varthabharthi


ರಾಷ್ಟ್ರೀಯ

ಜೈಲಿನಲ್ಲಿರಿಸುವ ಸಲುವಾಗಿಯೇ ಆರೋಪಪಟ್ಟಿ: ದಿಲ್ಲಿ ಪೊಲೀಸರಿಗೆ ನ್ಯಾಯಾಲಯ ತರಾಟೆ

ವಾರ್ತಾ ಭಾರತಿ : 9 Sep, 2021

ಹೊಸದಿಲ್ಲಿ, ಸೆ.9: ಅಗತ್ಯ ಅಧಿಕೃತ ಅನುಮೋದನೆ ಪಡೆಯದೇ, ತೀರಾ ವಿಳಂಬವಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿದ್ದಕ್ಕಾಗಿ ದಿಲ್ಲಿ ನ್ಯಾಯಾಲಯವು ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಬಹುಶಃ ಆರೋಪಿಗಳು ಜೈಲಿನಲ್ಲಿರುವಂತೆ ಮಾಡುವುದೇ ಇದರ ಉದ್ದೇಶ ಎಂದು ಟೀಕಿಸಿದೆ.

ಕಳೆದ ನವೆಂಬರ್‌ನಲ್ಲಿ ಬಂಧಿಸಿ, ಅಗತ್ಯ ಅನುಮೋದನೆ ಪಡೆಯದೇ ಆರೋಪಪಟ್ಟಿ ಸಲ್ಲಿಸಲಾಗಿದ್ದ ಆರೋಪಿಗೆ ಜಾಮೀನು ಮಂಜೂರು ಮಾಡಿದ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಅರುಣ್ ಕುಮಾರ್ ಗಾರ್ಗ್, ತಪ್ಪೆಸಗಿದ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ದಿಲ್ಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.

"ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25ರ ಅನ್ವಯ (ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವುದು) ಹಲವು ಪ್ರಕರಣಗಳಲ್ಲಿ ಅಪರಾಧ ವಿಭಾಗ ಸೆಕ್ಷನ್ 39ರ ಅಡಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ರಿಂದ ಪಡೆಯಬೇಕಾದ ಅನುಮತಿ ಪಡೆಯದೇ ಹಲವು ಸಮಯ ಕಳೆದ ಬಳಿಕ ಆರೋಪಪಟ್ಟಿ ಸಲ್ಲಿಸಿರುವ ಹಲವು ಪ್ರಕರಣಗಳಿರುವುದು ಗಮನಕ್ಕೆ ಬಂದಿದೆ" ಎಂದು ನ್ಯಾಯಾಧೀಶರು ಆಕ್ಷೇಪಿಸಿದರು.

ಅಗತ್ಯ ಪೂರ್ವಾನುಮತಿ ಪಡೆಯದೇ ಆರೋಪಪಟ್ಟಿ ಸಲ್ಲಿಸುವ ಏಕೈಕ ಉದ್ದೇಶವೆಂದರೆ ಆರೋಪಿ ಜೈಲಿನಲ್ಲೇ ಉಳಿಯುವಂತೆ ಮಾಡುವುದು ಹಾಗೂ ಈ ಮೂಲಕ ಅವರ ಜಾಮೀನು ಹಕ್ಕನ್ನು ನಿರಾಕರಿಸುವುದು" ಎಂದು ಹೇಳಿದ್ದಾರೆ. ಅಗತ್ಯ ಅನುಮೋದನೆಯನ್ನು ಪಡೆದು ಪೂರಕ ಆರೋಪಪಟ್ಟಿ ಸಲ್ಲಿಸಲು ಅಪರಾಧ ವಿಭಾಗದ ಡಿಸಿಪಿ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಮೂರು ದಿನಗಳ ಒಳಗಾಗಿ ವಿವರಣೆ ನೀಡುವಂತೆ ನ್ಯಾಯಾಲಯ ಡಿಸಿಪಿಗೆ ಆದೇಶಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)