ಕರಾವಳಿ
ಮಂಗಳೂರಿನ ಮಾಜಿ ಬಿಷಪ್ ಬಾಸಿಲ್ ಸಾಲ್ವದೊರ್ ಡಿಸೋಜರ ಸಂಸ್ಮರಣೆ ಕಾರ್ಯಕ್ರಮ

ಮಂಗಳೂರು, ಸೆ.9: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಮಾಜಿ ಬಿಷಪ್ ದಿ. ಬಾಸಿಲ್ ಸಾಲ್ವದೊರ್ ಡಿಸೋಜ ಅವರ 25ನೇ ಪುಣ್ಯತಿಥಿಯ ಅಂಗವಾಗಿ ನಗರದ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಗುರುವಾರ ಕಾರ್ಯಕ್ರಮ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಬಿಷಪ್ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನ, ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದವರನ್ನು ಸಮಾಜ ಸದಾ ಸ್ಮರಿಸುತ್ತದೆ ಮತ್ತು ಜನ ಮಾನಸದಲ್ಲಿ ಅವರು ಅಮರರಾಗಿರುತ್ತಾರೆ ಎಂದರು.
ದಿ. ಬಾಸಿಲ್ ಎಸ್. ಡಿಸೋಜ 1965ರಿಂದ 1996ರ ತನಕ 31 ವರ್ಷಗಳ ಕಾಲ ಮಂಗಳೂರಿನ ಬಿಷಪ್ ಆಗಿದ್ದಾಗ ಉಡುಪಿ, ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಮಂಗಳೂರು ಧರ್ಮಪ್ರಾಂತಕ್ಕೆ ಸಮರ್ಥ ನಾಯಕತ್ವ ನೀಡಿದ್ದರು. ಹಲವಾರು ಹೊಸ ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳು, ಸಮಾಜ ಸೇವಾ ಸಂಸ್ಥೆಗಳು, ವೈದ್ಯಕೀಯ ಸೇವಾ ಸಂಸ್ಥೆಗಳು ಅವರ ನಾಯಕತ್ವದಲ್ಲಿ ಆರಂಭವಾಗಿದ್ದು, ಈಗ ನಾವು ಅವುಗಳ ಲಾನುಭವವನ್ನು ನಾವು ಪಡೆಯುತ್ತಿದ್ದೇವೆ ಎಂದರು.
ಸಂಸ್ಮರಣಾ ಬಲಿ ಪೂಜೆಯಲ್ಲಿ ವಿಶ್ರಾಂತ ಬಿಷಪ್ ಅತಿ. ವಂ. ಅಲೋಶಿಯಸ್ ಪಾವ್ಲ್ ಡಿಸೋಜ ಪ್ರವಚನ ನೀಡಿದರು. ಬಳಿಕ ಮಾತನಾಡಿದ ಅವರು, ದ್ವಿತೀಯ ವ್ಯಾಟಿಕನ್ ಮಹಾಸಭೆಯ ನಿರ್ಣಯದಂತೆ ಧಾರ್ಮಿಕ ಆಚರಣೆಗಳಲ್ಲಿ ಸ್ಥಳೀಯ ಭಾಷೆ ಬಳಸುವ ಬಗೆಗಿನ ನಿರ್ಣಯವನ್ನು ಭಾರತದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಅನುಷ್ಠಾನ ಮಾಡಿದ ಕೀರ್ತಿ ದಿ. ಬಿಷಪ್ ಬಾಸಿಲ್ ಅವರಿಗೆ ಸಲ್ಲುತ್ತದೆ. ಇದಕ್ಕಾಗಿ ಹೊಸ ಒಡಂಬಡಿಕೆ, ಪ್ರಾರ್ಥನಾ ಗ್ರಂಥಗಳು ಹಾಗೂ ವಾಚನಾ ಗ್ರಂಥಗಳನ್ನು ಕೊಂಕಣಿಗೆ ಭಾಷಾಂತರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಅಲ್ಲದೆ ಧರ್ಮ ಪ್ರಾಂತದ ಆಡಳಿತದಲ್ಲಿ ಸ್ಥಳೀಯ ಜನತೆಗೆ ಪ್ರಾತಿನಿಧ್ಯ ನೀಡಲು ಪಾಲನಾ ಪರಿಷತ್‌ನ್ನು ರೂಪಿಸುವ ಪ್ರಕ್ರಿಯೆ ಕೂಡಾ ಮಂಗಳೂರಿನಲ್ಲಿ ಮೊದಲು ನಡೆಯಿತು ಎಂದು ನೆನಪಿಸಿದರು.
ಬಲಿಪೂಜೆಯ ಬಳಿಕ ರೊಸಾರಿಯೋ ಕೆಥೆಡ್ರಲ್‌ನಲ್ಲಿರುವ ದಿ. ಬಾಸಿಲ್ ಡಿಸೋಜ ಅವರ ಸಮಾಧಿಯ ಬಳಿ ಪ್ರಾರ್ಥನೆ ಸಲ್ಲಿಸಲಾತು. ಕೆನರಾ ಕಮ್ಯುನಿಕೇಶನ್ ಸೆಂಟರ್ ದಿ. ಬಿಷಪ್ ಬಾಸಿಲ್ ಅವರ ಬಗ್ಗೆ ರಚಿಸಿದ ಸಾಕ್ಷ್ಯಚಿತ್ರವನ್ನು ಹಾಗೂ ಪ್ರೊ. ಸ್ಟೀವನ್ ಕ್ವಾಡ್ರಸ್ ಸಂಪಾದಕತ್ವದಲ್ಲಿ ಹೊರ ತಂದಿರುವ ಸಂಸ್ಮರಣಾ ಗ್ರಂಥವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿಯ ಬಿಷಪ್ ಅತಿ ವಂ. ಜೆರಾಲ್ಡ್ ಐಸಾಕ್ ಲೋಬೊ, ಧರ್ಮಪ್ರಾಂತದ ಪ್ರಧಾನ ಗುರು ಮೊ. ಮ್ಯಾಕ್ಸಿಂ ಎಲ್. ನೊರೋನ್ಹಾ, ಮಾಜಿ ಪ್ರಧಾನ ಗುರು ಮೊ. ಡೆನಿಸ್ ಮೊರಾಸ್, ರೊಸಾರಿಯೋ ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಫ್ರೆಡ್ ಪಿಂಟೊ, ಜುಡೀಶಿಯಲ್ ವಿಕಾರ್ ವಂ. ವಾಲ್ಟರ್ ಡಿಮೆಲ್ಲೊ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ. ವಿಕ್ಟರ್ ವಿಜಯ್ ಲೋಬೊ ಮತ್ತು ರೋಯ್ ಕ್ಯಾಸ್ಟಲಿನೊ, ದಿ. ಬಾಸಿಲ್ ಡಿಸೋಜರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ವಂ ಅನಿಲ್ ಐವನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
*ಮನೆ ನಿರ್ಮಾಣಕ್ಕೆ ನೆರವು
ದಿ. ಬಿಷಪ್ ಬಾಸಿಲ್ ಅವರ ಸಂಸ್ಮರಣಾ ಗ್ರಂಥ ಮಾರಾಟದ ಹಣವನ್ನು ಧರ್ಮಪ್ರಾಂತದ ಬಡವರಿಗೆ ಮನೆ ಕಟ್ಟಿಸಿ ಕೊಡುವ ಯೋಜನೆಗೆ ನೀಡಲಾಗುವುದು ಎಂದು ಪ್ರೊ. ಸ್ಟೀವನ್‌ಕ್ವಾಡ್ರಸ್ ತಿಳಿಸಿದರಕಲ್ಲದೆ, ಈ ಬಗ್ಗೆ ಸಾಂಕೇತಿಕವಾಗಿ ಚೆಕ್‌ನ್ನು ಬಿಷಪ್‌ಗೆ ಹಸ್ತಾಂತರಿಸಿದರು.












‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












