ರಾಷ್ಟ್ರೀಯ
ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಿದೆ ಫೋರ್ಡ್ ಸಂಸ್ಥೆ, ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ನಿರೀಕ್ಷೆ

Picture credit: PTI
ಹೊಸದಿಲ್ಲಿ: "ಭಾರೀ ನಷ್ಟ" ದಿಂದಾಗಿ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಆಟೋಮೊಬೈಲ್ ಕಂಪನಿ ಫೋರ್ಡ್ ಮೋಟಾರ್ ಗುರುವಾರ ಘೋಷಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
"ದೀರ್ಘಾವಧಿಯ ಲಾಭದತ್ತ ಸುಸ್ಥಿರ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ" ಎಂದು ಕಂಪನಿಯ ಭಾರತ ಘಟಕದ ಮುಖ್ಯಸ್ಥ ಅನುರಾಗ್ ಮೆಹ್ರೋತ್ರಾ ಹೇಳಿದ್ದಾರೆ.
ರಾಯಿಟರ್ಸ್ ಪ್ರಕಾರ ಕಂಪೆನಿಯ ಈ ಕ್ರಮದಿಂದಾಗಿ ಸುಮಾರು 4,000 ಉದ್ಯೋಗಿಗಳ ಮೇಲೆ ಪರಿಣಾಮಬೀರುವ ನಿರೀಕ್ಷೆಯಿದೆ. 2017 ರಲ್ಲಿ ಜನರಲ್ ಮೋಟಾರ್ಸ್ ಹಾಗೂ 2020 ರಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಗಳು ತಮ್ಮ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿದ ನಂತರ ಫೋರ್ಡ್ ಭಾರತದಿಂದ ನಿರ್ಗಮಿಸುತ್ತಿರುವ ಮೂರನೇ ಪ್ರಮುಖ ಅಮೆರಿಕದ ವಾಹನ ತಯಾರಕ ಸಂಸ್ಥೆಯಾಗಿದೆ.
"ಭಾರತದಲ್ಲಿ ಗಮನಾರ್ಹವಾಗಿ ಹೂಡಿಕೆ ಮಾಡಿದರೂ, ಫೋರ್ಡ್ ಕಳೆದ 10 ವರ್ಷಗಳಲ್ಲಿ 2 ಬಿಲಿಯನ್ ಡಾಲರ್ (ರೂ. 1.47 ಲಕ್ಷ ಕೋಟಿ) ಗೂ ಅಧಿಕ ನಷ್ಟವನ್ನು ಅನುಭವಿಸಿದೆ ಮತ್ತು ಹೊಸ ವಾಹನಗಳ ಬೇಡಿಕೆ ನಿರೀಕ್ಷೆಗಿಂತ ದುರ್ಬಲವಾಗಿದೆ" ಎಂದು ಫೋರ್ಡ್ ಮೋಟಾರ್ ಕಂಪನಿಯ ಅಧ್ಯಕ್ಷ ಜಿಮ್ ಫಾರ್ಲೆ ಹೇಳಿದರು.
ಫೋರ್ಡ್ ಇಂಡಿಯಾ ಕಂಪೆನಿಯು ಭಾರತದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿದೆ. ತನ್ನ ಗುಜರಾತ್‌ನ ಸನಂದ್ ಘಟಕವನ್ನು ಈ ವರ್ಷದ ಅಂತ್ಯದ ವೇಳೆಗೆ ಹಾಗೂ ಚೆನ್ನೈ ಘಟಕವನ್ನು ಮುಂದಿನ ವರ್ಷದ ವೇಳೆಗೆ ಮುಚ್ಚಲಿದೆ ಎಂದು ಕಂಪೆನಿ ತಿಳಿಸಿದೆ.
ಚೆನ್ನೈನಲ್ಲಿ 3,300 ಸಿಬ್ಬಂದಿ ಹಾಗೂ ಗುಜರಾತ್ ನಲ್ಲಿ 1,500 ಸಿಬ್ಬಂದಿ ಇದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ












