varthabharthi


ರಾಷ್ಟ್ರೀಯ

ಮಂಗನ ದಾಳಿಯಿಂದ ಪಾರಾಗಲು 2 ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ ಬಿಜೆಪಿ ನಾಯಕನ ಪತ್ನಿ

ವಾರ್ತಾ ಭಾರತಿ : 9 Sep, 2021

ಲಕ್ನೊ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅನಿಲ್ ಕುಮಾರ್ ಚೌಹಾಣ್ ಅವರ ಪತ್ನಿ ಮಂಗಳವಾರ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳಲು ತನ್ನ ಮನೆಯ ಎರಡನೇ ಮಹಡಿಯಿಂದ ಜಿಗಿದಿದ್ದು, ಬಳಿಕ ಮೃತಪಟ್ಟಿದ್ದಾರೆ.

ಮೃತರನ್ನು 50 ವರ್ಷದ ಸುಷ್ಮಾ ದೇವಿ ಎಂದು ಗುರುತಿಸಲಾಗಿದ್ದು, ಕೈರಾನಾ ನಗರದಲ್ಲಿ ತನ್ನ ಮನೆಯ ಟೆರೇಸ್‌ಗೆ ಹೋಗಿದ್ದರು. ಸುಷ್ಮಾ  ಅವರ ಸುತ್ತಲೂ ಮಂಗಗಳ ಗುಂಪು ಸುತ್ತುವರಿದಿದ್ದವು. ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸುಷ್ಮಾ ಅವರು ಟೆರೇಸ್‌ನಿಂದ ಜಿಗಿದರು ಎಂದು ವರದಿಯಾಗಿದೆ.

ಮೇಲಿನಿಂದ ಬಿದ್ದಿದ್ದ ಸುಷ್ಮಾರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಬರುವಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ನಡೆದಾಗ ಆಕೆಯ ಪತಿ ಅನಿಲ್ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಸ್ಥಳೀಯ ಬಿಜೆಪಿ ನಾಯಕ ಅನಿಲ್, ದಿವಂಗತ ಮಾಜಿ ಸಂಸದ ಹುಕುಂ ಸಿಂಗ್ ಅವರ ಸೋದರಳಿಯರಾಗಿದ್ದು, ಹುಕುಂ ಸಿಂಗ್ ಅವರು 2014 ರ ಮೇ ನಿಂದ 2018 ರ ಫೆಬ್ರವರಿ 3 ರವರೆಗೆ ಕೈರಾನಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಮಂಗಗಳ ದಾಳಿಯು ಮಾರಣಾಂತಿಕ ಪರಿಣಾಮಗಳಿಗೆ ಕಾರಣವಾದ ಹಲವಾರು ಘಟನೆಗಳು ದೇಶದಲ್ಲಿ ನಡೆದಿವೆ. ಸೋಮವಾರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ 11 ವರ್ಷದ ಬಾಲಕನೊಬ್ಬ ಕೋತಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ. ಈ ಘಟನೆ ಶಾಮ್ಲಿಯಲ್ಲಿ ನಡೆದ ಘಟನೆಗೆ ಹೋಲುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)