varthabharthi


ನಿಮ್ಮ ಅಂಕಣ

ಜಾಗತಿಕ ಬಂಡವಾಳವಾದದ ವಿನಾಶಕಾರಿ ಕ್ರಿಯೆಗಳೂ, ಹೆಚ್ಚುತ್ತಿರುವ ಜನಸಾಮಾನ್ಯರ ಬದುಕಿನ ಬವಣೆಗಳೂ

ವಾರ್ತಾ ಭಾರತಿ : 15 Sep, 2021
ನಂದಕುಮಾರ್ ಕೆ. ಎನ್.

ಜನರ ಆದಾಯಮೂಲಗಳ ನಾಶ, ಉದ್ಯೋಗಾವಕಾಶಗಳ ನಾಶ ಎಲ್ಲಾ ಸೇರಿ ಜನರ ಕೊಳ್ಳುವ ಶಕ್ತಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಕುಸಿದುಹೋಗಿದೆ. ಹಾಗಾಗಿ ಆಟೋಮೊಬೈಲ್ ಸೇರಿದಂತೆ ಎಲ್ಲಾ ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಗ್ರಾಹಕರ ಕೊರತೆ ಕಾಡುತ್ತಿದೆ. ನೋಟು ರದ್ದತಿಯ ನಂತರ ಇದು ಇನ್ನಷ್ಟು ಹದಗೆಟ್ಟಿದೆ. ಕೊರೋನ ಲಾಕ್‌ಡೌನ್ ಹಾಗೂ ನಿರ್ಬಂಧ ಅದನ್ನು ಪರಾಕಾಷ್ಠೆಯತ್ತ ಸಾಗಿಸುತ್ತಿದೆ.


 ಇಪ್ಪತ್ತೈದು ವರ್ಷಗಳ ಹಿಂದೆ ಭಾರತದಲ್ಲಿ ತನ್ನ ಉತ್ಪಾದನೆ ಹಾಗೂ ಜೋಡಣೆಯನ್ನು ಶುರುಮಾಡಿದ್ದ ಅಮೆರಿಕ ಮೂಲದ ಫೋರ್ಡ್ ಮೋಟಾರ್ ಕಂಪೆನಿ ಈಗ ಇಲ್ಲಿನ ತನ್ನ ಘಟಕಗಳನ್ನು ಮುಚ್ಚುತ್ತಿದೆ. ಅದರಿಂದಾಗಿ ಸುಮಾರು 4,000 ಉದ್ಯೋಗಗಳು ನಷ್ಟವಾಗುತ್ತವೆ ಎಂದು ಹೇಳಲಾಗುತ್ತಿವೆ. ದೇಶದಲ್ಲಿ ಎರಡುವರೆ ಶತಕೋಟಿ ಡಾಲರುಗಳನ್ನು ಹೂಡಿದ್ದ ಈ ಸಂಸ್ಥೆಗೆ ಕಳೆದ ಹತ್ತು ವರ್ಷಗಳಿಂದ ಇದುವರೆಗೆ ಒಟ್ಟು ಎರಡು ಶತಕೋಟಿ ಡಾಲರುಗಳಷ್ಟು ನಷ್ಟವಾಗಿದೆ ಎನ್ನಲಾಗುತ್ತಿದೆ. ಹೀಗೆ ಏರಿಕೆಯತ್ತ ಸಾಗುತ್ತಿರುವ ನಷ್ಟ ಹಾಗೂ ಬೆಳವಣಿಗೆಯ ಭರವಸೆಯಿಲ್ಲದೆ ಅಮೆರಿಕದ ಜನರಲ್ ಮೋಟಾರ್ ಕಂಪೆನಿ, ಹಾರ್ಲೆ ಡೇವಿಡ್‌ಸನ್ ಬೈಕ್ ಕಂಪೆನಿ, ದಕ್ಷಿಣ ಕೊರಿಯಾದ ದಾಯಿವೂ ಮೊದಲಾದ ಮೋಟಾರು ಕಂಪೆನಿಗಳು ದೇಶದಿಂದ ಹೊರಹೋಗಿವೆ. ಫೋರ್ಡ್ ಈ ವರ್ಷದ ಆರಂಭದಲ್ಲಿ ಬ್ರೆಝಿಲ್‌ನಲ್ಲಿ ಕೂಡ ತನ್ನ ಘಟಕಗಳನ್ನು ಮುಚ್ಚಿತ್ತು. ಆಟೋಮೊಬೈಲ್ ಕ್ಷೇತ್ರ ದೇಶದ ಉತ್ಪಾದನಾ ವಲಯದ ಶೇಕಡಾ 50ರಷ್ಟಿದೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಪ್ರಕಾರ ಈ ಕ್ಷೇತ್ರದಲ್ಲಿ ನೇರವಾಗಿ ದೇಶದ ಎರಡೂವರೆ ದಶಲಕ್ಷ ಜನರು ಹಾಗೂ ಪರೋಕ್ಷವಾಗಿ ಎರಡೂವರೆ ದಶಲಕ್ಷ ಜನರು ಉದ್ಯೋಗದಲ್ಲಿದ್ದರು. ಇನ್ನೊಂದು ಲೆಕ್ಕಾಚಾರದ ಪ್ರಕಾರ ನೇರ ಹಾಗೂ ಪರೋಕ್ಷವಾಗಿ ಒಟ್ಟು ಈ ಕ್ಷೇತ್ರದಲ್ಲಿ ಸುಮಾರು 35 ದಶಲಕ್ಷ ಜನರು ತೊಡಗಿಸಿಕೊಂಡಿದ್ದಾರೆ.

2019ರ ಮೂರು ತಿಂಗಳಲ್ಲೇ 286 ಮಾರಾಟ ಮಳಿಗೆಗಳು ಸ್ಥಗಿತವಾಗಿ 32,000 ಉದ್ಯೋಗಗಳನ್ನು ರದ್ದು ಮಾಡಲಾಯಿತು. ಮಾರುತಿ, ಟಾಟಾ, ಮಹೀಂದ್ರ, ಅಶೋಕ್ ಲೈಲ್ಯಾಂಡ್, ಹೊಂಡಾದಂತಹ ಕಂಪೆನಿಗಳು ತಮ್ಮ ಉತ್ಪಾದನಾ ಘಟಕಗಳನ್ನು 2019ರ ಜುಲೈಯಿಂದ ಕನಿಷ್ಠವೆಂದರೂ ಎರಡು ತಿಂಗಳುಗಳ ಕಾಲ ಮುಚ್ಚಿ ಬಿಟ್ಟಿದ್ದವು. ಅಷ್ಟೇ ಅಲ್ಲದೆ ಈ ಕ್ಷೇತ್ರದ ಅವಿಭಾಜ್ಯ ಅಂಗವಾದ ಬಾಷ್, ಎಕ್ಸೈಡ್ ಮೊದಲಾದ ಬಿಡಿಭಾಗ ಉತ್ಪಾದಕರು ಕೂಡ ತಮ್ಮ ಉತ್ಪಾದನೆಗಳನ್ನು ಕಡಿತಗೊಳಿಸಬೇಕಾಗಿ ಬಂದಿತ್ತು. ಆಟೋಮೋಟಿವ್ ಕಾಂಪೋನೆಂಟ್ ಮ್ಯಾನ್ಯುಫ್ಯಾಕ್ಚರರ್ಸ್ ಅಸೊಸಿಯೇಷನ್ ಆಫ್ ಇಂಡಿಯಾ ಪ್ರಕಾರ ಉತ್ಪಾದನೆಯಲ್ಲಿ ಶೇಕಡಾ 15ರಿಂದ ಶೇಕಡಾ 20ರಷ್ಟು ಇಳಿಕೆಯಾದರೂ ಕನಿಷ್ಠವೆಂದರೂ ಒಂದು ದಶಲಕ್ಷದಷ್ಟು ದೇಶದ ಉದ್ಯೋಗಗಳು ನಷ್ಟವಾಗುತ್ತವೆ.

2000ದ ಸುಮಾರಿಗೆ ಆಟೋಮೊಬೈಲ್ ಕ್ಷೇತ್ರ ಸ್ಥಗಿತತೆಯಿಂದ ಇಳಿಮುಖದತ್ತ ತಿರುಗಿತ್ತು. 2019ರ ವೇಳೆಗೆ ಸುಮಾರು ಕನಿಷ್ಠವೆಂದರೂ ಎರಡು ಲಕ್ಷದಷ್ಟು ಉದ್ಯೋಗಗಳು ನಷ್ಟದತ್ತ ಸಾಗಿದ್ದವು. ಈ ವಿದ್ಯಮಾನ ಹಲವು ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕಳೆದ ಸುಮಾರು ಹದಿನೈದು ವರ್ಷಗಳಿಂದ ಜಾಗತಿಕವಾಗಿ ನಡೆಯುತ್ತಾ ಬರುತ್ತಿದೆ.

ಜಾಗತಿಕ ಕಾರ್ಪೊರೇಟ್ ಶಕ್ತಿಗಳ ಪ್ರಾಯೋಜಕತ್ವದ ಜಾಗತೀಕರಣವನ್ನು ನಮ್ಮಂತಹ ದೇಶಗಳ ಮೇಲೆ ಹೇರಲಾಗಿತ್ತು. ಅದರಿಂದ ಭಾರೀ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ವಿಪುಲ ಅವಕಾಶಗಳ ಖಜಾನೆಯೇ ದೇಶದ ಜನಸಾಮಾನ್ಯರಿಗೆ ತೆರೆಯುತ್ತದೆ ಎಂದೆಲ್ಲಾ ಮಧ್ಯಮವರ್ಗ ಹಾಗೂ ಯುವ ಸಮೂಹವನ್ನು ನಂಬಿಸಲಾಗಿತ್ತು. ಅಂತಹ ಆಮಿಷಗಳಿಗೆ ದೇಶದ ಮಧ್ಯಮವರ್ಗ ಒಳಗಾಗಿ ಐಷಾರಾಮಿ ಜೀವನದ ಕನಸಿನಲ್ಲಿ ತೇಲಾಡತೊಡಗಿತು. ಜಾಗತೀಕರಣವನ್ನು ಎಗ್ಗಿಲ್ಲದೆ ಸಮರ್ಥಿಸುತ್ತಾ ಬಂದರು. ಜಾಗತೀಕರಣ ದೇಶವನ್ನು ಜಾಗತಿಕ ಕಾರ್ಪೊರೇಟ್ ಶಕ್ತಿಗಳು ಲೂಟಿ ಮಾಡಲು ಮಾಡುತ್ತಿರುವ ಹೊಸ ತಂತ್ರ, ಅದು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತದೆ, ದೇಶದ ಆಸ್ತಿ ಸಂಪನ್ಮೂಲಗಳನ್ನು ನವವಸಾಹತು ಮಾದರಿಯಲ್ಲಿ ಕೊಳ್ಳೆ ಹೊಡೆಯುವ ಜಾಗತಿಕ ಬಂಡವಾಳಶಾಹಿ ತಂತ್ರ ಇದಾಗಿದೆ ಎಂದೆಲ್ಲಾ ವಿವರಿಸಿ ಜಾಗತೀಕರಣ ವಿರೋಧಿಸಿ ಹೋರಾಟ ಮಾಡುತ್ತಿದ್ದವರನ್ನು ಈ ವರ್ಗ ಅನುಸರಿಸಲಿಲ್ಲ. ದೇಶದ ಕೃಷಿಕರು, ಕಾರ್ಮಿಕರು, ದಲಿತ, ಆದಿವಾಸಿ ಇನ್ನಿತರ ದುಡಿಯುವ ಜನಸಮೂಹಗಳ ಬದುಕುಗಳ ಬಗ್ಗೆ, ಅವರ ಶ್ರಮ ಹಾಗೂ ಅವರ ಬದುಕುಗಳೊಂದಿಗಿನ ತಮ್ಮ ಬದುಕುಗಳ ನೇರ ಸಂಬಂಧಗಳ ಬಗ್ಗೆ ಚಿಂತಿಸಲಿಲ್ಲ. ಬದಲಿಗೆ ಜಾಗತಿಕ ಬಂಡವಾಳಶಾಹಿ ಉಣಿಸಿದ ಕ್ರೂರ ಅನುಭೋಗಿ ಸಂಸ್ಕೃತಿಯ ಮೋಹಕ್ಕೆ ಬಿದ್ದು ಮತ್ತಿಗೊಳಗಾದರು. ಐಷಾರಾಮಿತನಕ್ಕಾಗಿ ಸಾಲಗಳನ್ನು ಮಾಡತೊಡಗಿದರು. ದೇಶದ ವಾಣಿಜ್ಯ ಬ್ಯಾಂಕುಗಳನ್ನು ಅದಕ್ಕಾಗಿಯೇ ತೊಡಗಿಸಲಾಯಿತು. ಕಾರು, ಮನೆ, ಗಣಕಯಂತ್ರ ಮೊದಲಾದ ಕಂತು ಸಾಲಗಳ ಸೌಲಭ್ಯಗಳು ಹೇರಳವಾದವು. ದೇಶದ ಜನರ ಅದರಲ್ಲೂ ಮಧ್ಯಮವರ್ಗದ ಜೀವನ ಮಟ್ಟದಲ್ಲಿ ಭಾರೀ ಕ್ರಾಂತಿಯಾಗುತ್ತಿದೆ ಎಂದೆಲ್ಲಾ ಭ್ರಮೆಗಳನ್ನು ವ್ಯಾಪಕವಾಗಿ ಬಿತ್ತಲಾಯಿತು. ಮಾಧ್ಯಮಗಳನ್ನು ಈ ನಿಟ್ಟಿನಲ್ಲಿ ವ್ಯಾಪಕವಾಗಿ ತೊಡಗಿಸಲಾಯಿತು. ಸಾಹಿತ್ಯ ಕಲೆಗಳನ್ನೂ ಜಾಗತೀಕರಣದ ವಾಹಕಗಳನ್ನಾಗಿಯೇ ಕಾರ್ಯ ನಿರ್ವಹಿಸುವಂತೆ ಮಾಡಲಾಯಿತು. ಆಧುನಿಕೋತ್ತರ ಕಾಲಘಟ್ಟ (ಪೋಸ್ಟ್ ಮಾಡರ್ನಿಸ್ಟ್ ಎರಾ), ಸತ್ಯೋತ್ತರ ಕಾಲಘಟ್ಟ (ಪೋಸ್ಟ್ ಟ್ರೂತ್ ಎರಾ) ಎಂಬೆಲ್ಲಾ ಕಾಲಘಟ್ಟ ವಿಂಗಡನಾ ಪರಿಭಾಷೆಗಳನ್ನು ಪರಿಚಯಿಸಲಾಯಿತು.

ವಿಶ್ವವಿದ್ಯಾನಿಲಯಗಳ ಹಲವಾರು ಬೋಧಕರು, ಶಿಕ್ಷಕರು, ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತ ವಲಯಗಳ ಹಲವರು ಜಾಗತೀಕರಣದ ಪ್ರಲೋಭನೆಗಳಿಗೆ ತಾವಾಗೇ ಸೇರಿಕೊಳ್ಳುತ್ತಾ; ಜಾಗತಿಕ ಕಾರ್ಪೊರೇಟ್‌ಗಳ ಹಣಕಾಸು ಹಾಗೂ ಸೌಕರ್ಯಗಳನ್ನು ಮೂಲ ಜನಸಮುದಾಯಗಳ ಸಂಶೋಧನೆ, ಜನಪದ ಸಂಶೋಧನೆ, ಉನ್ನತ ಸಂಶೋಧನೆ, ಪರಿಸರ ರಕ್ಷಣೆ, ತಳಿ ಸಂಶೋಧನೆ, ಫೆಲೋಶಿಪ್, ದೇಣಿಗೆ, ಪೀಠ, ಫೌಂಡೇಶನ್, ಉನ್ನತ ವ್ಯಾಸಂಗ, ಇತ್ಯಾದಿ ಹೆಸರುಗಳಲ್ಲಿ ಪದವಿ, ಪುರಸ್ಕಾರ, ವಿದೇಶ ಪ್ರವಾಸ, ಹುದ್ದೆ ಇತ್ಯಾದಿಗಳನ್ನು ಸ್ವೀಕರಿಸಿದರು. ತಮ್ಮ ಸಂಶೋಧನೆ ಇತ್ಯಾದಿಗಳ ಫಲಿತಗಳನ್ನು ಭಾರೀ ಜಾಗತಿಕ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒದಗಿಸಿಕೊಟ್ಟು ಅವರಿಗೆ ಲಾಭಗಳಿಕೆಯನ್ನು ಹೆಚ್ಚಿಸುವಲ್ಲಿ ನೆರವಾದರು. ಪ್ರಗತಿಪರವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ಕೂಡ ಫೋರ್ಡ್ ಫೌಂಡೇಶನ್, ರಾಕೆ ಫೆಲ್ಲರ್ ಫೌಂಡೇಶನ್ ಮೊದಲಾದ ಜಾಗತಿಕ ಭಾರೀ ಕಾರ್ಪೊರೇಟ್ ಸಂಸ್ಥೆಗಳ ಫಲಾನುಭವಿಗಳಾಗಿದ್ದರು ಎಂಬುದನ್ನು ಕೂಡ ಇಲ್ಲಿ ಗುರುತಿಸಬೇಕಾಗಿರುವ ವಿಚಾರ.

ಬಂಡವಾಳವಾದದ ಅಂತಿಮ ಘಟ್ಟವೇ ಜಾಗತಿಕ ಬಂಡವಾಳವಾದವಾಗಿದೆ. ಈ ಘಟ್ಟದ ನಂತರ ಅದಕ್ಕೆ ವ್ಯಾಪಿಸಿ ಬೆಳೆಯಲು ತಾಣವಿಲ್ಲದೆ ಬಂಡವಾಳವಾದದ ಕ್ಷಯಿಸುವಿಕೆ ಸಹಜವಾಗುತ್ತದೆ. ಜಾಗತಿಕ ಬಂಡವಾಳಶಾಹಿಗಳು ಇಲ್ಲವೇ ಅವುಗಳ ವಿವಿಧ ಬಣಗಳ ನಡುವೆ ಕ್ರೂರ ಸ್ಪರ್ಧೆ, ಪೈಪೋಟಿ ಏರ್ಪಟ್ಟು ಪರಸ್ಪರ ಭಾರೀ ತಿಕ್ಕಾಟಗಳಿಗೆ, ಯುದ್ಧ ಹಾಗೂ ಅಂತರ್ಯದ್ಧಗಳಿಗೆ ಕಾರಣವಾಗುತ್ತವೆ. ದೊಡ್ಡ ಕಾರ್ಪೊರೇಟ್‌ಗಳು ತಮಗಿಂತ ಚಿಕ್ಕ ಕಾರ್ಪೊರೇಟ್‌ಗಳನ್ನು ವಿಲೀನಗಳು, ಕೊಂಡುಕೊಳ್ಳುವಿಕೆಗಳು, ವಿನಾಶಕಾರಿ ಪೈಪೋಟಿಗಳ ಮೂಲಕ ಸ್ವಾಧೀನ ಪಡಿಸಿಕೊಳ್ಳುವ ಇಲ್ಲವೇ ನಾಶಮಾಡುವ ಕಾರ್ಯಗಳನ್ನು ಮಾಡುತ್ತಾ ರಾಷ್ಟ್ರೀಯ ಇಲ್ಲವೇ ಸ್ಥಳೀಯ ಆವಿಷ್ಕಾರ, ಉತ್ಪಾದನೆ ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ಬಂಧಿಸುವ ಇಲ್ಲವೇ ತಡೆಯುವ ಕಾರ್ಯಗಳನ್ನು ಮಾಡುತ್ತವೆ. ಜಾಗತಿಕವಾಗಿ ಎಲ್ಲೆಡೆಗಳಲ್ಲೂ ಉತ್ಪಾದಿತವಾಗುವ ಸಂಪತ್ತು ಹಾಗೂ ಜಾಗತಿಕ ಪ್ರಾಕೃತಿಕ ಸಂಪತ್ತುಗಳ ಮೇಲೆ ಕೆಲವೇ ಕಾರ್ಪೊರೇಟ್‌ಗಳು ಹಿಡಿತ ಸಾಧಿಸತೊಡಗುತ್ತವೆ. ಈ ಪ್ರಕ್ರಿಯೆಗಳು ಹೆಚ್ಚಾಗುತ್ತಾ, ಏಕಸ್ವಾಮ್ಯತೆ ಬೆಳೆಯುತ್ತಾ ಜಾಗತಿಕವಾಗಿ ಜನರನ್ನು ಇನ್ನಿಲ್ಲದ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ಅಭದ್ರತೆಗಳಿಗೆ ದೂಡುತ್ತಾ ಸಾಗುತ್ತದೆ. ಹಾಗಾಗಿ ಜಾಗತಿಕ ಬಂಡವಾಳಶಾಹಿ ಜಾಗತಿಕವಾಗಿ ಜನರ ಪ್ರತಿರೋಧಗಳಿಗೆ, ವಿರೋಧಗಳಿಗೆ ಗುರಿಯಾಗುತ್ತದೆ. ದೇಶಗಳು ಛಿದ್ರವಾಗುವುದು, ರಾಷ್ಟ್ರಗಳು ಸ್ವಾತಂತ್ರ ಹೊಂದುವುದು ನಡೆಯಬಹುದು. ಅದನ್ನು ಮಾರ್ಕ್ಸ್‌ವಾದಿ ಪರಿಕಲ್ಪನೆಯಲ್ಲಿ ಸಾಮ್ರಾಜ್ಯವಾದಿ ಘಟ್ಟ ಎಂದು ಕರೆಯುಲಾಗುತ್ತದೆ. ಒಂದು ವೇಳೆ ಜನರು ಸರಿಯಾದ ಸೈದ್ಧಾಂತಿಕ ನೆಲೆಗಟ್ಟಿನಡಿ ಸಂಘಟಿತರಾಗಿ ತಮ್ಮ ಶತ್ರುಗಳನ್ನು ಸರಿಯಾಗಿ ಗ್ರಹಿಸಿ ಸಾಮಾಜಿಕ ಬದಲಾವಣೆಯತ್ತ ತಮ್ಮ ಸಮರಶೀಲ ಹೋರಾಟವನ್ನು ಮುನ್ನಡೆಸಿದರೆ ಅದು ಸಮಾಜದ ಮೂಲಭೂತ ಬದಲಾವಣೆಯ ಕ್ರಾಂತಿಯಾಗಿ ಹೊರಹೊಮ್ಮುತ್ತದೆ. ಹೀಗೆಂದು ಸಮಾಜವಿಜ್ಞಾನದ ಈ ವಿಚಾರವನ್ನು ಸೈದ್ಧಾಂತಿಕವಾಗಿ ವಿವರಿಸಿ ಆಚರಣೆಗೆ ಇಳಿಸಿದವರು ಸೋವಿಯತ್ ರಶ್ಯದ ಕಮ್ಯುನಿಸ್ಟ್ ಕ್ರಾಂತಿಯ ಉನ್ನತ ನಾಯಕತ್ವದ ಭಾಗವಾಗಿದ್ದ ಲೆನಿನ್, ಜೋಸೆಫ್ ಸ್ಟಾಲಿನ್ ಹಾಗೂ ಚೀನಾದ ಕಮ್ಯುನಿಸ್ಟ್ ಉನ್ನತ ನಾಯಕತ್ವದ ಭಾಗವಾಗಿದ್ದ ಮಾವೋ ತ್ಸೆ ತುಂಗ್. ಆದರೆ ನಂತರದ ಕೃಶ್ಚೇವ್ ಕಾಲಘಟ್ಟದಲ್ಲಿ ಸೋವಿಯತ್ ರಶ್ಯ ಹಾಗೂ ಡೆಂಗ್ ಕ್ಸಿಯಾಪಿಂಗ್ ಕಾಲದಿಂದ ಚೀನಾ ಜಾಗತಿಕ ಬಂಡವಾಳವಾದದ ಭಾಗವಾಗಿಬಿಟ್ಟವು. ಸೋವಿಯತ್ ರಶ್ಯ ಒಡೆದು ಹಲವು ರಾಷ್ಟ್ರಗಳಾಗಿದ್ದರೆ, ಚೀನಾದಲ್ಲಿ ಬಿಕ್ಕಟ್ಟು ಏರುಮುಖದಲ್ಲಿ ಸಾಗುತ್ತಿದೆ.

ಜಾಗತೀಕರಣದ ಸೂತ್ರಗಳಾದ ಉದಾರೀಕರಣ, ಖಾಸಗೀಕರಣಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಸರಕಾರಗಳ ಪಾತ್ರಗಳನ್ನು ಕಡಿತಗೊಳಿಸುತ್ತಾ ಬಂದು ಈಗ ಪರಾಕಾಷ್ಠೆಯತ್ತ ಸಾಗತೊಡಗಿದೆ. ಹಾಗಿದ್ದರೂ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಗಣನೀಯ ಮಟ್ಟದಲ್ಲಿ ಏರುಮುಖದ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ.

ಕೆಲವೇ ಕಾರ್ಪೊರೇಟ್ ಸಂಸ್ಥೆಗಳು ಜಾಗತಿಕ ಸಂಪತ್ತಿನ ಬಹುಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಸಾಗಿವೆ. ಆದರೂ ಅವುಗಳು ಬಯಸಿದ ಜಾಗತಿಕ ಆರ್ಥಿಕ ಚೇತರಿಕೆಗಳು ಕಾಣದೆ ಹೋಗುತ್ತಿವೆ. ಇದಕ್ಕೆ ಉತ್ಪಾದನಾ ವಲಯದ ಬೆಳವಣಿಗೆಯಾಗದೆ ಹೋಗುತ್ತಿರುವುದೇ ಪ್ರಧಾನ ಕಾರಣವಾಗಿದೆ. ಅದು ಕೃಷಿ ಇರಬಹುದು ಕೈಗಾರಿಕೆ ಇರಬಹುದು. ಜಾಗತಿಕವಾಗಿ ಜನಸಾಮಾನ್ಯರ ಕೊಳ್ಳುವ ಶಕ್ತಿ ಬೆಳೆಯದೆ ಕ್ಷಯಿಸುತ್ತಾ ಸಾಗುತ್ತಿರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ. ಭಾರತದ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ. ಜನರ ಆದಾಯಮೂಲಗಳ ನಾಶ, ಉದ್ಯೋಗಾವಕಾಶಗಳ ನಾಶ ಎಲ್ಲಾ ಸೇರಿ ಜನರ ಕೊಳ್ಳುವ ಶಕ್ತಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಕುಸಿದುಹೋಗಿದೆ. ಹಾಗಾಗಿ ಆಟೋಮೊಬೈಲ್ ಸೇರಿದಂತೆ ಎಲ್ಲಾ ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಗ್ರಾಹಕರ ಕೊರತೆ ಕಾಡುತ್ತಿದೆ. ನೋಟು ರದ್ದತಿಯ ನಂತರ ಇದು ಇನ್ನಷ್ಟು ಹದಗೆಟ್ಟಿದೆ. ಕೊರೋನ ಲಾಕ್‌ಡೌನ್ ಹಾಗೂ ನಿರ್ಬಂಧ ಅದನ್ನು ಪರಾಕಾಷ್ಠೆಯತ್ತ ಸಾಗಿಸುತ್ತಿದೆ. ಕೊರೋನ ಲಾಕ್‌ಡೌನ್ ಮೊದಲ ಎರಡು ತಿಂಗಳುಗಳಲ್ಲೇ ದಿನಗೂಲಿಗಳು ಹಾಗೂ ಸಣ್ಣ ವ್ಯಾಪಾರಿ ವಲಯದ ಸುಮಾರು 12 ಕೋಟಿಗಳಿಗೂ ಹೆಚ್ಚು ಉದ್ಯೋಗಗಳು ನಷ್ಟವಾಗಿದ್ದವು ಎಂಬ ವರದಿಗಳಿದ್ದವು. ಜಾಗತೀಕರಣದ ಬಿಕ್ಕಟ್ಟಿನ ಭಾಗವಾಗಿಯೇ ಕೊರೋನ ಬಿಕ್ಕಟ್ಟನ್ನು ಸೃಷ್ಟಿಮಾಡಲಾಯಿತು. ಒಂದು ಸಾಮಾನ್ಯ ವೈರಸ್ ನೆಪ ಹಿಡಿದು ಜಾಗತಿಕವಾಗಿ ಭೂಮಿ, ಸಲಕರಣೆಗಳು, ಯಂತ್ರಗಳು, ಕಾರ್ಮಿಕರು, ಶ್ರಮಿಕರು ಸೇರಿದಂತೆ ಉತ್ಪಾದನಾ ಶಕ್ತಿಗಳ ಮೇಲೆ ದಾಳಿಗಳನ್ನು ಮಾಡುತ್ತಾ ನಾಶ ಮಾಡಲಾಯಿತು. ಇದರ ಗರಿಷ್ಠ ಲಾಭ ಮತ್ತೆ ಜಾಗತಿಕ ಹಿಡಿತದ ಕೆಲವೇ ಕಾರ್ಪೊರೇಟ್‌ಗಳ ಕೈಗೆ ಸೇರಿತು.

ಕೊರೋನ ಕಾಲದಲ್ಲಿ ನಮ್ಮ ದೇಶದಲ್ಲಿ ಅಂಬಾನಿ, ಅದಾನಿ ಮೊದಲಾದ ಕಾರ್ಪೊರೇಟ್ ಬಳಗ ಹಲವು ಪಟ್ಟು ಸಂಪತ್ತನ್ನು ಶೇಖರಿಸಿಕೊಂಡಿದ್ದನ್ನು ಗಮನಿಸಬಹುದು. ಅದೇ ರೀತಿ ಮೈಕ್ರೋಸಾಫ್ಟ್, ಫೇಸ್‌ಬುಕ್, ಗೂಗಲ್, ಅಸ್ಟ್ರಾಝೆನಕ, ಅಮೆಝಾನ್‌ನಂತಹ ಜಾಗತಿಕ ಕಾರ್ಪೊರೇಟ್‌ಗಳು ಹತ್ತಾರು, ನೂರಾರು ಪಟ್ಟು ಸಂಪತ್ತನ್ನು ಶೇಖರಿಸಿಕೊಂಡವು. ಆದರೆ ಇವುಗಳಲ್ಲಿ ಉತ್ಪಾದನಾ ವಲಯದ ಕಾರ್ಪೊರೇಟ್‌ಗಳನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ಇವುಗಳು ಸಂಪತ್ತು ಶೇಖರಿಸಿದ್ದು ಪ್ರಧಾನವಾಗಿ ಉತ್ಪಾದನೆಯ ಹೆಚ್ಚಳದ ಮೂಲಕ ಅಲ್ಲ. ಬದಲಿಗೆ ಜನರ ಕನಿಷ್ಠ ಬದುಕಿನ ಆದಾಯಗಳನ್ನು ಕಸಿಯುವ ಹಾಗೂ ಸೇವಾ ವಲಯ ಹಾಗೂ ಸಾರ್ವಜನಿಕ ವಲಯಗಳನ್ನು ತಮ್ಮ ಹಿಡಿತಗಳಿಗೆ ಸೇರಿಸುವ ಮೂಲಕ. ಅದು ಗಣಿ, ವಿಮೆ, ಬ್ಯಾಂಕ್, ರೈಲ್ವೆ, ವಿಮಾನಯಾನ, ಸಾರಿಗೆ, ಭೂಮಿ, ಅರಣ್ಯ ಹೀಗೆ ಸಾಗುತ್ತದೆ. ಇದರಲ್ಲಿ ಎಲ್ಲೂ ಹೊಸದಾದ ಸರಕು ಉತ್ಪಾದನೆಗಳು ಇಲ್ಲವೇ ಸರಕು ಉತ್ಪಾದನೆಯ ಹೆಚ್ಚಳ ಕಾಣುವುದು ಅಪರೂಪ. ಈ ಜಾಗತಿಕ ಬಿಕ್ಕಟ್ಟಿನ ಭಾಗವಾಗಿಯೇ ನಮ್ಮ ದೇಶದಲ್ಲಿ ಆಗುತ್ತಿರುವ ನಿರುದ್ಯೋಗದ ಹೆಚ್ಚಳ ಹಾಗೂ ಜನರ ಕೊಳ್ಳುವ ಶಕ್ತಿಯ ಹರಣ, ಸಾಮಾಜಿಕ ಅಭದ್ರತೆ ಹಾಗೂ ಅಶಾಂತಿಗಳನ್ನು ಗ್ರಹಿಸಬೇಕಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುತ್ತಾ ಸಾಗಬಹುದು.

ಮಿಂಚಂಚೆ: nandakumarnandana67@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)