varthabharthi


ಕರ್ನಾಟಕ

ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚನೆ: ನಕಲಿ ಉದ್ಯೋಗ ಏಜೆನ್ಸಿಗಳ ವಿರುದ್ಧ ಕ್ರಮ; ಶುಭಂ ಸಿಂಗ್

ವಾರ್ತಾ ಭಾರತಿ : 16 Sep, 2021

 ಶುಭಂ ಸಿಂಗ್

ಬೆಂಗಳೂರು, ಸೆ.16: ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಂಚನೆ ಮಾಡುವ ನಕಲಿ ಏಜೆನ್ಸಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಐಎಫ್‌ಎಸ್ ಅಧಿಕಾರಿ ಹಾಗೂ ಕರ್ನಾಟಕ, ಗೋವಾದ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಕಚೇರಿಯ ಮುಖ್ಯಸ್ಥರಾದ ಶುಭಂ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರದ ಎಚ್‍ಎಎಲ್ ಹಳೇ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ *ಕರ್ನಾಟಕ ಆ್ಯಂಡ್ ಗೋವಾ ಓವರ್ ಸೀಸ್ ರಿಕ್ರೂಟರ್ಸ್ ಅಸೋಸಿಯೇಶನ್* ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ಬರೀ 35 ಏಜೆನ್ಸಿಗಳು ಮಾತ್ರ ಕಾನೂನು ಅನ್ವಯ ಅಧಿಕೃತವಾಗಿ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಬಹುತೇಕ ಏಜೆನ್ಸಿಗಳು ಯಾವುದೇ ಅನುಮತಿ ಇಲ್ಲದೆ, ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದು, ಈ ಸಂಬಂಧ ಪಟ್ಟಿ ತಯಾರಿಸಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ನಿರುದ್ಯೋಗ ಸಮಸ್ಯೆ ನಿವಾರಿಸಲು ಏಜೆನ್ಸಿಗಳ ಪಾತ್ರ ಬಹುದೊಡ್ಡದು. ಆದರೆ, ಕಾನೂನು ಬಾಹಿರವಾಗಿ ಕಾರ್ಯಚಟುವಟಿಕೆ ನಡೆಸುವುದು ಸರಿಯಲ್ಲ. ಏಜೆನ್ಸಿ ನಡೆಸುವವರು ಕಡ್ಡಾಯವಾಗಿ ನೊಂದಣಿ ಮಾಡಿಕೊಂಡು, ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಬೇಕು. ಈ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ವಿದೇಶದಲ್ಲಿ ನೇಮಕಾತಿ ಸಂಬಂಧ ಸಂಘವೊಂದನ್ನು ರಚನೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯದ ಎಲ್ಲೆಡೆ ಇರುವ ಏಜೆನ್ಸಿಗಳು ಈ ಸಂಘದ ಮೂಲಕ ಒಟ್ಟುಗೂಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಜೊತೆಗೆ, ಯುವಕರಿಗೆ ನೆರವು ಮಾಡಬೇಕು ಎಂದು ಸಲಹೆ ಮಾಡಿದರು.

ಸಂಘದ ಅಧ್ಯಕ್ಷ ಮುಹಮ್ಮದ್ ಅಲಿ ಮಾತನಾಡಿ, ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ಏಜೆನ್ಸಿಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇದುವರೆಗೂ ಯಾವುದೇ ಸಂಘ ಇರಲಿಲ್ಲ. ಆದರೆ, ಈಗ ಸಂಘ ಸ್ಥಾಪಿಸಲಾಗಿದ್ದು, ಎಲ್ಲರೂ ಒಟ್ಟಾಗಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೀತಿ ನಿಯಮ ಪಾಲಿಸಿ, ಉತ್ತಮವಾಗಿ ಸೇವೆ ಸಲ್ಲಿಸೋಣ ಎಂದು ಹೇಳಿದರು.

ಈ ಹಿಂದೆ ಅಧಿಕೃತವಾಗಿ ಕರ್ನಾಟಕದಲ್ಲಿ 11 ಏಜೆನ್ಸಿಗಳು ಮಾತ್ರ ಇದ್ದವು. ಇದಾದ ಬಳಿಕ ಸದ್ಯ 35 ಏಜೆನ್ಸಿಗಳಿದ್ದು, 10 ಏಜೆನ್ಸಿಗಳು ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾನ್ಯತೆಗಾಗಿ ಕಾಯುತ್ತಿವೆ ಎಂದು ಅವರು ನುಡಿದರು.

ಸಮಾರಂಭದಲ್ಲಿ ವಿವಿಧ ಏಜೆನ್ಸಿಗಳ ಪ್ರಮುಖರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧೀನದ ಬೆಂಗಳೂರಿನ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಅಧಿಕಾರಿ ನಾಗೇಂದ್ರ ಬಾಬು, ಬೆಂಗಳೂರಿನ ಪಾಸ್‍ಪೋರ್ಟ್ ಕಚೇರಿಯ ಮುಖ್ಯಸ್ಥ ಎ.ಕೃಷ್ಣ, ಕರ್ನಾಟಕ ರಾಜ್ಯ ಕೌಶಾಲ್ಯಾಭಿವೃದ್ಧಿ ನಿಗಮದ ರಾಜು ನಾಯ್ಕ್, ಸಂಘದ ಉಪಾಧ್ಯಕ್ಷ ನೂರುಲ್ಲಾ ಬೇಗ್, ಪ್ರಧಾನ ಕಾರ್ಯದರ್ಶಿ ಸೆಯ್ಯದ್ ಅನ್ಸರ್, ಖಜಾಂಚಿ ರೆಹಮಾನ್ ಅಬ್ದುಲ್ ಸಮದ್, ಅಬ್ದುಲ್ ಸುಹಾನ್ ಸೇರಿದಂತೆ ಪ್ರಮುಖರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)