varthabharthi


ರಾಷ್ಟ್ರೀಯ

ಎನ್‍ ಐ ಆರ್ ಎಫ್ ರ‍್ಯಾಂಕಿಂಗ್ 2021: ಐಐಟಿ ಮದ್ರಾಸ್‍ಗೆ ಸತತ ಮೂರನೇ ವರ್ಷ ಅಗ್ರ ಸ್ಥಾನ

ವಾರ್ತಾ ಭಾರತಿ : 9 Sep, 2021

ಐಐಟಿ ಮದ್ರಾಸ್‍ (Photo: facebook)

ಹೊಸದಿಲ್ಲಿ:  ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ‍್ಯಾಂಕಿಂಗ್ಸ್ ಫ್ರೇಮ್‍ವರ್ಕ್ (ಎನ್‍ಐಆರ್‍ಎಫ್) ರ‍್ಯಾಂಕಿಂಗ್ 2021ರಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (ಐಐಟಿ) ಮದ್ರಾಸ್ ಮೊದಲ ಸ್ಥಾನವನ್ನು ಸತತ ಮೂರನೇ ವರ್ಷ ಗಳಿಸಿದೆ. ಒಟ್ಟಾರೆ ಎಲ್ಲಾ ವಿಭಾಗದಲ್ಲಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್ ಟಾಪ್ ಸ್ಥಾನ ಪಡೆದಿದೆ.

ಎರಡನೇ ಸ್ಥಾನದಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್, ಬೆಂಗಳೂರು ಇದ್ದರೆ ಮೂರನೇ ಸ್ಥಾನವನ್ನು ಐಐಟಿ ಬಾಂಬೆ ಪಡೆದುಕೊಂಡಿದೆ. ನಾಲ್ಕನೇ, ಐದನೇ ಮತ್ತು ಆರನೇ  ಸ್ಥಾನಗಳು ಕ್ರಮವಾಗಿ ಐಐಟಿ ದಿಲ್ಲಿ, ಐಐಟಿ ಕಾನ್ಪುರ್ ಮತ್ತು ಐಐಟಿ ಖರಗ್ಪುರ್ ಗೆ ಹೋಗಿವೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ ಹಾಗೂ ಬನಾರಸ್ ಹಿಂದು ವಿವಿ ಒಂಬತ್ತನೇ ಮತ್ತು ಹತ್ತನೇ ರ್ಯಾಂಕ್ ಪಡೆದಿದೆ.

ಮೆಡಿಕಲ್ ಕಾಲೇಜುಗಳ ಪೈಕಿ ಏಮ್ಸ್ ದಿಲ್ಲಿ ಮೊದಲ ಸ್ಥಾನ ಹಾಗೂ ನಂತರದ ಎರಡು ಸ್ಥಾನಗಳನ್ನು ಚಂಡೀಗಢದ ಪಿಜಿಐಎಂಇಆರ್ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಪಡೆದಿವೆ.

ಐಐಎಂ ಅಹ್ಮದಾಬಾದ್ ದೇಶದ ಅತ್ಯುತ್ತಮ ಬಿ-ಸ್ಕೂಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ ಫಾರ್ಮಸಿ ಶಿಕ್ಷಣದಲ್ಲಿ ಜಾಮಿಯಾ ಹಮ್‍ದರ್ದ್ ಮೊದಲ ಸ್ಥಾನ ಪಡೆದುಕೊಂಡಿದೆ.

ಕಾಲೇಜುಗಳ ವಿಭಾಗದಲ್ಲಿ ಮಿರಾಂಡ ಹೌಸ್, ದಿಲ್ಲಿ ಮೊದಲ ಸ್ಥಾನ ಹಾಗೂ ದಿಲ್ಲಿಯ ಲೇಡಿ ಶ್ರೀ ರಾಮ್ ಕಾಲೇಜು ಹಾಗೂ ಚೆನ್ನೈನ ಲೊಯೊಲ ಕಾಲೇಜು ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಪಡೆದಿದೆ.

ಎನ್‍ಐಆರ್‍ಎಫ್ ರ‍್ಯಾಂಕಿಂಗ್ 2021 ಪಟ್ಟಿಯನ್ನು ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)