varthabharthi


ಕರಾವಳಿ

ಲಸಿಕೆ ಪಡೆಯದವರಿಗೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಗೆ ಪ್ರವೇಶವಿಲ್ಲ : ಸುಮಿತ್ರಾ ಆರ್ ನಾಯಕ್

ವಾರ್ತಾ ಭಾರತಿ : 9 Sep, 2021

ಉಡುಪಿ, ಸೆ.9: ಕೋವಿಡ್ ಲಸಿಕೆ ಅಭಿಯಾನದ ಕುರಿತಂತೆ ಉಡುಪಿ ನಗರಸಭೆಯಲ್ಲಿ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ಸಮಾಲೋಚನಾ ಸಭೆಯಲ್ಲಿ ಉಡುಪಿ ನಗರವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಅಭಿಯಾನದಲ್ಲಿ ಶೇ. ನೂರು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಇದೇ ಸಂದರ್ಭದಲ್ಲಿ ಮುಂದಿನ ನಗರಸಭೆಯ ಸಾಮಾನ್ಯ ಸಭೆಗೆ ಲಸಿಕೆ ತೆಗೆದುಕೊಳ್ಳದ ನಗರಸಭಾ ಸದಸ್ಯರು, ಪತ್ರಿಕಾ ಪ್ರತಿನಿಧಿಗಳು, ಅಧಿಕಾರ ವರ್ಗಕ್ಕೆ ಪ್ರವೇಶವನ್ನು ನಿರಾಕರಿಸಲಾಗುತ್ತದೆ ಎಂದು ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಸಭೆಗೆ ತಿಳಿಸಿದರು.

ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ಚಾರ್ಮಿನ್ ಮತ್ತು ಡಾ. ಹೇಮಂತ್ ಭಟ್ ಸಭೆಯಲ್ಲಿ ಭಾಗವಹಿಸಿ, ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲು ಆಗದೆ ಇರುವ ಅಶಕ್ತರಿಗೆ ಅವರ ಮನೆಗಳಿಗೆ ತೆರಳಿ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ಉಡುಪಿ ನಗರ ಭಾಗದಲ್ಲಿ ಲಸಿಕೆ ಪಡೆಯಲು ಬಾಕಿ ಉಳಿದಿರುವ ಶೇ.20 ರಷ್ಟು ನಾಗರಿಕರಿಗೆ ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಲು ಜನಪ್ರತಿನಿಧಿ ಗಳು ಮತ್ತು ಅರೋಗ್ಯ ಇಲಾಖೆಯ ಜೊತೆ ನಗರಸಭಾ ಅಧಿಕಾರಿಗಳು ಕೂಡ ಕೈಜೋಡಿಸುವ ಬಗ್ಗೆ ಪೌರಾಯುಕ್ತ ಡಾ.ಉದಯ್ ಶೆಟ್ಟಿ ಭರವಸೆ ನೀಡಿದರು.

ಬೀದಿನಾಯಿ ಹಾವಳಿ: ಉಡುಪಿ ನಗರಭಾಗದಲ್ಲಿ ಹೆಚ್ಚುತ್ತಿರುವ ಬೀದಿನಾಯಿ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಗರಸಭೆಯ ವಿಶೇಷ ಸಮಾಲೋಚನಾ ಸಭೆಯೂ ನಡೆಯಿತು.

ಸಭೆಯಲ್ಲಿ ಪ್ರಾಣಿದಯಾ ಸಂಘದ ಪ್ರತಿನಿಧಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಸುಂದರ ಕಲ್ಮಾಡಿ, ಎಡ್ಲಿನ್ ಕರ್ಕಡ, ಕೃಷ್ಣರಾವ್ ಕೊಡಂಚ, ವಿಜಯ ಕೊಡವೂರು, ಯೋಗೀಶ್ ಸಾಲಿಯಾನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿ ಸಮಸ್ಯೆಯ ಗಂಭೀರತೆಯನ್ನು ತೆರೆದಿಟ್ಟರು.

ಚರ್ಚೆಯ ಕೊನೆಯಲ್ಲಿ ಪ್ರಸ್ತುತ ಇರುವ ನಾಯಿಗಳನ್ನು ಹಿಡಿದು ಸಂತಾನ ಹರಣ ನಡೆಸುವ ವ್ಯವಸ್ಥೆ ಯನ್ನು ಎಲ್ಲ ಜನಪ್ರತಿನಿದಿಗಳು, ಅಧಿಕಾರಿ ಗಳು ಹಾಗು ಸಾರ್ವಜನಿಕ ಸೇವಾ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಉಪಾಧ್ಯಕ್ಷೆ ಲಕ್ಷ್ಮೀ ಮಂಜುಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ ಅಂಚನ್, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಂಕರ ಶೆಟ್ಟಿ, ವೈದ್ಯಾಧಿಕಾರಿಗಳಾದ ಡಾ.ಪ್ರಶಾಂತ್ ಶೆಟ್ಟಿ, ಡಾ.ದಯಾನಂದ ಶೆಟ್ಟಿ, ಡಾ.ಸಂದೀಪ್ ಕೆ., ಪ್ರಾಣಿದಯಾ ಸಂಘದ ಪ್ರತಿನಿಧಿ ಗಳಾದ ಡಾ.ಶುಭಗೀತಾ, ಮಂಜುಳಾ ಕರ್ಕೇರಾ ಮತ್ತಿತರರು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)