varthabharthi


ಕರ್ನಾಟಕ

‘ಯುವ ಕಾಂಗ್ರೆಸ್‍ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ’

ಎಲ್ಲ ಸಂಕಟಗಳಿಗೆ ಮೋದಿ ಸರಕಾರ ಕಾರಣ: ಎಂ.ಎಸ್.ರಕ್ಷಾ ರಾಮಯ್ಯ

ವಾರ್ತಾ ಭಾರತಿ : 17 Sep, 2021

ಬೆಂಗಳೂರು, ಸೆ.17: ದೇಶದ ಯುವ ಸಮೂಹ ಸೇರಿದಂತೆ ಎಲ್ಲ ವರ್ಗಗಳನ್ನು ಅತೀವ ಸಂಕಷ್ಟಕ್ಕೆ ದೂಡಿರುವ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್.ಡಿ.ಎ ಸರಕಾರದ ವಿರುದ್ಧ ಪ್ರದೇಶ ಯುವ ಕಾಂಗ್ರೆಸ್‍ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸಲಾಯಿತು.

ನರೇಂದ್ರ ಮೋದಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದು, ಕೇಂದ್ರ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ರಾಜ್ಯಾಧ್ಯಕ್ಷ ಎಂ.ಎಸ್.ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೆ ಬೃಹತ್ ಪ್ರತಿಭಟನಾ ಜಾಥ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್.ರಕ್ಷಾ ರಾಮಯ್ಯ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶ್ವಾಸನೆ ಕಾಗದಗಳಲ್ಲೇ ಉಳಿದಿದೆ. ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಕೇಂದ್ರ ಸರಕಾರ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮ ನೆಲಕಚ್ಚುವಂತೆ ಮಾಡಿದ್ದು, ಇದರ ಪರಿಣಾಮ ಜನಜೀವನ ತೀವ್ರ ಬಾಧಿತವಾಗಿದೆ. ದೇಶದ ಎಲ್ಲ ಸಂಕಟಗಳಿಗೂ ಮೋದಿ ಸರಕಾರವೇ ಕಾರಣ ಎಂದು ಆಪಾದಿಸಿದರು.

ಯುವ ಜನತೆ, ಕಾರ್ಮಿಕರು, ಉದ್ಯೋಗ ಕಳೆದುಕೊಂಡವರ ಧ್ವನಿಯಾಗಿ ಯುವ ಕಾಂಗ್ರೆಸ್‍ನಿಂದ ರಾಷ್ಟ್ರೀಯ ನಿರುದ್ಯೋಗ ದಿನವನ್ನು ಆಚರಣೆಗೆ ಕರೆ ನೀಡಲಾಗಿತ್ತು. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ನಷ್ಟ ತಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.  

ಫ್ರೀಡಂ ಪಾರ್ಕ್ ಬಳಿ ರಸ್ತೆಯಲ್ಲಿ ಧರಣಿ ನಡೆಸಲು ಮುಂದಾದ ಶ್ರೀನಿವಾಸ್ ಬಿ.ವಿ, ರಕ್ಷಾ ರಾಮಯ್ಯ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)