varthabharthi


ಕರ್ನಾಟಕ

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಾಲಾ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲು ಕಾರ್ಯಪಡೆ ಸಮಿತಿ ರಚನೆ

ವಾರ್ತಾ ಭಾರತಿ : 17 Sep, 2021

ಬೆಂಗಳೂರು, ಸೆ.17: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು, ಸುಧಾರಣೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದ ಆದ್ಯತೆಗಳನ್ನು ಮತ್ತು ವಾಸ್ತವತೆಗಳನ್ನು ಪರಿಗಣಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಾಲಾ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸದಸ್ಯ ಕಾರ್ಯದರ್ಶಿಯಾಗಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು, ಸದಸ್ಯರಾಗಿ ಅಝೀಮ್ ಪ್ರೇಮ್ ಜಿ ಪ್ರತಿಷ್ಠಾನದ ರಿಷಿಕೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು, ಕೆ.ಆರ್.ಐ.ಇ.ಎಸ್ ಸಮಾಲೋಚಕ ಬೆಳ್ಳಶೆಟ್ಟಿ, ಶಿಕ್ಷಣ ತಜ್ಞ ಡಾ.ಪ್ರವೀಣ್ ಕುಮಾರ್ ಸಯ್ಯಪ್ಪರಾಜ್, ಎಂ.ಇ.ಎಸ್.ಟೀಚರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜು.

ಶಿಕ್ಷಣ ತಜ್ಞೆ ಡಾ.ಪದ್ಮಾವತಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಂ.ಎನ್.ಬೇಗ್, ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್‍ನ ಸ್ಟೇಟ್ ಎಂಗೇಜ್‍ಮೆಂಟ್ ಅಧಿಕಾರಿ ಕ್ಯಾ.ಕೌಸ್ತುವನಾಥ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮರಿಸ್ವಾಮಿ, ಯುನಿಸೆಫ್ ಶಿಕ್ಷಣ ತಜ್ಞ ಶೇಷಗಿರಿ ಮಧುಸೂದನ್, ಡಾ.ಸುಪರ್ಣಾ ದಿವಾಕರ್, ಬೆಂಗಳೂರು ವಿವಿ ವಿಶ್ರಾಂತ ಉಪಕುಲಪತಿ ಡಾ.ಶಕುಂತಲಾ ಪತ್ರೆ.

ಉಡುಪಿ ಜಿಲ್ಲೆಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಬಲೇಶ್ವರ ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಸವರಾಜ್, ಬೆಂಗಳೂರಿನ ಬಿ.ಎ.ಸುಬ್ರಮಣ್ಯ, ವಿಜಯಪುರ ಜಿಲ್ಲೆಯ ಚಿದಾನಂದ ಎ.ಕೆ.ಪಾಟೀಲ್ ಹಾಗೂ ಬೆಳಗಾವಿ ಜಿಲ್ಲೆಯ ಪರಮೇಶ್ವರ ಅವರನ್ನು ಕಾರ್ಯಪಡೆ ಸಮಿತಿಗೆ ನೇಮಕ ಮಾಡಲಾಗಿದೆ.

ಕಾರ್ಯಪಡೆ ಕೆಲಸ: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕರಡು ಚೌಕಟ್ಟನ್ನು ತಯಾರಿಸುವುದು ಹಾಗೂ ನೀತಿಯ ಕರಡು ದಾಖಲೆಯನ್ನು ಪರಿಶೀಲಿಸಿ ಅಂತಿಮಗೊಳಿಸುವುದು. ಎಲ್ಲ ಭಾಗೀದಾರರೊಂದಿಗೆ ಸಮಾಲೋಚಿಸಿ ಕರಡು ಶಿಕ್ಷಣ ನೀತಿಯ ಚೌಕಟ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು. ಪೂರ್ವ ಪ್ರಾಥಮಿಕ ಹಂತದ ರಾಜ್ಯ ಪಠ್ಯವನ್ನು ಚೌಕಟ್ಟು ಹಾಗೂ 1 ರಿಂದ 12ನೆ ತರಗತಿವರೆವಿಗೂ ರಾಜ್ಯ ಪಠ್ಯವನ್ನು ಚೌಕಟ್ಟನ್ನು ತಯಾರಿಸುವಲ್ಲಿ ಮಾರ್ಗದರ್ಶನ ನೀಡುವುದು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಕಾರ್ಯಗಳನ್ನು ಹಂಚುವುದು, ಅವುಗಳ ಮೇಲುಸ್ತುವಾರಿ ಮಾಡುವುದು, ಅಂತರಗಳನ್ನು ಗುರುತಿಸಿ ಅವುಗಳನ್ನು ನಿವಾರಣೆಗೆ ಅಗತ್ಯವಿರುವ ನೀತಿಗಳನ್ನು ರೂಪಿಸುವುದು ಹಾಗೂ ಅನುಷ್ಠಾನದ ಪ್ರಗತಿ ಕುರಿತು ದಾಖಲೆಗಳನ್ನು ನಿರ್ವಹಿಸುವುದು

ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಶಿಫಾರಸ್ಸಿನನ್ವಯ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಸಮನ್ವಯ ಮತ್ತು ಸಮಾನ ಶಿಕ್ಷಣದ ಕಾರ್ಯತಂತ್ರಗಳನ್ನು ರೂಪಿಸುವುದು. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ದೀರ್ಘಾವಧಿ ಯೋಜನೆಗಳನ್ನು ಸಿದ್ಧಪಡಿಸಲು ಸಹಕರಿಸುವುದು. 2030ರವರೆವಿಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದಾಗುವ ಪರಿಣಾಮಗಳನ್ನು ವಿಶ್ಲೇಷಿಸಿ ಅಗತ್ಯವಿರುವ ಮಾರ್ಗದರ್ಶನ ಮತ್ತು ಪರಿಹಾರಾತ್ಮಕ ಕ್ರಮಗಳನ್ನು ಸೂಚಿಸುವುದು.

ಅಧ್ಯಕ್ಷರ ಸೂಚನೆ ಮೇರೆಗೆ ಸದಸ್ಯ ಕಾರ್ಯದರ್ಶಿಯವರು ಈ ಸಮಿತಿಯ ಸಭೆಗಳನ್ನು ಆಯೋಜಿಸಲಿದ್ದಾರೆ. ಅವಶ್ಯಕತೆಗನುಗುಣವಾಗಿ ಈ ಕಾರ್ಯಪಡೆಯು ಸಭೆ ಸೇರುವುದು ಅಥವಾ ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಅನುಷ್ಠಾನ ಕಾರ್ಯಗಳನ್ನು ಪರಿಶೀಲಿಸಿ ಮಾರ್ಗದರ್ಶನ ನೀಡುವುದು. ಈ ಕಾರ್ಯಪಡೆಯ ವೆಚ್ಚವನ್ನು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇಲ್ಲಿನ ಅನುದಾನದಲ್ಲಿ ಭರಿಸಬೇಕು ಎಂದು ಶಿಕ್ಷಣ ಇಲಾಖೆ(ಪ್ರಾಥಮಿಕ ಶಿಕ್ಷಣ)ಯ ಸರಕಾರದ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)