ಕರ್ನಾಟಕ
ನಿಫಾ ವೈರಸ್ ಭೀತಿ: ಕೇರಳ ಪ್ರಯಾಣ ಮುಂದೂಡುವಂತೆ ಸಾರ್ವಜನಿಕರಿಗೆ ರಾಜ್ಯ ಸರಕಾರ ಸಲಹೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.7: ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು, ಹೋಟೆಲ್, ಆಸ್ಪತ್ರೆ, ನಸಿರ್ಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲಕರಿಗೆ ಕೇರಳದಿಂದ ಆಗಮಿಸುವ ತಮ್ಮ ವಿದ್ಯಾರ್ಥಿಗಳು/ಉದ್ಯೋಗಿಗಳಿಗೆ ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ರಾಜ್ಯ ಸರಕಾರ ಸಲಹೆ ನೀಡಿದೆ.
ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಕೋವಿಡ್-19 ಪರೀಕ್ಷೆ ಪುನರಾವರ್ತನೆ, ಆರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಕ್ರಮಗಳ ಹೊರತಾಗಿಯೂ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವರದಿಯನ್ನು ಪರಿಗಣಿಸಿ ಈ ಮಾರ್ಗಸೂಚಿ ಹೊರಡಿಸಲಾಗಿದೆ.
ಕೇರಳ ಉದ್ಯೋಗಿಗಳು ಅಕ್ಟೋಬರ್ ಅಂತ್ಯದವರೆಗೂ ಕರ್ನಾಟಕಕ್ಕೆ ಬಾರದಂತೆ ಅಥವಾ ಮುಂದೂಡುವಂತೆ ಎಲ್ಲ ಆಡಳಿತ ಮಂಡಳಿ, ಶಿಕ್ಷಣ ಸಂಸ್ಥೆಗಳ ಪ್ರಿನ್ಸಿಪಾಲರು, ನರ್ಸಿಂಗ್, ಪ್ಯಾರಾ ಮೆಡಿಕಲ್ ಸಂಸ್ಥೆಗಳು, ಆಸ್ಪತ್ರೆಗಳ ಮಾಲಕರು, ನರ್ಸಿಂಗ್ ಹೋಮ್‍ಗಳು, ಕಚೇರಿಗಳು, ಹೋಟೆಲ್ ಗಳು, ಕಾರ್ಖಾನೆಗಳು, ಕೈಗಾರಿಕೆಗಳು ಮತ್ತಿತರಿಗೆ ರಾಜ್ಯ ಸರಕಾರ ಸೂಚನೆ ನೀಡಿದೆ.
ಸಾರ್ವಜನಿಕರು ಅಕ್ಟೋಬರ್ ಅಂತ್ಯದವರೆಗೂ ಕೇರಳಕ್ಕೆ ಪ್ರಯಾಣಿಸದಂತೆ ರಾಜ್ಯ ಸರಕಾರ ಹೇಳಿದೆ. ತುರ್ತು ಅಗತ್ಯವಿಲ್ಲದಿದ್ದಲ್ಲಿ ಕೇರಳ ಪ್ರಯಾಣವನ್ನು ಮುಂದೂಡುವಂತೆ ಸರಕಾರ ಸಲಹೆ ನೀಡಿದೆ. ಸಾರ್ವಜನಿಕರ ಹಿತರಕ್ಷಣೆ ನಿಟ್ಟಿನಲ್ಲಿ ಕೋವಿಡ್-19 ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಿರುವುದಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಬಿಗಿ ಕಣ್ಗಾವಲು ನಿಯೋಜಿಸಲಾಗುತ್ತಿದೆ. ಈ ಕುರಿತು ಮಾರ್ಗಸೂಚಿ ಬಿಡುಗಡೆಗೊಳಿಸಿರುವ ರಾಜ್ಯ ಆರೋಗ್ಯ ಇಲಾಖೆ, ಕೇರಳದಿಂದ ಅಗಮಿಸುವವರನ್ನು ತಪಾಸಣೆಗೊಳಪಡಿಸುವವರನ್ನು ಜ್ವರ, ಮಾನಸಿಕ ಸ್ಥಿತಿಗತಿ, ದುರ್ಬಲತೆ, ತಲೆನೋವು, ಶ್ವಾಸಕೋಶದ ತೊಂದರೆ, ಕೆಮ್ಮು, ವಾಂತಿ, ಸ್ನಾಯುಸೆಳೆತದಂತಹ ಲಕ್ಷಣಗಳಿವೆಯೇ ಎಂದು ಪರಿಶೀಲಿಸಬೇಕು ಎಂದು ಸೂಚಿಸಿದೆ.
ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಅವರ ಮಾದರಿಗಳನ್ನು ಪಡೆದು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಇಲಾಖೆ ತಿಳಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ











