varthabharthi


ತಿಳಿ ವಿಜ್ಞಾನ

ಭೂಮಿ ಭಾರವಾಗುತ್ತಿದೆಯೇ..!?

ವಾರ್ತಾ ಭಾರತಿ : 29 Aug, 2021
ಆರ್. ಬಿ. ಗುರುಬಸವರಾಜ

ನಾವಿಂದು ತಂತ್ರಜ್ಞಾನದ ತುತ್ತ ತುದಿಯಲ್ಲಿದ್ದೇವೆ. ನಮ್ಮ ಪ್ರತಿ ಕಾರ್ಯದಲ್ಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ತಂತ್ರಜ್ಞಾನವಿಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವಿಲ್ಲವೇನೋ ಎಂಬ ಹಂತಕ್ಕೆ ತಲುಪಿದ್ದೇವೆ. ಬಹುತೇಕ ನಗರಗಳು ಗಗನಚುಂಬಿ ಕಟ್ಟಡಗಳಿಂದ ತುಂಬಿವೆ. ದುಬೈನ ಬುರ್ಜ್ ಖಲೀಫಾದಂತಹ ಕಟ್ಟಡಗಳ ನಿಮಾಣದಲ್ಲಿ ತಂತ್ರಜ್ಞಾನದ ಅಗಾಧತೆಯನ್ನು ಕಾಣಬಹುದು. ಹಾಗೆಯೇ ಬುಚಾರೆಸ್ಟ್‌ನಲ್ಲಿನ ಸಂಸತ್ತಿನ ಅರಮನೆ 7,00,000 ಟನ್ ಉಕ್ಕು ಮತ್ತು ಕಂಚನ್ನು ಹೊಂದಿದ ಅತಿ ದೊಡ್ಡ ಕಟ್ಟಡ ಎಂಬ ದಾಖಲೆ ಹೊಂದಿದೆ. ಒಂದನ್ನು ಮೀರಿಸಿದ ಮತ್ತೊಂದು ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಗಗನಚುಂಬಿ ಕಟ್ಟಡಗಳು ಹೆಚ್ಚಿದಂತೆಲ್ಲ ಭೂಮಿ ಭಾರವಾಗುತ್ತಿದೆಯಾ ಎಂಬ ಪ್ರಶ್ನೆ ಕಾಡದಿರದು. ಹಾಗಾದರೆ ನಿಜಕ್ಕೂ ಭೂಮಿ ಭಾರವಾಗುತ್ತಿದೆಯಾ? ಇದರಿಂದಾಗುವ ಪರಿಣಾಮಗಳೇನು? ಎಂಬುದನ್ನು ತಿಳಿದರೆ, ಸಮಸ್ಯೆ ಹೇಗೆ ನಿವಾರಿಸಬಹುದು ಎಂಬ ಉತ್ತರ ದೊರೆತೀತು ಅಲ್ಲವೇ?

ಕಟ್ಟಡ ಭದ್ರವಾಗಿರಬೇಕು ಮತ್ತು ಹೆಚ್ಚು ರಕ್ಷಣೆಯಿಂದ ಕೂಡಿರಬೇಕೆಂಬ ಆಶಯದಿಂದ ನಿರ್ಮಾಣದಲ್ಲಿ ಉತ್ಕೃಷ್ಟ ಗುಣಮಟ್ಟದ ಕಚ್ಚಾ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಈ ಸಾಮಗ್ರಿಗಳ ಭಾರವು ಭೂಮಿಯ ಭಾರಕ್ಕೆ ಕಾರಣವಾಗಬಹುದೇ ಎಂಬ ಪ್ರಶ್ನೆಯೊಂದು ಮನದೊಳಗಣ ಮೂಲೆಯಲ್ಲಿ ಏಳುವುದು ಸಹಜ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಭೂಮಿಯ ದ್ರವ್ಯರಾಶಿ ಹಾಗೂ ವಸ್ತುಗಳ ದ್ರವ್ಯರಾಶಿಯ ಬಗ್ಗೆ ಒಂದಿಷ್ಟು ತಿಳಿಯುವುದು ಅಗತ್ಯ. ಭೂಮಿಯು ವಾಸ್ತವವಾಗಿ ಒಂದೆರಡು ಪ್ರಕ್ರಿಯೆಗಳ ಮೂಲಕ ದ್ರವ್ಯರಾಶಿಯನ್ನು ಪಡೆದುಕೊಳ್ಳುತ್ತದೆ ಮತ್ತು ಕಳೆದುಕೊಳ್ಳುತ್ತದೆ. ಆದರೆ ಬೃಹತ್ ಗಾತ್ರದ ಕಟ್ಟಡ ನಿರ್ಮಾಣಗಳು ದ್ರವ್ಯರಾಶಿ ಹೆಚ್ಚಳಕ್ಕೆ ಕಾರಣವಲ್ಲ. ನಮ್ಮ ಭವ್ಯವಾದ ಗ್ರಹವು ಅದರ ಗುರುತ್ವಾಕರ್ಷಣೆಯಿಂದ ಸೆರೆಹಿಡಿಯಲ್ಪಟ್ಟ ಧೂಳು ಮತ್ತು ಉಲ್ಕೆಗಳ ಮೂಲಕ ದ್ರವ್ಯರಾಶಿಯನ್ನು ಪಡೆಯುತ್ತದೆ. ಸಂಶೋಧನೆಗಳ ಪ್ರಕಾರ ಪ್ರತಿದಿನ ಸುಮಾರು 100-300 ಮೆಟ್ರಿಕ್ ಟನ್‌ನಷ್ಟು ಅಂತರಿಕ್ಷ ಧೂಳು ಭೂಮಿಗೆ ಅಪ್ಪಳಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದು ವರ್ಷಕ್ಕೆ 30,000ದಿಂದ 1,00,000 ಟನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಭೂಮಿ ತನ್ನ ಭೂಗರ್ಭದ ಉಷ್ಣತೆಯ ಮೂಲಕ ತನ್ನ ದ್ರವ್ಯರಾಶಿಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇರುತ್ತದೆ. ಹಾಗೆಯೇ ನಮ್ಮ ವಾತಾವರಣದಿಂದ ಕೆಲವು ಹೈಡ್ರೋಜನ್ ಮತ್ತು ಹೀಲಿಯಂಗಳು ತಪ್ಪಿಸಿಕೊಂಡಾಗಲೂ ಒಂದಿಷ್ಟು ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ. ಹೀಗೆ ಪ್ರತಿವರ್ಷ ಭೂಮಿ 1,00,000 ಟನ್‌ಗಳಿಗಿಂತ ಹೆಚ್ಚು ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ. ಈಗ ನಾವು ನಮ್ಮ ಮೂಲ ಪ್ರಶ್ನೆಗೆ ಹಿಂದಿರುಗೋಣ.

ಕಟ್ಟಡ ನಿರ್ಮಾಣಕ್ಕೆ ಬಳಸುವ ಕಚ್ಚಾಸಾಮಗ್ರಿಗಳಿಂದ ಭೂಮಿ ಭಾರವಾಗುವುದಿಲ್ಲವೇ? ಇದಕ್ಕೆ ಉತ್ತರ ಭೂಮಿ ಭಾರವಾಗುವುದಿಲ್ಲ ಎನ್ನಬಹುದು. ಏಕೆಂದರೆ ನಿರ್ಮಾಣಕ್ಕೆ ಬಳಸುವ ಕಬ್ಬಿಣ, ಸಿಮೆಂಟ್, ಕಲ್ಲು, ಇಟ್ಟಿಗೆ, ಕಟ್ಟಿಗೆ ಮುಂತಾದ ಎಲ್ಲಾ ಸಾಮಗ್ರಿಗಳು ಈಗಾಗಲೇ ಭೂಮಿಯಲ್ಲಿಯೇ ಇದ್ದವು. ಈಗ ನಾವು ಅದನ್ನು ಸ್ಥಳಾಂತರಿಸಿದ್ದೇವೆ ಅಷ್ಟೆ. ಹೀಗಾಗಿ ಭೂಮಿಯ ಒಟ್ಟಾರೆ ದ್ರವ್ಯರಾಶಿಗೆ ಹೆಚ್ಚುವರಿಯಾಗಿ ನಾವು ಏನನ್ನೂ ಸೇರಿಸಿಲ್ಲ. ಸಿಮೆಂಟ್ ಎಂಬುದು ಸುಣ್ಣದ ಕಲ್ಲು ಮತ್ತು ಜೇಡಿಮಣ್ಣಿನ ಮಿಶ್ರಣ. ಈಗಾಗಲೇ ಇವೆಲ್ಲವೂ ನಮ್ಮ ಗ್ರಹದಲ್ಲಿದ್ದು ಭೂಮಿಯ ದ್ರವ್ಯರಾಶಿಯಲ್ಲಿ ಸೇರಿವೆ. ಅಲ್ಲದೇ ಕಬ್ಬಿಣವೂ ಭೂಮಿಯಲ್ಲಿನ ಅದಿರಿನ ಉತ್ಪನ್ನದ ರೂಪ. ಹಾಗಾಗಿ ಇವೆಲ್ಲವೂ ಭೂಮಿಯಲ್ಲಿದ್ದವು. ಗಗನಚುಂಬಿ ಕಟ್ಟಡ ನಿರ್ಮಾಣದಿಂದ ಭೂಮಿ ಭಾರವಾಗುವುದಿಲ್ಲ. ಆದರೆ ಇಂತಹ ಸಾಮೂಹಿಕ ನಿರ್ಮಾಣಗಳು ಪರಿಸರದ ಮೇಲೆ ಬೀರುವ ಪರಿಣಾಮಗಳು ವಿಭಿನ್ನ ಕಥೆಗಳನ್ನು ಸೃಷ್ಟಿಸುತ್ತವೆ. ಸಾಂದರ್ಭಿಕ ಘಟನೆಗಳಾದ ಭೂಕಂಪ ಅಥವಾ ಜ್ವಾಲಾಮುಖಿ ಸ್ಫೋಟಗಳನ್ನು ಹೊರತುಪಡಿಸಿ ಭೂಮಿಯು ಸ್ಥಿರವಾದ ಸ್ಥಳದಂತೆ ಗೋಚರಿಸುತ್ತದೆ. ಕೋಟ್ಯಂತರ ವರ್ಷಗಳಿಂದ ನಿರಂತರವಾಗಿ ಸೂರ್ಯನ ಶಕ್ತಿಯು ಭೂಮಿಗೆ ತಲುಪುತ್ತಲೇ ಇದೆ. ನಮಗೆಲ್ಲಾ ತಿಳಿದಂತೆ ಸೂರ್ಯನು ಪ್ರಕಾಶಮಾನವಾದ ಅನಿಲಗಳ ದ್ರವ್ಯರಾಶಿ ಹೊಂದಿದ್ದಾನೆ. ಒಂದು ದೈತ್ಯಾಕಾರದ ಪರಮಾಣು ಕುಲುಮೆ. ನಿರಂತರವಾಗಿ ಸೂರ್ಯನ ಹೈಡ್ರೋಜನ್ ದಹಿಸಿ ಹೀಲಿಯಂ ಆಗಿ ಪರಿವರ್ತನೆ ಆಗುತ್ತಲೇ ಇದೆ. ಪ್ರತಿ ಸೆಕೆಂಡಿಗೆ ಸುಮಾರು 4 ಬಿಲಿಯನ್ ಕಿ.ಗ್ರಾಂನಷ್ಟು, ದಿನಕ್ಕೆ 370 ಬಿಲಿಯನ್ ಟನ್ ಕೊರತೆ ಉಂಟಾಗುತ್ತದೆ. ಸೂರ್ಯ ಕಳೆದುಕೊಳ್ಳುವ ಎಲ್ಲಾ ಶಕ್ತಿಯು ಭೂಮಿಗೆ ತಲುಪುವುದಿಲ್ಲ.

ನಾವು ಇಡೀ ಭೂಮಿಯನ್ನು ಸೌರಫಲಕಗಳಿಂದ ಮುಚ್ಚಿದರೆ ಪ್ರತಿ ಸೆಕೆಂಡಿಗೆ ಕೇವಲ 2 ಕಿ.ಗ್ರಾಂ.ನಷ್ಟು ಅಥವಾ ವರ್ಷಕ್ಕೆ 60,000 ಟನ್ ಮಾತ್ರ. ಸೂರ್ಯನಿಂದ ಬರುವ ಶಕ್ತಿಯಿಂದ ಗ್ರಹದ ಉಷ್ಣತೆ ಹೆಚ್ಚುತ್ತಲೇ ಇದೆ. ಇದು ಗ್ರಹದ ದ್ರವ್ಯರಾಶಿಯ ಮೇಲೆ ಕನಿಷ್ಠ ಪರಿಣಾಮವನ್ನು ಬೀರುತ್ತದೆ. ಇಡೀ ವಾತಾವರಣದಲ್ಲಿ 1 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಹೆಚ್ಚಳವು ಕೇವಲ 60 ಟನ್‌ಗಳನ್ನು ಮಾತ್ರ ಭೂಮಿಯನ್ನು ಸೇರುತ್ತದೆ. ಪ್ರತಿವರ್ಷ 40,000 ಟನ್‌ಗಳಷ್ಟು ಅಂತರಿಕ್ಷದ ಧೂಳು ಭೂಮಿಗೆ ಸೇರುತ್ತದೆ. ಇದು ಏಕರೂಪದ್ದಾಗಿದೆ ಎಂದು ಊಹಿಸಿದರೆ ಭೂಮಿಯ ತ್ರಿಜ್ಯವು ಪ್ರತಿವರ್ಷ ಸುಮಾರು 0.02 ನ್ಯಾನೋ ಮೀಟರ್‌ಗಳಷ್ಟು ಬೆಳೆಯುತ್ತದೆ. ಅಂದರೆ ಖಂಡಗಳು ಚಲಿಸುತ್ತಿರುವುದಕ್ಕಿಂತ ಸುಮಾರು ಒಂದು ಶತಕೋಟಿ ಪಟ್ಟು ನಿಧಾನವಾಗಿರುತ್ತದೆ. ಇದರಿಂದ ಪ್ರತಿವರ್ಷ ಭೂಮಿಯು ನಿಧಾನವಾಗಿ ತೂಕ ಪಡೆಯುತ್ತದೆ. ಹೀಗೆ ವಿವಿಧ ಕಾರಣಗಳಿಂದಾಗಿ ಭೂಮಿ ದ್ರವ್ಯರಾಶಿಯನ್ನು ಕಳೆದುಕೊಳ್ಳುವ ಹಾಗೂ ಪಡೆದುಕೊಳ್ಳುವ ಪ್ರಕ್ರಿಯೆ ಮುಂದುವರಿಯುತ್ತಲೇ ಇದೆ. ಇದರಿಂದ ಜೀವಿಗಳಿಗಾಗಲಿ, ಭೂಮಿಗಾಗಲಿ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಭವಿಷ್ಯದಲ್ಲಿನ ಘಟನೆಗಳಿಂದ ಭೂಮಿಯ ದ್ರವ್ಯರಾಶಿಯಲ್ಲಿ ಬದಲಾವಣೆಗಳಾಗಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)