varthabharthi


ಕರ್ನಾಟಕ

‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’;ಯುವತಿಗೆ ಜಿಲ್ಲಾಧಿಕಾರಿಯ ಭರವಸೆ

ದಾವಣಗೆರೆ: 'ಊರಿಗೆ ರಸ್ತೆ ಮಾಡಿಕೊಡುವವರೆಗೂ ನಾನು ಮದುವೆಯಾಗಲ್ಲ'; ಸಿಎಂಗೆ ಪತ್ರ ಬರೆದ ಯುವತಿ

ವಾರ್ತಾ ಭಾರತಿ : 16 Sep, 2021

ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ ಸೆ. 16:‘ರಸ್ತೆನೂ ಮಾಡ್ತೀವಿ, ಮದುವೆನೂ ಮಾಡ್ತೀವಿ’.  ತಮ್ಮ ಊರಿಗೆ ರಸ್ತೆ ಮಾಡಿಕೊಡುವವರೆಗೂ ತಾನು ಮದುವೆಯಾಗಲ್ಲ ಎಂದು ಪಟ್ಟುಹಿಡಿದು, ರಸ್ತೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದ ದಾವಣಗೆರೆ ತಾಲೂಕು ಮಾಯಕೊಂಡ ಹೋಬಳಿಯ ಹೆದ್ನೆ ರಾಂಪುರದ ಯುವತಿ ಆರ್.ಡಿ. ಬಿಂದು ಅವರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನೀಡಿದ ಭರವಸೆಯ ಮಾತುಗಳಿವು.

 ಊರಿಗೆ ರಸ್ತೆ, ವಾಹನ ಸೌಕರ್ಯವಿಲ್ಲದೆ ಮದುವೆಗಳೂ ಆಗದ ಸ್ಥಿತಿ ಇದ್ದು, ಪ್ರತಿಯೊಬ್ಬರೂ ಸವಾಲುಗಳ ಮಧ್ಯಯೇ ಬದುಕುತ್ತಿದ್ದಾರೆ.  ಸಾರಿಗೆ ವ್ಯವಸ್ಥೆ ಇಲ್ಲವೆಂಬ ಕಾರಣಕ್ಕೆ ಗ್ರಾಮದ ಅನೇಕ ಹೆಣ್ಣು ಮಕ್ಕಳು, ಗಂಡು ಮಕ್ಕಳ ಮದುವೆಗಳು ನಿಂತುಹೋಗಿವೆ.  ಹೀಗಾಗಿ ತನ್ನೂರಿಗೆ ರಸ್ತೆ ಆಗುವವರೆಗೂ ಮದುವೆ ಆಗುವುದಿಲ್ಲ ಎಂಬ ಸಂಕಲ್ಪ ಮಾಡಿದ ಹೆದ್ನೆ ರಾಂಪುರದ ಯುವತಿ ಆರ್.ಡಿ. ಬಿಂದು, ರಸ್ತೆ ಕಾಮಗಾರಿಗಾಗಿ ಮುಖ್ಯಮಂತ್ರಿಗಳಿಗೆ ಪತ್ರರ ಬರೆದು ಆಗ್ರಹಿಸಿದ್ದರು. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಗುರುವಾರದಂದು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದರು.  ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  ಬಳಿಕ ಯುವತಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು.  ರಾಂಪುರದಿಂದ ಹೆದ್ನೆವರೆಗೆ 2 ಕಿ.ಮೀ. ರಸ್ತೆ ಆಗಿದೆ, ಬಾಕಿ ಉಳಿದಿರುವ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು.  ವಾಹನಗಳು ಒಡಾಡುವಂತಾಗಲು ನಾಳೆಯಿಂದಲೇ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗುವುದು. ಈಗಾಗಲೆ ಒಟ್ಟು ರಸ್ತೆ ನಿರ್ಮಾಣಕ್ಕಾಗಿ 60 ಲಕ್ಷ ರೂ. ಗಳ ಯೋಜನೆ ತಯಾರಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತ ಕೂಡಲೆ, ಪೂರ್ಣ ಪ್ರಮಾಣದ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು.  ನಾಳೆಯಿಂದಲೇ ವಾಹನಗಳು ಒಡಾಡುವಂತೆ ಮಾಡುವುದಲ್ಲದೆ, ಮಂಜೂರಾತಿ ದೊರೆತ ಕೂಡಲೆ ಉತ್ತಮ ರಸ್ತೆಯನ್ನೂ ನಿರ್ಮಿಸುತ್ತೇವೆ, ನಿಮ್ಮ ಮದುವೆಯೂ ಆಗುವಂತೆ ಮಾಡುತ್ತೇವೆ ಎಂದು ಯುವತಿಗೆ ಭರವಸೆ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪರಮೇಶ್ವರಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹದೇವಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.  ಈ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಸ್ಥಳಕ್ಕೆ ಆಗಮಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)