varthabharthi


ವಿಶೇಷ-ವರದಿಗಳು

Theprint.in ವರದಿ

ಅಂದು ಜಿಎಂ, ಇಂದು ಫೋರ್ಡ್: ಭಾರತವೇಕೆ ವಿಶ್ವದ ಪ್ರಮುಖ ಕಾರು ತಯಾರಕರಿಗೆ ಮಸಣವಾಗುತ್ತಿದೆ?

ವಾರ್ತಾ ಭಾರತಿ : 11 Sep, 2021

ಹೊಸದಿಲ್ಲಿ,ಸೆ.11: ಫೋರ್ಡ್ ಮತ್ತು ಜನರಲ್ ಮೋಟರ್ಸ್ (ಜಿಎಂ)ಗಿಂತ ದೊಡ್ಡ (ಸಂಖ್ಯೆಯಿಂದ,ಮೌಲ್ಯದಿಂದಲ್ಲ) ಕಾರು ತಯಾರಿಕೆ ಸಂಸ್ಥೆಯಾಗಿರುವ ಹುಂಡೈಯನ್ನು ಹೊರತುಪಡಿಸಿದರೆ ವಿಶ್ವದ ನಾಲ್ಕು ಪ್ರಮುಖ ವಾಹನ ತಯಾರಿಕೆ ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಹೆಚ್ಚೆಂದರೆ ಶೇ.6ರಷ್ಟು ಪಾಲನ್ನು ಹೊಂದಿವೆ. ಈ ಪೈಕಿ ಜಿಎಂ ನಾಲ್ಕು ವರ್ಷಗಳ ಹಿಂದೆಯೇ ಭಾರತದಿಂದ ನಿರ್ಗಮಿಸಿದೆ. 

ತಾನೂ ಭಾರತದಿಂದ ನಿರ್ಗಮಿಸುವುದಾಗಿ ಫೋರ್ಡ್ ಇತ್ತೀಚಿಗಷ್ಟೇ ಪ್ರಕಟಿಸಿದೆ,ಆದರೆ ಅದು ಭಾರತೀಯ ಮಾರುಕಟ್ಟೆಯಲ್ಲಿ ಶೇ.2ಕ್ಕೂ ಕಡಿಮೆ ಪಾಲನ್ನು ಹೊಂದಿರುವುದರಿಂದ ಅದರ ನಿರ್ಗಮನವು ಅಂತಹ ವ್ಯತ್ಯಾಸವನ್ನೇನೂ ಉಂಟು ಮಾಡುವುದಿಲ್ಲ ಮತ್ತು ವಿಶ್ವದ ನಂ.1 ಆಗಿರುವ ಫೋಕ್ಸ್ ವ್ಯಾಗನ್ ತನ್ನ ಅಂಗಸಂಸ್ಥೆ ಸ್ಕೋಡಾದೊಂದಿಗೆ ಹೆಚ್ಚೆಂದರೆ ಕೇವಲ ಶೇ.1ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. 

ವಿಶ್ವದ ನಾಲ್ಕು ದೊಡ್ಡ ಕಂಪನಿಗಳ ಪೈಕಿ ಟೊಯೊಟಾ ಅತ್ಯಂತ ಯಶಸ್ವಿಯಾಗಿದ್ದರೂ ಭಾರತೀಯ ಮಾರುಕಟ್ಟೆಯಲ್ಲಿ ಅದರ ಪಾಲು ಶೇ.3ನ್ನು ಮೀರುವುದಿಲ್ಲ. ಟೊಯೊಟಾ ಕೂಡ ಕಳೆದ ವರ್ಷ ಅಧಿಕ ತೆರಿಗೆಗಳ ಬಗ್ಗೆ ದೂರಿಕೊಂಡು ಭಾರತದಲ್ಲಿ ಇನ್ನಷ್ಟು ಹೂಡಿಕೆಯನ್ನು ನಿಲ್ಲಿಸುವುದಾಗಿ ಪ್ರಕಟಿಸಿತ್ತು ಮತ್ತು ನಂತರ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿತ್ತು. ಆದರೆ ಅದು ಭಾರತದಲ್ಲಿ ತನ್ನ ಎರಡು ಬಾಕ್ಸ್ ಮಾಡೆಲ್ಗಳಾದ ಇಟಿಯೋಸ್ ಮತ್ತು ಕೊರೊಲಾ ಆಲ್ಟಿಸ್ ಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಹೊಂಡಾ ಕೂಡ ತನ್ನ ಸಿವಿಕ್ ಮತ್ತು ಅಕಾರ್ಡ್ ಮಾದರಿಗಳ ತಯಾರಿಕೆಯನ್ನು ಸ್ಥಗಿತಗೊಳಿಸಿದೆ.

ಹೀಗಾಗಿ ಭಾರತವೇಕೆ ವಿಶ್ವದ ಪ್ರಮುಖ ವಾಹನ ತಯಾರಕರ ಪಾಲಿನ ಮಸಣವಾಗುತ್ತಿದೆ? ಇದಕ್ಕೆ ಒಂದು ಉತ್ತರವೆಂದರೆ ಭಾರತೀಯ ಕಾರು ಮಾರುಕಟ್ಟೆಯು ಹಿಂದೊಮ್ಮೆ ಭರವಸೆ ಮೂಡಿಸಿದ್ದಂತೆ ಈಗಿಲ್ಲ. ಅದರ ಜಾಗತಿಕ ರ್ಯಾಂಕಿಂಗ್ (ವಾಹನಗಳ ಸಂಖ್ಯೆಯಿಂದ,ಮೌಲ್ಯದಿಂದಲ್ಲ) ನಾಲ್ಕರಿಂದ ಮೂರಕ್ಕೇರುವ ನಿರೀಕ್ಷೆಯಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಚೇತರಿಕೆಗೆ ಮುನ್ನ ಮಾರುಕಟ್ಟೆಯು ಬಸವಳಿದಿತ್ತು ಮತ್ತು ನಂತರದ ಎರಡು ವರ್ಷಗಳಲ್ಲಿ ಕುಗ್ಗಿತ್ತು,ಹೀಗಾಗಿ ಭಾರತದ ರ್ಯಾಂಕಿಂಗ್ ಐದಕ್ಕೆ ಕುಸಿದಿದೆ (ಜರ್ಮನಿ ಅದನ್ನು ಹಿಂದಿಕ್ಕಿದೆ)
 
ಎರಡನೇ ಉತ್ತರವೆಂದರೆ ಬೆಲೆ. ಭಾರತವು ಅಗ್ಗದ ಬೆಲೆಗಳ ಕಡಿಮೆ ಚಾಲನಾ ವೆಚ್ಚದ ಕಾರುಗಳಿಗೆ ಮಾರುಕಟ್ಟೆಯಾಗಿದೆ. ಆದರೆ ಜಾಗತಿಕ ದೈತ್ಯ ಕಂಪನಿಗಳ ಬಳಿ ಭಾರತೀಯ ಮಾರುಕಟ್ಟೆಗೆ ಸೂಕ್ತವಾದ ಮಾಡೆಲ್ ಗಳಿಲ್ಲ,ಏಕೆಂದರೆ ವಿಶ್ವದ ಹೆಚ್ಚಿನ ದೇಶಗಳು ದೊಡ್ಡ ಕಾರುಗಳನ್ನೇ ಇಷ್ಟ ಪಡುತ್ತವೆ. ಮಾರುತಿ ಮತ್ತು ಹುಂಡೈ ಮಾತ್ರ ಯಶಸ್ವಿ ಆರಂಭಿಕ ಬೆಲೆಗಳ ಮಾಡೆಲ್ ಗಳನ್ನು ಹೊಂದಿವೆ ಮತ್ತು ಇವೆರಡೂ ಕಂಪನಿಗಳು ಸೇರಿಕೊಂಡು ಭಾರತೀಯ ಕಾರು ಮಾರುಕಟ್ಟೆಯ ಮೂರನೇ ಎರಡರಷ್ಟು ಪಾಲನ್ನು ಹೊಂದಿವೆ. ಫೋರ್ಡ್ ಅಥವಾ ಫೋಕ್ಸ್ ವ್ಯಾಗನ್ ಅಥವಾ ಟೊಯೊಟಾ ಅಥವಾ ಹೊಂಡಾ ಆಗಲೀ,ಮೂರು ಲಕ್ಷ ರೂ.ಬೆಲೆಯೊಂದಿಗೆ ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ,ಮಾರುತಿಯ ಅತ್ಯಂತ ಹೆಚ್ಚು ಮಾರಾಟವಾಗುವ ಅಲ್ಟೋ ಕಾರಿಗೆ ಸ್ಪರ್ಧೆ ನೀಡಬಲ್ಲ ಮಾಡೆಲ್ಗಳನ್ನು ಹೊಂದಿಲ್ಲ. ಆ ವೆಚ್ಚದಲ್ಲಿ ಕಾರು ತಯಾರಿಸುವುದು ಹೇಗೆ ಎನ್ನುವುದೂ ಹೆಚ್ಚಿನ ಜಾಗತಿಕ ಕಂಪನಿಗಳಿಗೆ ಗೊತ್ತಿಲ್ಲ.
 
ಮಾರುಕಟ್ಟೆ ಬದಲಾಗುತ್ತಿದೆ,ನಿಜ. ಗ್ರಾಹಕರ ಶ್ರೀಮಂತಿಕೆ ಹೆಚ್ಚುತ್ತಿರುವುದರಿಂದ ಅವರು ಮೂಲ 800 ಸಿಸಿ ಕಾರಿಗಿಂತ ಹೆಚ್ಚು ಕ್ಷಮತೆಯ ಕಾರನ್ನು ಹೊಂದಲು ಬಯಸುತ್ತಿದ್ದಾರೆ. ಈಗಿನ ಪ್ರಮುಖ ಹ್ಯಾಚ್ಬ್ಯಾಕ್ಗಳು ಗಾತ್ರದಲ್ಲಿ ದೊಡ್ಡದಾಗಿವೆ. ಹುಂಡೈನ ಐ20,ಮಾರುತಿಯ ಸ್ವಿಫ್ಟ್ ಮತ್ತು ಬಲೆನೊ ಹಾಗೂ ಟಾಟಾ ಮೋಟರ್ಸ್ ನ ಟಿಯಾಗೊ ಮತ್ತು ಅಲ್ಟ್ರೋಝ್ ನಂತಹ ಹೆಚ್ಚು ವೈಶಿಷ್ಟಗಳುಳ್ಳ ಕಾರುಗಳು ಗ್ರಾಹಕರ ಮೆಚ್ಚುಗೆ ಪಡೆದಿವೆ. ಇವೆಲ್ಲ 6 ಲ.ರೂ.ನಿಂದ 10 ಲ.ರೂ.ಬೆಲೆವರೆಗಿನ ಶ್ರೇಣಿಗಳಲ್ಲಿ ಲಭ್ಯವಾಗುತ್ತಿವೆ. ಈ ನಡುವೆ ಹುಂಡೈ ಗ್ರೂಪ್ ನ ಕಿಯಾ ಮೋಟರ್ಸ್ ತನ್ನ ಮಿನಿ-ಎಸ್ಯುವಿ ಮಾಡೆಲ್ ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಮಾರುತಿ ಮತ್ತು ಹುಂಡೈ ನಂತರ ಮೂರನೇ ಸ್ಥಾನಕ್ಕಾಗಿ ಟಾಟಾ ಮತ್ತು ಮಹಿಂದ್ರಾ ಜೊತೆ ಪೈಪೋಟಿಗಿಳಿದಿದೆ.

ದೇಶಿಯ ಮಾರುಕಟ್ಟೆಯ ಆಧಾರದಲ್ಲಿ ರಫ್ತು ಯಶಸ್ಸನ್ನು ಸಾಧಿಸಬೇಕಿರುವುದು ಕಾರು ಮಾರುಕಟ್ಟೆಯ ಇನ್ನೊಂದು ವೈಶಿಷ್ಟವಾಗಿದೆ. ಭಾರತದಿಂದ ತನ್ನ ಕಾರುಗಳಿಗೆ ಯುರೋಪ್ನ ಮಾರುಕಟ್ಟೆಯನ್ನು ತೆರೆಯಬಲ್ಲ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ)ಕ್ಕಾಗಿ ಎದುರು ನೋಡುತ್ತಿದ್ದ ಫೋರ್ಡ್ ಅದಾಗಲೇ ತಮಿಳುನಾಡಿನಲ್ಲಿದ್ದ ಕಾರು ತಯಾರಿಕೆ ಘಟಕದ ಜೊತೆಗೆ ಗುಜರಾತ್ನಲ್ಲಿ ತನ್ನ ಎರಡನೇ ದೊಡ್ಡ ಘಟಕವನ್ನು ಸ್ಥಾಪಿಸಿತ್ತು. ಆದರೆ ಎಫ್ಟಿಎ ಸಾಕಾರಗೊಂಡಿರಲಿಲ್ಲ. ಭಾರತದಲ್ಲಿ ಅದರ ಒಂದು ಮಾಡೆಲ್ ಮಾತ್ರ ಸಾಧಾರಣ ಯಶಸ್ಸು ಕಂಡಿದ್ದರಿಂದ ಅದು ತನ್ನ ಉತ್ಪಾದನಾ ಸಾಮರ್ಥ್ಯದ ಮುಕ್ಕಾಲು ಭಾಗವನ್ನು ಬಳಸಿರಲಿಲ್ಲ. ಹೀಗಾಗಿ ಅದಕ್ಕೆ ಭಾರತದಿಂದ ನಿರ್ಗಮನ ಅನಿವಾರ್ಯವಾಗಿದೆ.

ಅಂತಿಮವಾಗಿ ಹೇಳುವುದಾದರೆ ಕಾರು ಮಾರುಕಟ್ಟೆಗಳು ಜಿಗುಟುತನವನ್ನು ಹೊಂದಿವೆ. ಮಾರುತಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಧಿಸಿದ್ದ ಆರಂಭಿಕ ಪ್ರಾಬಲ್ಯಕ್ಕೆ ಸವಾಲೊಡ್ಡಲು ಯಾರಿಗೂ ಸಾಧ್ಯವಾಗಿಲ್ಲ. ಫ್ರಾನ್ಸ್,ಜರ್ಮನಿ,ಇಟಲಿ,ಜಪಾನ್ ಮತ್ತು ದಕ್ಷಿಣ ಕೊರಿಯಾಗಳದ್ದೂ ಇದೇ ಕಥೆ. ಒಂದು ವರ್ಗದಲ್ಲಿಯ (ಸಣ್ಣ ಕಾರುಗಳಂತಹ) ಯಶಸ್ಸು ಇತರ ವರ್ಗಗಳಲ್ಲಿ ಯಶಸ್ಸನ್ನು ನೀಡುವುದಿಲ್ಲ,ಹೊಂಡಾದ ಸಿಟಿ ಮಾಡೆಲ್ನ್ನು ಮೀರಿಸುವಲ್ಲಿ ಮಾರುತಿಯ ಸಿಯಾಜ್ ಸೆಡಾನ್ ವೈಫಲ್ಯವು ಇದಕ್ಕೆ ನಿದರ್ಶನವಾಗಿದೆ. ಇದು ಕಠಿಣ ಲೋಕವಾಗಿದ್ದು,ಪ್ರತಿ ಮಾರುಕಟ್ಟೆ ಮತ್ತು ಪ್ರತಿ ವರ್ಗದಲ್ಲಿ ಯಶಸ್ಸನ್ನು ಸಾಧಿಸಬೇಕಾಗುತ್ತದೆ.

ಕೃಪೆ: Theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)