varthabharthi


ಅನುಗಾಲ

ಮೊಗಸಾಲೆಯವರ 'ಧರ್ಮಯುದ್ಧ'

ವಾರ್ತಾ ಭಾರತಿ : 9 Sep, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪ್ರಶ್ನೆಗಳನ್ನು ಉತ್ತರಿಸುವುದು, ಸಮಸ್ಯೆಗಳನ್ನು ಬಿಡಿಸುವುದು, ಕಾದಂಬರಿಯ ಕೆಲಸವಲ್ಲ. ಸಂಕೀರ್ಣವಾದ ಜಗತ್ತಿನ ಅವಶ್ಯಕತೆಗಳನ್ನು ಶೋಧಿಸುತ್ತ ಹೀಗಾಯಿತಲ್ಲ ಎಂದುಕೊಳ್ಳುವಾಗಲೇ ಪ್ರಪಂಚವೆಂದರೆ ಹಾಗೇ; ಹೀಗೂ ಆಗುತ್ತದೆಯೆಂಬ ಒಳತೋಟಿ. ವ್ಯಾಸ-ವಾಲ್ಮೀಕಿಯರಿಂದ ಇಂದಿನವರೆಗೂ ಬರಹಗಾರ ಕಂಡದ್ದು ಈ ಅನೂಹ್ಯ ಸಂಗತಿಗಳನ್ನು. ಮೊಗಸಾಲೆಯವರು ಆಧುನಿಕ ಕಾಲಘಟ್ಟದಲ್ಲಿ ಸಮಾಜವು ತನ್ನೊಳಗೆ ಇಟ್ಟುಕೊಂಡ ವೈರುಧ್ಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಇದು ನೋಡುವುದಕ್ಕಷ್ಟೇ ಅಲ್ಲ, ಅನುಭವಿಸುವುದಕ್ಕೂ ಎಂಬ ಹಾಗೆ ಇಲ್ಲಿನ ಪಾತ್ರಗಳು ವಿಹ್ವಲತೆಯನ್ನು ತೋರುತ್ತವೆ.


ನನಗಿಂತ ಸುಮಾರು ಹತ್ತು ವರ್ಷ, ಮತ್ತು ಬರವಣಿಗೆಯ ಬಾಹುಳ್ಯ ಹಾಗೂ ಮೌಲ್ಯದ ದೃಷ್ಟಿಯಿಂದ ಅದಕ್ಕೂ ಹಿರಿಯರಾದ, ಡಾ. ನಾ. ಮೊಗಸಾಲೆಯವರನ್ನು ನಾನು ಸುಮಾರು ಐದು ದಶಕಗಳಿಂದ ಒಂದಿಷ್ಟು ದೂರದಿಂದಲಾದರೂ ಬಲ್ಲೆ. ನಮ್ಮೂರ ಸುಮನಸಾ ವಿಚಾರ ವೇದಿಕೆಯ ಒರತೆಗಳಲ್ಲಿ ನಮಗೆಲ್ಲ ಹಿರಿಯಣ್ಣ ಸುಬ್ರಾಯ ಚೊಕ್ಕಾಡಿಯವರೊಂದಿಗೆ ಅವರೂ ಒಬ್ಬರು. ಅವರನ್ನು ಕವಿಯೆಂದು ಕಂಡವನು ನಾನು. ಅವರ ಕುರಿತ ನನ್ನ ಪರಿಚಯವು ವಿಸ್ಮಯ, ಬೆರಗುಗಳೊಂದಿಗೆ ಬೆಳೆಯುತ್ತ ಹೋದಂತೆ ಅವರು ಹಿಗ್ಗುತ್ತಲೇ ಹೋದರು. ನಗುಮುಖದ ಸಾಂಗತ್ಯದ ಡಾ. ನಾ ಮೊಗಸಾಲೆಯವರು ತಮ್ಮ ಪಾಡಿಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತ, ವಿಸ್ತರಿಸುತ್ತ, ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತ ಬಯಲ ಬೆಟ್ಟದಂತೆ ನಿಂತರು. ಈಗ ಅವರು ಕನ್ನಡದ ಗಟ್ಟಿಧ್ವನಿಗಳಲ್ಲೊಬ್ಬರು. ಬದುಕನ್ನು ಎಷ್ಟು ಸಕ್ರಿಯಗೊಳಿಸಬಹುದೋ ಅಷ್ಟೂ ಸಕ್ರಿಯರಾಗಿರುವವರು. ಈಗ 75ರ ಸಾರ್ಥಕತೆಯನ್ನು ದಾಟಿ ಲವಲವಿಕೆಯಲ್ಲಿ ಬರೆಯುವವರು. ಒಳ್ಳೆಯ ಕಾದಂಬರಿಕಾರರು; ಅದಕ್ಕಿಂತಲೂ ಒಳ್ಳೆಯ ಕವಿಗಳು; ಇನ್ನೂ ಉತ್ತಮ ಸಾಹಿತ್ಯ ಪರಿಚಾರಕರು; ಇವೆಲ್ಲಕ್ಕೆ ಕಿರೀಟವಿಟ್ಟಂತೆ ಒಳ್ಳೆಯ ವೈದ್ಯರಾಗಿ ಜನಸೇವೆ ಮಾಡಿದವರು; ಒಂದರ್ಥದಲ್ಲಿ ಕಾಂತಾವರದಂತಹ ಪುಟ್ಟಹಳ್ಳಿಗೆ ಭೂಗೋಳದಲ್ಲಿ ಗುರುತಿಸಲ್ಪಡುವ ಸ್ಥಾನವನ್ನು ಕಲ್ಪಿಸಿ ಸಾರ್ಥಕತೆಯನ್ನು ಪಡೆದವರು. ಇಲ್ಲಿ ನಾನು ಅವರ ಹೊಸ ಕಾದಂಬರಿ 'ಧರ್ಮಯುದ್ಧ'ದ ಕುರಿತು ಬರೆಯುತ್ತಿದ್ದೇನೆ. ಇಲ್ಲೊಂದು ಗೊಂದಲವಿದೆ. ನನಗೆ ಪ್ರಿಯರಾದವರು ಕವಿ ಮೊಗಸಾಲೆ. ಅವರ 'ಇಹಪರದ ಕೊಳ' ನನಗೆ ಬಹು ಇಷ್ಟವಾದ ಕವನ ಸಂಕಲನ. ಈ ಸಂಕಲನದ ಕೆಲವು ಒಳ್ಳೆಯ ಕವಿತೆಗಳನ್ನು ಓದಿ, ಅನುಭವಿಸಿದ ಬಳಿಕ ಅವರನ್ನು ಬೇರೆ ಪ್ರಕಾರಗಳ ನಿಕಷಕ್ಕೊಡ್ಡುವುದು ಬಹು ಪ್ರಯಾಸದ ಕೆಲಸ. ಜೀವಮಾನದಲ್ಲಿ ಒಂದೇ ಒಂದು ಒಳ್ಳೆಯ ಕವಿತೆಯನ್ನು ಬರೆದರೂ ಆತ ಒಳ್ಳೆಯ ಕವಿಯೇ. ಗಾತ್ರ ಮತ್ತು ತೂಕದ ನಡುವಣ ಸಂಬಂಧ ಕಾವ್ಯಕ್ಕಿಂತ ಹೆಚ್ಚು ಇನ್ನೆಲ್ಲೂ ಅರ್ಥವಾಗದು. ಹಾಗಿರುವಾಗ ಅನೇಕ ಒಳ್ಳೆಯ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟ ಮೊಗಸಾಲೆ ಎಂದಿದ್ದರೂ ಕವಿಯೇ ಎಂಬ ಹಠ ನನ್ನದು. ಈ ಕಾರಣಕ್ಕಾಗಿ ಪ್ರತ್ಯೇಕವಾಗಿ ಓದದವರಿಗೆ ಅವರ 'ಇಹಪರದ ಕೊಳ' ಎಂಬ ಪುಟ್ಟ ಕವಿತೆಯನ್ನು ಇಲ್ಲಿ ಪ್ರಸ್ತುತಿಪಡಿಸುತ್ತಿದ್ದೇನೆ: (ಕಾದಂಬರಿಯ ಕುರಿತು ಮುಂದೆ ಹೇಳಲಿದ್ದೇನೆ.)

ಸಂಭ್ರಮಿಸಿ ತೆರೆಗಳನ್ನು ಎಬ್ಬಿಸಿದೆ ಆ ಕೊಳ ದಡದಿಂದ ಕೆಳಗಿಳಿದಾಗ ಬಾತುಗಳು
ಕೊಳದಲ್ಲಿ ಅರಳಿದ್ದ ಕಮಲಗಳಿಗೆ ಕನಸು; ಬಾತುಗಳೊಂದಿಗೆ ಏರಬಹುದು ತಾವೂ ದಡವನ್ನು
ಬಾತುಗಳು ಯಾವುವು ಕಮಲಗಳು ಯಾವುವು ತಿಳಿಯದೆ ಮೌನವಾಯಿತು ಕೊಳ ಒಂದು ಕ್ಷಣ
ಮರುಗಳಿಗೆಯಲ್ಲಿ ಬಿಂಬ ಪ್ರತಿಬಿಂಬವಾಗಿ ಒಂದು ಇನ್ನೊಂದಕ್ಕೆ ಬೆಳದಿಂಗಳೆ ಇಳಿದು ಮಿಂದಂತೆ ಕೊಳದಗಲ
ಕತ್ತಲಾದೊಡನೆ ಬಾಡಿದವು ಎಲ್ಲ ಕಮಲಗಳು ಬಾತುಗಳ ಕನಸು ಕಮಲಗಳ ಜೊತೆಗೆ
ಕೊಳದ ಬೆಳದಿಂಗಳಲಿ ಪ್ರತಿಫಲಿಸಿದಂತೆ ದಡ ಚಂದ್ರನ ಮುಖವ ನೇವರಿಸುವ ನೆಲದ ಗರಿಕೆ
ಈ ಕೆಲವೇ ಸಾಲುಗಳಲ್ಲಿ ಸಿದ್ಧಿಸಿದ ಕವಿತ್ವವಿದೆಯಲ್ಲ, ಅದು ವಾಮನರೂಪಿ ತ್ರಿವಿಕ್ರಮತ್ವ. ಅದು ನೆಲವನ್ನೂ ಆಕಾಶವನ್ನೂ, ಇಹವನ್ನೂ ಪರವನ್ನೂ ಆಕ್ರಮಿಸಿ ನಿಮ್ಮ ಎದೆಗೆ ಲಗ್ಗೆಯಿಡುತ್ತದೆ. ಇಂತಹ ಹಲವು ಕವಿತೆಗಳಿವೆ. (ಚರ್ಚಿಸಬಹುದು; ಆದರೆ ಅವಕ್ಕೆ ಇದು ಸಂದರ್ಭವಲ್ಲ.) ಆದ್ದರಿಂದ ಮೊಗಸಾಲೆಯವರ ಕಾವ್ಯ ಒಟ್ಟಾಗಿ 'ನೀಲ ಆಕಾಶ' ಎಂಬ ಹೆಸರಿನಿಂದ ಪ್ರಕಟವಾದರೂ ನನ್ನ ಪಾಲಿಗೆ ನೆಲ-ಆಕಾಶ. ಈ ಕವಿ ಒಂದು ಹನಿ ನೀರಿಗೂ ಚಿಗುರುವ ನೆಲದ ಗರಿಕೆ.
*
ಇಂತಹ ಮೊಗಸಾಲೆಯವರು ಅವಿಶ್ರಾಂತವಾಗಿ ಕತೆ-ಕಾದಂಬರಿಗಳನ್ನು ಬರೆಯುತ್ತಿರುತ್ತಾರೆ. ಬರಹಗಾರರಿಗೆ ಸಾಹಿತ್ಯದ ವ್ಯಾಯಾಮಕ್ಕೆ ಕತೆ-ಕಾದಂಬರಿಗಳು ಹೇಳಿ ಮಾಡಿಸಿದ ನೆಲೆ. ಕತೆ-ಕಾದಂಬರಿಗಳನ್ನು ಮೊಗಸಾಲೆ ಬರೆಯುತ್ತಾರೋ ಅಥವಾ ಕತೆ-ಕಾದಂಬರಿಗಳು ಮೊಗಸಾಲೆಯವರಿಂದ ಬರೆಸಿಕೊಳ್ಳುತ್ತವೆಯೋ ಎಂಬ ಸಂದೇಹ ನನಗೆ. ಇದೊಂದು ತರಹ ಉರುಳುತ್ತ ಹೋಗುವ ವಿನ್ಯಾಸ. ಅವರು ತಮ್ಮ ಕತೆ-ಕಾದಂಬರಿಗಳಲ್ಲಿ ತಲೆಮಾರುಗಳನ್ನು ಸಂದರ್ಶಿಸುತ್ತಾರೆ; ಅಲಂಘನೀಯವಾದದ್ದನ್ನು ಲಂಘಿಸುತ್ತಾರೆ; ವಿಷಾದವನ್ನು ಸಂಪರ್ಕಿಸುತ್ತಾರೆ; ಏಕಾಂತವನ್ನು ಲೋಕಾಂತಗೊಳಿಸುತ್ತಾರೆ. ಕರಾವಳಿಗೆ ಸಮೀಪದ ಸ್ಥಳ ಸೀತಾಪುರ. ಅಲ್ಲಿಗೆ ತಮ್ಮ ಗದ್ಯದ ಮೂಲಕ ಗಾಂಧಿಯನ್ನು ತರಿಸಿದ/ಬರಿಸಿದ ಲೋಕಪ್ರಜ್ಞೆಯ ಗದ್ಯ ಅವರದ್ದು. ಅವರು ಬರೆಯುವ ನೆಲೆಯನ್ನು ಮೌನವಾಗಿ ಕಲ್ಪಿಸಿಕೊಂಡರೆ ತಾನುಟ್ಟ ಬಟ್ಟೆಯೊಣಗುವವರೆಗೆ ಬರೆಯುತ್ತಿದ್ದ ಗದುಗಿನ ನಾರಣಪ್ಪ ನೆನಪಾಗಬೇಕು; ವ್ಯತ್ಯಾಸವೆಂದರೆ ಮೊಗಸಾಲೆಯವರ ಬರಹ ಸಾಗುವುದು ಮಂದ ಬೆಳಕಿನಲ್ಲಿ; ಬೆಳಗಿನಲ್ಲಿ.

ಪ್ರಸ್ತುತ ನನ್ನ ಮುಂದೆ ಈ ಕಾದಂಬರಿಯಿದೆ. ಇದರ ಶೀರ್ಷಿಕೆ ಮುಖ್ಯವಲ್ಲ. ಹುಟ್ಟಿದ ಮಗುವಿಗೊಂದು ಹೆಸರು ಬೇಕಲ್ಲ, ಹಾಗೆ ಅವರು ಇದಕ್ಕೊಂದು ಹೆಸರನ್ನಿಟ್ಟಿದ್ದಾರೆ. ಈ ಹೆಸರಿನಡಿ ಸಾಗುವ ಕಥಾನಕ, ಸ್ಪಂದಿಸುವ ಸಮಾಜ, ಬದುಕುವ ಮಂದಿ, ಧ್ವನಿಸುವ ಅಂತರ್ಜಲ ಮುಖ್ಯ. ಈ ಕಾದಂಬರಿಯ ಸೀತಾಪುರ ಎಲ್ಲ ಊರುಗಳ ಹಾಗೆ ಮಿನಿಭಾರತ. ಅಲ್ಲಿ ಹೊಟೇಲಿದೆ; ಬಾರ್ ಇದೆ; ಜನ ಮನ್ನಣೆ ಪಡೆದ ಹೆಗ್ಡೆಯವರಿದ್ದಾರೆ; ಎಲ್ಲರಿಗೂ ಬೇಕಾದ ಆದರೆ ಸ್ವಂತವಾಗಿ ಮಕ್ಕಳೂ ಇಲ್ಲದ, ಸ್ವಂತಕ್ಕೆ ಏನೂ ಮಾಡಿಕೊಳ್ಳದ, ಸಾತ್ವಿಕ ವೆಂಕಪ್ಪಮಾಸ್ಟರಿದ್ದಾರೆ. ಸೇಸಪ್ಪ, ಕಾಮತ್, ಪುರ್ಬು, ರಾಗಣ್ಣ, ಲಕ್ಷ್ಮೀ- ಇಂತಹ ಪದ್ಮಪತ್ರ ನಿರ್ಲಿಪ್ತರಿದ್ದಾರೆ. ಹಾಗೆಯೇ ಸಾರ್ವಜನಿಕ ಸ್ವತ್ತಿಗೆ ಕೈಯಿಕ್ಕುವ ದುಷ್ಟಶಕ್ತಿಗಳಿವೆ. ಪ್ರತಿಷ್ಠೆಯ ಕೋಟೆಯವರ ಹಿಂದೆ ಮಹತ್ವಾಕಾಂಕ್ಷೆಯ ಸುಕ್ಕನಿದ್ದಾನೆ. ಒಳ್ಳೆಯದೆಷ್ಟಿದೆಯೋ ಅದಕ್ಕೆ ಸವಾಲೆಸೆಯುವ ಕೇಡೂ ಇದೆ. ಸೂರಪ್ಪನ ಮನೆಯ ಬಾವಿಯಲ್ಲಿ ರಾಗಣ್ಣನ ಮೂರು ಕರಿ ಬೆಕ್ಕುಗಳು ಸತ್ತು ಬಿದ್ದಲ್ಲಿಂದ, ಅಥವಾ ಬಿದ್ದು ಸತ್ತಲ್ಲಿಂದ ಕಥೆ ಅನಾವರಣಗೊಳ್ಳುತ್ತದೆ. ಇದಕ್ಕೆ ಪರಿಹಾರವನ್ನು ನಂಬಿಕೆ ಬಯಸುತ್ತದೆ. ಆದರೆ ಈ ನಂಬಿಕೆಯನ್ನು ದುರುಪಯೋಗಪಡಿಸುವ ಧೂರ್ತರು ಇದ್ದಾರೆ. ಇಂತಹ ನಂಬಿಕೆಯನ್ನು ಶೋಷಿಸುವ ವ್ಯೆಹದ ಅಳವನ್ನು ಗಮನಿಸಿದರೆ ಮನಸ್ಸು ಬೆಚ್ಚಿ ಬೀಳುತ್ತದೆ; ಹೌಹಾರುತ್ತದೆ. ಪರಸ್ಪರರ ನಡುವೆ ಇರುವ ಅಪನಂಬಿಕೆಗಳು ಈ ನಂಬಿಕೆಯನ್ನು ಪೋಷಿಸುತ್ತವೆ. ಸಹಜ ವಿಶೇಷವೆಂದರೆ ಹೀಗೆ ಬೆಕ್ಕುಗಳು ಸತ್ತು ಪರಸ್ಪರರು ಕಾದಾಡುವುದಿಲ್ಲ. ಕೇಳುಪಂಡಿತನೆಂಬ ಜ್ಯೋತಿಷಿ ಪರಿಹಾರದ ಸೂತ್ರಧಾರ. ಅವರು ಇದನ್ನೊಂದು ದೋಷವೆಂದು ಪರಿಗಣಿಸಿ ಇಷ್ಟಕ್ಕೇ ಬಿಟ್ಟರೆ ಮುಂದೆ ಮನುಷ್ಯಜೀವಗಳು ಬಲಿಯಾಗಬಹುದೆಂದು ಎಚ್ಚರಿಸಿ ಸುಕ್ಕನ ಸಾಕುಹಂದಿಯನ್ನು ಸೂರಪ್ಪಕೊಂದ ಇತಿಹಾಸವನ್ನು ಕೆದಕಿ ಅದರ ವಂಶೋಜನಾದ, ಊರಿನಲ್ಲಿ ಬಹುತೇಕ ಜೀರ್ಣವಾದ, ಪಂಜುರ್ಲಿಯ ಕೋಪವೇ ಇದಕ್ಕೆ ಕಾರಣವೆಂದು ಮತ್ತು ಅದರ ಉದ್ಧಾರವೇ ಪರಿಹಾರವೆಂದೂ ಸಲಹೆ ನೀಡುತ್ತಾರೆ. ಹೀಗೆ ಬೆಕ್ಕಿನ ಸಾವು ದೈವದ ಓಲೈಕೆಗೆ ಮುಖಮಾಡುತ್ತದೆ. ಸೂರಪ್ಪನಿಗೆ ಸಾಧ್ಯವಿಲ್ಲದ, ಸಾಧ್ಯವಾಗದ ಈ ಹರಕೆ ಸಂದಾಯಕ್ಕೆ ಊರಿನ ಆಢ್ಯರ ಪ್ರವೇಶವಾಗುತ್ತದೆ. ಬ್ರಹ್ಮಕಲಶದ ಯೋಜನೆಯು ಅಬ್ರಾಹ್ಮಣರಲ್ಲಿ ಧಾರ್ಮಿಕ ಮತ್ತು ರಾಜಕೀಯ ಹಾಗೂ ಮನುಷ್ಯನ ಮೂಲಭೂತ ಗುಣವಾದ ಲೋಭಕ್ಕೆ ಕಾರಣವೂ ಪರಿಣಾಮವೂ ಆಗುತ್ತದೆ. ಪಂಜುರ್ಲಿಗುಡ್ಡದ ಸುತ್ತಮುತ್ತ ಇರುವ ಕಾಡಿನ ನಿರ್ನಾಮವೂ ಈ ಯೋಜನೆಯಲ್ಲಡಗಿದೆ. ಇಂತಹ ಕ್ರಿಯಾದಿ ಸಂಭ್ರಮದಲ್ಲಿ ಒಂದಿಷ್ಟೂ ನಂಬಿಕೆಯಿಲ್ಲದ ಹೆಗ್ಡೆಯವರೂ ವೆಂಕಪ್ಪಮಾಸ್ಟರೂ ಇದರಲ್ಲಿ ಅನಿವಾರ್ಯವಾಗಿ ಭಾಗಿಯಾಗುತ್ತಾರೆ. ಸ್ವಂತ ಅಥವಾ ಸಾಮುದಾಯಿಕ ಹೀಗೆ ಎಲ್ಲರೂ ಒಂದಿಲ್ಲೊಂದು ಪ್ರತಿಷ್ಠೆಯನ್ನು ಪಣವಾಗಿಟ್ಟೇ ಪಾಲ್ಗೊಳ್ಳುತ್ತಾರೆ. ಒಣಪ್ರತಿಷ್ಠೆಯು ಎಲ್ಲ ಹಂತದಲ್ಲೂ ಸಕ್ರಿಯವಾಗುತ್ತದೆ. ಇದೆಲ್ಲದರ ಉಪಸಂಹಾರದಂತೆ ನಡೆವ ಉತ್ಸವದಲ್ಲಿ ನೂಕುನುಗ್ಗಲು, ಗೊಂದಲ ನಿರ್ಮಾಣವಾಗಿ ಬ್ರಹ್ಮಕುಂಭವು ಬಿದ್ದು ಅದರ ನೀರು ಚೆಲ್ಲಿ ಕಾಕತಾಳೀಯವಾಗಿ ಜೇನುನೊಣಗಳು ಮುತ್ತಿ ಎಲ್ಲ ಅಯೋಮಯವಾಗುತ್ತದೆ. ಪಂಜುರ್ಲಿಗುಡ್ಡದ ನಿರ್ಮಾಣದ ನೆಪದಲ್ಲಿ ವಾಸ್ತವವಾಗಿ ಅದರ ನಿರ್ನಾಮವಾಗಿದೆ.

*

ಇದರ ಕಥೆಯನ್ನು ಹೇಳುವುದು ನನ್ನ ಉದ್ದೇಶವಲ್ಲ. ಕಥೆ ಹೇಳುವುದು ಮತ್ತು ಅದರಲ್ಲಿ ತಿರುವುಗಳನ್ನು ಸೃಷ್ಟಿಸುವುದು ಮೊಗಸಾಲೆಯವರಿಗೆ ಸಲೀಸಾಗಿ ಸಿದ್ಧಿಸಿದೆ. ಅವರು ಕಾದಂಬರಿಯ ತಂತ್ರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಾಗಿ ಬೆಳೆಯಬೇಕು. ಅದು ಓದುತ್ತ ಹೋದಂತೆ ಬಿಚ್ಚಿಕೊಳ್ಳಬೇಕು. ಇಲ್ಲಿ ನಂಬಿಕೆಗೆ- ಹಾಗೆನ್ನುವುದೂ ಎಷ್ಟು ಸರಿಯೋ- ಮೂಢ ನಂಬಿಕೆಗೆ ಸಹಜವಾಗಿ ಬಲಿಯಾದ ಜನರಷ್ಟೇ ಬಲಿಯಾದಂತೆ ನಟಿಸುವ ಧೂರ್ತರೂ ಇದ್ದಾರೆ. ಪುಡಿ ರಾಜಕಾರಣಿಗಳು ಮುಂದಿನ ಚುನಾವಣೆಗೆ ತಮ್ಮ ಎಲ್ಲ ಶಕ್ತಿಯನ್ನು ವ್ಯಯಮಾಡುತ್ತಿದ್ದಾರೆ. ಒಂದು ಬೆಳೆಯುತ್ತಿರುವ ಪುಟ್ಟ ಹಳ್ಳಿಯಲ್ಲಿ ಧರ್ಮವನ್ನು ರಾಜಕೀಯ ಕೆಡಿಸುತ್ತದೆ, ರಾಜಕೀಯವನ್ನು ಧರ್ಮ ಕೆಡಿಸುತ್ತದೆ ಎಂಬ ಶಕ್ತ ನಿರೂಪಣೆಯಿದೆ. ಮೂರ್ತವಾಗಿ ನಡೆಯುವ ಕಥಾಹಂದರವೂ ಇದರ ನಡುವೆ ನಡೆಯುವ ಊರಿನ ಜನಮನದ ಗಲಾಟೆ-ಗಮ್ಮತ್ತುಗಳೂ ಬದುಕಿನ ಭಿನ್ನ ನಿಲುವುಗಳಿಗೆ ಕನ್ನಡಿ ಹಿಡಿಯುತ್ತವೆ. ಮೂರು ಬೆಕ್ಕುಗಳು ಸತ್ತದ್ದಕ್ಕೂ ಪಂಜುರ್ಲಿಗೂ ಸಂಬಂಧವಿಲ್ಲವೆಂಬುದೂ ಅದು ಸುಕ್ಕನ ತಂತ್ರವೆಂಬುದೂ ಕತೆಯ ನಡುವಲ್ಲೇ ಓದುಗನಿಗೆ ಬಯಲಾಗುತ್ತದೆಯಾದರೂ ಆನಂತರ ನಡೆಯುವ ಎಲ್ಲ ಕೃತ್ರಿಮಗಳೂ ಧರ್ಮ-ರಾಜಕೀಯ-ಸ್ವಪ್ರತಿಷ್ಠೆಯ ಸಂಗಮವಾಗುತ್ತವೆ. ಬೆಕ್ಕುಗಳ ಸಾವಿನ ಗುಟ್ಟು ಬಯಲಾಗಿದೆ. ಕಥೆಯ ಬೆಳವಣಿಗೆಯ ದೃಷ್ಟಿಯಿಂದ ಸೂರಪ್ಪಮತ್ತು ರಾಗಣ್ಣ ಬಹು ಮುಖ್ಯ ದಾಳಗಳು. ವಿಷಾದದ ಒಳತೋಟಿಯ ರಾಗಣ್ಣ ತಾನೇ ಬೆಕ್ಕುಗಳನ್ನು ಸೂರಪ್ಪನ ಬಾವಿಗೆ ಹಾಕಿದ್ದನ್ನು ಕನವರಿಸಿದ್ದು ಬಹಿರಂಗವಾಗುವುದಿಲ್ಲ. ಅಲ್ಲಿಂದ ರಾಗಣ್ಣನ ಅಪರಾಧ ಪ್ರಜ್ಞೆ ಜಾಗೃತವಾಗಬೇಕಿತ್ತು. ಆದರೆ ಹಾಗಾಗುವುದಿಲ್ಲ. ಅವನ ಚರ್ಯೆ ಬದಲಾಗಿ ಒಂದು ಕಡೆ ಈ ಗುಟ್ಟು ತಿಳಿದವರು ಮತ್ತು ಇನ್ನೊಂದು ಕಡೆ ಈ ಗುಟ್ಟು ತಿಳಿಯದವರು, ನಡುವೆ ಈ ಗುಟ್ಟು ತಿಳಿದೂ ತಮ್ಮ ಸ್ವಾರ್ಥಕ್ಕಾಗಿ ಪಂಜುರ್ಲಿಯ ಪೂಜೆಗೆ ಹೊರಟವರು ಹೀಗೆ ಧರ್ಮಯುದ್ಧದ ಮೂರು ಆಯಾಮಗಳನ್ನು ಕಾದಂಬರಿ ದುಡಿಸಿಕೊಂಡಿದೆ. ಇಡೀ ಕಾದಂಬರಿಯು ಯಾವನೇ ಒಬ್ಬ ವ್ಯಕ್ತಿಯನ್ನು ತನ್ನ ನಾಯಕನೆಂದು ಒಪ್ಪಿಕೊಳ್ಳದಿರುವುದು ಇದರ ವೈಶಿಷ್ಟ್ಯ. ಊರು ನಾಯಕನೇ? ಅಲ್ಲ. ಒಂದು ರೀತಿಯಲ್ಲಿ ಪಂಜುರ್ಲಿಗುಡ್ಡ ನಾಯಕ. ಆದರೆ ನಡೆಯುವ ಘಟನಾವಳಿಗಳು ಮನುಷ್ಯ ಚರ್ಯೆಯನ್ನು ಹಿಂಬಾಲಿಸುತ್ತವೆ. ತಾತ್ವಿಕಜಿಜ್ಞಾಸೆಯೂ ಸಾಮಾಜಿಕವಾಗಿ ಅರ್ಥಹೀನವೆಂಬ ಮೌನಸಂದೇಶವಿದೆ. ಮೊಗಸಾಲೆಯವರು ತಮ್ಮ ಹಿಂದಿನ ಕಾದಂಬರಿಗಳಿಗಿಂತ ಹೆಚ್ಚು ಜನಪ್ರೀತಿಯನ್ನು ಇಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ಬೆಳೆಯುತ್ತಿರುವ ಹಳ್ಳಿಯ ಜನರ ಸಂಭಾಷಣೆ ಮತ್ತು ಸನ್ನಿವೇಶಗಳು ಜೀವಂತವಾಗಿವೆ. ಊರ ಜನರು ತೀರ ಸರಳ ವಿಚಾರಗಳಿಂದ ಅತ್ಯಂತ ಸಂಕೀರ್ಣ ವಿಚಾರಗಳನ್ನು ತಮ್ಮದೇ ರೀತಿಯಲ್ಲಿ ಮೆಲುಕು ಹಾಕುತ್ತಾರೆ. ನಾವೂ ಅಲ್ಲೆಲ್ಲೋ ಅವರ ನಡುವೆ ಕುಳಿತಂತೆ ಭಾಸವಾಗುತ್ತದೆ. ಕೆಲವು ಪ್ರಶ್ನೆಗಳು ಉದಿಸುತ್ತವೆ: ಕಾಲದಲ್ಲಿ ಹಿಂದೆ ಓಡುವುದಕ್ಕಿಂತ ಮತ್ತು (ಕೊನೆಯ ವಿವಾದದ ಹೊರತಾಗಿಯೂ) ಸ್ವಾರ್ಥಿಗಳಿಗೆ ಗೆಲುವಾಯಿತೆಂಬ ಭಾವ ಸಾಮಾಜಿಕವಾಗಿ ಸರಿಯೇ? ಕೊನೆಗೆ ಓಡುವವರು (ಮಾಸ್ಟ್ರು, ಕಾಮತರು, ರಾಗಣ್ಣ..) ತಾತ್ವಿಕವಾಗಿ ಸಮಾರಂಭದಲ್ಲಿ ಯಾವರೀತಿಯಲ್ಲೂ ಭಾಗವಹಿಸದವರು. ಅಲ್ಲಿ ಉಳಿಯುವವರು ಸುಕ್ಕಣ್ಣ ಮತ್ತು ಕೋಟೆಯವರು. ಅವರು ಬಟ್ಟೆಬಿಚ್ಚಿ ಮುಸುಕು ಹಾಕಿ ಗುಡಿಯೆದುರು ಕೂರುವವರು. ಅಂದರೆ ಅವರ-ಗುಡಿಯ ಸಂಬಂಧ ಮುಂದುವರಿಯುತ್ತದೆಯೆಂಬ ಸಂಕೇತವೇ? ಕಾದಂಬರಿಯು ಇಂತಹ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಶ್ನೆಗಳನ್ನು ಉತ್ತರಿಸುವುದು, ಸಮಸ್ಯೆಗಳನ್ನು ಬಿಡಿಸುವುದು, ಕಾದಂಬರಿಯ ಕೆಲಸವಲ್ಲ. ಸಂಕೀರ್ಣವಾದ ಜಗತ್ತಿನ ಅವಶ್ಯಕತೆಗಳನ್ನು ಶೋಧಿಸುತ್ತ ಹೀಗಾಯಿತಲ್ಲ ಎಂದುಕೊಳ್ಳುವಾಗಲೇ ಪ್ರಪಂಚವೆಂದರೆ ಹಾಗೇ; ಹೀಗೂ ಆಗುತ್ತದೆಯೆಂಬ ಒಳತೋಟಿ. ವ್ಯಾಸ-ವಾಲ್ಮೀಕಿಯರಿಂದ ಇಂದಿನವರೆಗೂ ಬರಹಗಾರ ಕಂಡದ್ದು ಈ ಅನೂಹ್ಯ ಸಂಗತಿಗಳನ್ನು. ಮೊಗಸಾಲೆಯವರು ಆಧುನಿಕ ಕಾಲಘಟ್ಟದಲ್ಲಿ ಸಮಾಜವು ತನ್ನೊಳಗೆ ಇಟ್ಟುಕೊಂಡ ವೈರುಧ್ಯಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆೆ. ಇದು ನೋಡುವುದಕ್ಕಷ್ಟೇ ಅಲ್ಲ, ಅನುಭವಿಸುವುದಕ್ಕೂ ಎಂಬ ಹಾಗೆ ಇಲ್ಲಿನ ಪಾತ್ರಗಳು ವಿಹ್ವಲತೆಯನ್ನು ತೋರುತ್ತವೆ. ಒಂದು ಒಳ್ಳೆಯ ಕಾದಂಬರಿಯನ್ನು ಬರೆದ ಮೊಗಸಾಲೆಯವರಿಗೆ ಅಭಿನಂದನೆಗಳು. ಕನ್ನಡ ಜನಮನ ಇದನ್ನು ಓದಿ ಸಂತೋಷಿಸಲಿ.

(ಕೃತಿ: ಧರ್ಮಯುದ್ಧ; ಪ್ರಕಟನೆ: ಮನೋಹರ ಗ್ರಂಥಮಾಲಾ, ಧಾರವಾಡ-2021, ಪುಟಗಳು:213, ಬೆಲೆ: ರೂ.230)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)