. ಆದರೆ ಪ್ರತಿವರ್ಷ ಹೆಚ್ಚುತ್ತಿರುವ ಬಾಹ್ಯಾಕಾಶ ಯಾನಗಳಿಂದ ಭವಿಷ್ಯದಲ್ಲಿ ಮಾಲಿನ್ಯದ ಭೂತ ಅಲ್ಲಿಯೂ ತನ್ನ ಅಟ್ಟಹಾಸ ಮೆರೆಯಬಹುದು. ಅದಕ್ಕಾಗಿ ಈಗಿನಿಂದಲೇ ಎಚ್ಚರ ವಹಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)