varthabharthi


ರಾಷ್ಟ್ರೀಯ

ಶ್ರೀನಗರ: ನಾಲ್ಕು ಪತ್ರಕರ್ತರ ನಿವಾಸಗಳ ಮೇಲೆ ಪೊಲೀಸ್ ದಾಳಿ, ಇಡೀ ದಿನ ಠಾಣೆಯಲ್ಲಿ ದಿಗ್ಬಂಧನ; ವರದಿ

ವಾರ್ತಾ ಭಾರತಿ : 9 Sep, 2021

ಸಾಂದರ್ಭಿಕ ಚಿತ್ರ (PTI)

ಶ್ರೀನಗರ್: ಹಿರಿಯ ಸಂಪಾದಕರೊಬ್ಬರ ಸಹಿತ ನಾಲ್ಕು ಕಾಶ್ಮೀರ ಮೂಲದ ಪತ್ರಕರ್ತರ ನಿವಾಸಗಳಿಗೆ ಬುಧವಾರ ದಾಳಿ ನಡೆಸಿದ ಪೊಲೀಸರು ನಂತರ ಅವರನ್ನು ಶ್ರೀನಗರದ ಪೊಲೀಸ್ ಠಾಣೆಯೊಂದರಲ್ಲಿ ದಿಗ್ಬಂಧನದಲ್ಲಿರಿಸಿದ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಳೆದ ವರ್ಷ ದಾಖಲಿಸಿದ್ದ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯದ ಪ್ರಕರಣವೊಂದರ ಸಂಬಂಧ ಈ ಕ್ರಮಕೈಗೊಳ್ಳಲಾಗಿದೆ ಎನ್ನಲಾಗಿದೆ ಎಂದು thewire.in ವರದಿ ಮಾಡಿದೆ.

ಕಾಶ್ಮೀರ ನೆರೇಟರ್ ಸಂಪಾದಕ ಶೌಕತ್ ಮಟ್ಟ,  ಟಿಆರ್‍ಟಿ ವರ್ಲ್ಡ್ ಮತ್ತು ಹಫ್ ಪೋಸ್ಟ್ ನ ಮಿರ್ಹಿಲಾಲ್, ಫ್ರೀಲಾನ್ಸ್ ಪತ್ರಕರ್ತರಾದ ಅಝರ್ ಖಾದ್ರಿ ಮತ್ತು ಅಬ್ಬಾಸ್ ಶಾ ಅವರ ಶ್ರೀನಗರದಲ್ಲಿರುವ ನಿವಾಸಗಳಿಗೆ ಪೊಲೀಸರು ಮತ್ತು ಅರೆಸೇನಾ ಪಡೆಗಳ ತಂಡಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದವು. ನಂತರ ಅವರನ್ನು ಬಿಡುಗಡೆಗೊಳಿಸಲಾಯಿತಾದರೂ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಬುಧವಾರ ಬಂಧಿತರಾದ ಹಿಲಾಲ್ ಈ ಹಿಂದೆ 'ಹಿಂದುಸ್ತಾನ್ ಟೈಮ್ಸ್' ಗೂ ಸೇವೆ ಸಲ್ಲಿಸಿದ್ದರು. ಅಬ್ಬಾಸ್ ಅವರು ಶ್ರೀನಗರದ ದೈನಿಕವೊಂದರ ಪತ್ರಕರ್ತರಾಗಿದ್ದರೆ ಖಾದ್ರಿ ಅವರ ಲೇಖನಗಳು 'ದಿ ಟ್ರಿಬ್ಯೂನ್' ಹಾಗೂ 'ದಿ ಗಾರ್ಡಿಯನ್‍'ನಲ್ಲಿ ಪ್ರಕಟಗೊಂಡಿವೆ. ನಾಲ್ಕು ಮಂದಿಯ ನಿವಾಸಗಳ ಮೇಲೂ ಬುಧವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆದಿದ್ದವು.

ಮೊಟ್ಟಾ ಅವರ ಹಾರ್ಡ್ ಡ್ರೈವ್, ಡೆಸ್ಕ್ ಟಾಪ್ ಕಂಪ್ಯೂಟರ್, ಮ್ಯಾಗಝಿನ್‍ನ ಹಳೆಯ ಸಂಚಿಕೆಗಳು ಮತ್ತು ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಪತ್ರಕರ್ತರಿಂದ ಹಲವಾರು ದಾಖಲೆಗಳು ಹಾಗೂ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ದಿನ ಕೋಥಿ ಬಾಗ್ ಠಾಣೆಯಲ್ಲಿ ಅವರನ್ನಿರಿಸಲಾಗಿತ್ತು.

ಕಳೆದ ವರ್ಷ ಇದೇ ಠಾಣೆಯಲ್ಲಿ ಯುಎಪಿಎಯ ಸೆಕ್ಷನ್ 13 ಹಾಗೂ ಐಪಿಸಿಯ ಸೆಕ್ಷನ್ 506 ಅನ್ವಯ ದಾಖಲಿಸಲಾದ ಪ್ರಕರಣ ಸಂಬಂಧ ಇಂದು ಪತ್ರಕರ್ತರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)