varthabharthi


ಕರ್ನಾಟಕ

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಗೆ ಅನುಮೋದನೆ: ಕಾಂಗ್ರೆಸ್ ವಿರೋಧ; ಸಭಾತ್ಯಾಗ

ವಾರ್ತಾ ಭಾರತಿ : 16 Sep, 2021

ಬೆಂಗಳೂರು, ಸೆ.16: ರಾಜ್ಯ ಚುನಾವಣಾ ಆಯೋಗದಿಂದ ಕ್ಷೇತ್ರ ಪುನರ್ ವಿಂಗಡನೆ, ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ಹಿಂಪಡೆದು ಪ್ರತ್ಯೇಕ ಕ್ಷೇತ್ರ ಪುನರ್ ವಿಂಗಡನಾ ಆಯೋಗ ರಚನೆ ಮಾಡಲು ರಾಜ್ಯ ಸರಕಾರ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಮಂಡಿಸಿದ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸಭಾತ್ಯಾಗ ನಡೆಸಿತು. ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ವಿವಾದಿತ ಕಾಯ್ದೆಗೆ ಅನುಮೋದನೆ ಪಡೆಯಲಾಯಿತು.

ಈ ಕಾಯ್ದೆಯ ಕುರಿತು ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಯವರು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳು. ಈ ಕಾಯ್ದೆಯ ಮೂಲಕ ಸಂವಿಧಾನದ ಕಗ್ಗೊಲೆ ಮಾಡಲಾಗುತ್ತಿದೆ. ಇದೊಂದು ಕರಾಳ ವಿಧೇಯಕ. ನಾವು ಇದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.

ರಾಜ್ಯ ಸರಕಾರ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಲು ಈ ಹುನ್ನಾರ ಮಾಡಿದೆ. ಚುನಾವಣಾ ಆಯೋಗ ಸಿದ್ಧಪಡಿಸಿದ ಕ್ಷೇತ್ರ ಪುನರ್ ವಿಂಗಡನೆ, ಮೀಸಲಾತಿಯನ್ನು ಪ್ರಶ್ನಿಸಿ ಕೋರ್ಟ್‍ನಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯ ಏನು ಆದೇಶ ಕೊಡುತ್ತೆ ಅನ್ನೋದು ಗೊತ್ತಿಲ್ಲ ಎಂದು ಅವರು ಹೇಳಿದರು.

ಸರಕಾರಕ್ಕೆ ಪಂಚಾಯತಿಗಳ ಅವಧಿ ಯಾವಾಗ ಮುಗಿಯುತ್ತದೆ, ಚುನಾವಣೆ ಯಾವಾಗ ಮಾಡಬೇಕು ಎಂಬುದು ಗೊತ್ತಿಲ್ಲವೇ? ಈ ವಿಚಾರವು ನ್ಯಾಯಾಲಯದ ಎದುರು ನಿಲ್ಲುತ್ತದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧೇಯಕದ ಮೇಲೆ ಹಿರಿಯ ಸದಸ್ಯರಾದ ಎಚ್.ಕೆ.ಪಾಟೀಲ್, ಕೆ.ಆರ್.ರಮೇಶ್ ಕುಮಾರ್, ಪ್ರಿಯಾಂಕಾ ಖರ್ಗೆ, ಡಾ.ಯತೀಂದ್ರ, ರಾಜೇಗೌಡ, ಜೆಡಿಎಸ್ ಸದಸ್ಯರಾದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರ ಸದಸ್ಯರು ಚರ್ಚೆಯಲ್ಲಿ ಮಾತನಾಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)