varthabharthi


ಅನುಗಾಲ

ತಲೆಬಾಗು ಎಂದರೆ ತೆವಳಿದರು!

ವಾರ್ತಾ ಭಾರತಿ : 16 Sep, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ತಲೆಬಾಗು ಎಂದರೆ ತೆವಳುವುದು ಈ ದೇಶದ ಜಾಯಮಾನದಂತಿದೆ. ಈಗಿನ ಸರಕಾರವು ಹಳತಿನ ಒಳ್ಳೆಯದನ್ನು ಅನುಸರಿಸದಿದ್ದರೂ ಎಲ್ಲ ಕೆಡುಕುಗಳನ್ನೂ ಕೆಟ್ಟ ರಾಜಕಾರಣಗಳನ್ನೂ ತನ್ನದಾಗಿಸಿದೆ. ಅರ್ಹ ಎದುರಾಳಿ ಬೇಕು ಎಂದೂ ಅನ್ನಿಸದಿರುವ ಪರಿಸ್ಥಿತಿಯನ್ನು ತಲುಪಿದೆ. ಪ್ರಾಯಃ ಕೊನೆಗೆ ತನ್ನ ನೆರಳನ್ನೇ ಕಂಡು ಅದು ತನ್ನ ವೈರಿಯೆಂದೋ ಎದುರಾಳಿಯೆಂದೋ ಭಾವಿಸಿಕೊಂಡು ಗಾಳಿ ಗುದ್ದಾಟ ಮಾಡುವುದು ಅದಕ್ಕೆ ಅನಿವಾರ್ಯವಾದೀತೇನೋ?


1975ರ ತುರ್ತುಪರಿಸ್ಥಿತಿಗೆ ಕಾರಣವಾದ ಅಲಹಾಬಾದ್ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪನ್ನು ಮೊನ್ನೆ ದೇಶದ ಸರ್ವೋಚ್ಚ ನ್ಯಾಯಾಧೀಶರು ಸ್ಮರಿಸಿದರು. ಅದರ ವಿವರಗಳ ಕಡೆಗೆ ತಾನು ಪ್ರವೇಶಿಸುವುದಿಲ್ಲವೆಂದೂ ಎಚ್ಚರಿಸಿಕೊಂಡರು. ಇದಕ್ಕೆ ಒಂದೆರಡು ದಿನಗಳ ಮೊದಲು ಅವರು ಬೇರೊಂದು ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಸಂವಿಧಾನವು ರೂಪುಗೊಳ್ಳುವ ಎಷ್ಟೋ ದಶಕಗಳ ಮೊದಲೇ ಜಾತ್ಯತೀತತೆ ಅಥವಾ ಧರ್ಮನಿರಪೇಕ್ಷತೆಯೆಂದು ನಾವಿಂದು ಕರೆಯುವ, ಇಂಗ್ಲಿಷಿನಲ್ಲಿ 'ಸೆಕ್ಯುಲರಿಸಂ' ಎಂಬ ಮೂಲಪದದ ಮಹತ್ವವನ್ನು ಹೇಳಿದ್ದನ್ನು ಉಲ್ಲೇಖಿಸಿದರು. ಇದಕ್ಕೂ ಮೊದಲೇ ಸರ್ವೋಚ್ಚ ನ್ಯಾಯಾಲಯದ ಇನ್ನೋರ್ವ ನ್ಯಾಯಮೂರ್ತಿ ಚಂದ್ರಚೂಡ ಅವರು ಆಡಳಿತವನ್ನು ಪ್ರಶ್ನಿಸುವುದು ಮತ್ತು ದುರಾಡಳಿತವನ್ನು ಪ್ರತಿಭಟಿಸುವುದು ಹಕ್ಕು ಮಾತ್ರವಲ್ಲ, ಕರ್ತವ್ಯವೂ ಹೌದೆಂದು ಹೇಳಿದರು. ಇಂತಹ ಅನೇಕ ಎಚ್ಚರಿಕೆಯ, ಮುನ್ನೆಚ್ಚರಿಕೆಯ ಮಾತುಗಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳುವುದನ್ನು ನೋಡುತ್ತೇವೆ; ಕೇಳುತ್ತೇವೆ. ಆದರೆ ಇವುಗಳು ನಿಜವಾಗಿಯೂ ಪರಿಣಾಮ ಬೀರುತ್ತವೆಯೇ? ಈ ಪ್ರಶ್ನೆಗೆ ಒಂದೇ ಉತ್ತರ: ಇಲ್ಲ. ದೇಶದ ಅನಕ್ಷರಸ್ಥರು ಓದುವುದಿಲ್ಲ; ಬಹುಸಂಖ್ಯಾತ ಪ್ರಜೆಗಳು ಕೇಳುವುದಿಲ್ಲ. ಇದು ದುರಂತವಲ್ಲ. ಆದರೆ ಓದಬಲ್ಲವರು, ಕೇಳಬಲ್ಲವರು, ಯೋಚಿಸಬಲ್ಲವರು, ಚಿಂತಿಸಬಲ್ಲವರು ಇದನ್ನು ಕೇಳಿ ಮತ್ತೆ ತಮ್ಮ ಸ್ವಹಿತ, ಸ್ವಾರ್ಥದಲ್ಲಿ ಮುಳುಗುತ್ತಿರುವುದು ದುರಂತ.

ಕನ್ನಡದಲ್ಲಂತೂ ಹೀಗೆ ಪ್ರತಿಭಟಿಸುವ, ಪ್ರತಿಕ್ರಿಯಿಸುವ ಹಿರಿಯ, ಜನಪ್ರಿಯ ಲೇಖಕರ ಸಂತತಿ ನಾಶವಾಗಿದೆ. ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಭವಿಷ್ಯವನ್ನು ಬಲಿಗೊಟ್ಟು ಪ್ರತಿಭಟಿಸುತ್ತಾರೆ ಇಲ್ಲವೇ ಪ್ರತಿಕ್ರಿಯಿಸುತ್ತಾರೆ. ಆದರೆ ಇಂತಹ ಮಂದಿ ದೇಶದ ಒಟ್ಟಾರೆ ಜನಸಂಖ್ಯೆಗೆ ಹೊಲಿಸಿದರೆ ನಗಣ್ಯ. ಆದ್ದರಿಂದಲೇ ಎಲ್ಲವೂ ಮನರಂಜನೆಗೆ ಅಥವಾ ಪತ್ರಿಕೆಗಳ ಪುಟ ತುಂಬಿಸುವುದಕ್ಕೆ ಎಂದಾಗಿದೆ. 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನ್ಯಾಯಾಂಗವೂ ಸೇರಿದಂತೆ ಸರಕಾರದ ಎಲ್ಲ ಸಾಂವಿಧಾನಿಕ ಅಂಗಗಳೂ ಕ್ಷೀಣವಾಗಿ, ಅಸಹಾಯಕರಾಗಿ, ವರ್ತಿಸಿದ್ದನ್ನು ದೇಶ ಅನುಭವಿಸಿದಾಗ 'ತಲೆಬಾಗು ಎಂದಾಗ ತೆವಳಿದರು' ಎಂಬ ಉಕ್ತಿ ಹುಟ್ಟಿಕೊಂಡಿತು. ಮೂವರು ಸರ್ವೋಚ್ಚ ನ್ಯಾಯಾಧೀಶರು ತಮ್ಮ ಜ್ಯೇಷ್ಠತೆಯನ್ನು ಅಲಕ್ಷಿಸಿ ಇನ್ನೊಬ್ಬರನ್ನು ನೇಮಕಮಾಡಿದಾಗ ಅವಮಾನಿತರಾಗಿ ಹುದ್ದೆಯನ್ನು ತ್ಯಜಿಸಿದರು. ಈ ಪೈಕಿ ಒಬ್ಬರು ಮುಂದೆ ರಾಜಕೀಯವನ್ನು ಪ್ರವೇಶಿಸಿ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಸರ್ವೋಚ್ಚ ನ್ಯಾಯಾಧೀಶರು ಸಂಸತ್ತನ್ನು ಪ್ರವೇಶಿಸಲಾಗದು ಎಂಬ ನೀತಿಪರಂಪರೆಯನ್ನೂ ನೈತಿಕಚೌಕಟ್ಟನ್ನೂ ಈ ನ್ಯಾಯಾಧೀಶರು ಮುರಿದಿದ್ದರೆಂಬುದು ಜನರಿಗೆ ಮರೆತುಹೋಯಿತು. ಇರಲಿ, ತುರ್ತುಸ್ಥಿತಿಯೆಂಬ ಮಹಾಅಪಾಯದಲ್ಲಿ ಇವೆಲ್ಲ ಗೌಣವಾದವು. ಮುಂದೆ ಇದು ಹೊಸಪರಂಪರೆಗೆ ನಾಂದಿಯಾಗಿ, ದೇಶದ ಮುಖ್ಯ ನ್ಯಾಯಾಧೀಶರೇ ಸಂಸತ್ತಿನಲ್ಲಿ ಇತರ ಭ್ರಷ್ಟರೊಂದಿಗೆ ಕೂರುವ ಕೆಟ್ಟ ಅವಮಾನಕ್ಕೂ ಸಾಕ್ಷಿಯಾಯಿತು.

ಕೆಲವೇ ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಧೀಶರೊಬ್ಬರು (ಅಥವಾ ಇಬ್ಬರು) ರಾಜ್ಯಪಾಲರಾಗಿ ನೇಮಕಗೊಂಡಿದ್ದರು. ಹೀಗಾಗಿ ತಾವು ಕುಳಿತ ಘನಸ್ಥಿಕೆಯನ್ನು ಮರೆತು ವಿಮಾನ ನಿಲ್ದಾಣಕ್ಕೆ ಹೋಗಿ ಕೇಂದ್ರದ ರಾಜಕಾರಣಿಗಳನ್ನು ಸ್ವಾಗತಿಸಬೇಕಾದ ಅವಮಾನಕ್ಕೆ ಪಾತ್ರರಾದರು. ಇದು ಅವಮಾನ ಮಾತ್ರವಲ್ಲ, ಅವರ ಒಟ್ಟು ಬದುಕಿನ ಉದ್ದೇಶದ ಕುರಿತೂ ಅನುಮಾನಗಳನ್ನು ಸೃಷ್ಟಿಸಿದವು. 1947ರಿಂದ 1964ರ ವರೆಗಿನ ಸ್ವತಂತ್ರ ಭಾರತದ ನೆಹರೂ ಯುಗದಲ್ಲಿ ಈ ದೇಶದ ಬಹುಪಾಲು ತಾಂತ್ರಿಕ ವಿಜ್ಞಾನ ಮತ್ತು ಸಂಸ್ಥೆಗಳು ಹುಟ್ಟಿದವು; ಬೆಳೆದವು. ಅವನ್ನೇ ಹಿಡಿದು ನೇತಾಡಿ ಜೀಕುತ್ತಿದ್ದವರು ಅದರ ಫಲವನ್ನುಂಡು ಈಗ ನೆಹರೂ ಮಾಡಿದ ತಪ್ಪುಗಳನ್ನೇ ಹುಡುಕಿ ಜನರೆದುರು ಅವರನ್ನು ಶಿಲುಬೆಗೇರಿಸುವುದರಲ್ಲಿ ಮಗ್ನರಾಗಿರುವುದು ಈ ದೇಶದ ಅಸಂಖ್ಯಾತ ಮಂದಿಗೆ ವಿಚಿತ್ರವೆನಿಸುವುದಿಲ್ಲ. ಕಳೆದ ಸುಮಾರು ನಾಲ್ಕು ದಶಕಗಳ ಭಾರತದ ಇತಿಹಾಸ ಮತ್ತು ರಾಜಕೀಯವನ್ನು ಗಮನಿಸಿದರೆ ಯಾವುದನ್ನು ತ್ಯಾಜ್ಯವೆಂದು ಪರಿಗಣಿಸಲಾಯಿತೋ ಅದನ್ನೇ ಪ್ರಸಾದ ರೂಪದಲ್ಲಿ ತಲೆಯಲ್ಲಿ ಹೊತ್ತು ನಡೆಯುತ್ತಿರುವುದನ್ನು ಕಾಣುತ್ತೇವೆ.

ಇಂದಿರಾಗಾಂಧಿ ತನ್ನೆಲ್ಲ ಆಡಳಿತಸೂಕ್ಷ್ಮಗಳ ನಡುವೆ ಮಾಡಿದ ಒಂದು ಪ್ರಮಾದವು ಅವರನ್ನು ಇತಿಹಾಸದ ನೇಣುಗಂಬದಲ್ಲಿ ಕಾಣಿಸಿದರೆ ಆನಂತರದವರು ಇದೇ ನೇಣುಗಂಬವನ್ನು ಗರುಡಗಂಬವಾಗಿಸಿ ರಾಜಕೀಯದ ತೂಗುಯ್ಯೆಲೆಗೆ ಯಶಸ್ವಿಯಾಗಿ ಬಳಸಿಕೊಂಡರು. 1947ರ ಭಾರತ ವಿಭಜನೆಯ ಪರಿಣಾಮವನ್ನು ಈ ದೇಶದ ಹಿಂದೂಗಳು ಮತ್ತು ಮುಸಲ್ಮಾನರು ಸಮನಾಗಿ ಉಂಡಿದ್ದಾರೆ. ಆಗ ಅಯಾಚಿತವಾಗಿ, ಅಯೋಚಿತವಾಗಿ ನಡೆದ ಹಿಂಸೆಯು ಸ್ವತಂತ್ರ ಭಾರತದ ಮಟ್ಟಿಗೆ ಕೊನೆಯ ಹಿಂಸಾನಲವಾಗಬೇಕಾಗಿತ್ತು. ಆದರೆ ನಮ್ಮ ಬುದ್ಧಿವಂತ ರಾಜಕಾರಣಿಗಳು ದೇಶದೊಳಗೆ ಆಗಾಗ ಹೊಸಹೊಸ ಗಡಿಗಳನ್ನು ಸೃಷ್ಟಿಸಿ ದೇಶದ ಜನರು ಎಂದೂ ಒಟ್ಟಾಗದಂತೆ, ಒಗ್ಗಟ್ಟಾಗದಂತೆ, ನೋಡಿಕೊಂಡರು. ಈ ಕಲಿಕೆಯನ್ನು ತಮಗೆ ನೀಡಿದ ಬ್ರಿಟಿಷರಿಗೆ ಇಂದು ದೇಶದ ರಾಜಕಾರಣವು ಋಣಿಯಾಗಬೇಕು. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೆಂದು ಒಂದು ಕಾಲದಲ್ಲಿ ಗುರುತಾಗಿದ್ದ ಮಾಧ್ಯಮದ ಬಗ್ಗೆ ಎಷ್ಟು ಕಡಿಮೆ ಬರೆದರೆ ಅಷ್ಟು ಒಳ್ಳೆಯದು. ಇಂದು ಮಾಧ್ಯಮಧರ್ಮದ ಮೂಲಪಾಠಗಳನ್ನು ಅನುಸರಿಸುವ ಮಂದಿ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ; ಇದ್ದರೂ ತೀರಾ ಕಡಿಮೆ. ಉಳಿದವರೆಲ್ಲ 'ಜೀಯಾ ಹಸಾದ' ಗುಂಪಿನವರೇ. ಇವೆಲ್ಲ ಸರಕಾರಿ ಮತ್ತು ಸಾರ್ವಜನಿಕ ಕ್ಷೇತ್ರದ ಜಾಹೀರಾತುಗಳನ್ನು ಕಬಳಿಸುತ್ತ ಉಳಿದ ಜಾಗಕ್ಕೆ ಹುಟ್ಟು ಸಾವುಗಳನ್ನು ಲೆಕ್ಕಹಾಕುತ್ತ, ಇನ್ನೂ ಜಾಗವುಳಿದರೆ ತಾವೇ ಸ್ವತಃ ಸಿಂಹಾಸನಾಧೀಶ್ವರ ಸ್ತೋತ್ರಗಳನ್ನು ರಚಿಸಿ ಸ್ತುತಿಪಠಣವನ್ನು ಮಾಡುತ್ತ ಪುಟ, ಕಿಸೆ ಮತ್ತು ಬದುಕನ್ನು ತುಂಬಿಸುವವರೇ. ಅವರಿರುವ ಸ್ಥಾನಗಳನ್ನು ಆಯಕಟ್ಟಿನವೆಂದು ತಿಳಿದು ದಾಸಾನುದಾಸರಂತೆ ವರ್ತಿಸುವ ಬರವಣಿಗೆಗೆ ಅನಿವಾರ್ಯವಾದ ಎಡ-ಬಲ-ನಡು ಮುರಿದ ಒಂದಷ್ಟು ಲೇಖಕರು, ಚಿಂತಕರು ಇರುವುದರಿಂದ ಸದ್ಯ ಈ ನಾಲ್ಕನೇ ಸ್ತಂಭಕ್ಕೆ ಅಪಾಯವಿಲ್ಲ.

ಈ ಹೊರಾಂಗಣವನ್ನು ದಾಟಿ ಒಳಾಂಗಣವನ್ನು ಪ್ರವೇಶಿಸಿದರೆ ಇವೆಲ್ಲದರ ನಡುವೆ ಗಮನಿಸಬೇಕಾದ ಕ್ಷೇತ್ರಗಳೆಂದರೆ ಸರಕಾರದ ಆಡಳಿತದ ಕೇಂದ್ರಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ. ಇವುಗಳಲ್ಲಿ ಮೊದಲನೇ ಎರಡು ಅಂಗಗಳು ದೃಷ್ಟಿಹೀನರಂತಿವೆ. ಕಾರ್ಯಾಂಗಕ್ಕೆ ಆಯ್ಕೆಯಾಗಬೇಕಾದವರು ಭಾರತೀಯ ಅಥವಾ ಆಯಾಯ ರಾಜ್ಯಗಳ ಆಡಳಿತ ಸೇವೆಯೆಂಬ ಜೇನುಹುಟ್ಟುಗಳ ಭಾಗವಾಗಿರುವುದರಿಂದ ಅವುಗಳ ಕೆಲಸವೇ ಇತರರನ್ನು ಕುಟುಕುವ ಮತ್ತು ಹೊಗೆ ಬೀಳುವವರೆಗೂ ಜೇನನ್ನು ಸವಿಯುವುದು. ಯಾರು ಈ ಅಶ್ವಮೇಧದಲ್ಲಿ ಜಯಿಸಿ ಇಂದ್ರಪದವಿಗೆ ಏರುತ್ತರೋ ಅವರನ್ನು ತನು-ಮನ-ಧನಪೂರ್ವಕವಾಗಿ ಓಲೈಸುವುದೇ ಇವರಲ್ಲಿ ಬಹುಪಾಲು ಮಂದಿಯ ಕಿಂಕರ್ತವ್ಯ. ಗುಣಾವಗುಣಗಳನ್ನು, ಪಾಪಪುಣ್ಯಗಳನ್ನು ತಮಗೆ ಅನ್ನನೀಡುವವರ ಮಡಿಲಿಗಿಟ್ಟು ಅನವರತ ಪೂಜಿಸುವುದೇ ಇವರ ಕಾಯಕ. ಆದ್ದರಿಂದ ಇಂತಹವರನ್ನು ಕಂಡರೆ ಆಳುವವರಿಗೆ ಪ್ರೀತಿ. ನಿವೃತ್ತರಾದವರನ್ನು ಸೇವಾ ವಿಸ್ತರಣೆ, ಪುನರ್ವಸತಿ ಮುಂತಾದ ಸೂಕ್ತ ಪುರಸ್ಕಾರಗಳೊಂದಿಗೆ ಗೌರವಿಸಲು ಅವಕಾಶವಿರುವುದರಿಂದ ಅದನ್ನು ಬಿಟ್ಟು ದುಡಿಯುವುದಕ್ಕೆ ಯಾರು ಮನಸ್ಸು ಮಾಡಿಯಾರು? ತೊಂದರೆ ಕೊಡುವ ರಾಜಕಾರಣಿಗಳಂತೆ ಇವರಲ್ಲೂ ಕೆಲವರಿಗೆ ರಾಜ್ಯಪಾಲ ಹುದ್ದೆಯೂ ಲಭಿಸುವುದುಂಟು. ಇನ್ನು ಕೆಲವರು ತನುಮನಧನಕ್ಕಿಂತಲೂ ಮುಂದೆ ಹೋಗಿ ಅದೆಲ್ಲಿಗೆ ಒಯ್ಯುತ್ತದೆಯೋ ಗೊತ್ತಿಲ್ಲ, ಸೇವೆಯಿಂದ ನಿವೃತ್ತರಾದಾಗ ಅಥವಾ ಸೇವಾವಧಿಯಲ್ಲೇ ಶಾಸಕರೋ ಸಂಸದರೋ ಆಗುವುದುಟು. ಈ ಬಗ್ಗೆ ಒಂದು ಗಣತಿ ನಡೆದರೆ ಅಥವಾ ಮಾಹಿತಿ ಹಕ್ಕಿನಡಿ ವಿವರ ಲಭ್ಯವಾದರೆ ಅದೇ ಒಂದು ರೋಚಕ ಕಥೆಯಾದೀತು!

ಜನಪ್ರತಿನಿಧಿಗಳ ಕತೆಯೇ ಬೇರೆ. ಜನಪ್ರತಿನಿಧಿಗಳೆಂದರೆ ಜನರ ಕಾರ್ಪಣ್ಯಕ್ಕೆ ಒದಗುವವರು ಎಂಬುದು ಹಳೆಯ ಕಥೆ. ಈಗ ಏನಿದ್ದರೂ ತಾವು ಜನಪ್ರತಿನಿಧಿಗಳು, ಆದ್ದರಿಂದ ಜನರಿಗೆ ಸಿಗಬೇಕಾದ ಸೇವೆ-ಸವಲತ್ತುಗಳ ಮೊದಲ ಮತ್ತು ಕೊನೆಯ ಸ್ವೀಕಾರ್ಹರು ತಾವೇ ಮತ್ತು ತಮ್ಮ ತೃಪ್ತಿಯೇ ಜನತೃಪ್ತಿ ಎಂಬ ಅನುಕೂಲಕರ ತರ್ಕ ಇವರದ್ದು. ಆದ್ದರಿಂದ ಜನರಿಗೆ ಯಾವುದು ತಲುಪಬೇಕಾದ್ದೆಂದು ಮಹಾತ್ಮಾಗಾಂಧಿಯಂತಹವರು ಭಾವಿಸಿದ್ದರೋ ಅದು ಈ ಜನಪ್ರತಿನಿಧಿಗಳನ್ನು ತಲುಪುವಾಗಲೇ ಮುಗಿದುಹೋಗುತ್ತದೆ. ಸಣ್ಣಸಣ್ಣ ವಿಚಾರಗಳನ್ನು ಗಣನೆಗೆ ತೆಗೆದುಕೊಂಡರೂ ಈ ಜನಪ್ರತಿನಿಧಿಗಳು ಯಾಕೆ ಇಷ್ಟೊಂದು ಸೇವಾತುರರಾಗಿದ್ದಾರೆಂಬುದು ಗೊತ್ತಾಗುತ್ತದೆ. ಬೀದಿಬದಿಯ ಭಿಕ್ಷುಕನಿಗೂ ಸಿಕ್ಕದಷ್ಟು ಅಗ್ಗವಾಗಿ ಜನಪ್ರತಿನಿಧಿಗಳಿಗೆ ಊಟೋಪಚಾರಗಳಿಂದ ತೊಡಗಿ, ಧನಕನಕವಸ್ತುವಾಹನಗಳ ವರೆಗೆ ಎಲ್ಲ ಬಗೆಯ ರಿಯಾಯಿತಿ-ವಿನಾಯಿತಿಗಳು ದೊರಕುತ್ತವೆ. ಸರಕಾರವೆಂಬ ಮರಕ್ಕೆ ಇಂತಹ ಪರೋಪಜೀವಿಗಳು ಅಂಟಿಕೊಂಡು ಬೆಳೆಯುತ್ತವೆ ಮಾತ್ರವಲ್ಲ, ಮರವನ್ನು ಹೀರಿ ತಾವು ಬೆಳೆದು ಕ್ಯಾನ್ಸರಿನಂತೆ ವಿಶಾಲವಾಗಿ ಹಬ್ಬಿ ತಮ್ಮದೇ ಕುಟುಂಬದ ಬಿಳಲುಗಳನ್ನು ಚಾಚಿ ಅಲ್ಲಿ ಬೇರೇನೂ ಬೆಳೆಯದಂತೆ ನೋಡಿಕೊಳ್ಳುತ್ತವೆ. ಅದಲ್ಲವಾದರೆ, ಒಂದೇ ಒಂದು ಜ್ವಲಂತ ಉದಾಹರಣೆಯನ್ನು ನೀಡುವುದಾದರೆ- ಅಮಿತ್‌ಶಾರ ಮಗನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೆಂಬ ಶುದ್ಧ ವೃತ್ತಿಪರ ಸಂಸ್ಥೆಯ ಕಾರ್ಯದರ್ಶಿಯಾಗುವುದಾದರೂ ಹೇಗೆ? ಇದೂ ಪರಂಪರೆಯ ಭಾಗವೆಂದು ಹೇಳುವವರಿಗೆ ನನ್ನಲ್ಲಿ ಉತ್ತರವಿಲ್ಲ.

ನ್ಯಾಯಾಂಗವು ಕರ್ತವ್ಯತತ್ಪರವಾಗಿದೆ. ಇದಕ್ಕಿಂತ ಹೆಚ್ಚೇನೂ ಹೇಳುವುದಕ್ಕಿಲ್ಲ. ಕೆಲವು ವಿಚಾರಗಳನ್ನು ಗಮನಿಸಬಹುದಾದರೆ ಅಧೀನ ನ್ಯಾಯಾಲಯಗಳಿಗೆ ರಾಜಕಾರಣ ಅಷ್ಟಾಗಿ ಅಂಟುವುದಿಲ್ಲ. ಅವು ಇನ್ನೂ ವೈಯಕ್ತಿಕ ದಕ್ಷತೆ ಮತ್ತು ಭ್ರಷ್ಟತೆಯ ನಡುವಿರುವ ಸುವರ್ಣ ಮಾಧ್ಯಮವನ್ನನುಸರಿಸಿಕೊಂಡು ಬಂದಿವೆ. ಆದರೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ರಾಜಕೀಯಕ್ಕೆ ಅನಿವಾರ್ಯವಾಗಿ ತಲೆಯೊಡ್ಡಬೇಕಾದ್ದರಿಂದ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನೀತಿಯನ್ನು ಚಾಚೂ ತಪ್ಪದೆ ಅನುಸರಿಸಿಕೊಂಡು ಬಂದಿವೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಪದೋನ್ನತಿ ಹೊಂದಬೇಕಾದರೆ ಅವರಿಗೆ ಸರಕಾರಗಳ ಕೃಪಾಶೀರ್ವಾದ ಬೇಕೇ ಬೇಕು. ಹೇಗೂ ಪದೋನ್ನತಿ ಲಭ್ಯವಾಗುವುದಿಲ್ಲವೆಂಬ ಅರಿವಿರುವವರಷ್ಟೇ ಸರ್ವಸ್ವತಂತ್ರರಾಗಿ ಇಲ್ಲವೇ ನ್ಯಾಯದ ಘನೋದ್ದೇಶಗಳಿಗೊಳಗಾಗಿ ದುಡಿಯಬಹುದು. ಇತರ ಅಂಗಗಳಿಗೆ ಹೋಲಿಸಿದರೆ ಇನ್ನೂ ನ್ಯಾಯಾಂಗವು ಬಲಿಷ್ಠವಾಗಿದೆ. ಆದರೆ ಈಗ ಸರ್ವೋಚ್ಚ ನ್ಯಾಯಾಲಯದ ಕಾರ್ಯವಿಧಾನಗಳನ್ನು ಗಮನಿಸಿದರೆ ಅದರ ಆದ್ಯತೆಗಳೇನೆಂದು ಸುಲಭವಾಗಿ ಅರ್ಥವಾಗುವುದಿಲ್ಲ. ಕೆಲವು ಪ್ರಕರಣಗಳನ್ನು ಯಾಕೆ ತ್ವರಿತವಾಗಿ ವಿಚಾರಣೆಗೆ ಎತ್ತಿಕೊಳ್ಳುತ್ತಾರೆ ಮತ್ತು ಅನೇಕ ಮುಖ್ಯ ವಿಚಾರಗಳ ಪೈಕಿ ಕೆಲವು ಶಯ್ಯಾಗಾರದಲ್ಲಿದ್ದರೆ ಇನ್ನು ಕೆಲವು ಶೈತ್ಯಾಗಾರದಲ್ಲಿವೆ ಎಂಬುದು ಚರ್ಚೆಗೂ, ಸಂಶೋಧನೆಗೂ, ಅಧ್ಯಯನಕ್ಕೂ ಯೋಗ್ಯ ವಿಚಾರ.

ಕಾಶ್ಮೀರದ ಪ್ರಶ್ನೆಗಳು ಇನ್ನೂ ಬಾಕಿಯಿವೆ; ದಿಲ್ಲಿ ಸರಕಾರದ ಅಧಿಕಾರವನ್ನು ಕಿತ್ತುಕೊಂಡು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರಿಗೆ ನೀಡಲಾದ ಕಾಯ್ದೆಯನ್ನು ಪ್ರಶ್ನಿಸಿ ಹೂಡಲಾದ ಅರ್ಜಿಯಿನ್ನೂ ತನ್ನ ಫಲಿತಾಂಶಕ್ಕೆ ಕಾಯುತ್ತಿದೆ. ನಿರ್ಭಾಗ್ಯ ವಿಚಾರಣಾಧೀನ ಬಂಧಿಗಳಿಗೆ ಪರಿಹಾರವನ್ನು ನೀಡಬೇಕೆಂದು ಈಗ ನಿವೃತ್ತಿಹೊಂದಿದ ನ್ಯಾಯಮೂರ್ತಿಯೊಬ್ಬರು ಪದೇಪದೇ ಹೇಳುತ್ತಿರುತ್ತಾರೆ. ಆದರೆ ಅವರ ಸೇವಾವಧಿಯಲ್ಲಿ ಈ ಕುರಿತು ಯಾಕೆ ಚಿಂತಿಸಿಲ್ಲವೆಂಬುದು ಚಿದಂಬರ ರಹಸ್ಯ. ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆಯಾಗಿದೆಯೆಂಬ ಕೂಗು ಎಂದಿನದ್ದೇ. ಈ ದೃಷ್ಟಿಯಿಂದ ಇತ್ತೀಚೆಗೆ ಒಮ್ಮೆಲೇ ಭಾರೀ ಸಂಖ್ಯೆಯ ನ್ಯಾಯಮೂರ್ತಿಗಳನ್ನು ನೇಮಿಸಲಾಯಿತು ಮತ್ತು ಅಚ್ಚರಿಯೆಂಬಂತೆ ಒಕ್ಕೂಟ ಸರಕಾರವು ತಕ್ಷಣವೇ ಈ ನೇಮಕಾತಿಗಳನ್ನು ಒಪ್ಪಿಕೊಂಡಿತು. ದೇಶಕ್ಕೆ ದೇಶವೇ ಇದನ್ನು ಕೊಂಡಾಡಿತು. ಆದರೆ ಯಾರೂ ಇವರೆಲ್ಲರಿಗಿಂತ ಜ್ಯೇಷ್ಠರಾದ ಗುವಾಹಟಿ ಉಚ್ಚನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಖುರೇಷಿಯವರನ್ನೇಕೆ ನೇಮಿಸಲಿಲ್ಲವೆಂದು ಪ್ರಶ್ನೆ ಮಾಡಲಿಲ್ಲ. ಇದೇ ಪಟ್ಟಿಯಡಿ ಮೊದಲನೇ ಹೆಸರಾದ ನ್ಯಾಯಮೂರ್ತಿ ಖುರೇಷಿಯವರ ಹೆಸರನ್ನು ಇತರ ನಾಲ್ವರೊಂದಿಗೆ ಕಳುಹಿಸಿದಾಗ ಒಕ್ಕೂಟ ಸರಕಾರ ಅದನ್ನು ಮರಳಿಸಿತ್ತು. (ಇದೇ ಖುರೇಷಿಯವರು ಅಮಿತ್ ಶಾರನ್ನು ಬಂಧನಕ್ಕೊಳಪಡಿಸಿದ್ದನ್ನು ಯಾರು ಮರೆತರೂ ಅಮಿತ್ ಶಾ ಮರೆಯಲಾರರು.) ಆಗ ಅಂಗೀಕರಿಸುವುದಾದರೆ ಇದೇ ಪಟ್ಟಿಯನ್ನು ಅಂಗೀಕರಿಸಿ, ಇಲ್ಲವಾದರೆ ಯಾರೂ ಬೇಡ ಎಂಬ ಸಂದೇಶವನ್ನು ಆಗಿನ ಆಯ್ಕೆ ಸಮಿತಿ ಸದಸ್ಯ ನ್ಯಾಯಮೂರ್ತಿ ನಾರಿಮನ್ ನೀಡಿ ಆಯ್ಕೆ ಸಮಿತಿಯು ಸರಕಾರದ ನಿಲುವಿಗೆ ಒಪ್ಪಿದರೆ ತಾನು ಸದಸ್ಯತ್ವವನ್ನು ತ್ಯಜಿಸುವುದಾಗಿ ಬೆದರಿಕೆ ಒಡ್ಡಿದರೆಂದು ವರದಿಯಾಗಿದೆ. ಅವರೀಗ ನಿವೃತ್ತಿ ಹೊಂದಿದರು; ಆಯ್ಕೆ ಸಮಿತಿ ಮತ್ತು ಸರಕಾರದ ನಡುವೆ ವಿವಾದ ಬಗೆಹರಿದಿದೆಯೇ ಮತ್ತು ಪ್ರಾಯಃ ಒಂದು ರೀತಿಯ ಕೊಡುಕೊಳ್ಳುವ ಒಪ್ಪಂದವೇರ್ಪಟ್ಟಿದೆಯೇ ಎಂಬ ಸಂಶಯವೂ ಹುಟ್ಟಬೇಕಾಗಿತ್ತು.

ಆಡನ್ನು ಬಲಿಕೊಟ್ಟು ಭಾರೀ ಹುಲಿಯನ್ನು ಬೇಟೆಮಾಡಿದ ಖುಷಿ ನ್ಯಾಯಾಂಗಕ್ಕೆ. ಸ್ವತಃ ಸರ್ವೋಚ್ಚ ನ್ಯಾಯಾಲಯವೂ ಖುರೇಷಿಯವರ ಬಗ್ಗೆ ಘನಮೌನವನ್ನು ತಾಳಿತು. ಕಾಲ ಈ ಅನ್ಯಾಯವನ್ನು ಮರೆತರೂ ನಮ್ಮ ನಾಯಕರು ಉದ್ದುದ್ದ ಘೋಷವಾಕ್ಯಗಳನ್ನು ಹೇಳುವಾಗಲೂ ಒಳಗೆ ಮುಚ್ಚಿಟ್ಟುಕೊಂಡ ಈ ಕಹಿಯು ಇತಿಹಾಸದ ಭಾಗವಾಗಿ ಉಳಿದೀತು. ತಲೆಬಾಗು ಎಂದರೆ ತೆವಳುವುದು ಈ ದೇಶದ ಜಾಯಮಾನದಂತಿದೆ. ಈಗಿನ ಸರಕಾರವು ಹಳತಿನ ಒಳ್ಳೆಯದನ್ನು ಅನುಸರಿಸದಿದ್ದರೂ ಎಲ್ಲ ಕೆಡುಕುಗಳನ್ನೂ ಕೆಟ್ಟ ರಾಜಕಾರಣಗಳನ್ನೂ ತನ್ನದಾಗಿಸಿದೆ. ಅರ್ಹ ಎದುರಾಳಿ ಬೇಕು ಎಂದೂ ಅನ್ನಿಸದಿರುವ ಪರಿಸ್ಥಿತಿಯನ್ನು ತಲುಪಿದೆ. ಪ್ರಾಯಃ ಕೊನೆಗೆ ತನ್ನ ನೆರಳನ್ನೇ ಕಂಡು ಅದು ತನ್ನ ವೈರಿಯೆಂದೋ ಎದುರಾಳಿಯೆಂದೋ ಭಾವಿಸಿಕೊಂಡು ಗಾಳಿ ಗುದ್ದಾಟ ಮಾಡುವುದು ಅದಕ್ಕೆ ಅನಿವಾರ್ಯವಾದೀತೇನೋ? ತಾನೊಬ್ಬನೇ ಬದುಕುವುದು ಹುಚ್ಚರಿಗೆ ಮಾತ್ರ ಸಾಧ್ಯವಲ್ಲವೇ? ತಲೆಬಾಗುವುದಕ್ಕೆ ಹೇಳಬೇಕಾದರೂ ಯಾರಾದರೂ ಎದುರಿರಬೇಕು. ತೆವಳುವವರೂ ಬೇಕು. ಅದಿಲ್ಲವಾದರೆ ಸರ್ವಾಧಿಕಾರವೂ ಒಂದು ಶಾಪವೇ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)