varthabharthi


ಕರ್ನಾಟಕ

ಸಚಿವರು ನಮ್ಮ ಕೈಗೆ ಸಿಗುವುದಿಲ್ಲ: ಶಾಸಕ ಯತ್ನಾಳ್ ಅಳಲು

ವಾರ್ತಾ ಭಾರತಿ : 17 Sep, 2021

ಬೆಂಗಳೂರು, ಸೆ. 16: `ಸಚಿವರು ನಮ್ಮ ಕೈಗೆ ಸಿಗುವುದಿಲ್ಲ. ಅಧಿವೇಶನದಲ್ಲಿ ಮಾತ್ರ ಅವರು ಸಿಗುತ್ತಾರೆ. ಹೀಗಾಗಿ ನಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮನವಿ ನೀಡುತ್ತೇವೆ. ಇಲ್ಲವಾದರೆ ಅವರಿಗೆ ಒಂದು ಸೂಚನೆ ಕೊಟ್ಟು ಶಾಸಕರಿಗೆ ಸಮಯ ನೀಡಲು ಕಾಲ ನಿಗದಿಪಡಿಸಿ' ಎಂದು ಬಿಜೆಪಿಯ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸ್ಪೀಕರ್‍ಗೆ ಮನವಿ ಮಾಡಿದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಯತ್ನಾಳ್, ಸಚಿವರು ಶಾಸಕರ ಕೈಗೆ ಸಿಗುವುದಿಲ್ಲ. ಹೀಗಾಗಿ ಸದನದಲ್ಲಿ ಅವರೊಂದಿಗೆ ಚರ್ಚಿಸುತ್ತೇವೆ. ಅದಕ್ಕೂ ನೀವು ಬೇಡ ಎಂದರೆ ನಾವು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಈ ಬಗ್ಗೆ ನೀವು ನಿಮ್ಮ ಪಕ್ಷದ ಶಾಸಕಾಂಗ ಸಭೆಯಲ್ಲಿ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಕಲಾಪದ ಸಮಯದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ. ಪ್ರಶ್ನೋತ್ತರ ಅವಧಿ ನಡೆಯುವಾಗ ಶಾಸಕರು, ಸಚಿವರನ್ನು ಭೇಟಿ ಮಾಡಿ ಮಾತನಾಡುವುದು, ಮನವಿ ಪತ್ರ ನೀಡುವುದು ಸರಿಯಲ್ಲ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಅಲ್ಲದೆ, ಪ್ರಶ್ನೋತ್ತರದ ಗಾಂಭೀರ್ಯತೆ ಹೋಗುತ್ತದೆ ಎಂದು ಹೇಳಿದರು.

ಎಲ್ಲಿ ಸಚಿವರು: ಸರಕಾರದ ಮುಖ್ಯ ಸಚೇಕತರೇ ಎಲ್ಲಿ ಸಚಿವರೇ ಇಲ್ಲ. ಪ್ರಶ್ನೋತ್ತರ ವೇಳೆಯಲ್ಲಿ ಸಚಿವರೇ ಇಲ್ಲದಿದ್ದರೆ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡುವವರು ಯಾರು? ಪ್ರಶ್ನೋತ್ತರ ಕಲಾಪಕ್ಕೂ ಸಚಿವರು ಸಮಯಕ್ಕೆ ಸರಿಯಾಗಿ ಬರದಿದ್ದರೆ ಹೇಗೇ? ಎಂದು ಕಾಗೇರಿ, ಮುಖ್ಯ ಸಚೇತಕ ಸತೀಶ್ ರೆಡ್ಡಿ ಅವರನ್ನು ಪ್ರಶ್ನೆ ಮಾಡಿದ್ದು ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)