varthabharthi


ಕರ್ನಾಟಕ

ಪರಿಷತ್‍ನಲ್ಲಿ ಝೀರೋ ಟ್ರಾಫಿಕ್ ವಿಷಯ ಪ್ರಸ್ತಾಪ: ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ

ವಾರ್ತಾ ಭಾರತಿ : 17 Sep, 2021

ಬೆಂಗಳೂರು, ಸೆ.16: ನೂತನ ಸಚಿವರಾಗಿ ಶಶಿಕಲಾ ಜೊಲ್ಲೆ ಪ್ರಮಾಣ ವಚನ ಸ್ವೀಕಾರ ಮಾಡಲು ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಆಗಮಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿರಲಿಲ್ಲ, ಕೇವಲ ಸಿಗ್ನಲ್ ಫ್ರೀ ಮಾಡಿಕೊಡಲಾಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ಶಾಸಕರಿಗೆ ಹಿಂದೆ ಮುಂದೆ ಸೆಕ್ಯುರಿಟಿ ಜೀಪ್ ಇಲ್ಲ, ಯಾವುದಾದರೂ ಇದ್ದರೂ ತಿಳಿಸಿ ತೆಗೆಸಲಾಗುತ್ತದೆ. ಪೆÇಲೀಸ್ ಇಲಾಖೆಯಲ್ಲಿ ಝೀರೋ ಟ್ರಾಫಿಕ್ ಇಲ್ಲ, ಗಣ್ಯರ ಪ್ರೊಟೋಕಾಲ್ ಭದ್ರತೆ ಕಾರಣ ವ್ಯವಸ್ಥೆ ಕಲ್ಪಿಸಲಾಗುತ್ತದೆ, ನಾನು ಮತ್ತು ಸಿಎಂ ಝೀರೋ ಟ್ರಾಫಿಕ್ ಪಡೆದಿಲ್ಲ, ಪೊಲೀಸರಿಗೆ ಸಂಚಾರ ನಿರ್ವಹಣೆ ಎಲ್ಲ ಗೊತ್ತು. ಗಣ್ಯರನ್ನು ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗುತ್ತದೆ ಇದಕ್ಕೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ ಎಂದರು.

ಶಶಿಕಲಾ ಜೊಲ್ಲೆ ಅವರಿಗೆ ರಾಜಭವನದ ಕರೆ ಬಂದಿದೆ, ಅಧಿಕಾರಿಗಳಿಗೆ ಮಾಹಿತಿ ನೀಡಿ ಏನಾದರೂ ಮಾಡಬಹುದಾ ಎಂದು ಕೇಳಿದ್ದಾರೆ. ಅದರ ಹೊರತಾಗಿ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ, ಆದರೆ ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗಿದೆ. ನಾನು ಈ ಸಂಬಂಧ ಮಾಹಿತಿ ಪಡೆದಿದ್ದೇನೆ. ಈ ಪ್ರಕರಣ ಕೋರ್ಟ್‍ನಲ್ಲಿದೆ. ಹೀಗಾಗಿ, ಹೆಚ್ಚಿನ ಚರ್ಚೆ ಬೇಡ, ತೀರ್ಪು ಬಂದ ನಂತರ ಪ್ರಸ್ತಾಪಿಸುತ್ತೇನೆ ಎಂದರು.

ಈ ವೇಳೆ ಸದನದಲ್ಲಿ ಉಪ ಪ್ರಶ್ನೆ ಕೇಳಿದ ಎಂ.ನಾರಾಯಣಸ್ವಾಮಿ, ನಮ್ಮ ಪಕ್ಷಕ್ಕೆ ದ್ರೋಹವೆಸಗಿ ಕೆಲ ಶಾಸಕರು ರಾಜೀನಾಮೆ ನೀಡಿ ಹೋದಾಗಲೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎನ್ನುತ್ತಿದ್ದಂತೆಯೇ ಆಡಳಿತ ಪಕ್ಷದ ಸದಸ್ಯರೆಲ್ಲಾ ಕೆಂಡಾಮಂಡಲರಾದರು, ಕಾನೂನು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ದ್ರೋಹ, ವಿಷ ಎಂಬುದಾಗಿ ಮಾತನಾಡಬಾರದು, ಯಾರೇನೂ ಬರೆದುಕೊಟ್ಟಿರಲ್ಲ ಎಂದರು.

ನಿಮ್ಮ ಪಕ್ಷದಲ್ಲೂ ಬೇಕಾದಷ್ಟು ಜನ ದ್ರೋಹ ಮಾಡಿದ್ದಾರೆ ಬಿಡಿ ಎಂದು ಸಚಿವರು ಕಾಲೆಳೆದರು. ಬಿಜೆಪಿ ಸದಸ್ಯರು ಸಚಿವರ ನೆರವಿಗೆ ಧಾವಿಸಿ ಕಾಂಗ್ರೆಸ್ ಸದಸ್ಯರ ವಿರುದ್ಧ ಮುಗಿಬಿದ್ದರು. ದ್ರೋಹ ಪದವನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಸದನ ಗದ್ದಲದ ಗೂಡಾಗುತ್ತಿದ್ದಂತೆಯೇ, ಮಾತು ಮುಂದುವರೆಸಲು ಸಭಾಪತಿ ಅವಕಾಶ ಕೊಡದೆ ಮುಂದಿನ ಕಲಾಪ ಕೈಗೆತ್ತಿಕೊಂಡು ಪರಿಸ್ಥಿತಿ ತಿಳಿಗೊಳಿಸಿ ಸದನವನ್ನು ಸಹಜ ಸ್ಥಿತಿಗೆ ತಂದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)