varthabharthi


ಪ್ರಚಲಿತ

ಜನ ಸಮುದಾಯವೊಂದರ ಯಾತನೆಯ ಕತೆ

ವಾರ್ತಾ ಭಾರತಿ : 30 Aug, 2021
ಸನತ್ ಕುಮಾರ್ ಬೆಳಗಲಿ

ಮೋಹನರಾಮ್ ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಸಾಕಷ್ಟು ಫೀಲ್ಡ್ ವರ್ಕ್ ಮಾಡಿ ಖಚಿತ ಪುರಾವೆಗಳನ್ನು ಕಲೆ ಹಾಕಿ ಬರೆದ ಈ ಪುಸ್ತಕ ಎಲ್ಲರೂ ಓದಬೇಕಾದ ಅತ್ಯಂತ ಮಹತ್ವದ ಪುಸ್ತಕವೆಂದರೆ ಅತಿಶಯೋಕ್ತಿಯಲ್ಲ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನೈಜ ಸಮಸ್ಯೆಗಳ ಬಗ್ಗೆ ಕನ್ನಡದಲ್ಲಿ ಇಂತಹ ಇನ್ನೊಂದು ಪುಸ್ತಕ ಬಂದಿಲ್ಲ.


ಜಗತ್ತಿನ ಯಾವುದೇ ದೇಶದಲ್ಲಿ ಉಗ್ರಗಾಮಿಗಳು ಬಾಂಬ್ ಸ್ಫೋಟಿಸಲಿ, ಹಲ್ಲೆ ಮಾಡಲಿ ಅದರ ಪರಿಣಾಮ ಭಾರತದ ಮೇಲಾಗುತ್ತದೆ. ಎಲ್ಲರೊಂದಿಗೆ ಈ ದೇಶವನ್ನು ಕಟ್ಟಿದ ಜನಸಮುದಾಯವೊಂದು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ.

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನಿಗಳ ಹಾವಳಿ ಆರಂಭವಾದ ನಂತರ ಇಲ್ಲಿ ಮತ್ತೆ Islamophobia ವ್ಯಾಧಿ ಕೊರೋನಗಿಂತ ವ್ಯಾಪಕವಾಗಿ ಹಬ್ಬುತ್ತಿದೆ. ಅವರೆಲ್ಲಿರುತ್ತಾರೋ ಅಲ್ಲಿ ಇದೇ ಪರಿಸ್ಥಿತಿ ಎಂಬ ಕುಹಕದ ಮಾತುಗಳನ್ನು ಕೇಳುತ್ತಿದ್ದೇವೆ.
ಕೋವಿಡ್ ಕಾಲದಲ್ಲಿ ತಬ್ಲೀಗಿ ಕತೆ ಕಟ್ಟಿದವರು ಈಗ ತಮ್ಮ ಮುಸ್ಲಿಂ ವಿರೋಧಿ ರಾಜಕಾರಣಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ.

ಇಂತಹ ಆತಂಕದ ಸನ್ನಿವೇಶದಲ್ಲಿ ಇತ್ತೀಚೆಗೆ ಗೆಳೆಯ ಎನ್.ಕೆ.ಮೋಹನರಾಮ್ ತಮ್ಮ ಇತ್ತೀಚಿನ ಪುಸ್ತಕ ‘21 ಶತಮಾನದ ಭಾರತೀಯ ಮುಸ್ಲಿಮರ ಅನಾಥ ಪ್ರಜ್ಞೆ’ ಕಳಿಸಿಕೊಟ್ಟರು. ತುಂಬಾ ಹೋಮ್‌ವರ್ಕ್ ಮಾಡಿಕೊಂಡು, ಚರಿತ್ರೆಯ ಪುಟಗಳನ್ನು ಜಾಲಾಡಿ ಹೊಟ್ಟನ್ನು ತೂರಿ ಅಮೂಲ್ಯ ಕಾಳುಗಳನ್ನು ಸಂಗ್ರಹಿಸಿದ ಮೋಹನರಾಮ್ ಅವರ 279 ಪುಟಗಳ ಈ ಪುಸ್ತಕ ಭಾರತದ ಮುಸ್ಲಿಮರ ಇತಿಹಾಸ, ಬದುಕು, ಯಾತನೆ, ಕೊಡುಗೆಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ.

ಬೆಂಗಳೂರಿನ ಮೋಹನರಾಮ್ ನನ್ನ ಎಪ್ಪತ್ತರ ದಶಕದ ಆತ್ಮೀಯ ಸಂಗಾತಿ. ನಾವು ಒಟ್ಟಿಗೆ ಕಮ್ಯುನಿಸ್ಟ್ ಚಳವಳಿಗೆ ಬಂದವರು. 1974ರಲ್ಲಿ ನಾನು ವಿಜಾಪುರದಿಂದ ಸಂಯುಕ್ತ ಕರ್ನಾಟಕದಲ್ಲಿ ನೇಮಕಗೊಂಡು ಬೆಂಗಳೂರಿಗೆ ಹೋದಾಗ ಮೋಹನರಾಮ್ ಒಡನಾಟ ಆರಂಭವಾಯಿತು. ನಾನು ಮಲ್ಲೇಶ್ವರಂ ಹನ್ನೊಂದನೇ ಕ್ರಾಸ್‌ನಲ್ಲಿ ರವೀಂದ್ರ ದೇಸಾಯಿ ಅವರ ಜೊತೆ ಕೊಠಡಿಯಲ್ಲಿ ಇದ್ದೆ. ಅಲ್ಲಿ ಮೋಹನರಾಮ್ ಮತ್ತು ರಮೇಶ್ ಕುಮಾರ್ (ಮಾಜಿ ಸ್ಪೀಕರ್) ಆಗಾಗ ಬರುತ್ತಿದ್ದರು. ನಾವು ಒಟ್ಟಿಗೆ ಮಲ್ಲೇಶ್ವರಂ ಸರ್ಕಲ್‌ಗೆ ಹೋಗಿ ಆ ಕಾಲದ ಪೂರ್ಣಿಮಾ ಹೊಟೇಲ್‌ನಲ್ಲಿ ಚಹಾ ಕುಡಿಯುತ್ತಾ ತಾಸುಗಟ್ಟಲೇ ಹರಟುತ್ತಿದ್ದೆವು. ಮುಂದೆ ಮೋಹನರಾಮ್ ದೂರದರ್ಶನದ ನಿರ್ದೇಶಕರಾಗಿ ಎಲ್ಲೆಲ್ಲೋ ಸುತ್ತಾಡಿ ಬೆಂಗಳೂರಿಗೆ ಬಂದು ಸೇರಿದರು. ಈಗಲೂ ಆ ಕಾಲದ ಎಡಪಂಥೀಯ ಬದ್ಧತೆಯನ್ನು ಬಿಟ್ಟು ಕೊಡದ ನಾವು ಆಗಾಗ ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇವೆ.

ಇಂತಹ ಮೋಹನರಾಮ್ ಬರೆದ ಪುಸ್ತಕವನ್ನು ಮತ್ತೆ ಮತ್ತೆ ಓದಿ ನನ್ನ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಂಡೆ. 1,200 ವರ್ಷಗಳ ಭಾರತೀಯ ಮುಸ್ಲಿಮರ ಚರಿತ್ರೆಯನ್ನು ತುಂಬಾ ತಾಳ್ಮೆ ಮತ್ತು ಒಳನೋಟಗಳಿಂದ ಕಟ್ಟಿಕೊಟ್ಟಿರುವ ಮೋಹನರಾಮ್ ದೇಶ ಕಟ್ಟಲು ಎಲ್ಲರೊಂದಿಗೆ ಒಂದಾಗಿ ಮುಂದಾಗಿ ನಿಂತಿರುವ ಮುಸ್ಲಿಮರನ್ನು ಅನುಮಾನ, ಅಸಹನೆಗಳಿಂದ, ಅವಮಾನಿಸುವುದು ಇಡೀ ದೇಶದ ನಾಗರಿಕತೆಗೆ ಮಾಡುವ ಅಪಚಾರ ಎಂದು ಆತಂಕದಿಂದ ಹೇಳುತ್ತಾರೆ.

ನಿಜ. ಸುಮಾರು 17 ಕೋಟಿಯಷ್ಟಿರುವ ಭಾರತದ ಮುಸ್ಲಿಮರ ಪರಿಸ್ಥಿತಿ ಅಯೋಮಯವಾಗಿದೆ. 90ರ ದಶಕದ ನಂತರ ಹೊಸದಾಗಿ ಹುಟ್ಟಿಕೊಂಡ ದೇಶ ಭಕ್ತರ ಎದುರು ಮುಸ್ಲಿಮರು ನಿತ್ಯವೂ ತಮ್ಮ ರಾಷ್ಟ್ರಭಕ್ತಿಯನ್ನು ಸಾಬೀತು ಮಾಡಬೇಕಾಗಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ತಮ್ಮ ಸರಕಾರದ ಮುಂದೆ ತಮ್ಮ ಆರ್ಥಿಕ , ಸಾಮಾಜಿಕ ಅಭಿವೃದ್ಧಿಯ ಬೇಡಿಕೆಗಳನ್ನು ಇಡದೇ ಈ ಭಾರತದಲ್ಲಿ ಬದುಕಲು ಸುರಕ್ಷತೆ ನೀಡಿದರೆ ಸಾಕು ಎಂದು ನಿಟ್ಟುಸಿರು ಬಿಡುತ್ತಿದ್ದಾರೆ.

ಬಾಬರ್ ಕಾಲದಿಂದಲೂ ಮುಸ್ಲಿಂ ಅರಸರು ಲೂಟಿ ಮಾಡಿಕೊಂಡು ಹೋಗಲು ಇಲ್ಲಿಗೆ ಬರಲಿಲ್ಲ. ಈ ನೆಲದಲ್ಲಿ ನೆಲೆಸಲು ಅವರು ಬಂದರು. ಮುಸ್ಲಿಮರ ಭಾರತದ ಪ್ರವೇಶ ಜಿಹಾದ್ ಆಗಿರಲಿಲ್ಲ ಎಂದು ಮೋಹನರಾಮ್ ಖಚಿತ ಪುರಾವೆಗಳೊಂದಿಗೆ ಪ್ರತಿಪಾದಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮೋಹನರಾಮ್ ಬರೆದ ಪುಸ್ತಕ ಮುಸ್ಲಿಮರ ಬದುಕಿನ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ. ಇದಕ್ಕಾಗಿ ಇತಿಹಾಸದ ಪುಟಗಳನ್ನು ಕೆದಕಿದ ಅವರು ಗಡಿಗಳ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ಇಸ್ಲಾಂ ಈ ನೆಲದಲ್ಲಿ ಪ್ರವೇಶ ಮಾಡಿದ್ದು 7ನೇ ಶತಮಾನದ ನಂತರ. ಸಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಹೆಸರಾಗಿದ್ದ ಕೇರಳ, ಗೋವಾ, ಸೂರತ್, ಕರಾಚಿ ಬಂದರುಗಳು ಕ್ರಿ.ಶ.7ನೇ ಶತಮಾನದಿಂದ ವ್ಯಾಪಾರದೊಂದಿಗೆ ಇಸ್ಲಾಂ ಧರ್ಮಕ್ಕೂ ತೆರೆದಿದ್ದವು ಎಂದು ದಾಖಲಿಸುತ್ತಾರೆ.

ಭಾರತದ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಹಿಂದಿನ ಕೇಂದ್ರ ಸರಕಾರಗಳು ನೇಮಕ ಮಾಡಿದ್ದ ನ್ಯಾಯಮೂರ್ತಿ ರಾಜಿಂದರ ಸಾಚಾರ ಮತ್ತು ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರ ಸಮಿತಿಗಳು ನೀಡಿರುವ ವರದಿಯಲ್ಲಿ ಇಲ್ಲಿನ ಮುಸ್ಲಿಮರ ಪರಿಸ್ಥಿತಿ ದಲಿತರಿಗಿಂತ ಹೀನಾಯವಾಗಿದೆ. ಸರಕಾರಿ ನೌಕರಿಗಳಲ್ಲಿ ಅವರಿಗೆ ನ್ಯಾಯವಾದ ಪಾಲು ನೀಡಬೇಕಾಗಿದೆ ಎಂದು ಶಿಫಾರಸು ಮಾಡಿ ಒಂದೂವರೆ ದಶಕಗಳಾದರೂ ಈ ವರದಿಗಳು ಸರಕಾರಿ ಕಡತಗಳಲ್ಲಿ ಧೂಳು ತಿನ್ನುತ್ತ ಬಿದ್ದಿವೆ.

ಹಿಂದೂ-ಮುಸ್ಲಿಂ ಸೌಹಾರ್ದದ ಬಗ್ಗೆ ಇತಿಹಾಸದ ಅನೇಕ ದಾಖಲೆಗಳನ್ನು ಲೇಖಕರು ಉಲ್ಲೇಖಿಸುತ್ತಾರೆ. ಅಕ್ಬರನ ಆಸ್ಥಾನದ ಪಂಡಿತನೊಬ್ಬ ಅಲ್ಲಾಹು ಉಪನಿಷದ್ ಎಂಬ ಗ್ರಂಥ ರಚಿಸಿದ್ದ. ಇದು ಆರಂಭವಾಗುವುದು ಓಂ ಮಂತ್ರದಿಂದ. ಹಿಂದೂ ದೇವರುಗಳಿಗೂ, ಅಲ್ಲಾಹುವಿಗೂ ಅನೇಕ ಸಾಮ್ಯತೆಗಳನ್ನು ಈ ಗ್ರಂಥದಲ್ಲಿ ದಾಖಲಿಸಲಾಗಿದೆ. ಇನ್ನು ಬಿಜಾಪುರದ ಎರಡನೇ ಇಬ್ರಾಹೀಂ ಆದಿಲ ಶಾ ಸರಸ್ವತಿಯ ಆರಾಧ್ಯ ಭಕ್ತನಾಗಿದ್ದ. ತನ್ನ ಬಿರುದುಗಳಲ್ಲಿ ತನ್ನನ್ನು ಜಗದ್ಗುರು ಎಂದು ಘೋಷಿಸಿಕೊಂಡಿದ್ದ. ಕರ್ನಾಟಕ ಸಂಗೀತ ಪ್ರೇಮಿಯೂ ಆಗಿದ್ದ. ಭಾರತದ ನೆಲದಲ್ಲಿ ಬದುಕಿನಲ್ಲಿ ಬೆರೆತು ಹೋಗಿದ್ದ ಇಸ್ಲಾಮನ್ನು ಪ್ರತ್ಯೇಕಿಸದೇ ತಾವು ಇಲ್ಲಿ ನೆಲೆಯೂರಲು ಸಾಧ್ಯವಿಲ್ಲ ಎಂದು ಭಾವಿಸಿದ ಬ್ರಿಟಿಷರು ಸಿಪಾಯಿ ದಂಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಸೈನಿಕರು ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ ಬಹಾದ್ದೂರ್ ಶಹಾ ಜಾಫರ್ ಮತ್ತೆ ಭಾರತದ ಶೆಹಾನ್ ಶಹಾ ಆಗಬೇಕೆಂದು ಬಯಸಿದ್ದನ್ನು ಕಂಡು ದಿಗಿಲುಗೊಂಡರು. ಹೀಗಾಗಿ ಹಿಂದೂ-ಮುಸ್ಲಿಮರ ನಡುವೆ ಒಡಕಿನ ವಿಷ ಬೀಜ ಬಿತ್ತಿದರು ಎಂಬುದನ್ನು ಈ ಪುಸ್ತಕದಲ್ಲಿ ಲೇಖಕರು ದಾಖಲೆ ಸಹಿತ ವಿಶ್ಲೇಷಣೆ ಮಾಡುತ್ತಾರೆ.

ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಷಮ್ಯಕ್ಕೆ ಬ್ರಿಟಿಷರು ಕಾರಣ. ಅವರ ಏಜೆಂಟ್‌ರಾದವರು ಈ ದ್ವೇಷದ ಕಿಚ್ಚು ಆರದಂತೆ ನೋಡಿಕೊಂಡರು ಎಂದು ಹಲವಾರು ಆಧಾರಗಳ ಸಹಿತ ಲೇಖಕರು ವಿಶ್ಲೇಷಿಸುತ್ತಾರೆ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರ ಬಗ್ಗೆ ಕಾಂಗ್ರೆಸ್ ಸೇರಿದಂತೆ ಸೆಕ್ಯುಲರ್ ಸರಕಾರಗಳು ತುಷ್ಠೀಕರಣ ನೀತಿಯನ್ನು ಅನುಸರಿಸುತ್ತಾ ಬಂದಿವೆ ಎಂಬ ಕೋಮುವಾದಿಗಳ ಅಪಪ್ರಚಾರವನ್ನು ಲೇಖಕರು ಪುರಾವೆ ಸಹಿತ ಅಲ್ಲಗಳೆದಿದ್ದಾರೆ.

ಒಂದು ವೇಳೆ ಒಲೈಕೆ ಮಾಡಿದ್ದು ನಿಜವಾಗಿದ್ದರೆ, ಮುಸ್ಲಿಮರು ಶಿಕ್ಷಣ, ಸರಕಾರಿ ನೌಕರಿ, ಸಾಮಾಜಿಕ ಸ್ಥಿತಿಗತಿಯಲ್ಲಿ ಮೇಲಿರಬೇಕಿತ್ತು. ಆದರೆ, ಅವರು ಉಳಿದವರಿಗಿಂತ ಹೀನಾಯ ಸ್ಥಿತಿಯಲ್ಲಿ ಇದ್ದಾರೆ. ಕೇಂದ್ರ ಸರಕಾರದ ಸೇವೆಯಲ್ಲಿ ಶೇ.2 ರಷ್ಟು ಕೂಡ ಮುಸ್ಲಿಮರಿಲ್ಲ. ಇನ್ನು ಐ ಎ ಎಸ್‌ಐಪಿಎಸ್ ಅಧಿಕಾರಿಗಳಲ್ಲಿ ಅವರ ಸಂಖ್ಯೆ ಅತ್ಯಂತ ಕಡಿಮೆ. ಇಂದಿಗೂ ಮುಸ್ಲಿಂ ಯುವಕರು ಸಣ್ಣಪುಟ್ಟ ಗ್ಯಾರೇಜ್‌ಗಳಲ್ಲಿ, ತರಕಾರಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಾ ಹೊಟ್ಟೆ ಹೊರೆಯುತ್ತಿರಲಿಲ್ಲ.

ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ, ಮತಾಂತರದಿಂದ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂಬ ತಳಬುಡವಿಲ್ಲದ ಕಟ್ಟು ಕತೆಗಳನ್ನು ತಳ್ಳಿ ಹಾಕಿದ ಲೇಖಕರು ಸಾಕಷ್ಟು ಪುರಾವೆಗಳನ್ನು ಕಲೆ ಹಾಕಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತದಲ್ಲಿ ಸುಮಾರು 800 ವರ್ಷ ಸಾಮ್ರಾಟರು, ಬಾದ್‌ಶಹಾಗಳು, ಶೆಹನ್ ಶಹಾಗಳು ಎಂದೆಲ್ಲ ಮುಸ್ಲಿಂ ಅರಸರೇ ಆಳ್ವಿಕೆ ನಡೆಸಿದರು. ಜಗತ್ತಿನ ಅತಿ ದೊಡ್ಡ ಸಾಮ್ರಾಜ್ಯ ಇವರದಾಗಿತ್ತು.

ಅತಿ ದೊಡ್ಡ ಸೈನ್ಯ, ಬೃಹತ್ ಅರಮನೆ, ವಜ್ರ, ವೈಢೂರ್ಯ ಎಲ್ಲ ಇದ್ದರೂ ಭಾರತದ ಮುಸ್ಲಿಮರು ಅಲ್ಪಸಂಖ್ಯಾತರಾಗಿ ಯಾಕೆ ಉಳಿದರು? ಎಂದು ಮೋಹನರಾಮ್ ಪ್ರಶ್ನಿಸುತ್ತಾರೆ.

ಕಳೆದ ಹತ್ತು ಶತಮಾನಗಳಲ್ಲಿ ಮುಸ್ಲಿಮರ ಜನಸಂಖ್ಯೆ ಎಂದೂ ಶೇ.20ಕ್ಕಿಂತ ಹೆಚ್ಚಾಗಲಿಲ್ಲ. ಹಾಗೊಂದು ವೇಳೆ ಮತಾಂತರ ನಡೆದಿದ್ದರೂ ಅದು ಬಲವಂತದ ಮತಾಂತರವಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಹಿಂಸೆ, ಅವಮಾನ ತಾಳದೇ ತಳ ಸಮುದಾಯದ ಜನ ಮತಾಂತರಗೊಂಡಿರಬಹುದು. ಸ್ವಾಮಿ ವಿವೇಕಾನಂದ ಅವರು ಸರ್ಫರಾಝ್‌ಗೆ ಬರೆದ ಪತ್ರದಲ್ಲಿ ಹಿಂದೂಸ್ಥಾನದ ಮೇಲೆ ಮುಹಮ್ಮದೀಯರ ಆಕ್ರಮಣ ಒಂದು ರೀತಿಯಲ್ಲಿ ಈ ಭಾಗದ ಬಡವರ ಮತ್ತು ಕೆಳವರ್ಗದವರ ಮುಕ್ತಿಯ ಮಾರ್ಗವಾಯಿತು. ಇಡೀ ದೇಶದ ಐದನೇ ಒಂದು ಭಾಗದ ಜನ ಮುಸ್ಲಿಮರಾಗಲು ಇದೇ ಕಾರಣ. ಈ ಮತಾಂತರ ಖಡ್ಗದಿಂದ ನಡೆಯಲಿಲ್ಲ ಎಂದು ಹೇಳಿದ್ದಾರೆ.

ಹೀಗೆ ಇತಿಹಾಸದ ಪುಟಗಳನ್ನು ಅವಲೋಕಿಸುತ್ತಾ ಈ ಶತಮಾನಕ್ಕೆ ಬಂದು ನಿಲ್ಲುವ ಮೋಹನರಾಮ್ ದೇಶ ವಿಭಜನೆ ಎಲ್ಲ ಮುಸ್ಲಿಮರ ಆಯ್ಕೆಯಾಗಿರಲಿಲ್ಲ. ತಮಗೆಂದು ಹುಟ್ಟಿದ ದೇಶ (ಪಾಕಿಸ್ತಾನ) ತಮ್ಮದಾಗಿರಲು ಸಾಧ್ಯವಿಲ್ಲ ಎಂದು ನಂಬಿದ ಮುಸ್ಲಿಮರಿಗೆ ಭಾರತದಲ್ಲಿ ಉಳಿಯುವಂತೆ ಮಾಡಿದ್ದು ಗಾಂಧೀಜಿ ಮತ್ತು ನೆಹರೂ ಆಶ್ವಾಸನೆ. ಮುಸ್ಲಿಮರು ತಮ್ಮ ಮಾತೃಭೂಮಿ ಭಾರತದಲ್ಲೇನೋ ಉಳಿದರು. ಆದರೆ, ನಿತ್ಯವೂ ನಕಲಿ ರಾಷ್ಟ್ರ ಭಕ್ತರೆದುರು ತಮ್ಮ ದೇಶ ಭಕ್ತಿಯನ್ನು ಅವರು ಸಾಬೀತು ಮಾಡಿ ತೋರಿಸಲು ಹೆಣಗಾಡಬೇಕಾಗಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ದೇಶದ್ರೋಹದ ಕಾನೂನು ಬಳಸಿ ಜಾಮೀನು ಸಿಗದಂತಹ ವಿಧಿಗಳನ್ನು ಬಳಸಿ ಅವರನ್ನು ಸೆರೆಮನೆಗೆ ತಳ್ಳಲಾಗುತ್ತಿದೆ. ಅದಕ್ಕೆಂದೇ pota, Tada, UAPA, NSA, ESMA, AFSPA ಕಾನೂನುಗಳನ್ನು ತರಲಾಗಿದೆ.ಎಂಬುದನ್ನು ಲೇಖಕರು ಉಲ್ಲೇಖಿಸುತ್ತಾರೆ.

ಬಹುತ್ವ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ರಹಸ್ಯ ಕಾರ್ಯಸೂಚಿಯನ್ನು ಇಟ್ಟುಕೊಂಡಿರುವ ಆರೆಸ್ಸೆಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವ ಗೋಳ್ವಲ್‌ಕರ್ ಅವರು ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ನಮ್ಮ ಮುಖ್ಯ ಶತ್ರುಗಳು ಎಂದು ಹೇಳಿದ್ದರು. ತಮ್ಮ ಗುರುಗಳು ಗುರುತಿಸಿದ ಶತ್ರುಗಳನ್ನು ಹಣಿಯಲು ಈಗ ಅಧಿಕಾರದಲ್ಲಿರುವ ಅವರ ಶಿಷ್ಯರು ಹಿಂಜರಿಯುವುದಿಲ್ಲ.

ಮೋಹನರಾಮ್ ಅತ್ಯಂತ ಆಳವಾಗಿ ಅಧ್ಯಯನ ಮಾಡಿ ಸಾಕಷ್ಟು ಫೀಲ್ಡ್ ವರ್ಕ್ ಮಾಡಿ ಖಚಿತ ಪುರಾವೆಗಳನ್ನು ಕಲೆ ಹಾಕಿ ಬರೆದ ಈ ಪುಸ್ತಕ ಎಲ್ಲರೂ ಓದಬೇಕಾದ ಅತ್ಯಂತ ಮಹತ್ವದ ಪುಸ್ತಕವೆಂದರೆ ಅತಿಶಯೋಕ್ತಿಯಲ್ಲ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನೈಜ ಸಮಸ್ಯೆಗಳ ಬಗ್ಗೆ ಕನ್ನಡದಲ್ಲಿ ಇಂತಹ ಇನ್ನೊಂದು ಪುಸ್ತಕ ಬಂದಿಲ್ಲ. ಮೋಹನರಾಮ್ (9620402737) ಅವರಿಂದ ಇದನ್ನು ತರಿಸಿ ಓದುವ ಮೂಲಕ ದೇಶ ಕಟ್ಟಿದ ಸಮುದಾಯದ ಬಗೆಗಿನ ತಪ್ಪು ತಿಳಿವಳಿಕೆಯನ್ನು ನಿವಾರಿಸಬಹುದು.

ಮುಸ್ಲಿಂ ಸಮುದಾಯದ ಬಗ್ಗೆ ನಮ್ಮ ಸಾಮಾಜಿಕ ಜೀವನದಲ್ಲಿ ಇರುವ ಹಲವಾರು ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ನಿವಾರಿಸುವಲ್ಲಿ ಮೋಹನರಾಮ್ ಅವರ ಈ ಪುಸ್ತಕ ತುಂಬಾ ಉಪಯುಕ್ತಕರವಾಗಿದೆ. ದೇಶವನ್ನು ಆಳುವವರು ತಮ್ಮ ಮನೋಧರ್ಮ ಬದಲಿಸಿ ಈ ಸಮುದಾಯದ ಕಷ್ಟ, ನಷ್ಟ ಪರದಾಟಗಳನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವೆಂದರೆ ಈ ಸಮುದಾಯಕ್ಕೆ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನ್ಯಾಯವಾದ ಪಾಲನ್ನು ಕೊಡಬೇಕಾಗಿದೆ. ಮೋಹನರಾಮ್ ಬರೆದ ಈ ಪುಸ್ತಕ ಬೇರೆ ಭಾಷೆಗಳಿಗೂ ಅನುವಾದವಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)