varthabharthi


ಅನುಗಾಲ

ತಾಲಿಬಾನ್! ತಾಲಿಬಾನ್!

ವಾರ್ತಾ ಭಾರತಿ : 26 Aug, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಟಾಗೋರ್ ಹೇಳಿದಂತೆ ಮಾನವಹಕ್ಕುಗಳನ್ನು ಸೋಲಿಸುವ ದೇಶಭಕ್ತಿಯನ್ನು ಜನರು ತಿರಸ್ಕರಿಸುವವರೆಗೂ ಅಫ್ಘಾನಿಸ್ತಾನದ ಪರಿಸ್ಥಿತಿ ಎಲ್ಲ ರಾಷ್ಟ್ರಗಳಿಗೂ ಒಂದಲ್ಲ ಒಂದು ಕಾಲಕ್ಕೆ ಒದಗುವುದು ಅನಿವಾರ್ಯ. ನಮ್ಮ ಪ್ರಧಾನಿ ದೇವರ ಸಮ್ಮುಖದಲ್ಲೆಂಬಂತೆ ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯವಾಗುವುದು ಹೀಗೆ.


ಭಾರತದ ಪ್ರಧಾನಿಯವರು ಈಚೆಗೆ ಗುಜರಾತಿನ ಸೋಮನಾಥ ದೇವಾಲಯದ ಸಮಾರಂಭವೊಂದರಲ್ಲಿ ಭಾಷಣಮಾಡುತ್ತ ‘‘ಭಯವನ್ನು ಸೃಷ್ಟಿಸುವ ಮೂಲಕ ಸಾಮ್ರಾಜ್ಯವನ್ನು ಕಟ್ಟುವ ಸಿದ್ಧಾಂತವನ್ನು ಅನುಸರಿಸುವ ವಿನಾಶಕಾರೀ ಶಕ್ತಿಗಳು ಮತ್ತು ಜನರು ಕೆಲವು ಕಾಲ ಮೇಲ್ಗೈ ಸಾಧಿಸಬಹುದು, ಆದರೆ ಮನುಷ್ಯರನ್ನು ಸದಾ ದಮನಿಸಲು ಸಾಧ್ಯವಿಲ್ಲದ್ದರಿಂದ ಅವರ ಅಸ್ತಿತ್ವವು ಶಾಶ್ವತವಲ್ಲ’’ ಎಂದರು. ಈ ಮಾತುಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಮತ್ತು ಸ್ವತಃ ಅವರಿಗೂ ಅವರು ಪ್ರತಿನಿಧಿಸುವ ಸಿದ್ಧಾಂತ ಮತ್ತು ಸಮೂಹಕ್ಕೂ ಪ್ರಸ್ತುತವಾಗಿದೆ. ಪ್ರಧಾನಿ ಈ ಮಾತುಗಳನ್ನು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಸಂದರ್ಭವನ್ನು ಕುರಿತೇ ಹೇಳಿದರು. ಅವರಂತೆ ಈ ದೇಶದ ಅನೇಕರು ನಮ್ಮ ದೇಶದ ಸ್ಥಿತಿಯ ಕುರಿತು ಚಕಾರವೆತ್ತದಿದ್ದರೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕುರಿತು ವಿದ್ವತ್ಪೂರ್ಣ ವಿಶ್ಲೇಷಣೆಯನ್ನು ಮಾಡಿದರು. ಮುಂದೇನಾಗುತ್ತದೆಯೋ ಗೊತ್ತಿಲ್ಲ. ಏಕೆಂದರೆ ನಮ್ಮ ಪ್ರಧಾನಿಯವರು ಹೇಳಿದ ಮಾತುಗಳ ಸೂಚನೆಯಂತೆ ಕಾಲಾನುಕಾಲಕ್ಕೆ ಪ್ರಕೃತಿಯೋ ಅಥವಾ ಜನರ ನಡುವೇ ಹುಟ್ಟುವ ಶಕ್ತಿಯೋ ಅನಿಷ್ಠವನ್ನು ನಿವಾರಿಸಿ ಅಗತ್ಯ ಸಮತೋಲವನ್ನು ಮಾಡುತ್ತದೆ. ಸದ್ಯಕ್ಕಂತೂ ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಹಿಂದೆ ಅಧಿಕಾರಕ್ಕೆ ಬಂದು ದೇಶವನ್ನು ಕತ್ತಲಯುಗಕ್ಕೆ ತಳ್ಳಿ ಆನಂತರ ಅಮೆರಿಕ ಕಾರಣವಾಗಿ ಅಳಿಯಿತೆಂದು ಭಾವಿಸಲಾದ ತಾಲಿಬಾನ್ ಷೆಲ್ಲಿಯ ‘ಗರ್ಭದಿಂದ ಬರುವ ಮಗುವಿನಂತೆ’ ಅಲ್ಲದಿದ್ದರೂ ಅದರಾಚೆಗಿನ ಮಾತುಗಳಾದ ‘ಗೋರಿಯಿಂದ ಬರುವ ಭೂತದಂತೆ’ ಹುಟ್ಟಿಬಂದಿದೆ. ಕೇವಲ 60 ಸಾವಿರ ಜನರ ಗುಂಪೊಂದು 2 ಲಕ್ಷ ಸೇನಾಪಡೆಯನ್ನು ಅಶಕ್ತಗೊಳಿಸಿ ಅಧಿಕಾರ ಪಡೆಯಬೇಕಾದರೆ ಅದರ ರಹಸ್ಯವೇನು, ಅದರ ಹಿಂದೆ ಇರುವ ಶಕ್ತಿಗಳು ಯಾವುವು ಮತ್ತು ಅದರ ಎದುರಾಳಿಗಳ ಅಶಕ್ತತೆಗೆ ಕಾರಣಗಳೇನು ಎಂಬುದನ್ನು ಶೋಧಿಸಬೇಕು. ಇವನ್ನು ಭಾರತವಂತೂ ಅರ್ಥಮಾಡಿಕೊಂಡಿಲ್ಲ. ವಿದೇಶಿ ವರದಿಗಳ ಪ್ರಕಾರ ಅಲ್ಲಿನ ಸರಕಾರದ ವ್ಯಾಪಕ ಭ್ರಷ್ಟಾಚಾರವೇ ಇದಕ್ಕೆ ಕಾರಣ. ಈ ವರದಿಗಳಂತೆ ಅಮೆರಿಕ ನೀಡಿದ ಎಲ್ಲ ಆರ್ಥಿಕ, ಮಿಲಿಟರಿ ನೆರವನ್ನು ಭ್ರಷ್ಟಾಚಾರದ ಮೂಲಕ ದುರುಪಯೋಗಪಡಿಸಿದ್ದೇ ಅವರ ಸಾಧನೆ. ಅಮೆರಿಕ ಮತ್ತು ನ್ಯಾಟೋ ನೀಡಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಿ ಅಫ್ಘಾನಿಸ್ತಾನದ ಸೇನಾಪಡೆಗಳು ದುಡ್ಡುಮಾಡಿವೆಯಂತೆ. ರಾಜಕಾರಣಿಗಳು ಯಾವ ವಿದೇಶಿ ನೆರವನ್ನೂ ಜನರಿಗೆ ದಾಟಿಸದೆ ತಾವೇ ನುಂಗಿ ನೀರು ಕುಡಿದಿದ್ದಾರಂತೆ! ಹೀಗಾಗಿ ಅಮೆರಿಕ ಜಾಗ ಖಾಲಿಮಾಡುವ ಗಡುವು/ಸಂದರ್ಭವನ್ನೇ ಕಾಯುತ್ತಿದ್ದ ಸಂಕಲ್ಪಬಲದ ತಾಲಿಬಾನಿಗಳು ದಾಳಿಮಾಡಿದಾಗ ಅವರನ್ನೆದುರಿಸುವ ಸಾಮರ್ಥ್ಯ ಅಫ್ಘಾನಿಸ್ತಾನದ ಅಧಿಕೃತ ಸರಕಾರಕ್ಕೆ ಇಲ್ಲದಾಯಿತು. ಈ ಸಾಂದರ್ಭಿಕ ಸಾಕ್ಷಗಳು ಸುಳ್ಳೆಂದು ಸಾಬೀತಾಗುವ ವರೆಗೂ ಇವನ್ನು ನಂಬಲೇಬೇಕಿದೆ. ಕಾಬೂಲಿಗೆ ತಾಲಿಬಾನ್ ಪ್ರವೇಶಿಸಿದಾಗಲೂ ರಕ್ತ ಹರಿಯಲಿಲ್ಲ. ಬದಲಾಗಿ ಮುಂದಾಗುವುದರ ಭಯವನ್ನು ಕಲ್ಪಿಸಿಕೊಂಡ ವಿವೇಕಿಗಳ ಪೈಕಿ ಈಗಾಗಲೇ ಸಾಕಷ್ಟು ಮಂದಿ ಅಫ್ಘಾನಿಸ್ತಾನದಿಂದ ಓಡಿಹೋಗಿದ್ದಾರೆ; ವಲಸೆ ಹೋಗಿದ್ದಾರೆ; ಅಥವಾ ಅವರವರ ದೇಶಗಳಿಗೆ ಮರಳಿದ್ದಾರೆ. ಅಲ್ಲಿನ ಅಧ್ಯಕ್ಷರೇ ತಮ್ಮ ಪ್ರಜೆಗಳ ಕುರಿತ ಕಾಳಜಿಯನ್ನೂ ಮರೆತು ದುಬೈಗೆ ಹೋಗಿ ಅಲ್ಲಿಂದ ಅಮೆರಿಕವನ್ನು ತಲುಪುವ ಗೋಜಿಯಲ್ಲಿದ್ದಾರೆ. ತಾನು ಸ್ವದೇಶದಲ್ಲಿದ್ದರೆ ತಾಲಿಬಾನಿಗಳ ಕೈಯಲ್ಲಿ ನೇಣುಗಂಬವನ್ನೇರಬೇಕಿತ್ತೆಂಬ ಮಾತುಗಳನ್ನಾಡಿದ್ದಾರೆ. ಈ ಹಿಂದಿನ ಅನುಭವವನ್ನು ಮೆಲುಕು ಹಾಕಿದರೆ ತಾಲಿಬಾನಿನ ಆಡಳಿತದ ಅಫ್ಘಾನಿಸ್ತಾನದ ಕಲ್ಪನೆಯೇ ಭೀಕರ. ತಾಲಿಬಾನಿನ ನಾಯಕರಲ್ಲೊಬ್ಬರು ಭಾರತದ ಮಿಲಿಟರಿ ಅಕಾಡಮಿಯಲ್ಲಿ ತರಬೇತು ಪಡೆದವರು. ಯಾವ ಸಂಸ್ಥೆಯೂ, ಸಂಘಟನೆಯೂ ಶಾಶ್ವತವಾಗಿ ಯಾವುದೇ ಮೌಲ್ಯಗಳನ್ನು ಹುಟ್ಟುಹಾಕದು ಎಂಬುದಕ್ಕೆ ಇದೂ ಒಂದು ನಿದರ್ಶನ. ಅಫ್ಘಾನಿಸ್ತಾನ ಬಿದ್ದಿದೆಯೇ ಎದ್ದಿದೆಯೇ? ಚರಿತ್ರೆ ಹೇಳಬಹುದು. ಆದರೆ ಒಂದು ಮಾತಂತೂ ಸತ್ಯ: ಮತಧರ್ಮವು ಯಾವ ದೇಶವನ್ನೂ ಉದ್ಧರಿಸದು.

ಭಾರತದಲ್ಲಂತೂ ಸುಖವಾಗಿರುವವರೂ ಸುಖವಾಗಿಲ್ಲದಿರುವವರೂ ಅಲ್ಲಿದ್ದರೆ ಹೇಗೋ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಭಾರತವು ಒಬ್ಬನೂ ಉಳಿಯದಂತೆ ತನ್ನ ರಾಯಭಾರ ಪಡೆಯನ್ನು ಕರೆಸಿಕೊಂಡಿದೆ. ಅಲ್ಲೀಗ ಅಮೆರಿಕದ ಶಸ್ತ್ರಾಸ್ತ್ರಗಳು, ಮಿಲಿಟರಿ ವಾಹನಗಳು, ವಿಮಾನಗಳು ಮಾತ್ರ ಉಳಿದಿರುವುದಲ್ಲ; ಭಾರತದ ರಾಯಭಾರ ಕಚೇರಿಯ ಎಲ್ಲ ವಾಹನಗಳೂ ಅಲ್ಲೇ ಉಳಿದಿವೆ. ‘ಬದುಕಿದರೆ ಬೇಡಿ ತಿನ್ನುವ’ ಕಳವಳ!
 

ಕೆಲವು ಸಂಗತಿಗಳು ಮಾತ್ರ ಅಚ್ಚರಿಗೆ ಕಾರಣವಾಗಬೇಕಿತ್ತು. ಆದರೆ ಆಗಲಿಲ್ಲ. ಪ್ರಜಾಪ್ರಭುತ್ವ, ಮಾನವೀಯತೆಯ ಕುರಿತು ಭಾಷಣಮಾಡುವ ವಿಶ್ವನಾಯಕರೆಲ್ಲ ತಮ್ಮತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆಯೇ ವಿನಾ ಅಫ್ಘಾನಿಸ್ತಾನದ ಮತ್ತು ಮುಖ್ಯವಾಗಿ ಅಲ್ಲಿನ ಕೋಟಿಗಟ್ಟಲೆ ಜನರ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ. ಅಮೆರಿಕವಂತೂ ಸದ್ಯ ತಾನು ತನ್ನ ಪ್ರಜೆಗಳನ್ನೂ, ಸೈನಿಕರನ್ನೂ ಕರೆಸಿಕೊಳ್ಳುತ್ತೇನೆಯೇ ಹೊರತು ಉಳಿದ ವಿಚಾರಗಳ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದಿದೆ. ವಿಶ್ವದ ಜನರಿಗೆ ತಾನು ಉತ್ತರದಾಯಿಯಲ್ಲವೆಂದೂ ತನ್ನ ರಾಷ್ಟ್ರದ ಕುರಿತಷ್ಟೇ ಚಿಂತಿಸಲು ಸಾಧ್ಯವೆಂಬ ಮಾತನ್ನೂ ಅಲ್ಲಿನ ಅಧ್ಯಕ್ಷರು ಹೇಳಿದ್ದಾರೆ. ತಾಲಿಬಾನ್ ಹಿಂದೆ ಅಫ್ಘಾನಿಸ್ತಾನದ ಆಡಳಿತವನ್ನು ಹೊಂದಿದಾಗ ಅಮೆರಿಕಕ್ಕೆ ತಲೆನೋವಾಗಿರಲಿಲ್ಲ. 9/11ರ ದಾಳಿಯ ಆನಂತರವಷ್ಟೇ ಅದು ಅಫ್ಘಾನಿಸ್ತಾನವನ್ನು ಅಪಾಯ ತಂದೊಡ್ಡಬಲ್ಲ ಆಡಳಿತವೆಂದು ಗುರುತಿಸಿದ್ದು. ಆನಂತರ ಹೂಡಿದ ತನ್ನ ಟ್ರಿಲಿಯನ್ ಡಾಲರ್ ಬಂಡವಾಳ ಅಮೆರಿಕ ದೇಶಕ್ಕೆ ಯಾಕೆ ಚಿಂತೆ ತರುತ್ತಿಲ್ಲವೆಂದರೆ ಅದು ಸಾಕಷ್ಟು ನೊಂದಿದೆ, ಬೆಂದಿದೆ, ಬಸವಳಿದಿದೆ ಮತ್ತು ಹಿಂದೆ ವಿಯೆಟ್ನಾಮ್ ಯದ್ಧದಲ್ಲಿ ಆದಂತೆ ತೀವ್ರವಾಗಿ ಗಾಯಗೊಂಡಿದೆ. ಗಾಯಗೊಂಡ ಹುಲಿ ಅಪಾಯಕಾರಿ; ಗಾಯಗೊಂಡ ಹಾವೂ ಅಪಾಯಕಾರಿ. ಅಮೆರಿಕ ಈ ಎರಡೂ ವರ್ಗಕ್ಕೆ ಸೇರದ ನರಿ ಜಾತಿಯ ಮಾರ್ವಾಡಿಯೆಂಬುದು ಸ್ಪಷ್ಟವಿದೆ. ಮೆಕ್ಸಿಕೊ ಮತ್ತು ಲ್ಯಾಟಿನ್ ಅಮೆರಿಕ ದೇಶಗಳ ಮಾದಕವಸ್ತುಗಳ ವ್ಯವಹಾರಜಾಲವನ್ನು ಖಂಡಿಸಿ ಅವುಗಳ ವಿರುದ್ಧ ಕಠಿಣ ಕ್ರಮಗಳ ಸವಾಲೆಸೆಯುವ ಅಮೆರಿಕಕ್ಕೆ ಅಫ್ಘಾನಿಸ್ತಾನದ ಮಾದಕವಸ್ತುಜಾಲ ಕಾಣದಾಗಿದೆ. ಕಾರಣ, ಅದರ ವ್ಯಾಪಾರ ಮುಗಿದಿದೆ. ಈಗ ಏನಿದ್ದರೂ ಹಾಕಿದ ಡೇರೆ ಬಿಚ್ಚಿ ಬೇರೆ ಊರನ್ನು ಹುಡುಕುವುದಷ್ಟೇ ಉಳಿದಿದೆ. ವಿಶ್ವಸಂಸ್ಥೆಯೆಂಬ ಜಾಗತಿಕ ಸ್ವಯಂಸೇವಾಸಂಸ್ಥೆಯು ತಾನು ಹುಟ್ಟಿದಂದಿನಿಂದ ಕಾದು ನೋಡುವ ತಂತ್ರವನ್ನಷ್ಟೇ ಹೂಡಿ ಇಷ್ಟು ಕಾಲ ಕಳೆದಿದೆ. ತೀರಾ ಅಶಕ್ತ ಮತ್ತು ಪುಟ್ಟ ರಾಷ್ಟ್ರಗಳ ಮೇಲಷ್ಟೇ ಅದರ ಪಾರಮ್ಯವೆಂಬುದು ಸ್ಪಷ್ಟವಾಗಿದೆ. ಇತ್ತೀಚೆಗೆ ಮ್ಯಾನ್ಮಾರಿನಲ್ಲಿ ಸಂಭವಿಸಿದ ಮಿಲಿಟರಿ ಆಡಳಿತದ ದೌರ್ಜನ್ಯದ ವಿರುದ್ಧ ಅದಕ್ಕೇನೂ ಮಾಡಲಾಗಲಿಲ್ಲ. ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ಈ ಹಿಂದಿನ ನಾಯಕಿ ಆಂಗ್‌ಸಾನ್‌ಸೂಕಿಯ ಬಿಡುಗಡೆಯೂ ಅದರಿಂದ ಸಾಧ್ಯವಾಗಲಿಲ್ಲ. ಅಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯವಹಾರವನ್ನು ನಿಲ್ಲಿಸಲೂ ಆಗಲಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಸರದಿಸಾಲಿನಲ್ಲಿ ಭಾರತ ಅನೇಕ ಸಲ ಅನುಭವಿಸಿದಾಗ ಅದು ಸುದ್ದಿಯಾಗಿರಲಿಲ್ಲ. ಆದರೆ ಈ ಬಾರಿ ಭಾರತಕ್ಕೆ ಮತ್ತೆ ಆ ಅವಕಾಶ ಬಂದಾಗ ಭಾರತವು ಇದೇ ಮೊದಲಬಾರಿಗೆ ವಿಶ್ವಗುರುವಾಯಿತೆಂಬಂತೆ ಪ್ರಚಾರ ನಡೆಯಿತು. ನಮ್ಮ ಕುರಿಮಂದೆ ಸಂತೋಷದಿಂದ ‘ಮೇ’ ಎಂಬ ಸಮೂಹಗಾನವನ್ನು ಹಾಡಿದವು. ಹಿಂದೆಲ್ಲ ವಿದೇಶಾಂಗ ವ್ಯವಹಾರಗಳ ಸಚಿವರು ಅಥವಾ ಕಾರ್ಯದರ್ಶಿಗಳು ಅದರ ಸಭೆಗೆ ಹಾಜರಾದರೆ ಅದೇನೋ ರಾಜಕೀಯದ ಒಲಿಂಪಿಕ್ಸ್ ಎಂಬಂತೆ ಪ್ರಧಾನಿಯೇ ಖುದ್ದು ಹಾಜರಾದರು. ತಮಾಷೆಯೆಂದರೆ ಅವರೊಬ್ಬರೇ ರಾಷ್ಟ್ರನಾಯಕರು ಈ ಸಭೆಯಲ್ಲಿ ಹಾಜರಾದದ್ದು. ಉಳಿದವರೆಲ್ಲ ಕಾರ್ಯಾಂಗದ ಹಿರಿತನದಲ್ಲಿ ಬೆಳ್ಳಿ, ಕಂಚಿನ ಪದಕ ವಿಜೇತರೇ!
ನಮ್ಮ ಪ್ರಧಾನಿಯವರನ್ನು ಯಾರೂ ಈ ಕುರಿತು ಪ್ರಶ್ನೆ ಹಾಕಿಲ್ಲ. ಇಂತಹ ಪ್ರಧಾನಿಯವರು ಸ್ತಂಭೀಭೂತರಾಗಿ ಕುಳಿತರೇ ಹೊರತು ಭದ್ರತಾಮಂಡಳಿಯ ಸಭೆ ಕರೆದು ಅಫ್ಘಾನಿಸ್ತಾನದ ಕುರಿತು ಯಾವುದೇ ರಾಜಕೀಯ, ಆರ್ಥಿಕ ಒತ್ತಡದ ಕ್ರಮವನ್ನಾಗಲೀ ಕನಿಷ್ಠ ಖಂಡನಾ ನಿರ್ಣಯವನ್ನಾಗಲೀ ಕೈಗೊಳ್ಳುವ ಪ್ರಸ್ತಾವನೆಯನ್ನು ಮುಂದಿಡಲಿಲ್ಲ. ವೈಯಕ್ತಿಕವಾಗಿ ಅಥವಾ ದೇಶದ ಪರವಾಗಿ ಏನೂ ಆಡಲಿಲ್ಲ. ಹೋಗಲಿ, ತಾಲಿಬಾನ್ ಭಾರತಕ್ಕೆ ಸೇನೆಯನ್ನು ಕಳಿಸುವ ಅಥವಾ ಇನ್ಯಾವುದೇ ರೀತಿಯಲ್ಲಿ ತನ್ನ ವ್ಯವಹಾರಗಳಲ್ಲಿ ಹಸ್ತಕ್ಷೇಪಮಾಡಿದರೆ ಅದರ ತೀವ್ರ ಪರಿಣಾಮಗಳನ್ನೆದುರಿಸಬೇಕಾಗುತ್ತದೆಯೆಂದು ಮತ್ತು ಅಮೆರಿಕ ಮುಂದಾಳುತನದ ನ್ಯಾಟೋ ಪಟ್ಟ ಪಾಡನ್ನು ನೆನಪಿಸಿಕೊಳ್ಳಬೇಕಾಗುತ್ತದೆಂದು ತಾಲಿಬಾನಿನ ವಕ್ತಾರರು ವ್ಯಂಗ್ಯವಾಗಿ ಹೇಳಿದಾಗಲೂ ಭಾರತ ಉತ್ತರಿಸಲಿಲ್ಲ. ಮೌನವು ತಾಲಿಬಾನಿಗಳಿಗೆ ಸಮ್ಮತಿ ಸೂಚಕವೇ? ಅಥವಾ ಅವರಿಗೆ ತಾವು ಹೆದರಿದ್ದೇವೆಂಬ ಅರ್ಥವೇ?

ಅನೇಕ ದಿನಗಳ ಆನಂತರ ನಮ್ಮ ಪ್ರಧಾನಿ ಅಫ್ಘಾನಿಸ್ತಾನದ ಕುರಿತು ಚರ್ಚಿಸಲು ಸರ್ವಪಕ್ಷಸಭೆಯನ್ನು ಕರೆದಿದ್ದಾರೆಂದು ವರದಿಯಾಗಿದೆ. ಜಮ್ಮು-ಕಾಶ್ಮೀರದಲ್ಲಿ ಕ್ಷಿಪ್ರ ಬದಲಾವಣೆಯನ್ನು ತರುವಾಗಲೂ, ಸಿಎಎ, ಎನ್‌ಆರ್‌ಸಿ ಅಥವಾ ಇತ್ತೀಚೆಗಿನ ರಾಷ್ಟ್ರೀಯ ಶಿಕ್ಷಣ ನೀತಿ ಮುಂತಾದ ಬದಲಾವಣಾ ಪರ್ವಗಳ ಕುರಿತು ಕ್ರಮ ಕೈಗೊಳ್ಳುವಾಗಲೂ ಪ್ರತಿಪಕ್ಷಗಳೊಂದಿಗೆ ಚರ್ಚಿಸದ ಪ್ರಧಾನಿ ಈಗ ತೀರ ಸಂದಿಗ್ಧದಲ್ಲಿದ್ದಾರೆಂಬದು ಸ್ಪಷ್ಟ. ಅವರದೇ ದೇಶಭಕ್ತರ ಅಮಿತ ತಂಡ ಅವರಿಗೆ ಸರಿಯಾದ ಸಲಹೆಗಳನ್ನು ನೀಡಬಲ್ಲರೆಂದಾಗಲೀ ತಾನು ಸರಿಯಾದ ನಿರ್ಧಾರವನ್ನು ಕೈಗೊಳ್ಳಲು ಶಕ್ತನೆಂದಾಗಲೀ ಅವರಿಗೆ ವಿಶ್ವಾಸವಿದ್ದಂತಿಲ್ಲ. 1947ರ ವಿಭಜನೆಯ ಗಾಯ ಮಾಸುವುದಕ್ಕೆ ಬಿಡದೆ ಅದಕ್ಕೆ ಉಪ್ಪುಸವರುವಂತೆ ವಿಭಜನೆಯ ಭಯಾನಕತೆಯ ದಿನವೆಂದು ಅಗಸ್ಟ್ 14ನ್ನು ಗುರುತಿಸುವ ಮತೀಯ ರಾಜಕಾರಣಕ್ಕೂ ಅಂತರ್‌ರಾಷ್ಟ್ರೀಯ/ವಿಶ್ವವ್ಯವಹಾರಗಳನ್ನು ನಡೆಸುವುದಕ್ಕೂ ಇರುವ ಅಪಾರ ಅಂತರ ಅವರಿಗೆ ಅರ್ಥವಾದಂತಿದೆ. ಸರ್ವಪಕ್ಷ ಸಭೆಯಲ್ಲಿ ಎಂತಹ ಮಗು ಹುಟ್ಟುತ್ತದೆಯೋ ಕಾದು ನೋಡಬೇಕು. ವಿಚಿತ್ರವೆಂದರೆ ನಮ್ಮ ಪ್ರಧಾನಿ ಈಗ ಪುಟಿನ್ ಅವರೊಂದಿಗೆ ಅಫ್ಘಾನಿಸ್ತಾನದ ಕುರಿತು ಚರ್ಚಿಸಲಿದ್ದಾರಂತೆ. ಈಗ ನಾವು ಅರ್ಥವಾಗದ, ಅರ್ಥವಿಸಲಾಗದ, ಡೋಲಾಯಮಾನ ಸ್ಥಿತಿಯಲ್ಲಿದ್ದೇವೆ. ಇಷ್ಟಕ್ಕೂ ತಾಲಿಬಾನ್ ಎಂದರೇನು? ನಮ್ಮಲ್ಲಿ ‘ಜಿಹಾದ್’ ಎಂಬ ಪದವು ತಪ್ಪುಅರ್ಥವನ್ನು ಸೃಷ್ಟಿಸಿದಂತೆ ಈ ಪದವನ್ನೂ ಸೃಷ್ಟಿಸಲಾಗಿದೆ. ಇದರ ಅರ್ಥ ‘ವಿದ್ಯಾರ್ಥಿ ಪರಿಷದ್’. (ಗೂಬೆಗಳ ಗುಂಪಿಗೆ ಇಂಗ್ಲಿಷಿನಲ್ಲಿ ‘ಪಾರ್ಲಿಮೆಂಟ್’ ಎಂದು ಹೇಳುತ್ತಾರೆ!) ಪಾಷ್ಟೋ ಭಾಷೆಯ ಈ ಪದವು ದಕ್ಷಿಣ ಅಫ್ಘಾನಿಸ್ತಾನದ ಕಂದಹಾರಿನಲ್ಲಿ ಹುಟ್ಟಿಕೊಂಡ ಆಂದೋಲನದ ಹೆಸರಾಯಿತು. ಕಂದಹಾರ್ ಭಾರತೀಯರಿಗೆ ನೆನಪುಳಿಯುವ ಪುಣ್ಯಸ್ಥಳ. ಅಲ್ಲೇ ನಾವು ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಜಮ್ಮು-ಕಾಶ್ಮೀರದ, ಈಗ ಪ್ರತಿಪಕ್ಷದಲ್ಲಿರುವ, ಕಳೆದೆರಡು ವರ್ಷಗಳಲ್ಲಿ ಕೆಲವು ಸಮಯ ಗೃಹಬಂಧನದಲ್ಲಿದ್ದ, ಹಿಂದೊಮ್ಮೆ ಭಾಜಪದೊಂದಿಗೆ ಅಧಿಕಾರವನ್ನು ಹಂಚಿಕೊಂಡಿದ,್ದ ವರ್ಣರಂಜಿತ ನಾಯಕಿ ಮೆಹಬೂಬ ಮುಫ್ತಿಯ ಬಿಡುಗಡೆಗೆ ವಿನಿಮಯವಾಗಿ ಭಯೋತ್ಪಾದಕರನ್ನು ಗೌರವಪೂರ್ವಕವಾಗಿ ಕೊಂಡೊಯ್ದು ಇಳಿಸಿದ್ದು! ಸೋವಿಯತ್ ಸರಕಾರವು ಅಫ್ಘಾನಿಸ್ತಾನವನ್ನು ಬಿಟ್ಟುಕೊಟ್ಟಾಗ ತಾಲಿಬಾನಿಗಳು ತಮ್ಮ ದೇಶದ ಅಶಕ್ತ ಆಡಳಿತದ ವಿರುದ್ಧ ತಿರುಗಿಬಿದ್ದು ಆಡಳಿತವನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸಿದರು. ಆನಂತರ ಯಶಸ್ವಿಯಾಗಿ 1996ರಲ್ಲಿ ಅದನ್ನು ‘ಇಸ್ಲಾಮಿಕ್ ಎಮಿರೇಟ್ಸ್’ ಎಂದು ಘೋಷಿಸಿದರು. ಶರಿಯಾ ಕಾನೂನನ್ನು ಕಡ್ಡಾಯವಾಗಿ ಜಾರಿಗೆ ತಂದರು. ಮಹಿಳೆಯರು ಉದ್ಯೋಗ, ಶಿಕ್ಷಣ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆ ನಿಯಂತ್ರಿಸಿದರು. ಸಾರ್ವಜನಿಕ ಮರಣದಂಡನೆ, ಚಾಟಿಯೇಟಿನಂತಹ ಮಧ್ಯಯುಗದ ದಂಡನಾವಿಧಾನವನ್ನು ಕೂಡಾ ಅನುಶಾಸನಗೊಳಿಸಿದರು. ಒಮ್ಮೆಲೇ ಅಫ್ಘಾನಿಸ್ತಾನವು ಶತಮಾನಗಳ ಕಾಲದಷ್ಟು ಹಿಂದಕ್ಕೆ ಹೋಯಿತು. ಬಾಮಿಯಾನ್ ಬುದ್ಧನನ್ನು ನಿರ್ನಾಮಮಾಡಿದರು. ಮುಂದೆ ಅಮೆರಿಕದ ರಕ್ಷಣೆಗೆ ಭಂಗ ತಂದಾಗ ಅಳಿದೇ ಹೋದಂತಿದ್ದರು. ಈಗ ಮತ್ತೆ ಅವತರಿಸಿದ ತಾಲಿಬಾನಿಗಳು ಅಂತರ್‌ರಾಷ್ಟ್ರೀಯವಾಗಿ ಗೌರವಕ್ಕೆ ಪಾತ್ರರಾಗಬೇಕಾದರೆ ತಮ್ಮ ರಾಕ್ಷಸೀಯ ಪ್ರವೃತ್ತಿಗೆ ತಿಲಾಂಜಲಿ ನೀಡಿ ಮನುಷ್ಯರಂತೆ ನಡೆದುಕೊಳ್ಳಬೇಕು. ಅಫ್ಘಾನಿಸ್ತಾನಕ್ಕೆ ‘ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ್’ ಎಂಬ ಹೊಸ ನಾಮಕರಣವಾಗಿದೆ. (ನಾಮಕರಣವು ಇಂದು ದೇಶಭಕ್ತಿಯ ಸಾಧನವೂ ಆಗಿದೆ!) ಇದು ಸಾಧ್ಯವೇ ಎಂಬುದೇ ಪ್ರಶ್ನೆ. ಏಕೆಂದರೆ ಇಂದು ಯಾವ ರಾಷ್ಟ್ರಕ್ಕೂ ಮಾನವ ಹಕ್ಕುಗಳ ಕುರಿತು ಯಾವ ಕಾಳಜಿ, ಕಳಕಳಿಯೂ ಇಲ್ಲ. ಅವೆಲ್ಲ ಅಧಿಕಾರಕ್ಕೆ ಮಾರಕವಾದ ಅಂಶಗಳು ಎಂದೇ ಭಾವಿಸಲಾಗುತ್ತದೆ. ಉತ್ತರ ಕೊರಿಯಾವೂ ವ್ಯಾಪಾರಕ್ಕೆ ಎಲ್ಲರಿಗೂ ಸ್ವೀಕಾರಾರ್ಹ. ಹಣವರ್ಧನೆಗೆ ಬೇಕಾದ ಎಲ್ಲ ಅಂಶಗಳೂ ಯಾವುದೇ ಆಡಳಿತಕ್ಕೂ ಸಹ್ಯ. ಅವು ಮಾನವಹಕ್ಕುಗಳನ್ನು ಎಷ್ಟೇ ತುಳಿದರೂ ಅದು ಗೌಣವಾಗುತ್ತದೆ. ಮಾನವಹಕ್ಕುಗಳಿಗೆ ಭಾರತವೂ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು ಕಸದಷ್ಟೂ ಬೆಲೆನೀಡುವುದಿಲ್ಲವೆಂಬುದು ಸರ್ವವಿದಿತವಾಗಿದೆ. ಅಂತರ್‌ರಾಷ್ಟ್ರೀಯ ರಾಜಕಾರಣದಲ್ಲಿ ನಮ್ಮನ್ನು ಮೆಚ್ಚಿ ಯಾವ ರಾಷ್ಟ್ರವು ಏನೇ ಹೇಳಿದರೂ ಅದು ಸರಿ; ತೆಗಳಿದರೆ ಅದು ತಪ್ಪು. ಇದಕ್ಕೆ ದೇಶಭಕ್ತಿಯೆಂದು ಹೇಳಲಾಗುತ್ತದೆ. ಟಾಗೋರ್ ಹೇಳಿದಂತೆ ಮಾನವಹಕ್ಕುಗಳನ್ನು ಸೋಲಿಸುವ ದೇಶಭಕ್ತಿಯನ್ನು ಜನರು ತಿರಸ್ಕರಿಸುವವರೆಗೂ ಅಫ್ಘಾನಿಸ್ತಾನದ ಪರಿಸ್ಥಿತಿ ಎಲ್ಲ ರಾಷ್ಟ್ರಗಳಿಗೂ ಒಂದಲ್ಲ ಒಂದು ಕಾಲಕ್ಕೆ ಒದಗುವುದು ಅನಿವಾರ್ಯ. ನಮ್ಮ ಪ್ರಧಾನಿ ದೇವರ ಸಮ್ಮುಖದಲ್ಲೆಂಬಂತೆ ಹೇಳಿದ ಮಾತುಗಳು ಸಾರ್ವಕಾಲಿಕ ಸತ್ಯವಾಗುವುದು ಹೀಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)