varthabharthi


ಕರಾವಳಿ

ಕನಿಷ್ಠ ಸಂಖ್ಯೆಯೊಂದಿಗೆ ಸರಳವಾಗಿ ಗಣೇಶ ಚತುರ್ಥಿ ಆಚರಿಸಿ: ಉಡುಪಿ ಡಿಸಿ ಕೂರ್ಮಾ ರಾವ್

ವಾರ್ತಾ ಭಾರತಿ : 7 Sep, 2021

ಉಡುಪಿ, ಸೆ.7: ಈ ಬಾರಿಯೂ ಕೋವಿಡ್ ಹಿನ್ನಲೆಯಲ್ಲಿ, ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ, ಜಿಲ್ಲೆಯಲ್ಲಿ ಸರಳವಾಗಿ, ಸಾರ್ವಜನಿಕರು ಕನಿಷ್ಠ ಸಂಖ್ಯೆಯೊಂದಿಗೆ ಗಣೇಶೋತ್ಸವವನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.

ಮಂಗಳವಾರ ವರ್ಚುವಲ್ ಸಭೆಯ ಮೂಲಕ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ಮಾರ್ಗಸೂಚಿ ಅನುಷ್ಠಾನ ಕುರಿತು ನಡೆದ ಅಧಿಕಾರಿ ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕೋವಿಡ್ 3ನೇ ಅಲೆಯ ನಿಯಂತ್ರಣ ಉದ್ದೇಶದಿಂದ ಸರಕಾರ ನೀಡಿರುವ ಮಾರ್ಗಸೂಚಿಯನ್ವಯ ಗಣೇಶ ಚತುರ್ಥಿ ಆಚರಣೆ ನಡೆಯಬೇಕು. ಮಾರ್ಗಸೂಚಿಗಳ ಪಾಲನೆಯಲ್ಲಿ ಯಾವುದೇ ಗೊಂದಲ ಇರಬಾರದು. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸ ಬೇಕು. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಾಗ ಸ್ಥಳೀಯಾಡಳಿಗಳು ಎಲ್ಲಾ ನಿಬಂಧನೆಗಳ ಕುರಿತು ಆಯೋಜಕರಿಗೆ ಮನವರಿಕೆ ಮಾಡ ಬೇಕು ಎಂದರು.

ದೇವಸ್ಥಾನದಲ್ಲಿ ಮತ್ತು ಮನೆಗಳಲ್ಲಿ ಅಥವಾ ಸರಕಾರಿ /ಖಾಸಗಿ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮತ್ತು ಮನೆಯೊಳಗೆ 2 ಅಡಿ ಮೀರದಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. 20ಜನರಿಗಿಂತ ಹೆಚ್ಚು ಜನ ಸೇರ ಬಾರದು. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆಗೆ ಅವಕಾಶವಿಲ್ಲ. ಯಾವುದೇ ಸಾಂಸ್ಕೃತಿಕ, ಸಂಗೀತ, ನೃತ್ಯ ಮುಖ್ಯ ವಾಗಿ ಡಿಜೆ ಕಾರ್ಯಕ್ರಮದ ಆಯೋಜನೆಗೆ ಅವಕಾಶವಿಲ್ಲ. ಪರಿಸರ ಹಾನಿಯಾಗದಂತೆ ಆಚರಣೆ ನಡೆಯಬೇಕು ಎಂದರು.

ಆಯೋಜಕರು ಕೋವಿಡ್ ನೆಗೆಟಿವ್ ವರದಿ ಹಾಗೂ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಮಾರ್ಗಸೂಚಿಗಳ ಉಲ್ಲಂಘನೆ ನಡೆಯ ದಂತೆ ತಡೆಯಲು ಆಯೋಜಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸಾರ್ವಜನಿಕರು 6 ಅಡಿ ಸುರಕ್ಷಿತ ಅಂತರವನ್ನು ಕಾಪಾಡುವಂತೆ ಗುರುತುಗಳನ್ನು ಹಾಕಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನರ್ ಪರೀಕ್ಷೆಯನ್ನೂ ಸಹ ಮಾಡುವುದರೊಂದಿಗೆ, ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸು ವುದು ಸೂಕ್ತ ಎಂದರು.

ಗಣೇಶೋತ್ಸವ ಮಂಡಳಿಗಳ ಮೂಲಕ ಕೋವಿಡ್ ನಿಯಂತ್ರಣ ಕುರಿತಂತೆ ಸ್ಥಳದಲ್ಲಿ ಲಸಿಕೆ ನೀಡುವ, ಪರೀಕ್ಷೆ ನಡೆಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಹೆಚ್ಚಿನ ಮಳೆಯಿಂದಾಗಿ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿದಲ್ಲಿ ಕೂಡಲೇ ಸ್ಪಂದಿಸುವಂತೆ ಎಲ್ಲಾ ತಹಶೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಪಂ ಸಿಇಓ ಡಾ. ನವೀನ್ ಭಟ್ ಮಾತನಾಡಿ, ಮಾರ್ಗಸೂಚಿಗಳ ಕುರಿತಂತೆ ಎಲ್ಲಾ ಪಿಡಿಓಗಳಿಗೆ, ಸರ್ಕಾರದ ಮಾರ್ಗಸೂಚಿಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರಚಂದ್ರ, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೆಕರ್, ಜಿಲ್ಲೆಯ ಎಲ್ಲಾ ತಹಶೀಲ್ದಾರುಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)